ಲೋಕಸಭೆಯಲ್ಲಿ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿರುವುದಕ್ಕೆ ಪಕ್ಷದ ಕಾರ್ಯಕರ್ತರೇ ಕಾರಣ. ಇಡೀ ಕರ್ನಾಟಕ ಇತ್ತ ನೋಡುವಂತಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕಿನ ಎಡೆಯೂರು ಹೋಬಳಿಯ ಕೊಪ್ಪ ವೃತ್ತದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರಿಗೆ ಕೃತಜ್ಞತಾ ಅಭಿನಂದನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಡೀ ದೇಶದಲ್ಲೇ ಮೋದಿ ಅಲೆ ಇದ್ದು, ಕುಣಿಗಲ್, ಮಾಗಡಿ, ಕನಕಪುರ, ರಾಮನಗರದಲ್ಲಿ ಈ ಅಲೆ ಕೊಚ್ಚಿಹೋಗಿದೆ. ನಾನು ಏಳೇಳು ಜನ್ಮಕ್ಕೂ ನಿಮ್ಮಗೆ ಅಭಾರಿಯಾಗಿದ್ದೇನೆ ಎಂದರು.
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಚುನಾವಣೆ ಎದುರಿಸಿದ್ದು, ಬೆಂಗಳೂರರು ಗ್ರಾಮಾಂತರದಲ್ಲಿ ಅಪಸ್ವರ ಬಾರದೇ ಮೈತ್ರಿ ಧರ್ಮ ಪಾಲೆಯಾಗಿದ್ದು, ಇದಕ್ಕೆ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಮಾಜಿ ಸಚಿವ ಡಿ.ನಾಗರಾಜಯ್ಯನವರು ಸ್ಥಳೀಯ ಮಟ್ಟದಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಇದ್ದರೂ ಜೆಡಿಎಸ್ ವರಿಷ್ಠರ ಮಾತಿಗೆ ಬೆಲೆಕೊಟ್ಟು ಮೈತ್ರಿ ಅಭ್ಯರ್ಥಿಗೆ 41 ಸಾವಿರಕ್ಕೂ ಹೆಚ್ಚು ಮತಗಳನ್ನು ಕೊಡಿಸಿ ನನ್ನ ಗೆಲುವಿಗೆ ಶ್ರಮಿಸಿದ್ದಾರೆ ಎಂದರು.
ಇದು ನನ್ನ ಜಯವಲ್ಲ. ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಹೋರಾಟದ ಫಲ. ಆದ್ದರಿಂದ ನಾನು ನಿಮ್ಮ ಸೇವೆಗಾಗಿ ಪಕ್ಷಾತೀತವಾಗಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಕೆಲಸ ಮಾಡುತ್ತಿದ್ದೇನೆ ಎಂದರು.
ಕುಣಿಗಲ್ ತಾಲ್ಲೂಕಿಗೆ ಹೇಮಾವತಿ ವಿಚಾರದಲ್ಲಿ ಈಗಾಗಲೇ ಶಾಸಕರು ಮತ್ತು ನಾನು ರೂಪುರೇಷೆ ಸಿದ್ದಪಡಿಸಿಕೊಂಡಿದ್ದೇವೆ. ನೀರಾವರಿ ವಿಚಾರವಾಗಿ ಯಾರೇ ಅಡ್ಡಿಪಡಿಸಿದರೂ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಶಾಸಕ ರಂಗನಾಥ್ ಸೇರಿದಂತೆ ಮತ್ತಿತರರು ಇದ್ದರು.