ಇತ್ತೀಚೆಗೆ ಸಾಧಕರು, ಯಶಸ್ವಿ ನಾಯಕರ ಜೀವನಗಾಥೆ ಸಿನಿಮಾ ರೂಪದಲ್ಲಿ ಹೆಚ್ಚು ಹೆಚ್ಚಾಗಿ ತೆರೆಗೆ ಬರುತ್ತಿವೆ. ಈ ಬಯೋಪಿಕ್ ಗಳ ಸಾಲಿಗೆ ರಾಜ್ಯ ರಾಜಕಾರಣ ಕಂಡಿರುವ ಮಾಸ್ ನಾಯಕರಲ್ಲೊಬ್ಬರಾದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಜೀವನಗಾಥೆ ಕೂಡ ಸೇರ್ಪಡೆಯಾಗಲಿದೆ.
ಇಡಿ ವಶಕ್ಕೆ ಸಿಲುಕಿ ಸದ್ಯ ಜಾಮೀನಿಗಾಗಿ ಪರಿತಪಿಸುತ್ತಿರುವ ಡಿ.ಕೆ ಶಿವಕುಮಾರ್ ಅವರು ನಡೆದು ಬಂದ ದಾರಿಗೆ ದೃಶ್ಯ ರೂಪ ನೀಡಲು ಚಂದನವನದಲ್ಲಿ ಪೈಪೋಟಿ ಜೋರಾಗಿದೆ.
ನಿರ್ದೇಶಕ ನಾಗಶೇಖರ್ ಅವರು ಈ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಕನಕಪುರ ಬಂಡೆ ಎನ್ನುವ ಟೈಟಲ್ ಗಾಗಿ ಅವರು ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದಾರೆ. ಇದರ ಜೊತೆಗೆ ಕನಕಪುರ ಕೆಂಪೇಗೌಡ, ಕನಕಪುರ ಬೆಳಗಾವಿ ಎಕ್ಸ್ ಪ್ರೆಸ್ ಟೈಟಲ್ ಕೂಡ ಕೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಡಿ.ಕೆ ಶಿವಕುಮಾರ್ ಜೀವನಗಾಥೆ ಪರದೆ ಮೇಲೆ ಬರುವುದು ಖಚಿತವಾಗಿದೆ. ಡಿ.ಕೆ ಶಿವಕುಮಾರ್ ಅವರ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ? ಈ ಸಿನಿಮಾದಲ್ಲಿ ಡಿಕೆಶಿ ಮಗಳು ಐಶ್ವರ್ಯಾರ ಪಾತ್ರವೂ ಇದೆಯಾ? ಆ ಪಾತ್ರಕ್ಕೆ ಬಣ್ಣ ಹಚ್ಚುವವರು ಯಾರು? ಎಂಬಿತ್ಯಾದಿ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರ ಸಿಗುವ ಸಾಧ್ಯತೆ ಇದೆ.