ರಾಜಕೀಯದಿಂದ ದೂರ ಸರಿಯುವುದಾಗಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯದ ಸಹವಾಸವೇ ಬೇಡ ಎಂದು ತೀರ್ಮಾನ ಮಾಡಿದ್ದು,
ಇನ್ನು ಮುಂದೇ ಯಾವುದೇ ಕಾರಣಕ್ಕೂ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ, ಹಣ, ಜಾತಿ ಮತ್ತು ಲಾಬಿ ಮಾಡುವ ಶಕ್ತಿ ಇದ್ದರೆ ಮಾತ್ರ ರಾಜಕೀಯದಲ್ಲಿ ನೆಲೆಯೂರಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ನೆಲೆ ಕಂಡುಕೊಳ್ಳುವುದು ತುಂಬಾ ಕಷ್ಟ. ಪಕ್ಷೇತರವಾಗಿ ಗೆದ್ದರೂ ಯಾರಿಗೂ ನೆರವು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ನಿಷ್ಠಾವಂತ ಹಿಂದೂ ಪರ ಕಾರ್ಯಕರ್ತರಿಗೆ ಬಿಜೆಪಿ ಆಗಲಿ ಸಂಘ ಪರಿವಾರವಾಗಲಿ ಬೆಂಬಲ ನೀಡುವುದಿಲ್ಲ.
ರಾಜಕೀಯ ಕ್ಷೇತ್ರದಲ್ಲಿ ವಿಫಲವಾಗಿರುವ ಬಗ್ಗೆ ತಮಗೆ ನೋವಿದೆ. ಹಾಗಾಗಿ ಇನ್ನು ಮುಂದೆ ರಾಜಕೀಯದಿಂದ ದೂರ ಉಳಿಯಲು ತೀರ್ಮಾನಿಸಿದ್ದೇನೆ. ಅಲ್ಲದೆ ಶ್ರೀ ರಾಮ ಸೇನೆಯ ಯಾವುದೇ ಮುಖಂಡರೂ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಶ್ರೀ ರಾಮ ಸೇನೆಯನ್ನು ಇನ್ನಷ್ಟು ಬಲಪಡಿಸುತ್ತೇವೆ ಎಂದು ತಿಳಿಸಿದರು.
ಗೋರಕ್ಷಕ ಶಿವು ಸಾವಿನ ಪ್ರಕರಣ ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದ ಅವರು ರಾಜ್ಯ ಸಮ್ಮಿಶ್ರ ಸರ್ಕಾರ ಇದನ್ನು ಆತ್ಮಹತ್ಯೆ ಎಂದು ಘೋಷಿಸಿ ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಶ್ರೀರಾಮ ಸೇನೆಯ ರಾಜ್ಯ ಉಪಾಧ್ಯಕ್ಷ ಮಹೇಶ್‍ಕುಮಾರ್, ಜಿಲ್ಲಾಧ್ಯಕ್ಷ ರಂಜಿತ್‍ಶೆಟ್ಟಿ, ಮೊದಲಾದವರು ಈ ವೇಳೆ ಇದ್ದರು.