ಶಿಕ್ಷಣಾಧಿಕಾರಿಗೆ ಪೋಷಕರಿಂದ ಚಪ್ಪಲಿ ಹಾರ

0
43

ಶುಕ್ರವಾರ ಲೂಧಿಯಾನದ ಜಿಲ್ಲಾ ಶಿಕ್ಷಣ ಕಚೇರಿಯಲ್ಲಿ ಹೈಡ್ರಾಮಾ ನಡೆದಿದೆ. ಪೋಷಕರ ಗುಂಪು ಜಿಲ್ಲಾ ಶಿಕ್ಷಣ ಅಧಿಕಾರಿ (ಡಿಇಒ ಸೆಕೆಂಡರಿ) ಅವರಿಗೆ ಚಪ್ಪಲಿ ಹಾರಗಳನ್ನು ಹಾಕಿರುವಂತಹ ಘಟನೆ ನಡೆದಿದೆ.

ಈ ಸಂಬಂಧ ಅಧಿಕಾರಿ ಲಖ್ವೀರ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದಾರೆ.

ಪೋಷಕರ ಸಂಘದ ಕೆಲವು ಸದಸ್ಯರು ತಮ್ಮ ಕಚೇರಿಗೆ ಬಂದು ಅವರನ್ನು ಅಭಿನಂದಿಸುವುದಾಗಿ ಹೇಳಿದ್ದರು. ಮೊದಲಿಗೆ ಹೂವಿನ ಹಾರಗಳನ್ನು ಹಾಕಿದ ಅವರು, ನಂತರ ಏಕಾಏಕಿ ಚಪ್ಪಲಿ ಹಾರಗಳನ್ನು ಹಾಕಿ ಅವಮಾನ ಮಾಡಿದ್ದಾಗಿ ದೂರಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ವಿಫಲವಾದ ಕಾರಣ ಡಿಇಒ ಅವರ ಕುತ್ತಿಗೆಗೆ ಶೂಗಳ ಹಾರವನ್ನು ಹಾಕಲಾಗಿದೆ. ಅಲ್ಲದೆ ಈ ಬಗ್ಗೆ ಸಾಕಷ್ಟು ದೂರು ನೀಡಿದರೂ ಶಿಕ್ಷಕರನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಲಾಗಿದ್ದು, ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಹೀಗಾಗಿ ಈ ರೀತಿ ವರ್ತಿಸಿದ್ದಾಗಿ ಪೋಷಕರು ಸ್ಪಷ್ಟಪಡಿಸಿದ್ದಾರೆ.

ಇನ್ನು ಈ ಆರೋಪವನ್ನು ಡಿಇಒ ಸಿಂಗ್ ತಳ್ಳಿಹಾಕಿದ್ದಾರೆ. ಶಿಕ್ಷಕರನ್ನು ತನಿಖೆಯ ನಂತರ ಈಗಾಗಲೇ ಬೇರೆ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಅವರ ವಿರುದ್ಧ ಕ್ರಮಕ್ಕೆ ಕೇಂದ್ರ ಕಚೇರಿಗೂ ಪತ್ರ ಬರೆಯಲಾಗಿದೆ. ಆದರೆ, ಪೋಷಕರ ಒಕ್ಕೂಟದ ಆದೇಶದ ಮೇರೆಗೆ ಮತ್ತು ಅವರ ಇಚ್ಛೆಯ ಮೇರೆಗೆ ಶಿಕ್ಷಕರನ್ನು ಅಮಾನತುಗೊಳಿಸಲಾಗುವುದಿಲ್ಲ ಅಥವಾ ವಜಾಗೊಳಿಸಲಾಗುವುದಿಲ್ಲ. ವಿಚಾರಣೆಯ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆಯೇ ಹೊರತು ಈ ಪೋಷಕ ಸಂಘ ಹೇಳಿದಂತೆ ನಡೆದುಕೊಳ್ಳಲಾಗುವುದಿಲ್ಲ ಎಂದು ಡಿಇಒ ತಿಳಿಸಿದ್ದಾರೆ.

ಇದು ನಿಜವಾಗಿಯೂ ಪೋಷಕರ ಒಕ್ಕೂಟವಲ್ಲ. ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಿರುವ ಜನರ ಗುಂಪು ಎಂದು ಡಿಇಒ ಆರೋಪಿಸಿದ್ದಾರೆ. ಇನ್ನು ಈ ಬಗ್ಗೆ ಶಿಕ್ಷಣಾಧಿಕಾರಿಯಿಂದ ದೂರು ಸ್ವೀಕರಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here