ಲಸಿಕೆ ಪಡೆಯುವವರಿಗೆ ಇಲ್ಲಿದೆ ಗುಡ್ ನ್ಯೂಸ್

0
51

ಇನ್ನು ಮುಂದೆ ಪ್ರತಿ ಬುಧವಾರ ವಿಶೇಷ ಲಸಿಕಾ ಉತ್ಸವ ನಡೆಸಿ ಸುಮಾರು 10 ಲಕ್ಷ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆಗಸ್ಟ್ ತಿಂಗಳಲ್ಲೇ 1.10 ಕೋಟಿ ಲಸಿಕೆ ಕೇಂದ್ರ ಸರ್ಕಾರದಿಂದ ಬಂದಿದೆ. ನಾನು ಮತ್ತು ಮುಖ್ಯಮಂತ್ರಿಗಳು ಕೇಂದ್ರದ ಮಟ್ಟದಲ್ಲಿ ಚರ್ಚಿಸಿದ ಬಳಿಕ ಸಮರ್ಪಕವಾಗಿ ಪೂರೈಕೆಯಾಗುತ್ತಿದೆ. ಇನ್ನು ಮುಂದೆ ಪ್ರತಿ ದಿನ 5 ಲಕ್ಷ ಲಸಿಕೆ ನೀಡಲಾಗುವುದು. ವಾರದಲ್ಲಿ ಒಂದು ದಿನ ಬುಧವಾರ ಲಸಿಕಾ ಉತ್ಸವ ನಡೆಸಿ ಈ ಪ್ರಮಾಣವನ್ನು 5 ದಿಂದ 10 ಲಕ್ಷಕ್ಕೆ ಹೆಚ್ಚಿಸಲಾಗುವುದು. ಇದರಿಂದ ಒಂದೂವರೆಯಿಂದ ಎರಡು ಕೋಟಿ ಲಸಿಕೆಯನ್ನು ಒಂದು ತಿಂಗಳಲ್ಲಿ ನೀಡಬಹುದು. ಇಡೀ ದೇಶದಲ್ಲಿ ಲಸಿಕೆ ಕಾರ್ಯ ಪೂರ್ಣಗೊಂಡ ನಗರ ಬೆಂಗಳೂರು ಆಗಬೇಕು ಎಂಬ ಗುರಿ ಇದೆ ಎಂದರು.

ಇಡೀ ರಾಜ್ಯದಲ್ಲಿ 4 ಕೋಟಿ ಲಸಿಕೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಕೋಟಿ ಲಸಿಕೆ ನೀಡಲಾಗಿದೆ. ಬೀದರ್, ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೊಳೆಗೇರಿ ನಿವಾಸಿಗಳಿಗೆ ಪ್ರತಿ ದಿನ ವಿಶೇಷ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅವರು ವಾಸ ಮಾಡುವ ಸ್ಥಳದಲ್ಲೇ ಸಿಬ್ಬಂದಿ ನಿಯೋಜಿಸಿ ಅಲ್ಲೇ ಲಸಿಕೆ ನೀಡಲಾಗುವುದು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮೊದಲಾದ ಗಡಿಭಾಗದ ಜಿಲ್ಲೆಗಳಲ್ಲಿ ಆದ್ಯತೆ ನೀಡಲಾಗಿದೆ. ಗಡಿಯಿಂದ 20 ಕಿ.ಮೀ. ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲಾಗುವುದು. ಡಿಸೆಂಬರ್ ಅಂತ್ಯಕ್ಕೆ ಎರಡೂ ಡೋಸ್ ಲಸಿಕೆ ನೀಡುವ ಗುರಿ ಇದೆ ಎಂದರು.

ರಾಜ್ಯದಲ್ಲಿ ಶಾಲಾ, ಕಾಲೇಜುಗಳನ್ನು ಆರಂಭಿಸಲಾಗಿದೆ. ಪ್ರಾಥಮಿಕ ಶಾಲೆ ಆರಂಭಿಸಲು ಚರ್ಚೆಯಾಗಿದೆ. ಈ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸುವುದು ಸರ್ಕಾರ ಕರ್ತವ್ಯ. ಪೋಷಕರ ಕಡೆಯಿಂದಲೂ ಒತ್ತಡ ಬರುತ್ತಿದೆ. ಶಿಕ್ಷಣ ಸಂಸ್ಥೆಗಳು ಆರಂಭವಾದ ಬಳಿಕ ದುಷ್ಪರಿಣಾಮ ಉಂಟಾಗಿಲ್ಲ. ಆದ್ದರಿಂದ ವಿಶ್ವಾಸ ಬಂದಿದೆ ಎಂದರು.

 

 

LEAVE A REPLY

Please enter your comment!
Please enter your name here