ನಾವು ಯಾವುದೇ ಕಾರಣಕ್ಕು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ನಾಡಿನ ಜನರಿಗೆ ಪ್ರತಿಪಕ್ಷಗಳಿಗೆ ಭರವಸೆ ನೀಡುತ್ತೇನೆ . ಹಿಂದಿನ 14 ತಿಂಗಳ ಸರ್ಕಾರದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದ್ದು, ಉತ್ತಮ ಆಡಳಿತ ನೀಡುತ್ತೇನೆ ಎಂದು ನೂತನ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ಮೊದಲ ಸಂಪುಟ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರೈತ ಸಮುದಾಯ ಸಂಕಷ್ಟದಲ್ಲಿದ್ದು, ಮೊದಲ ಆದ್ಯತೆ ರೈತರು, ನೇಕಾರರು, ಮೀನುಗಾರರು, ಕೃಷಿ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿ ವಿಶೇಷ ಗಮನ ನೀಡಲಾಗುವುದು ಎಂದು ಹೇಳಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 2000 ರೂ.ಗಳನ್ನು 3 ಕಂತುಗಳಲ್ಲಿ ವಾರ್ಷಿಕ 6000 ರೂ. ನೀಡಲಿದ್ದು, ಆ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ 2,000 ರೂ.ಗಳನ್ನು 2 ಕಂತುಗಳಲ್ಲಿ ವಾರ್ಷಿಕ 4000 ರೂ. ನೀಡಲಾಗುವುದು ಎಂದು ತಿಳಿಸಿದ್ದಾರೆ. ನೇಕಾರರ ಸಾಲ 100 ಕೋಟಿ ರೂ. ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಿದ್ದಾರೆ.