ಇನ್ನು ಮುಂದೆ ಕೊರೊನಾ ವೈರಸ್ ಸೋಂಕು ವಿರುದ್ದದ ಲಸಿಕೆ ಪಡೆಯುವ ಫಲಾನುಭವಿಗಳು ಈಗ ವಾಟ್ಸಾಪ್ ಮೂಲಕವೂ ಕೋವಿಡ್ ಲಸಿಕೆಯ ಸ್ಲಾಟ್ ಬುಕ್ ಮಾಡಬಹುದು. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದ್ದು, ಕೋವಿಡ್ ಲಸಿಕೆ ಪಡೆಯಬಹುದಾದ ಫಲಾನುಭವಿಗಳು ಕೊರೊನಾ ಸಹಾಯವಾಣಿ ಸಂಖ್ಯೆಗೆ ವಾಟ್ಸಾಪ್ ಮಾಡುವ ಮೂಲಕ ಕೋವಿಡ್ ಲಸಿಕೆಗಾಗಿ ತಮ್ಮ ಹತ್ತಿರದ ಕೋವಿಡ್ ಲಸಿಕೆ ಕೇಂದ್ರದಲ್ಲಿ ದಾಖಲಾತಿಯನ್ನು ಪಡೆಯಬಹುದು ಎಂದು ತಿಳಿಸಿದೆ.

ನೀವು ನಿಮ್ಮ ನಿವಾಸದ ಸಮೀಪದ ಕೋವಿಡ್ ಲಸಿಕಾ ಕೇಂದ್ರದಲ್ಲಿ ಕೋವಿಡ್ ಲಸಿಕೆಯನ್ನು ಪಡೆಯಬೇಕಾದರೆ ವಾಟ್ಸಾಪ್ ಸಂಖ್ಯೆ +91 9013151515 ಸಂಖ್ಯೆಗೆ “Book Slot” ಎಂದು ಸಂದೇಶವನ್ನು ಕಳಿಸುವ ಮೂಲಕ ಸ್ಲಾಟ್ ಬುಕ್ ಮಾಡಬಹುದು. ಆನ್‌ಲೈನ್ ಕೋವಿನ್ ಮೂಲಕ ಕೋವಿಡ್ ಲಸಿಕೆ ಸ್ಲಾಟ್‌ಗಳನ್ನು ಬುಕ್ ಮಾಡಲು ಸರಿಯಾಗಿ ತಿಳಿಯದವರಿಗೆ ಈ ವಾಟ್ಸಾಪ್ ಸೌಕರ್ಯವು ಸ್ಲಾಟ್ ಬುಕ್ ಮಾಡಲು ಬಹಳ ಸರಳ ವಿಧಾನವಾಗಿದೆ.
ಕಳೆದ ಮಾರ್ಚ್ ತಿಂಗಳಿನಿಂದ ಮೈಗವರ್ನಮೆಂಟ್ ಕೊರೊನಾ ಹೆಲ್ಪ್‌ಲೈನ್ ಡೆಸ್ಕ್‌ನ ವಾಟ್ಸಾಪ್ ಕೂಡಾ ಇದೆ. ಇದು ಹ್ಯಾಪ್ಟಿಕ್‌ನ ಎಐ ಸೊಲ್ಯೂಷನ್‌ನಿಂದ ಚಾಲಿತವಾಗಿದೆ ಹಾಗೂ Turn.io ನಿಂದ ಬೆಂಬಲಿತವಾಗಿದೆ. ಸುಮಾರು 41 ದಶಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಬಳಕೆದಾರರಿಗೆ ಕೋವಿಡ್ ಸಂಬಂಧಿತ ಮಾಹಿತಿ ನೀಡುವಲ್ಲಿ ಈ ವಾಟ್ಸಪ್ ಸಹಾಯವಾಣಿಯು ಪ್ರಮುಖ ಪಾತ್ರವನ್ನು ವಹಿಸಿದೆ. ಈ ತಿಂಗಳಿನ ಆರಂಭದಲ್ಲಿ ಮೈಗವರ್ನಮೆಂಟ್ ಹಾಗೂ ವಾಟ್ಸಾಪ್ ತಮ್ಮ ಕಾರ್ಯ ವ್ಯಾಪ್ತಿಯನ್ನು ಹೆಚ್ಚಿಸಿದೆ ಹಾಗೂ ಕೋವಿಡ್ ಲಸಿಕೆ ಪಡೆದವರು ವಾಟ್ಸಾಪ್ ಮೂಲಕ ಕೋವಿಡ್ ಲಸಿಕೆ ಪ್ರಮಾಣ ಪತ್ರವನ್ನು ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಿದೆ. ಈ ಸೌಲಭ್ಯದ ಮೂಲಕ ಈವರೆಗೂ ಸುಮಾರು 32 ಲಕ್ಷ ಕೋವಿಡ್ ಲಸಿಕೆ ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡಲಾಗಿದೆ.