ರಾಜ್ಯದಲ್ಲಿ ಮತ್ತೆ10 ಸಾವಿರ ಗಡಿ ದಾಟಿದ ಕೊರೊನಾ- 50+ ಸಾವು

0
41

ಬೆಂಗಳೂರು: ಕರ್ನಾಟಕದಲ್ಲಿ ಅಕ್ಷರಶಃ ಕೊರೊನಾ ಸ್ಫೋಟಗೊಳ್ಳಲು ಆರಂಭಿಸಿದೆ. ಸೋಮವಾರ ಸಂಜೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 9,579 ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿರುವುದೇ ಇದಕ್ಕೆ ಸಾಕ್ಷಿ.

ಇದರೊಂದಿಗೆ ಕರ್ನಾಟಕದಲ್ಲಿ ಇಲ್ಲಿಯವರೆಗೆ ದೃಢಪಟ್ಟ ಪ್ರಕರಣ ಸಂಖ್ಯೆ 10,74,869ಕ್ಕೆ ಏರಿಕೆಯಾಗಿದೆ. ಕೋವಿಡ್‌-19 ಕೇಸ್‌ಗಳ ಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿದ್ದರೂ ಸರಕಾರ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಿಲ್ಲ. ಪರಿಣಾಮ ಸ್ಯಾಂಪಲ್‌ ಪರೀಕ್ಷೆಗಳಿಗೆ ಹೋಲಿಸಿದರೆ ಪಾಸಿಟಿವಿ ಪ್ರಮಾಣ ಶೇ. 8.24ಕ್ಕೆ ಏರಿಕೆಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲೇ ಬರೋಬ್ಬರಿ 40 ಜನರು ಸೋಂಕಿನಿಂದ ಅಸುನೀಗಿದ್ದಾರೆ. ಮೈಸೂರಿನಲ್ಲಿ 3, ಬೀದರ್‌ ಮತ್ತು ಚಾಮರಾಜನಗರದಲ್ಲಿ ತಲಾ 2 ಹಾಗೂ ರಾಮನಗರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಬಳ್ಳಾರಿ, ಬೆಳಗಾವಿಯಲ್ಲಿ ತಲಾ ಒಬ್ಬರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.

ಮೈಸೂರಿನಲ್ಲಿ 362, ಕಲಬುರಗಿಯಲ್ಲಿ 335, ತುಮಕೂರಿನಲ್ಲಿ 239, ಬೆಂಗಳೂರು ಗ್ರಾಮಾಂತರದಲ್ಲಿ 192, ಬಳ್ಳಾರಿಯಲ್ಲಿ 132, ವಿಜಯಪುರದಲ್ಲಿ 122, ಚಿಕ್ಕಬಳ್ಳಾಪುರದಲ್ಲಿ 120, ಹಾಸನದಲ್ಲಿ 113, ಉಡುಪಿಯಲ್ಲಿ 101 ಹೊಸ ಪ್ರಕರಣಗಳು ದೃಢಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ 100ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ.

ಎಂದಿನಂತೆ ಹೊಸ ಪ್ರಕರಣಗಳ ಪ್ರಮಾಣದಲ್ಲಿ ಸೋಂಕಿತರು ಕೊರೊನಾದಿಂದ ಚೇತರಿಸಿಕೊಳ್ಳುತ್ತಿಲ್ಲ. ಹೀಗಾಗಿ ಸಕ್ರಿಯ ಪ್ರಕರಣಗಳು ರಾಕೆಟ್‌ ವೇಗದಲ್ಲಿ ಮೇಲೇರುತ್ತಿವೆ. ಸೋಮವಾರ ಕೇವಲ 2,767 ಸೋಂಕಿತರಷ್ಟೆ ರೋಗದಿಂದ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ ರಾಜ್ಯದಲ್ಲಿ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 9,85,924ಕ್ಕೆ ಏರಿಕೆಯಾಗಿದೆ.

ಆದರೆ ದಿನ ದಿನವೂ ಹೆಚ್ಚೆಚ್ಚು ಪ್ರಕರಣಗಳು ವರದಿಯಾಗುತ್ತಲೇ ಇರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 75 ಸಾವಿರದ ಗಡಿ ದಾಟಿದೆ. ರಾಜ್ಯದಲ್ಲಿ ಸದ್ಯ 75,985 ಸಕ್ರಿಯ ಕೋವಿಡ್‌-19 ಪ್ರಕರಣಗಳಿವೆ.

ಇವರಲ್ಲಿ 470 ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯು ಸೇರುತ್ತಿರುವವರ ಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿರುವುದು ಮತ್ತಷ್ಟು ಆತಂಕ ಹುಟ್ಟುಹಾಕಿದೆ. ಬೆಂಗಳೂರಿಲ್ಲಿ 176 ರೋಗಿಗಳು ಐಸಿಯುಗೆ ದಾಖಲಾಗಿದ್ದರೆ, ಕೋಲಾರದಲ್ಲಿ 48, ಕಲಬುರಗಿಯಲ್ಲಿ 44, ಮೈಸೂರಿನಲ್ಲಿ 29, ಬೀದರ್‌ನಲ್ಲಿ 21, ತುಮಕೂರಿನಲ್ಲಿ 20, ದಕ್ಷಿಣ ಕನ್ನಡದಲ್ಲಿ 14, ಮಂಡ್ಯದಲ್ಲಿ 13, ಬಳ್ಳಾರಿಯಲ್ಲಿ 12, ಹಾಸನದಲ್ಲಿ 12, ಧಾರವಾಡ, ಉಡುಪಿ, ವಿಜಯಪುರದಲ್ಲಿ ತಲಾ 10 ರೋಗಿಗಳು ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಿಯಾನವೂ ಮಂದಗತಿಯಲ್ಲಿ ಸಾಗುತ್ತಿದೆ. ಸೋಮವಾರ 82,240 ಡೋಸ್‌ ಲಸಿಕೆ ಮಾತ್ರ ನೀಡಲಾಗಿದೆ. ಇಲ್ಲಿಯವರೆಗೆ ಒಟ್ಟು ರಾಜ್ಯದಲ್ಲಿ 59,88,095 ಡೋಸ್‌ ಲಸಿಕೆ ನೀಡಲಾಗಿದೆ.

LEAVE A REPLY

Please enter your comment!
Please enter your name here