ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿ, ನಟಿಸಿರುವ ‘ಸಲಗ’ ಸಿನಿಮಾ ಅಕ್ಟೋಬರ್ 14ಕ್ಕೆ ತೆರೆಗೆ ಬರಲಿದೆ. ಸಿನಿಮಾ ತಂಡವು ಈಗಾಗಲೇ ಪ್ರಚಾರ ಆರಂಭಿಸಿದ್ದು, ಸಿನಿಮಾವನ್ನು ಹೆಚ್ಚು ಜನರಿಗೆ ತಲುಪಿಸುವ ಪ್ರಯತ್ನದಲ್ಲಿದೆ.
‘ಸಲಗ’ ಸಿನಿಮಾ ತಂಡ ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿರುವ ‘ಸಲಗ’ದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ವಿಶೇಷವೆಂದರೆ ಈ ಕಾರ್ಯಕ್ರಮಕ್ಕೆ ಪುನೀತ್ ರಾಜ್‌ಕುಮಾರ್ ಸಹ ಆಹ್ವಾನಿತರಾಗಿದ್ದಾರೆ. ಪುನೀತ್ ರಾಜ್‌ಕುಮಾರ್, ಸಿದ್ದರಾಮಯ್ಯ ಹಾಗೂ ಇನ್ನಿತರೆ ಅತಿಥಿಗಣ್ಯರು ‘ಸಲಗ’ ಸಿನಿಮಾದ ಟ್ರೈಲರ್ ಲಾಂಚ್ ಮಾಡಲಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾಗಿರುವ ‘ಸಲಗ’ ಚಿತ್ರತಂಡ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಪುನೀತ್, ದುನಿಯಾ ವಿಜಯ್ ಜೊತೆಯಾಗಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
.ಸಲಗ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿಯೂ ಸಿದ್ದರಾಮಯ್ಯ ಭಾಗಿಯಾಗಿದ್ದರು. ಸಿನಿಮಾಕ್ಕೆ ಕ್ಲ್ಯಾಪ್ ಮಾಡಿದ್ದುದು ನಟ ಸುದೀಪ್. ವಿಶೇಷವೆಂದರೆ ಈಗ ‘ಸಲಗ’ ಸಿನಿಮಾಕ್ಕೆ ಪ್ರತಿಸ್ಪರ್ಧಿಯಾಗಿ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಎದುರಾಗಿದೆ. ಎರಡೂ ಸಿನಿಮಾಗಳು ಅಕ್ಟೋಬರ್ 14ರಂದೇ ಚಿತ್ರಮಂದಿರಕ್ಕೆ ಬರುತ್ತಿವೆ. ಯಾವ ಸಿನಿಮಾ ಪ್ರೇಕ್ಷಕರನ್ನು ಹೆಚ್ಚು ಸೆಳೆಯುತ್ತದೆ ಎಂಬುದು ಕಾದು ನೋಡಬೇಕಿದೆ.
‘ಸಲಗ’ ಸಿನಿಮಾದ ಎರಡು ಹಾಡುಗಳು ಈವರೆಗೆ ಬಿಡುಗಡೆ ಆಗಿದ್ದು, ಎರಡೂ ಹಾಡುಗಳು ಬಹಳ ಹಿಟ್ ಆಗಿವೆ. ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಕಾರಣ ಸಿನಿಮಾದ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಿದೆ. ಸಿನಿಮಾದಲ್ಲಿ ಡಾಲಿ ಧನಂಜಯ್, ಸಂಜಯ್ ಆನಂದ್, ತ್ರಿವೇಣಿ ರಾವ್, ಅಚ್ಯುತ್ ಕುಮಾರ್ ಇನ್ನೂ ಹಲವು ನಟರು ನಟಿಸಿದ್ದಾರೆ