ಸಿದ್ಧರಾಮಯ್ಯ ಮತ್ತೆ ಮುಖ್ಯಮಂತ್ರಿ ಆದರೆ ನಾವು ವಾಪಸ್ ಬರುತ್ತೇವೆ ಎಂದು ರಾಜೀನಾಮೆ ನೀಡಿರುವ ಕೆಲವು ಶಾಸಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಬಹಿರಂಗವಾಗಿದ್ದು, ಕೆಲವು ಶಾಸಕರು ರಾಜೀನಾಮೆ ನೀಡಿ ಮುಂಬೈ ಸೇರಿಕೊಂಡಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರನ್ನು ಸಂಪರ್ಕಿಸಿ ಮನವೊಲಿಸುವ ಪ್ರಯತ್ನ ನಡೆಸಲಾಗಿದೆ.
ಸಂಪುಟ ಪುನರ್ ರಚನೆ ಮಾಡಿ ಸರ್ಕಾರ ಉಳಿಸಿಕೊಳ್ಳಲು, ಸರ್ಕಾರ ವಿಸರ್ಜಿಸಿ ವಿಪಕ್ಷದಲ್ಲಿ ಕೂರಲು ಇಲ್ಲವೇ ಸ್ಪೀಕರ್ ಬಳಸಿಕೊಂಡು ತಕ್ಷಣಕ್ಕೆ ರಾಜೀನಾಮೆ ಅಂಗೀಕರಿಸದಿರುವ ಬಗ್ಗೆ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ದಾರೆ.
ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ನಡೆಸಲಾಗಿದ್ದು, ಅಗತ್ಯವಾದರೆ ಸಿಎಂ ಬದಲಾವಣೆ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ.ಆದರೆ, ಇದಕ್ಕೆ ದೋಸ್ತಿ ಪಕ್ಷ ಜೆಡಿಎಸ್ ಒಪ್ಪಿಗೆ ಕೂಡ ಬೇಕಾಗಿದೆ. ಸಿದ್ಧರಾಮಯ್ಯ ಮತ್ತೆ ಸಿಎಂ ಆದರೆ, ವಾಪಸ್ ಬರುತ್ತೇವೆ ಎಂದು ಕೆಲವು ಶಾಸಕರು ಹೇಳಿರುವುದರಿಂದ ಈ ಕುರಿತಾಗಿ ಜೆಡಿಎಸ್ ನಾಯಕರೊಂದಿಗೆ ಕೆ.ಸಿ. ವೇಣುಗೋಪಾಲ್ ಚರ್ಚೆ ನಡೆಸಲಿದ್ದಾರೆ.
ಸಿಎಂ ಕುಮಾರಸ್ವಾಮಿ ಬಂದ ಮೇಲೆ ಈ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಸರ್ಕಾರ ಉಳಿಸಿಕೊಳ್ಳುವ ಭಾಗವಾಗಿ ಕೆಲವೊಂದು ಬದಲಾವಣೆ ಮಾಡಲು ಚಿಂತನೆ ನಡೆದಿದ್ದು, ಇಂದು ಸಂಜೆ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಶಾಸಕಾಂಗ ಸಭೆ ಕರೆಯಲಾಗಿದೆ. ದೇವೇಗೌಡರು, ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಮುಂದಿನ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಸರ್ಕಾರ ಉಳಿಸಿಕೊಳ್ಳಬೇಕೆ ಇಲ್ಲವೇ ರಾಜೀನಾಮೆ ನೀಡಬೇಕೆ ಅಥವಾ ಸಿಎಂ ಬದಲಾವಣೆ ಮಾಡಬೇಕೆ ಎಂಬ ಕುರಿತಾಗಿಯೂ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.