ಶ್ರಾವಣ‌ ಮಾಸದಲ್ಲಿ ಶಿವನ ಆರಾಧನೆ ಮಾಡುವುದೇಕೆ..?​ಶಿವನು ಶ್ರಾವಣ ಮಾಸವನ್ನು ಇಷ್ಟಪಡಲು ಕಾರಣವೇನು..?

0
174

ಶ್ರಾವಣ ಅಂದರೆ ಸಂಭ್ರಮ. ಶಿವನ ಆರಾಧನೆಗೆ ಬಲು ಶ್ರೇಷ್ಠ. ಅದರಲ್ಲೂ ಶ್ರಾವಣ ಮಾಸದ ಪ್ರತಿ ಸೋಮವಾರದಂದು ಶಿವನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಶ್ರಾವಣ ಸೋಮವಾರದಂದು ಶಿವನನ್ನು ಯಾಕೆ ಪೂಜಿಸಲಾಗುತ್ತದೆ ಗೊತ್ತಾ..? ಇಲ್ಲಿದೆ ನೋಡಿ ಕಾರಣ

ಜಲಕಂಠನಿಗೆ ಶ್ರಾವಣ ತಿಂಗಳೆಂದರೆ ಬಹಳ ಪ್ರೀತಿ. ಶ್ರಾವಣ ಮಾಸದಲ್ಲಿ ಯಾವ ಭಕ್ತಿಯಿಂದ ಜಗದೀಶನನ್ನು ಆರಾಧಿಸುತ್ತಾರೋ ಅವರೆಲ್ಲಾ ಆಸೆಗಳು ಈಡೇರುತ್ತದೆ ಹಾಗೂ ಎಲ್ಲಾ ಕೆಲಸಗಳಲ್ಲೂ ಶುಭ ಫಲವನ್ನೇ ಪಡೆದುಕೊಳ್ಳುತ್ತಾರೆ ಎಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಶ್ರಾವಣ ಮಾಸದಲ್ಲೇ ಶಿವನನ್ನು ಯಾಕೆ ಪೂಜಿಸಲಾಗುತ್ತದೆ..? ಶಿವನಿಗೆ ಶ್ರಾವಣ ಮಾಸವೆಂದರೆ ಯಾಕೆ ಬಲು ಪ್ರೀತಿ..? ಇದರ ಹಿಂದಿನ ರಹಸ್ಯವೇನು ಗೊತ್ತಾ..? ಅನ್ನೋದನ್ನ ನೋಡೋಣ.

ತನ್ನ ತಂದೆಯಿಂದ ಅವಮಾನಗೊಂಡ ಪರಮೇಶ್ವರನ ಪತ್ನಿ ಸತಿಯು ತನ್ನ ತಂದೆಯು ಆಯೋಜಿಸಿದ್ದ ಯಜ್ಞ ಕುಂಡಕ್ಕೆ ಹಾರಿ ತನ್ನ ಪ್ರಾಣವನ್ನೇ ತ್ಯಜಿಸುತ್ತಾಳೆ. ಆದರೆ ಸತಿ ತನ್ನ ಪ್ರಾಣವನ್ನು ತ್ಯಜಿಸುವ ಮುನ್ನ ನಾನು ಪ್ರತಿ ಜನ್ಮದಲ್ಲೂ ಪರಶಿವನ ಪತ್ನಿಯಾಗಿಯೇ ಇರುತ್ತೇನೆಂದು ಹೇಳಿ ಪ್ರಾಣವನ್ನು ತ್ಯಜಿಸುತ್ತಾಳೆ. ಮುಂದಿನ ಜನ್ಮದಲ್ಲಿ ಸತಿಯು ಪಾರ್ವತಿಯಾಗಿ ಜನ್ಮತಾಳುತ್ತಾಳೆ. ಪರಮೇಶ್ವರನನ್ನೇ ವರಿಸಲು ಪಾರ್ವತಿಯು ಶ್ರಾವಣ ಮಾಸದಲ್ಲಿ ಅದರಲ್ಲೂ ಶ್ರಾವಣದ ಸೋಮವಾರದಲ್ಲಿ ಕಠಿಣ ತಪಸ್ಸನ್ನು ಮಾಡುತ್ತಾಳೆ. ಆದ್ದರಿಂದ ಶಿವನಿಗೆ ಶ್ರಾವಣ ಮಾಸವೆಂದರೆ ಬಲು ಪ್ರೀತಿ.

ದೇವಶಯನಿ ಏಕಾದಶಿಯ ನಂತರ ಭಗವಾನ್‌ ವಿಷ್ಣು ವಿಶ್ರಾಂತಿಗೆ ಮರಳಿದರೆ, ಭಗವಾನ್‌ ಪರಶಿವನು ಚತುರ್ದಶಿಯಲ್ಲಿ ವಿಶ್ರಾಂತಿಗೆ ತೆರಳುತ್ತಾನೆ. ಶಿವನು ನಿದ್ರೆಗೆ ಜಾರಿದ ದಿನವನ್ನು ಶಿವ ಶಯನೋತ್ಸವ ಎಂದು ಕರೆಯಲಾಗುತ್ತದೆ. ನಂತರ ಶಿವನು ತನ್ನ ಎರಡನೇ ರೂಪವಾದ ರೌದ್ರಾವತಾರದಲ್ಲಿ ಜಗತ್ತನ್ನು ಆಳುತ್ತಾನೆ. ಋಗ್ವೇದದಲ್ಲಿ ಭಗವಾನ್‌ ಶಿವನ ರೌದ್ರಾವತರಾದ ಕುರಿತು ಸಾಕಷ್ಟು ಉಲ್ಲೇಖವಿದೆ.

ಚಾತುರ್ಮಾಸದಲ್ಲಿ ಭಗವಾನ್‌ ವಿಷ್ಣು ಮತ್ತು ಪರಶಿವರಿಬ್ಬರು ವಿಶ್ರಾಂತಿಗೆ ತೆರಳಿದಾಗ ಶಿವನ ರೌದ್ರಾವತಾರವು ಜಗತ್ತನ್ನು ಕಾಯುತ್ತಿರುತ್ತದೆ. ಶಿವನ ರೌದ್ರಾವತಾರವು ಬಹು ಬೇಗ ಕೋಪಗೊಳ್ಳುವ ಅವತಾರವಾಗಿದೆ. ಆದ್ದರಿಂದ ರೌದ್ರಾವತಾರದ ಕೋಪವನ್ನು ತಣಿಸಲು ಶಿವಲಿಂಗಕ್ಕೆ ರುದ್ರಾಭಿಷೇಕವನ್ನು ಶ್ರಾವಣ ಮಾಸದಲ್ಲಿ ಮಾಡಲಾಗುತ್ತದೆ. ಅದರಲ್ಲೂ ಶ್ರಾವಣ ಸೋಮವಾರದಂದು ರುದ್ರಾಭಿಷೇಕ ಮಾಡಿಸಿದರೆ ಬಹಳ ಉತ್ತಮ ಹಾಗೂ ಶ್ರೇಷ್ಠವೆಂಬ ನಂಬಿಕೆಯಿದೆ.

ಶ್ರಾವಣ ಮಾಸದಲ್ಲಿ ವಿವಿಧ ರೀತಿಯ ವ್ರತ ಹಾಗೂ ಉಪವಾಸಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅವುಗಳಲ್ಲಿ ಮಂಗಳ ಗೌರಿ ಉಪವಾಸ ಅಥವಾ ಕೋಕಿಲ ಉಪವಾಸ ಕೂಡ ಒಂದು. ಮಂಗಳ ಗೌರಿ ವ್ರತವನ್ನು ಅಥವಾ ಉಪವಾಸವನ್ನು ಸುಮಂಗಲಿಯರು ಆಚರಿಸುತ್ತಾರೆ. ಸುಮಂಗಲಿಯರು ಈ ದಿನ ಹಸಿರು ಬಣ್ಣದ ಬಟ್ಟೆಯನ್ನು ತೊಟ್ಟು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಮಂಗಳ ಗೌರಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಮಹಿಳೆಯರು ಆಷಾಢ ತಿಂಗಳ ಹುಣ್ಣಿಮೆಯಿಂದ ಹಿಡಿದು ಶ್ರಾವಣ ತಿಂಗಳ ಹುಣ್ಣಿಮೆಯವರೆಗೂ ಕೋಕಿಲ ವ್ರತವನ್ನು ಆಚರಿಸುತ್ತಾರೆ. ಸುಮಂಗಲಿಯರು ಈ ವ್ರತವನ್ನು ಆಚರಿಸಿದರೆ ತಾಯಿ ಪಾರ್ವತಿಯು ಸಂತೋಷಗೊಂಡು ಮನೆಯಲ್ಲಿ ಸಿರಿ, ಸಂಪತ್ತನ್ನು, ಸಂತೋಷವನ್ನು ಹಾಗೂ ಪತಿಯ ಆಯಸ್ಸನ್ನು ವೃದ್ಧಿಸುತ್ತಾಳೆ ಎಂಬುದು ನಂಬಿಕೆ.

ಪುರಾಣದ ಪ್ರಕಾರ, ಶ್ರಾವಣ ತಿಂಗಳಲ್ಲಿ ನಡೆದ ಸಮುದ್ರ ಮಂಥನದಲ್ಲಿ ಶಿವನು ಹಾಲಾಹಲ ವಿಷವನ್ನು ಸೇವಿಸಿ ವಿಷಕಂಠನಾದ ಎನ್ನಲಾಗುತ್ತದೆ. ಇದೇ ಮಾಸದಲ್ಲಿ ಶಿವನು ಭೂಮಿಗಿಳಿದು ಬರುತ್ತಾನೆ. ಆಗ ಆತನಿಗೆ ವಿಶೇಷ ಸನ್ಮಾನವನ್ನು ಮಾಡಲಾಯಿತೆಂದು ಹೇಳಲಾಗಿದೆ.

ಶಿವನು ಶ್ರಾವಣ ಮಾಸದಲ್ಲಿ ತನ್ನ ಅತ್ತೆಯ ಮನೆಗೆ ಬರುತ್ತಾನೆಂಬ ನಂಬಿಕೆಯಿದೆ. ಶ್ರಾವಣ ಮಾಸದದಲ್ಲಿ ಮಾರ್ಕಂಡ ಋಷಿಯ ಮಗ ಮಾರ್ಕಂಡೇಯನು ಕಠಿಣ ತಪಸ್ಸಿನ ಮೂಲಕ ಶಿವನಿಂದ ವರವನ್ನು ಪಡೆದಿದ್ದನು. ಶ್ರಾವಣ ‌ಮಾಸದಲ್ಲಿ ಶಿವನನ್ನು ಆರಾಧಿಸಿದರೆ ಸರ್ವ ಇಷ್ಟವೂ ಸಿದ್ದಿಯಾಗುತ್ತದೆ‌.

LEAVE A REPLY

Please enter your comment!
Please enter your name here