ಶರಣಾಗತಿ ನಕ್ಸಲರಿಗೆ ಪ್ಯಾಕೇಜ್ ಘೋಷಣೆ ಮಾಡಿದ ರಾಜ್ಯ ಸರ್ಕಾರ!
ಬೆಂಗಳೂರು: ಮುಂಡಗಾರು ಲತಾ ನೇತೃತ್ವದಲ್ಲಿ ಆರು ಮಂದಿ ನಕ್ಸಲರರು ಬಂದೂಕಿನ ಹಾದಿಯನ್ನು ತೊರೆದು ಪ್ರಜಾಸತ್ತಾತ್ಮಕ ಹಾದಿಯನ್ನು ತುಳಿಯುವ ಉದ್ದೇಶದಿಂದ ಶರಣಾಗತರಾಗುತ್ತಿದ್ದಾರೆ. ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರು ನಕ್ಸಲರು ಶರಣಾಗತರಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಕೊನೆಯಗಳಿಗೆಯಲ್ಲಿ ಇದು ಬದಲಾವಣೆ ಆಗಿದೆ. ಚಿಕ್ಕಮಗಳೂರಿನಿಂದ ನೇರವಾಗಿ ಬೆಂಗಳೂರಿಗೆ ಬಂದು ಸಿಎಂ ಸಿದ್ದರಾಮಯ್ಯ ಅವರ ಮುಂದೆ ಶರಣಾಗತರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ರಾಜ್ಯ ಸರ್ಕಾರದಿಂದ ಶರಣಾಗುತ್ತಿರುವಂತ ನಕ್ಸಲರಿಗೆ ಪ್ಯಾಕೇಜ್ ಘೋಷಣೆ ಮಾಡಿದೆ. ಮೂರು ಕೆಟಗರಿಯಲ್ಲಿ ಪ್ಯಾಕೇಜ್ ನೀಡಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.
ಕೆಟಗರಿ ಎ ವರ್ಗದಡಿ ನಮ್ಮ ರಾಜ್ಯದವರೇ ಆಗಿದ್ದು, ನಕ್ಸಲ್ ಚಟುವಟಿಕೆಯಲ್ಲಿ ತೊಡಗಿ, ಕೇಸ್ ಇದ್ದು ಶರಣಾಗುತ್ತಿರುವವರಿಗೆ 7.50 ಲಕ್ಷ ಹಣ ನೀಡುತ್ತಿದೆ.
ಕೆಟಗರಿ ಬಿ ವರ್ಗದಡಿ ಹೊರ ರಾಜ್ಯದ ನಕ್ಸಲರಿಗೆ ಶಸ್ತ್ರಸಜ್ಜಿತ ನಕ್ಸಲ್ ಗುಂಪಿನ ಸದಸ್ಯನಾಗಿದ್ದು, ಒಂದಕ್ಕಿಂತ ಹೆಚ್ಚು ಸದಸ್ಯರಾಗಿದ್ದರೇ 4 ಲಕ್ಷ ಪ್ಯಾಕೇಜ್ ನೀಡುವುದಾಗಿ ತಿಳಿಸಿದೆ.
ಕೆಟಗರಿ ಸಿ ವರ್ಗದಡಿ ನಕ್ಸಲ್ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದು, ಪ್ರಕರಣಗಳು ಇದ್ದರೂ 2 ಲಕ್ಷ ಹಣವನ್ನು ಪ್ಯಾಕೇಜ್ ನಡಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಯಾರ್ಯಾರು 6 ನಕ್ಸಲರು?
ಶೃಂಗೇರಿ ತಾಲೂಕು ಮುಂಡಗಾರು ಲತಾ, ದಕ್ಷಿಣ ಕನ್ನಡ ಜಿಲ್ಲೆ ಕುತ್ಲೂರಿನ ಸುಂದರಿ, ಬಾಳೆಹೊಳೆಯ ವನಜಾಕ್ಷಿ, ಆಂಧ್ರ ಪ್ರದೇಶದ ಮಾರೆಪ್ಪ ಅರೋಲಿ ಅಲಿಯಾಸ್ ಜಯಣ್ಣ, ತಮಿಳುನಾಡಿನ ಕೆ.ವಸಂತ, ಕೇರಳದ ಟಿ.ಎನ್.ಜೀಶ ಇಂದು ಶರಣಾಗತಿಯಾಗಲಿರುವ ನಕ್ಸಲರು. ಸಿಎಂ ಮುಂದೆ ಹಾಜರಾಗಿ ಸಮಾಜದ ಮುಖ್ಯವಾಹಿನಿ ಸೇರಲಿದ್ದಾರೆ. ಶೃಂಗೇರಿ ತಾಲೂಕು ಕಿಗ್ಗಾ ಮೂಲದ ರವಿ ಎಂಬಾತ ಮಾತ್ರ ಶರಣಾಗುವುದು ಬಾಕಿ ಇದ್ದು, ಆ ಪ್ರಕ್ರಿಯೆ ಕೂಡ ನಡೆಯುತ್ತಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.