ಅಂಬರೀಷ್ ಅವರು ನಮ್ಮನಗಲಿ ಐದು ತಿಂಗಳು ಕಳೆದರು. ಅವರನ್ನು ಮರೆಯೋಕೆ ಸಾಧ್ಯವಿಲ್ಲ ಎಂದು ಪತ್ನಿ ಸುಮಲತಾ ಭಾವುಕರಾಗಿ ನುಡಿದರು.
ಇಂದು ಕಂಠೀರವರ ಸ್ಟುಡಿಯೊದಲ್ಲಿ ಅಂಬರೀಷ್ ಅವರ ಐದನೇ ತಿಂಗಳ ಪುಣ್ಯಸ್ಮರಣೆ ನಿಮಿತ್ತ ಸಮಾಧಿಗೆ ಪೂಜೆ ಸಲ್ಲಿಸಿದರು. ಸಮಾಧಿಯನ್ನು ಹಲವು ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು.
ಈ ವೇಳೆ ಮಾತನಾಡಿದ ಸುಮಲತಾ ಅಂಬರೀಷ್ ಅವರ ಪ್ರೀತಿ, ಮಾತು ನೆನಪು ಸಾಕಷ್ಟಿದೆ. ಅವರು ನಮ್ಮನ್ನು ತೊರೆದು ಐದು ತಿಂಗಳು ಕಳೆದಿದೆ. ಆದರೂ ಸಹ ಅವರನ್ನು ಮರೆಯೋಕೆ ಸಾಧ್ಯವಿಲ್ಲ. ಅಣ್ಣಾವ್ರ ಜತೆ ಅಂಬರೀಷ್ ಹಾಸ್ಯ ಮಾಡುತ್ತಿದ್ದರು ಎಂದರು.
ಲೋಕಸಭಾ ಚುನಾವಣೆ ನಂತರ ಒಂದಷ್ಟು ತಿಳುವಳಿಕೆ ಬಂದಿದೆ. ಮೇ 23ರಂದು ಫಲಿತಾಂಶ ಹೊರಬೀಳಲಿದೆ.
ಗೆಲುವಿನ ಬಗ್ಗೆ ಬೆಟ್ಟಿಂಗ್ ನಡೆಯುತ್ತಿರುವುದನ್ನು ನಾನು ವಿರೋಧಿಸುತ್ತೇನೆ ಎಂದು ಹೇಳಿದರು.
ಅಂಬಿ ಸ್ಮಾರಕದ ಮೊದಲು ಡಾ. ರಾಜ್‍ಕುಮಾರ್, ಡಾ. ವಿಷ್ಣುವರ್ಧನ್ ಸ್ಮಾರಕಗಳನ್ನು ಪೂರ್ಣಗೊಳಿಸಬೇಕು ನಂತರ ಅಂಬಿ ಸ್ಮಾರಕವನ್ನು ಪೂರ್ಣಗೊಳಿಸಬೇಕು. ಇದು ಕೇವಲ ನನ್ನ ಆಸೆ ಮಾತ್ರವಲ್ಲ ಇದು ಅಭಿಮಾನಿಗಳ ಆಸೆ ಆಗಿದೆ. ಅಂಬಿ ಇಲ್ಲದಿದ್ದರು ಜನರ ಪ್ರೀತಿ ಕುಂದಿಲ್ಲ ಎಂದರು.
ಪುತ್ರ ಅಭಿಷೇಕ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಹಿರಿಯನಟ ದೊಡ್ಡಣ್ಣ ಸಮಾಧಿಗೆ ಪೂಜೆ ಸಲ್ಲಿಸಿದರು. ಅಂಬಿ ಅಭಿಮಾನಿಗಳು ಕೂಡ ಸಮಾಧಿಯ ಬಳಿ ಬಂದು ಪೂಜೆ ಸಲ್ಲಿಸಿದರು.