ಜಿಲ್ಲೆಯಲ್ಲಿನ ಅಕ್ರಮಗಳಿಗೆ ಸಚಿವ ಯು.ಟಿ. ಖಾದರ್ ಅಭಯ ಹಸ್ತವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಕ್ಕೆ ಯು.ಟಿ. ಖಾದರ್ ತಿರುಗೇಟು ನೀಡಿದ್ದಾರೆ.ಅನಗತ್ಯವಾಗಿ ಸುಳ್ಳು ಆರೋಪ ಮಾಡಬಾರದು, ಗೊಂದಲ ಸೃಷ್ಟಿಸಿ ಪರಿಸ್ಥಿತಿ ಬಿಗಡಾಯಿಸುವಂತೆ ಅವರು ಮಾತನಾಡಬಾರದು ಎಂದು ಹೇಳಿದ್ದಾರೆ.
ಶೋಭಾ ಕರಂದ್ಲಾಜೆ ತಮ್ಮ ಕ್ಷೇತ್ರದತ್ತ ಮುಖ ಮಾಡುವುದಿಲ್ಲ. ಅಲ್ಲಿನ ಜನ ಅವರನ್ನು ರಿಜೆಕ್ಟ್ ಮಾಡಿದ್ದರು. ಆದರೆ, ಪ್ರಧಾನಿ ಮೋದಿ ಮುಖ ನೋಡಿ ಅವರನ್ನು ಗೆಲ್ಲಿಸಿದ್ದಾರೆ. ಈ ಬಗ್ಗೆ ಶೋಭಾ ಕರಂದ್ಲಾಜೆ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
ನಾನು ಜಿಲ್ಲೆಯ ಸಂಸದರು, ಶಾಸಕರೊಂದಿಗೆ ಮಾತನಾಡುತ್ತೇನೆ. ಹಿರಿಯರು, ಧಾರ್ಮಿಕ ಮುಖಂಡರ ಸಲಹೆ ಕೇಳುತ್ತೇನೆ. ಸರ್ವಪಕ್ಷ, ಸರ್ವಧರ್ಮ ಪ್ರತಿನಿಧಿಗಳ ಜೊತೆ ಸಭೆ ನಡೆಸುತ್ತೇನೆ.ಆ ಸಭೆಗೆ ಬಂದು ಶೋಭಾ ಕರಂದ್ಲಾಜೆ ಸಲಹೆ ಕೊಡಲಿ. ಶೋಭಾ ಕರಂದ್ಲಾಜೆ ಅವರ ಆರೋಪ ಇದೇ ಮೊದಲೇನಲ್ಲ. ಅವರ ಎಲ್ಲಾ ಆರೋಪಗಳಿಗೆ ನಾನು ಉತ್ತರ ಕೊಡಲು ಹೋಗಲ್ಲ. ಎಷ್ಟೇ ಟೀಕಿಸಿದರೂ ನಾನು ಪ್ರತಿಕ್ರಿಯೆ ನೀಡಲ್ಲ. ಅವರು ಸಂಸದರಾಗಿ ನನಗೆ ಸಲಹೆ-ಸೂಚನೆಗಳನ್ನು ಕೊಡಲಿ ಎಂದು ಹೇಳಿದ್ದಾರೆ.