ಸೂರ್ಯಕುಮಾರ್ 3 ನೇ ಕ್ರಮಾಂಕದಲ್ಲಿ ಆಡ್ಬೇಕು ಅಂದ ಮಾಜಿ ಕ್ರಿಕೆಟಿಗ

0
29

: ಇದೇ ವರ್ಷ ಯುಎಇ ಆತಿಥ್ಯದಲ್ಲಿ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಟೀಮ್ ಇಂಡಿಯಾ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಲು ಸೂರ್ಯಕುಮಾರ್‌ ಯಾದವ್‌ ಸೂಕ್ತ ಬ್ಯಾಟ್ಸ್‌ಮನ್‌ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್‌ ಸೂಚಿಸಿದ್ದಾರೆ.
ಈ ಎರಡೂ ಸರಣಿಗಳಲ್ಲಿ ಭಾರತ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಆಡುವುದು ಖಚಿತವಾಗಿದ್ದು, ಇಲ್ಲಿ ಮಿಂಚಿದರೆ ಅವರನ್ನು ಟಿ20 ವಿಶ್ವಕಪ್‌ ತಂಡಕ್ಕೂ ಸೆಲೆಕ್ಟರ್ಸ್‌ ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಶ್ರೀಲಂಕಾ ವಿರುದ್ಧದ ಸರಣಿಗೆ ವೀಕ್ಷಕ ವಿವರಣೆ ಒದಗಿಸಲಿರುವ ಸಂಜಯ್ ಮಾಂಜ್ರೇಕರ್‌ ಈ ಬಗ್ಗೆ ಮಾತನಾಡಿದ್ದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್‌ ಲೀಗ್‌ ಅಖಾಡದಲ್ಲಿ ಹಲವು ವರ್ಷಗಳ ಕಾಲ ಕೋಲ್ಕತಾ ನೈಟ್‌ ರೈಡರ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳ ಪರ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ 30 ವರ್ಷದ ಬಲಗೈ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ಗೆ ಕೊನೆಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕದ ತೆರೆದಿತ್ತು. ಕಳೆದ ಮಾರ್ಚ್‌ನಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ 3ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದು ಪದಾರ್ಪಣೆಯ ಪಂದ್ಯದಲ್ಲೇ ಸ್ಫೋಟಕ ಅರ್ಧಶತಕ ಬಾರಿಸಿ ಎಲ್ಲರ ಗಮನ ಸೆಳೆದಿದ್ದರು. ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಅವರು ಇಂಥದ್ದೇ ಪವರ್‌ಫುಲ್ ಪ್ರದರ್ಶನ ನೀಡುವುದನ್ನು ಎದುರು ನೋಡುತ್ತಿದ್ದಾರೆ.
“ಹೌದು ಟೀಮ್ ಇಂಡಿಯಾದಲ್ಲಿ ಮೂರನೇ ಕ್ರಮಾಂಕ ಪಡೆಯಲು ಸೂರ್ಯ ಮುಂಚೂಣಿಯಲ್ಲಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ ರೋಹಿತ್‌ ಮತ್ತು ವಿರಾಟ್‌ ಕೊಹ್ಲಿ ಆರಂಭಿಕರಾಗಿ ಬ್ಯಾಟ್‌ ಮಾಡುವುದರಿಂದ ಕೆಎಲ್‌ ರಾಹುಲ್‌ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಬಳಕೆ ಮಾಡಬಹುದು. ಆದರೆ, ಮೂರನೇ ಕ್ರಮಾಂಕಕ್ಕೆ ಸೂರ್ಯಕುಮಾರ್‌ ಸೂಕ್ತ. ಐಪಿಎಲ್‌ನಲ್ಲಿ ಅವರು ಮೂರನೇ ಕ್ರಮಾಂಕದಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಅತ್ಯುತ್ತಮ ಎಸೆತಗಳಲ್ಲೂ ಅವರು ಫೋರ್‌ ಬಾರಿಸಬಲ್ಲರು. ಅವರಿಗೆ ನನ್ನ ಮೊದಲ ಆದ್ಯತೆ,” ಎಂದು ವಿಡಿಯೋ ಕಾನ್ಫರೆನ್ಸ್‌ ಪತ್ರಿಕಾಗೋಷ್ಠಿಯಲ್ಲಿ ಮಾಂಜ್ರೇಕರ್‌ ಹೇಳಿದ್ದಾರೆ.


ಇದೇ ವೇಳೆ ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ಇಶಾನ್ ಕಿಶನ್‌ ಅವರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದಿರುವ ಮಾಂಜ್ರೇಕರ್‌, ಆಟಗಾರರ ಸ್ಥಿರ ಪ್ರದರ್ಶನವನ್ನು ಇಲ್ಲಿ ಪರಿಗಣಿಸಬೇಕಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಸಂಜು ಸ್ಯಾಮ್ಸನ್‌ ಆಟ ವೀಕ್ಷಿಸುವುದು ಅದ್ಭುತ ಅನುಭವ ನೀಡುತ್ತದೆ ಆದರೂ ಸ್ಥಿರತೆ ಕೊರತೆ ಕಾರಣ ಅವರ ಬದಲು ಕಿಶನ್ ಅವರನ್ನು ಆಯ್ಕೆ ಮಾಡಿರುವುದಾಗಿ ಹೇಳಿದ್ದಾರೆ.
“ಕೀಪಿಂಗ್‌ ಕೆಲಸಕ್ಕೆ ಕಿಶನ್ ಅವರನ್ನು ಮೊದಲ ಆಯ್ಕೆಯಾಗಿ ತೆಗೆದುಕೊಳ್ಳುತ್ತೇನೆ. ಇಲ್ಲಿ ಹೆಚ್ಚು ಸ್ಥಿರತೆ ಹೊಂದಿರುವ ಆಟಗಾರನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ ಅಷ್ಟೆ. ಒಡಿಐ ಕ್ರಿಕೆಟ್‌ನಲ್ಲಿ ಕೀಪಿಂಗ್‌ಗೆ ಅಷ್ಟು ಮಾನ್ಯತೆ ಇರುವುದಿಲ್ಲ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೀಪಿಂಗ್‌ ಹೆಚ್ಚು ಅಗತ್ಯ ಇರುತ್ತದೆ. ಹಾಗೆಯೇ ಟಿ20 ಕ್ರಿಕೆಟ್‌ನಲ್ಲೂ ಕೀಪಿಂಗ್‌ ಬಗ್ಗೆ ಹೆಚ್ಚು ಗಮನ ಕೊಡಲಾಗದು. ಹೀಗಾಗಿ ಉತ್ತಮ ಬ್ಯಾಟ್ಸ್‌ಮನ್‌ ಆಯ್ಕೆ ಮಾಡಿಕೊಳ್ಳಬೇಕು ಅಷ್ಟೆ. ಹೀಗಾಗಿ ಸಂಜು ಸ್ಯಾಮ್ಸನ್ ಬದಲು ಇಶಾನ್‌ ಕಿಶನ್ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ,” ಎಂದಿದ್ದಾರೆ.

LEAVE A REPLY

Please enter your comment!
Please enter your name here