ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಹಾಗೂ ವಿಪಕ್ಷ ನಾಯಕ ಸ್ಥಾನದ ಮುಂದುವರಿಕೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರನ್ನು ಭೇಟಿ ಮಾಡಿಮಹತ್ವದ ಚರ್ಚೆ ನಡೆಸಲಿದ್ದಾರೆ. ಹೈಕಮಾಂಡ್‍ನ ಆಹ್ವಾನದ ಮೇರೆಗೆ ಇಂದು ದೆಹಲಿಗೆ ತೆರಳುತ್ತಿರುವ ಸಿದ್ದರಾಮಯ್ಯ ಅವರು, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಅಹಮ್ಮದ್ ಪಟೇಲ್ ಸೇರಿದಂತೆ ಅನೇಕ ನಾಯಕರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.
ಸಿದ್ದರಾಮಯ್ಯ ಅವರನ್ನು ಹಲವಾರು ನಾಯಕರು ಮನವೊಲಿಸಿದ್ದು, ಅವರು ಮುಂದುವರೆಯಲು ಸಮ್ಮತಿಸಿದ್ದಾರೆ. ಆದರೆ ಹೈಕಮಾಂಡ್ ಜೊತೆ ಚರ್ಚಿಸಿದ ನಂತರವೇ ಸೂಕ್ತ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ. ನಿನ್ನೆ ನವದೆಹಲಿಯಲ್ಲಿ ನಡೆದ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ಸೋನಿಯಾಗಾಂಧಿಯವರಿಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ.