ಹ್ಯಾಟ್ರಿಕ್ ಸೇರಿದಂತೆ 5 ಶತಕ ಸಿಡಿಸಿ ದಾಖಲೆ ಬರೆಯುವ ಜೊತೆಗೆ ವಿಶ್ವಕಪ್ ನಲ್ಲಿ ರನ್ ಸರದಾರ ಎನಿಸಿಕೊಂಡ ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಗೆ ಗೋಲ್ಡನ್ ಬ್ಯಾಟ್ ಲಭಿಸಿದೆ.
ವಿಶ್ವಕಪ್ ಟೂರ್ನಿಯಲ್ಲಿ 648 ರನ್ ಬಾರಿಸುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಬಾರಿಸಿದ ರೋಹಿತ್ ಶರ್ಮ, ಗೋಲ್ಡನ್ ಬ್ಯಾಟ್ ಗೌರವಕ್ಕೆ ಪಾತ್ರರಾದ ಮೂರನೇ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ರೋಹಿತ್ ಶರ್ಮಗೂ ಮೊದಲು ಸಚಿನ್ ತೆಂಡೂಲ್ಕರ್ (1996 ಮತ್ತು 2003) ಹಾಗೂ ರಾಹುಲ್ ದ್ರಾವಿಡ್ (1999) ಗೋಲ್ಡನ್ ಬ್ಯಾಟ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಕೇವಲ 1 ರನ್ ನಿಂದ ಹಿಂದೆ ಬಿದ್ದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 2ನೇ ಸ್ಥಾನಕ್ಕೆ ಕುಸಿದರು. ಆಸ್ಟ್ರೇಲಿಯಾ ಕೂಡ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲುಂಡಿತ್ತು.
ರೋಹಿತ್ ಶರ್ಮ ದಾಖಲೆ ಮುರಿಯಲು ಭಾನುವಾರ ಫೈನಲ್ ಆಡಿದ ಇಂಗ್ಲೆಂಡ್ ನ ಜೋ ರೂಟ್ ಮತ್ತು ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ಗೆ ಅವಕಾಶವಿತ್ತು. ಆದರೆ ಇವರಿಬ್ಬರಿಂದಲೂ ರನ್ ಹೊಳೆ ಹರಿಯದ ಕಾರಣ ರೋಹಿತ್ ಗೆ ಈ ಗೌರವ ಲಭಿಸಿತು.
ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ 606 ರನ್ ನೊಂದಿಗೆ 3ನೇ ಸ್ಥಾನ ಪಡೆದರೆ, ಕೇನ್ ವಿಲಿಯಮ್ಸನ್ 578 ಮತ್ತು ಜಾನಿ ಜೋ ರೂಟ್ 556 ರನ್ ನೊಂದಿಗೆ ಟಾಪ್ 5 ರೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
ಕೇನ್ ವಿಲಿಯಮ್ಸನ್ 500 ರನ್ ಪೂರೈಸುವ ಮೂಲಕ ವಿಶ್ವಕಪ್ ನಲ್ಲಿ 12 ವರ್ಷದ ನಂತರ 500ಕ್ಕಿಂತ ಹೆಚ್ಚು ರನ್ ಬಾರಿಸಿದ ನಾಯಕ ಎಂಬ ಗೌರವಕ್ಕೆ ಪಾತ್ರರಾದರು. ಜಾನಿ ಬೇರ್ ಸ್ಟೊ 528 ರನ್ ನೊಂದಿಗೆ 6ನೇ ಸ್ಥಾನ ಗಳಿಸಿದರು.