ವಿಶ್ವಕ್ರಿಕೆಟ್ ಅನ್ನು ಆಳಿದ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್. ಟೀಮ್ ಇಂಡಿಯಾ ಬೇಕೆಂದಿದ್ದನ್ನೆಲ್ಲಾ ಕೊಟ್ಟ ಕ್ರಿಕೆಟಿಗ. ಬ್ಯಾಟ್ಸ್ಮನ್ ಆಗಿ ತಂಡಕ್ಕೆ ಜಾಯಿನ್ ಆದ ರಾಹುಲ್ ದ್ರಾವಿಡ್ ಟೆಸ್ಟ್ ಗೆ ಮಾತ್ರ ಫಿಟ್ ಅಂತ ಅನಿಸಿಕೊಂಡು ಬಿಟ್ಟಿದ್ದರು. ಒಬ್ಬ ಕಲಾತ್ಮಕ ಟೆಸ್ಟ್ ಆಟಾಗರ ಏಕದಿನ ಮಾದರಿಗೂ ಒಗ್ಗಿ ಕೊಳ್ಳಬಲ್ಲ ಎಂದು ತೋರಿಸಿಕೊಟ್ಟು ಟೀಮ್ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆದವರು ದ್ರಾವಿಡ್. ಹೆಚ್ಚು ಹೊತ್ತು ಸ್ಕ್ರೀಸ್ನಲ್ಲಿ ನಿಂತು ರನ್ ಕದಿಯುತ್ತಾ ಎದುರಾಳಿಗಳಿಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದ್ದ ದ್ರಾವಿಡ್ ಅವರಿಗೆ ವೇಗವಾಗಿ ರನ್ ಗಳಿಸುವ ಕಲೆಯೂ ಗೊತ್ತಿತ್ತು. ಟಿ20 ಜಮಾನದಲ್ಲೂ ಸದ್ದು ಮಾಡಿದರು. ಸಂದರ್ಭಕ್ಕೆ ತಕ್ಕಂತೆ ಬ್ಯಾಟ್ ಬೀಸುವುದು ದ್ರಾವಿಡ್ ಅವರಿಂದ ಮಾತ್ರ ಸಾಧ್ಯ.
ಟೀಮ್ ಇಂಡಿಯಾಕ್ಕೆ ದ್ರಾವಿಡ್ ಕೊಡುಗೆ ಅಪಾರ. ಆರು-ಏಳನೇ ಕ್ರಮಾಂಕದಲ್ಲಿ ಇಳಿದು ಬ್ಯಾಟ್ ಬೀಸಿದ್ದು ಇದೆ. ಆರಂಭಿಕ ಆಟಗಾರನಾಗಿ, ಒನ್ ಡೌನ್ ಬ್ಯಾಟ್ಸ್ಮನ್ ಆಗಿ, ಟು ಡೌನ್, ತ್ರೀಡೌನ್ನಲ್ಲಿ ಬ್ಯಾಟಿಂಗ್ ಮಾಡಿದ್ದೂ ಉಂಟು. ವಿಕೆಟ್ ಕೀಪರ್ ಬೇಕು ಅಂದಾಗ ಸೈ ಅಂತ ಆ ಸ್ಥಾನವನ್ನೂ ತುಂಬಿದರು ದ್ರಾವಿಡ್. ತಂಡಕ್ಕೊಬ್ಬ ಸಮರ್ಥ ಸಾರಥಿ ಬೇಕು ಎಂದಾಗ ನಾಯಕತ್ವದ ಹೊಣೆಯನ್ನೂ ಹೊತ್ತರು ನಮ್ಮ ಈ ರಾಹುಲ್ ದ್ರಾವಿಡ್. ಈಗ ಕಿರಿಯರ ಗುರುವಾಗಿ ಭಾರತ ಕ್ರಿಕೆಟ್ಗೆ ಆಧಾರವಾಗಿ ನಿಂತಿದ್ದಾರೆ.
ರಾಹುಲ್ ದ್ರಾವಿಡ್ ರಾಜೀನಾಮೆ ಬಳಿಕ ಟೀಮ್ ಇಂಡಿಯಾಕ್ಕೆ ಆ ಸ್ಥಾನ ತುಂಬಬಲ್ಲ ಆಟಗಾರ ಸಿಕ್ಕಿಲ್ಲ. ಟೀಮ್ ನಲ್ಲಿ ಘಟಾನುಘಟಿಗಳಿದ್ದರೂ ದ್ರಾವಿಡ್ ರೀತಿಯ ಒಬ್ಬ ಆಟಗಾರನ ಅವಶ್ಯಕತೆ ಟೀಮ್ ಇಂಡಿಯಾಕ್ಕೆ ಕಾಡುತ್ತಿದೆ. ಏಕದಿನ ಮಾದರಿಯಲ್ಲಿ ಅಜಿಂಕ್ಯಾ ರಹಾನೆ ಹೆಸರು, ಟೆಸ್ಟ್ನಲ್ಲಿ ಚೇತೇಶ್ವರ್ ಪೂಜಾರಾ ಅವರ ಹೆಸರು ಕೇಳಿಬಂದಿತ್ತು. ಆದರೆ, ಖಾಯಂ ಆಗಿ ಎರಡೂ ಮಾದರಿಯಲ್ಲಿ ಉಳಿದುಕೊಳ್ಳುವ ಆಟಗಾರಾಗಿ ಅವರಿಲ್ಲ. ಈಗ ದ್ರಾವಿಡ್ ಸ್ಥಾನ ತುಂಬ ಬಲ್ಲ ಆಟಗಾರ ಯಾರು ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಕನ್ನಡಿಗ ಕೆ.ಎಲ್ ರಾಹುಲ್ ಅವರು ದ್ರಾವಿಡ್ ಅವರ ಸ್ಥಾನವನ್ನು ತುಂಬುತ್ತಾರೆ ಎಂಬ ಬಲವಾದ ನಂಬಿಕೆ ಇದೆ.
ಟೆಸ್ಟ್, ಏಕದಿನ, ಟಿ20 ಮಾದರಿಗೂ ಸೂಕ್ತವಾಗಿರುವ ರಾಹುಲ್ ಅವರು ಯಾವುದೇ ಕ್ರಮಾಂಕದಲ್ಲೂ ಬ್ಯಾಟ್ ಬೀಸ ಬಲ್ಲವರಾಗಿದ್ದಾರೆ. ವಿಶ್ವಕಪ್ ನಡೀತಾ ಇದ್ದು. ಶಿಖರ್ ಧವನ್ ಅವರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲು ನಮ್ಮೀ ರಾಹುಲ್ ರೆಡಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 4ನೇ, ಆಸ್ಟ್ರೇಲಿಯಾದ ವಿರುದ್ಧ 6ನೇ ಕ್ರಮಾಂಕದಲ್ಲಿ ಅವರು ಬ್ಯಾಟಿಂಗ್ ಮಾಡಿದ್ದರು. ಈಗ ಆರಂಭಿಕಾರಿ ಬ್ಯಾಟ್ ಬೀಸಲಿದ್ದಾರೆ.
ದ್ರಾವಿಡ್ ಅವರಂತೆ ಎಲ್ಲಾ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲರು. ಎಲ್ಲಾ ಮಾದರಿಗೂ ಒಗ್ಗಿಕೊಳ್ಳುವವರು. ವಿಕೆಟ್ ಕೀಪಿಂಗ್ಗೂ ರಾಹುಲ್ ರೆಡಿ. ಆದ್ದರಿಂದ ರಾಹುಲ್ ಆಗ್ತಾರಾ ಇನ್ನೊಬ್ಬ ದ್ರಾವಿಡ್? ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಕೂಡ ಇತ್ತೀಚೆಗೆ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ರು.