ಕರ್ನಾಟಕ ಸರ್ಕಾರ ಜೂನ್ 21ರಿಂದ ಜಾರಿಗೆ ಬರುವಂತೆ ಅನ್‌ಲಾಕ್ ಘೋಷಣೆ ಮಾಡಿದೆ. ಆದರೆ ಶುಕ್ರವಾರ ಸಂಜೆಯಿಂದ ರಾಜ್ಯದಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಶುಕ್ರವಾರ ಸಂಜೆ 7 ಗಂಟೆಯಿಂದ ಜೂನ್ 28 ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರಂತ್ಯದ ಕರ್ಫ್ಯೂ ರಾಜ್ಯಾದ್ಯಂತ ಜಾರಿಯಲ್ಲಿರುತ್ತದೆ. ಅನಗತ್ಯವಾಗಿ ಸಂಚಾರ ನಡೆಸಿದರೆ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತದೆ.

ಸರ್ಕಾರದ ಮಾರ್ಗಸೂಚಿ ಪ್ರಕಾರ ಶನಿವಾರ ಮತ್ತು ಭಾನುವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ದಿನಸಿ, ತರಕಾರಿ, ಹಾಲು, ಮಾಂಸ, ಪ್ರಾಣಿಗಳಿಗೆ ಆಹಾರ ಮತ್ತಿತರ ಅಗತ್ಯವಸ್ತುಗಳು ಮತ್ತು ಮದ್ಯ ಮಾರಾಟಕ್ಕೆ ಅವಕಾಶವಿರುತ್ತದೆ.

ಈ ಅವಧಿಯಲ್ಲಿ ಬೀದಿಬದಿ ವ್ಯಾಪಾರ ಚಟುವಟಿಕೆಗಳು ನಡೆಯಲಿವೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ನಡೆಯಲಿದೆ. ವ್ಯಾಪಾರಿಗಳು ಕೋವಿಡ್-19ರ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ತುರ್ತು ಸೇವೆ ನೀಡುವ ಚಟುವಟಿಕೆಗಳು ಕೈಗಾರಿಕೆ ಸಂಸ್ಥೆಗಳ ಕಾರ್ಯಗಳಿಗೆ ಅವಕಾಶವಿರುತ್ತದೆ. ಟೆಲಿಕಾಂ ಮತ್ತು ಅಂತರ್ಜಾಲ ಸೇವೆ ನೀಡುವ ಸಂಸ್ಥೆಗಳ ಅಗತ್ಯ ಸಿಬ್ಬಂದಿ ಮಾತ್ರ ಸಂಚರಿಸಬಹುದು. ಉಳಿದವರು ಮನೆಯಿಂದ ಕೆಲಸ ನಿರ್ವಹಿಸಬೇಕು.
ಈಗಾಗಲೇ ಅನುಮತಿ ಪಡೆದಿರುವ ಮದುವೆ ಸಮಾರಂಭ ನಡೆಸಬಹುದು. 40 ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಅಂತ್ಯಕ್ರಿಯೆಯಲ್ಲಿ ಗರಿಷ್ಠ 5 ಜನ ಮಾತ್ರ ಭಾಗವಹಿಸಬಹುದು.






