ಸಿಗಂದೂರಿನಲ್ಲಿ ಕೊವಿಡ್ ನಿಯಮ ಲೆಕ್ಕಕ್ಕಿಲ್ಲ

0
30

ಅಮಾವಾಸ್ಯೆ ಹಿನ್ನೆಲೆ ಸಾಗರದ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಇವತ್ತು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಬಹುತೇಕರು ಕೋವಿಡ್ ನಿಯಮಕ್ಕೆ ಕ್ಯಾರೆ ಅನ್ನದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಅಮಾವಾಸ್ಯೆ ಮತ್ತು ಶುಕ್ರವಾರ ಆದ್ದರಿಂದ ಶ್ರೀ ಚೌಡೇಶ್ವರಿ ದೇವಿ ದರ್ಶನಕ್ಕೆ ಬೆಳಗ್ಗೆಯಿಂದ ದೊಡ್ಡ ಸಂಖ್ಯೆಯ ಭಕ್ತರು ಬರುತ್ತಿದ್ದಾರೆ. ದೂರದ ಊರುಗಳಿಂದ ವಾಹನಗಳಲ್ಲಿ ಬರುತ್ತಿರುವ ಭಕ್ತರು ಲಾಂಚ್‌ನಲ್ಲಿ ಹೊಳೆ ದಾಟುತ್ತಿದ್ದಾರೆ.
ಲಾಕ್ ಡೌನ್ ಇದ್ದ ಹಿನ್ನೆಲೆ ಸಿಗಂದೂರಿನಲ್ಲಿ ದೇಗುಲ ಬಂದ್ ಮಾಡಲಾಗಿತ್ತು. ಒಂದು ವಾರದಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇವತ್ತು ದೇವಸ್ಥಾನಕ್ಕೆ ಬಂದ ಬಹುತೇಕ ಭಕ್ತರು ಕೋವಿಡ್ ನಿಯಮವನ್ನು ಗಾಳಿಗೆ ತೂರಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನು ಕಾಪಾಡುತ್ತಿಲ್ಲ. ಇದು ದ್ವೀಪದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ದ್ವೀಪದಲ್ಲಿ ಕೋವಿಡ್ ಭೀತಿ; ಕೋವಿಡ್ ಎರಡನೇ ಅಲೆ ಸಂದರ್ಭ ತುಮರಿ, ಬ್ಯಾಕೋಡು ಭಾಗದಲ್ಲಿ ಹಲವರು ಸೋಂಕಿತರಾಗಿದ್ದರು. ಕೆಲವರು ಪ್ರಾಣ ಕಳೆದುಕೊಂಡಿದ್ದರು. ಇದೆ ಕಾರಣಕ್ಕೆ ಹೊರ ಊರಿನವರು ಬಂದಾಗ ದ್ವೀಪದ ಜನರು ಭೀತಿಗೊಳಗಾಗುತ್ತಿದ್ದರು. ಈಗ ಸಿಗಂದೂರು ದೇಸ್ಥಾನದಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಜನರು ಬರಲು ಆರಂಭಿಸಿದ್ದಾರೆ.
ಮೂರನೇ ಅಲೆಯ ಭೀತಿಯ ನಡುವೆ ಪ್ರವಾಸಿಗರು ಕೋವಿಡ್ ನಿಯಮಗಳನ್ನು ಪಾಲಿಸದಿರುವುದು ಸ್ಥಳೀಯರ ಚಿಂತೆಗೀಡು ಮಾಡಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲೂ ಆತಂಕ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲಾಡಳಿತ ಮತ್ತು ಪೊಲೀಸರು ಈ ಕುರಿತು ಕಠಿಣ ನಿರ್ಧಾರ ಕೈಗೊಳ್ಳದಿದ್ದರೆ, ಮಲೆನಾಡು ಮತ್ತೆ ಕೋವಿಡ್‌ಗೆ ತುತ್ತಾಗುವ ಭೀತಿ ಇದೆ.

LEAVE A REPLY

Please enter your comment!
Please enter your name here