ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಸಿನಿಮಾ ಇಂದು (ಅಕ್ಟೋಬರ್ 14)ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ನಿರ್ಮಾಪಕ ಹಾಗೂ ಯುಎಫ್‌ಓ ನಡುವೆ ಹಣಕಾಸಿನ ವಿಷಯಕ್ಕೆ ಉಂಟಾದ ಗೊಂದಲದಿಂದಾಗಿ ಪರವಾನಗಿ ಸಿಗದೆ ರಾಜ್ಯದಾದ್ಯಂತ ಸಿನಿಮಾ ಶೋಗಳು ರದ್ದಾಗಿವೆ.
ಸಿನಿಮಾ ಶೋ ರದ್ದಾಗಿದ್ದಕ್ಕೆ ಸುದೀಪ್ ಅಭಿಮಾನಿಗಳು ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಆಕ್ರೋಶ ಹೊರಹಾಕಿದ್ದರು. ಕೆಲವೆಡೆ ಚಿತ್ರಮಂದಿರಗಳಿಗೆ ಹಾನಿ ಮಾಡಿದ್ದರು.
ಇದೀಗ ವಿಡಿಯೋ ಮೂಲಕ ಮನವಿ ಮಾಡಿರುವ ಸೂರಪ್ಪ ಬಾಬು. ಸುದೀಪ್ ಅಭಿಮಾನಿಗಳಲ್ಲಿ, ಸಿನಿಮಾ ಪ್ರೇಮಿಗಳಲ್ಲಿ ಕ್ಷಮೆ ಕೇಳಿದ್ದು, ಸಿನಿಮಾವು ನಾಳೆ (ಅಕ್ಟೋಬರ್ 15)ರಂದು ಬಿಡುಗಡೆ ಆಗಲಿದೆ ಎಂದಿದ್ದಾರೆ.
https://twitter.com/sharadasrinidhi/status/1448544098072162306?t=dArubI1S-xTiQ8mP9dYnyw&s=19
ವಿಡಿಯೋದಲ್ಲಿ ಕೈಮಗಿದು ಮನವಿ ಮಾಡಿರುವ ಸೂರಪ್ಪ ಬಾಬು ”ಬೆಳಿಗ್ಗೆ ಆರು ಗಂಟೆಯಿಂದ ಕಿಚ್ಚನ ಅಭಿಮಾನಿಗಳಿಗೆ ಫ್ಯಾನ್ಸ್ ಶೋ ಪ್ರಾರಂಭ ಮಾಡುತ್ತಿದ್ದೇವೆ. ದಯವಿಟ್ಟು ಕ್ಷಮಿಸಿ, ಇದರಲ್ಲಿ ನನ್ನದು ಯಾವುದೇ ತಪ್ಪಿಲ್ಲ. ಸುದೀಪ್ ಅಭಿಮಾನಿಗಳಿಗೆ, ಕನ್ನಡ ಕಲಾಭಿಮಾನಿಗಳಿಗೆ ಕ್ಷಮೆ ಕೋರುತ್ತಿದ್ದೇನೆ” ಎಂದಿದ್ದಾರೆ ಸೂರಪ್ಪ ಬಾಬು.
”ಸುದೀಪ್ ಸರ್, ಘಟನೆಯ ಬಗ್ಗೆ ಸಂಪೂರ್ಣ ಸತ್ಯ ನಿಮಗೂ ಗೊತ್ತಿದೆ. ಎಲ್ಲ ರೀತಿಯ ಅಭಿಮಾನಿಗಳಿಗೆ ಸಿನಿಮಾದ ರಸದೌತಣ ನೀಡಲು ಸಕಲ ವ್ಯವಸ್ಥೆ ಮಾಡುತ್ತಿದ್ದೇನೆ. ಎಲ್ಲರೂ ನಾಳೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಿರೆಂದು ದಯವಿಟ್ಟು ನೀವು ಟ್ವೀಟ್ ಮೂಲಕ ತಿಳಿಸಬೇಕೆಂದು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ದಯವಿಟ್ಟು ಕ್ಷಮೆ ಇರಲಿ ಸರ್” ಎಂದು ಸೂರಪ್ಪ ಬಾಬು ದೈನ್ಯದಿಂದ ಮನವಿ ಮಾಡಿದ್ದಾರೆ.
ಕೋಟಿಗೊಬ್ಬ 3 ಸಿನಿಮಾಕ್ಕೆ ಯುಎಫ್‌ಓ ಪರವಾನಗಿ ನೀಡಿಲ್ಲವಾದ್ದರಿಂದ ಇಂದು ರಾಜ್ಯದಾದ್ಯಂತ ಇದ್ದ ಎಲ್ಲ ಶೋಗಳು ರದ್ದಾಗಿವೆ. ಯುಎಫ್‌ಓಗೆ ಹಣ ಪಾವತಿ ಮಾಡದಿದ್ದ ಕಾರಣಕ್ಕೆ ಶೋ ರದ್ದಾಗಿದೆ ಎನ್ನಲಾಗಿದೆ. ಇದೀಗ ಸೂರಪ್ಪ ಬಾಬು ಹೇಳಿರುವಂತೆ ಸಮಸ್ಯೆ ಪರಿಹಾರವಾಗಿದ್ದು ನಾಳೆಯಿಂದ ಎಲ್ಲೆಡೆ ಸಿನಿಮಾ ಬಿಡುಗಡೆ ಆಗಲಿದೆ.