ರಷ್ಯಾದಲ್ಲಿ ಈ ವರ್ಷದಲ್ಲೇ ಕಂಡಿರದ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಗುರುವಾರ ವರ್ಷದಲ್ಲೇ ಅತ್ಯಧಿಕ ಪ್ರಕರಣಗಳು ಪತ್ತೆಯಾಗಿವೆ. ಇದು ಅಲ್ಲಿನ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಗುರುವಾರ ರಷ್ಯಾದಲ್ಲಿ 27,550 ಕೊರೊನಾಪ್ರಕರಣಗಳು ವರದಿಯಾಗಿವೆ. ಆದರೆ, ಈ ಪ್ರಕರಣಗಳು ಹಿಂದಿನ ದಿನಕ್ಕಿಂತಲೂ ಶೇ.10ರಷ್ಟು ಅಧಿಕ ಎಂಬ ಅಂಶ ಇಡೀ ದೇಶವನ್ನೇ ಆತಂಕಕ್ಕೀಡು ಮಾಡಿದೆ.
ಮಾಸ್ಕೋದಲ್ಲಿ ಗುರುವಾರ ಶೇ.50ರಷ್ಟು ಏರಿಕೆಯಾಗಿದ್ದು, ಏಕಾಏಕಿ 5404 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಲಸಿಕೆ ವಿತರಣೆ ಕೂಡ ನಿಧಾನಗತಿಯಲ್ಲಿ ನಡೆಯುತ್ತಿರುವುದು, ಭಯವನ್ನು ಇಮ್ಮಡಿಗೊಳಿಸಿದೆ. ಕಳೆದ ಎರಡು ದಿನಗಳಿಂದ ರಷ್ಯಾದಲ್ಲಿ 900ಕ್ಕೂ ಅಧಿಕ ಸಾವುಗಳು ವರದಿಯಾಗುತ್ತಿವೆ. ಗುರುವಾರ 924 ಮಂದಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ಬುಧವಾರ 929 ಮಂದಿ ಸಾವಿಗೀಡಾಗಿದ್ದಾರೆ. ರಷ್ಯಾದಲ್ಲಿ ಈಗಾಗಲೇ ಕೋವಿಡ್‌ಗೆ 213,000 ಮಂದಿ ಬಲಿಯಾಗಿದ್ದಾರೆ. ಆದರೆ ಸಾವಿನ ವಾಸ್ತವ ಸಂಖ್ಯೆ ಈ ಸಂಖ್ಯೆಗಿಂತ ಅಧಿಕವಾಗಿರಬಹುದು ಎಂದು ಹೇಳಲಾಗಿದೆ. ರಷ್ಯಾದ 14.6 ಕೋಟಿ ಜನರ ಪೈಕಿ ಸೇ.33ರಷ್ಟು ಜನರು ಕೊರೊನಾ ಲಸಿಕೆಯ ಕನಿಷ್ಠ 1 ಡೋಸ್ ಪಡೆದಿದ್ದಾರೆ. ಶೇ.29ರಷ್ಟು ಮಂದಿ ಸಂಪೂರ್ಣ ಲಸಿಕೆ ಪಡೆದಿದ್ದಾರೆ.ಸೆಪ್ಟೆಂಬರ್ ಅಂತ್ಯದ ಬಳಿಕ ದೇಶದಲ್ಲಿ ಕೋವಿಡ್ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯಲ್ಲಿ ಅಗಾಧ ಏರಿಕೆ ಕಂಡುಬಂದಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕುಟುಂಬ ಸದಸ್ಯರಿಗೆ ಕೊರೊನಾ ಸೋಂಕು ತಗುಲಿದ್ದು, ಪುಟಿನ್ ಸ್ವಯಂ ದಿಗ್ಬಂಧನದಲ್ಲಿದ್ದರು.ತಾನು ತಯಾರಿಸಿದ ಸ್ಪುಟ್ನಿಕ್-V ಕೊರೊನಾ ಲಸಿಕೆಗೆ ಭಾರತದಲ್ಲಿ ಒಪ್ಪಿಗೆ ಸಿಕ್ಕಿದರೆ 10 ಕೋಟಿ ಡೋಸ್‌ಗಳನ್ನು ‘ಡಾ ರೆಡ್ಡೀಸ್ ಲ್ಯಾಬೊರೇಟರೀಸ್’ಗೆ ಮಾರಾಟ ಮಾಡುವುದಾಗಿ ರಷ್ಯಾದ ಸಾವರಿನ್ ವೆಲ್ತ್ ಫಂಡ್ ಹೇಳಿದೆ.
ಈ ಲಸಿಕೆಯ ಪ್ರಯೋಗ ಭಾರತದಲ್ಲಿ ಇನ್ನಷ್ಟೇ ನಡೆಯಬೇಕಿದ್ದು, ಇಲ್ಲಿನ ಕಂಪನಿ ಜೊತೆಗೆ ಸೇರಿ ಇದರ ಪ್ರಯೋಗ ನಡೆಸಲು ರಷ್ಯಾ ಉದ್ದೇಶಿಸಿದೆ. ಆದರೆ ಲಸಿಕೆಗೆ ಒಪ್ಪಿಗೆ ಸಿಕ್ಕ ನಂತರವಷ್ಟೇ ಪ್ರಯೋಗ ಮತ್ತು ಪೂರೈಕೆ ನಡೆಯಲಿದೆ. ಈಗಾಗಲೇ ‘ರಷ್ಯನ್ ಡೈರೆಕ್ಟ್ ಇನ್ವೆಸ್ಟ್‌ಮೆಂಟ್ ಫಂಡ್’ ಲಸಿಕೆಗೆ ಸಂಬಂಧಿಸಿದಂತೆ ಕಝಕಿಸ್ತಾನ್, ಬ್ರೆಜಿಲ್ ಮತ್ತು ಮೆಕ್ಸಿಕೋದ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದಲ್ಲದೆ ಈ ಲಸಿಕೆಯ 30 ಕೋಟಿ ಡೋಸ್ ತಯಾರಿಕೆ ಭಾರತದ ಜೊತೆ ಪಾಲುದಾರಿಕೆಯ ಒಪ್ಪಂದವನ್ನೂ ಮಾಡಿಕೊಂಡಿದೆ.