ಕಾಂಗ್ರೆಸ್ ಹಾಗೂ ಜೆಡಿಎಸ್ ನ 14 ಮಂದಿ ಶಾಸಕರು ರಾಜೀನಾಮೆ ನೀಡಿದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿಕೂಟ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಹೀಗಾಗಿ ತಾವು ಸರ್ಕಾರ ರಚನೆ ಮಾಡಬಹುದೆಂಬ ಲೆಕ್ಕಾಚಾರದಲ್ಲಿದ್ದ ಬಿಜೆಪಿಗೆ ಇಂದು ದೊಡ್ಡ ಶಾಕ್ ಎದುರಾಗಿದೆ.
ಈ ಮೊದಲು ಶನಿವಾರ ರಾಜೀನಾಮೆ ನೀಡಿದ್ದ 13 ಮಂದಿ ಶಾಸಕರುಗಳ ಪೈಕಿ 8 ಶಾಸಕರ ರಾಜೀನಾಮೆ ಪತ್ರ ಕ್ರಮಬದ್ದವಾಗಿಲ್ಲವೆಂದು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದ ಬೆನ್ನಲ್ಲೇ ಇದೀಗ ರಾಜೀನಾಮೆ ನೀಡಿದ ಶಾಸಕರುಗಳ ಪೈಕಿ ಒಬ್ಬರಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ತಮ್ಮ ರಾಜೀನಾಮೆ ಹಿಂಪಡೆಯಲು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ.
ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂಪಡೆಯಲು ನಿರ್ಧರಿಸಿರುವುದರಿಂದ ಅವರ ಜೊತೆ ಗುರುತಿಸಿಕೊಂಡಿದ್ದ ಈಗಾಗಲೇ ರಾಜೀನಾಮೆ ನೀಡಿರುವ ಕೆಲ ಕಾಂಗ್ರೆಸ್ ಶಾಸಕರುಗಳೂ ಕೂಡ ತಮ್ಮ ಮನಸ್ಸು ಬದಲಾಯಿಸಬಹುದೆಂಬ ಮಾತುಗಳು ಕೇಳಿ ಬರುತ್ತಿದ್ದು, ಇದರಿಂದಾಗಿ ಸರ್ಕಾರ ರಚನೆಯ ಬಿಜೆಪಿ ತಯಾರಿಗೆ ಭಾರಿ ಹಿನ್ನಡೆಯಾದಂತಾಗಿದೆ.