ದೋಸ್ತಿ ಸರ್ಕಾರ ಉಳಿಸಿಕೊಳ್ಳುವ ಸವಾಲು, ಲೋಕಸಭೆ ಚುನಾವಣೆಯಲ್ಲಿ ಸೋಲು…ಹೀಗೆ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಲ್ಲೇ ಜೆಡಿಎಸ್ ಗೆ ಮತ್ತೊಂದು ಆಘಾತ ಎದುರಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್. ವಿಶ್ವನಾಥ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಕೆಆರ್ ನಗರ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ಸಚಿವ ಸಾ.ರಾ. ಮಹೇಶ್ ಕಾರಣ ಎಂದು ವಿಶ್ವನಾಥ್ ಗುಡುಗಿದ್ದಾರೆ.
ಎಲ್ಲ ಜಾತಿಗಳನ್ನು ಪರಿಗಣಿಸದೆ, ಏಕಪಕ್ಷೀಯ ತೀರ್ಮಾನ ಕೈಗೊಂಡು ಪಕ್ಷಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿದ್ದಾರೆ ಎಂದು ಸಾ.ರಾ. ಮಹೇಶ್ ವಿರುದ್ಧ ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರೂ ತಮ್ಮ ಮಾತು ನಡೆಯುತ್ತಿಲ್ಲ ಎಂದು ಅವರು ಅಸಮಾಧಾನಗೊಂಡಿದ್ದಾರೆ.
ಈ ಹಿಂದೆಯೇ ಕಾರಣಾಂತರದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ತೊರೆಯಲು ವಿಶ್ವನಾಥ್ ನಿರ್ಧರಿಸಿದ್ದರು. ಆದರೆ ದೇವೇಗೌಡರ ಸೂಚನೆ ಹಿನ್ನೆಲೆಯಲ್ಲಿ ಮುಂದುವರೆದಿದ್ದರು. ಈಗ ಮತ್ತೆ ಜೆಡಿಎಸ್ ರಾಜ್ಯಾಧ್ಯಕ್ಷರು ಅಸಮಾಧಾನಗೊಂಡಿರುವುದು ಜೆಡಿಎಸ್ ಪಕ್ಷದ ನಾಯಕರನ್ನು ಚಿಂತೆಗೀಡು ಮಾಡಿದೆ ಎನ್ನಲಾಗಿದೆ.