ದಿನಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಅವರು ಲೋಕಸಭಾ ಚುನಾವಣೆಯ ತಯಾರಿಯ ಬಗ್ಗೆ ಮಾತನಾಡುತ್ತಿದ್ದರು.
ತುಮಕೂರಿನಿಂದ ಮೈತ್ರಿ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೂ ಇದುವರೆಗೆ ಅಧಿಕೃತವಾಗಿ ಪ್ರಚಾರವನ್ನೇ ಆರಂಭಿಸದ ದೇವೇಗೌಡರು, ಗೆದ್ದೇ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.
“ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲು ನನಗೆ ಯಾವುದೇ ಅಭ್ಯಂತರವಾಗಲೀ, ಮುಜುಗರವಾಗಲೀ ಇಲ್ಲ” ಎಂದು ದೇವೇಗೌಡರು ಸಂದರ್ಶನದಲ್ಲಿ ಹೇಳಿದ್ದಾರೆ.
ದೇವೇಗೌಡ ಅವರು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು, ಆದರೆ ಕ್ಷೇತ್ರದ ಹಾಲಿ ಸಂಸದ, ಕಾಂಗ್ರೆಸ್ ಮುಖಂಡ ಮುದ್ದಹನುಮೇಗೌಡ ಅವರು ಮೈತ್ರಿಗೆ ಬಂಡಾಯವಾಗಿ ಅದೇ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ಕಾಂಗ್ರೆಸ್ ಮುಖಂಡರ ನಿರಂತರ ಒತ್ತಾಯಕ್ಕೆ ಮಣಿದು ಅವರು ನಾಮಪತ್ರವನ್ನು ವಾಪಸ್ ಪಡೆದಿದ್ದು, ದೇವೇಗೌಡ ಅವರ ಹಾದಿ ಸುಲಭವಾಗಿದೆ.