ಕಾಂಗ್ರೆಸ್ ನಿಂದ ಬಂಡಾಯ ಸಾರಿದ್ದ ಬೆಳಗಾವಿಯ ಸಾಹುಕಾರ ರಮೇಶ್ ಜಾರಕಿಹೊಳಿ ಇದೀಗ ಸಾಲದ ಸುಳಿಯಲ್ಲಿ ಸಿಲುಕಿ, ಸೈಲೆಂಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೇ ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ 253 ಕೋಟಿ ರೂ ಸಾಲ ಬಾಕಿ ಇದೆ. ಈ ಬಗ್ಗೆ ಕಳೆದ ಆರು ತಿಂಗಳ ಹಿಂದೆಯೇ ಅಪೆಕ್ಸ್ ಬ್ಯಾಂಕ್ ನಿಂದ ಸಾಲ ಮರುಪಾವತಿಗಾಗಿ ನೋಟಿಸ್ ಕಳುಹಿಸಲಾಗಿದೆ.
ಅಂದಹಾಗೇ ಅಪೆಕ್ಸ್ ಬ್ಯಾಂಕ್ ಬೆಂಗಳೂರಿನಲ್ಲಿ 119 ಕೋಟಿ, ಡಿಸಿಸಿ ಬ್ಯಾಂಕ್ ತುಮಕೂರಿನಿಂದ 31 ಕೋಟಿ, ಸೌಥ್ ಕೆನರಾ ಡಿಸಿಸಿ ಬ್ಯಾಂಕ್ ಮಂಗಳೂರು 31 ಕೋಟಿ, ಡಿಸಿಸಿ ಬ್ಯಾಂಕ್ ಶಿರಸಿ 31 ಕೋಟಿ ಸಾಲ ಪಡೆದಿದ್ದಾರೆ.
ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸಾಲ ಪಡೆದುಕೊಂಡಿರುವ ರಮೇಶ್ ಜಾರಕಿಹೊಳಿ, ಸಾಲ ಮರುಪಾವತಿ ಮಾಡದ ಹಿನ್ನಲೆಯಲ್ಲಿ ಸಕ್ಕರೆ ಕಾರ್ಖಾನೆ ಮುಟ್ಟುಗೋಲು ಹಾಕಲು ಅಪೆಕ್ಸ್ ಬ್ಯಾಂಕ್ ಚಿಂತನೆ ನಡೆಸಿದೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ರಮೇಶ್ ಜಾರಕಿಹೊಳಿ ಸಕ್ಕರೆ ಕಾರ್ಖಾನೆ ಉಳಿಸಿಕೊಳ್ಳಲು ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ, ಸದ್ಯಕ್ಕೆ ಆಪರೇಷನ್ ಕಮಲದಿಂ ದೂರ ಉಳಿಯಲು ಚಿಂತನೆ ನಡೆಸಿದ್ದಾರೆ. ಹೀಗಾಗಿ ಬಂಡಾಯ ಶಾಸಕರೆನಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಸೈಲೆಂಟ್ ಆಗಿದ್ದಾರೆ ಎನ್ನಲಾಗಿದೆ.
ಅದೇನೆ ಆಗಲಿ, ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸಾಲ ಪಡೆದ ಹಣ, ಸಕ್ಕರೆ ಮಾರಿದ ಹಣ ಎಲ್ಲಿ ಹೋಯ್ತು.? ರೈತರಿಗೆ ಕೊಡಬೇಕಾದ ಬಾಕಿ ಹಣ ಕೊಡಿಸಿ, ನಮ್ಮ ಕಷ್ಟವನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂಬುದು ಜಿಲ್ಲೆಯ ಕಬ್ಬು ಬೆಳಗಾರರ ಮನವಿಯಾಗಿದೆ.