‘ರಾಜೀನಾಮೆ ಕೊಡೋದಾದ್ರೆ ನಮ್ಮ ಇಡೀ ಟೀಮ್ ಕೊಡ್ತೀವಿ’ ಎಂದ್ರು ರಮೇಶ್ ಜಾರಕಿಹೊಳಿ

1
162

ಕೊಡುವುದಾದರೆ ನಾನೊಬ್ಬನೇ ರಾಜೀನಾಮೆ ಕೊಡುವುದಿಲ್ಲ, ನಮ್ಮದೊಂದು ತಂಡ ಇದೆ. ಅವರೆಲ್ಲರೂ ಒಟ್ಟಾಗಿಯೇ ರಾಜೀನಾಮೆ ಕೊಡುತ್ತೇವೆ ಎಂದು ಕಾಂಗ್ರೆಸ್‍ನ ಬಂಡಾಯ ಶಾಸಕ ರಮೇಶ್ ಜಾರಕಿ ಹೊಳಿ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಕೊಡುವುದಾಗಿ ಎಲ್ಲೂ ಹೇಳಿಲ್ಲ. ಸದ್ಯಕ್ಕೆ ನಾನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಎಸ್.ಎಂ.ಕೃಷ್ಣ ಅವರ ಆರೋಗ್ಯ ವಿಚಾರಿಸುವ ಸಲುವಾಗಿ ಬಂದಿದ್ದೆ. ರಾಜೀನಾಮೆ ನೀಡುವುದಾದರೆ ಮಾಧ್ಯಮದವರಿಗೆ ಹೇಳಿಯೇ ಕೊಡುತ್ತೇನೆ. ನಾನೊಬ್ಬನೇ ರಾಜೀನಾಮೆ ಕೊಡುವುದಿಲ್ಲ. ನಮ್ಮ ತಂಡದ ಎಲ್ಲರೂ ಸೇರಿ ರಾಜೀನಾಮೆ ಕೊಡುತ್ತೇವೆ ಎಂದು ಹೇಳಿದರು.

ದೋಸ್ತಿ ಸರ್ಕಾರ ಉರುಳಿಸುವ ಕಸರತ್ತು :
ಆಪರೇಷನ್ ಕಮಲಕ್ಕೆ ಮುಂದಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ತಮ್ಮೊಂದಿಗೆ ಮತ್ತಷ್ಟು ಅತೃಪ್ತ ಶಾಸಕರನ್ನು ಸೆಳೆಯಲು ಕಳೆದ ಹಲವು ದಿನಗಳಿಂದ ಕಾರ್ಯೋನ್ಮುಖರಾಗಿದ್ದಾರೆ.

ಈಗಾಗಲೇ ಶಾಸಕರಾದ ಮಹೇಶ ಕುಮಠಳ್ಳಿ, ಸೀಮಂತ ಪಾಟೀಲ್, ನಾಗೇಂದ್ರ, ಕಂಪ್ಲಿ ಗಣೇಶ, ಬಿ.ಸಿ.ಪಾಟೀಲ ಸೇರಿದಂತೆ ಹಲವರನ್ನು ಸಂಪರ್ಕಿಸಿರುವ ರಮೇಶ್ ಜಾರಕಿಹೊಳಿ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿ ತಡರಾತ್ರಿ ಗೋವಾಗೆ ತೆರಳಿದ್ದಾರೆ.

ಜೂನ್ 3ರಂದು ಮೈತ್ರಿ ಸರ್ಕಾರದ ಪತನಕ್ಕೆ ಮೂಹೂರ್ತ ಫಿಕ್ಸ್ ಮಾಡಲಾಗಿದ್ದು, ಈಗಿನಿಂದಲೇ ರೆಸಾರ್ಟ್ ರಾಜಕಾರಣದ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ಅವರೊಂದಿಗೆ 9 ಶಾಸಕರು ಗೋವಾ ತಾಜ್ ಹಾಲಿಡೇ ವಿಲೇಜ್ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

1 COMMENT

LEAVE A REPLY

Please enter your comment!
Please enter your name here