ಅತೃಪ್ತ ಶಾಸಕರ ರಾಜಿನಾಮೆಯಿಂದಾಗಿ ರಾಜ್ಯ ಸರ್ಕಾರ ಸಂಕಷ್ಟದಲ್ಲಿದ್ದು, ಸರ್ಕಾರ ಉಳಿಸಿಕೊಳ್ಳಲು ಎಲ್ಲಾ ರೀತಿಯ ಕಾರ್ಯತಂತ್ರ ರೂಪಿಸಲಾಗುತ್ತಿದೆ.
ಆದರೆ, ಶಾಸಕರ ಮನವೊಲಿಸುವ ಪ್ರಯತ್ನ ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರನ್ನು ಭೇಟಿಯಾಗಿ ಸಿಎಂ ಕುಮಾರಸ್ವಾಮಿ ಸಲಹೆ ಪಡೆದುಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೊನೆಯ ಹಂತದವರೆಗೂ ಪ್ರಯತ್ನ ಮುಂದುವರಿಸುವಂತೆ ದೇವೇಗೌಡರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಪದ್ಮನಾಭ ನಗರದ ನಿವಾಸದಲ್ಲಿ ಸಿಎಂ ಕುಮಾರಸ್ವಾಮಿಯೊಂದಿಗೆ ಸಮಾಲೋಚನೆ ನಡೆಸಿದ ದೇವೇಗೌಡರು, ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಸಹ ಸಾಥ್ ನೀಡುತ್ತಿದ್ದು, ಸರ್ಕಾರ ರಕ್ಷಣೆಗೆ ಎಲ್ಲಾ ಪ್ರಯತ್ನಗಳು ನಡೆಯುತ್ತಿರುವುದರಿಂದ ಸಾಧ್ಯವಾದಷ್ಟು ಕೊನೆಯ ಹಂತದವರೆಗೂ ಪ್ರಯತ್ನ ಮುಂದುವರೆಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಸುಪ್ರೀಂಕೋರ್ಟ್ ಸೂಚನೆ ಮತ್ತು ವಿಧಾನಸಭೆ ಅಧ್ಯಕ್ಷರು ಕೈಗೊಳ್ಳುವ ತೀರ್ಮಾನಗಳ ಬಗ್ಗೆಯೂ ಚರ್ಚೆ ನಡೆದಿದ್ದು ಕಾಂಗ್ರೆಸ್ ನಾಯಕರು ಸಹಕಾರ ನೀಡುತ್ತಿರುವುದರಿಂದ ಸರ್ಕಾರ ಉಳಿಸಿಕೊಳ್ಳಲು ಕೊನೆಯವರೆಗೂ ಪ್ರಯತ್ನ ಮುಂದುವರಿಸಿ. ಸಾಧ್ಯವಾಗದಿದ್ದರೆ ಗೌರವಯುತವಾಗಿ ಹೊರಗೆ ಬರುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.