ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಭಾರತ ಕ್ರಿಕೆಟಿಗೆ ಹೊಸ ಭಾಷ್ಯ ಬರೆದ ಯಶಸ್ವಿ ನಾಯಕ. ಗಂಗೂಲಿ ಭಾರತ ಕ್ರಿಕೆಟ್ ತಂಡದ ನಾಯಕರಾದ ಮೇಲೆ ಭಾರತೀಯ ಕ್ರಿಕೆಟ್ ಗೆ ಹೊಸ ರೂಪ ನೀಡಿದರು. ಭಾರತ ಕ್ರಿಕೆಟಿಗೆ ಆಟಗಾರನಾಗಿ ಹಾಗೂ ನಾಯಕನಾಗಿ ಸೌರವ್ ಗಂಗೂಲಿ ಕೊಡುಗೆ ಅಪಾರ.
ಇನ್ನು ಈ ಬಂಗಾಳದ ಹುಲಿ ಸೌರವ್ ಗಂಗೂಲಿ ಮತ್ತು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ವಿಶ್ವ ಕ್ರಿಕೆಟಿನ ಅತ್ಯಂತ ಯಶಸ್ವಿ ಆರಂಭಿಕ ಜೋಡಿಗಳಲ್ಲಿ ಒಂದು. ಭಾರತ ಕ್ರಿಕೆಟ್ ಯಶಸ್ಸಿನಲ್ಲಿ ಈ ಜೋಡಿಯ ಪಾತ್ರ ಮಹತ್ವದ್ದು. ಅದೆಷ್ಟೋ ಪಂದ್ಯಗಳಲ್ಲಿ ಈ ಜೋಡಿ ವಿಶ್ವ ಶ್ರೇಷ್ಠ ತಂಡಗಳ, ವಿಶ್ವ ಶ್ರೇಷ್ಠ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದ್ದಾರೆ.
ವಿಶೇಷವೆಂದರೆ ಸೌರವ್ ಗಂಗೂಲಿ ಮೊದಲ ಅಂತರಾಷ್ಟ್ರೀಯ ಪಂದ್ಯ ಹಾಗೂ ಕೊನೆಯ ಪಂದ್ಯ ಎರಡರಲ್ಲೂ ಕ್ರೀಸ್ ನ ಇನ್ನೊಂದು ತುದಿಯಲ್ಲಿ ಸಚಿನ್ ತೆಂಡೂಲ್ಕರ್ ಇದ್ದರು.
ದಾದ ಚೊಚ್ಚಲ ಮ್ಯಾಚ್ : ಬಂಗಾಳದ ಹುಲಿ ಸೌರವ್ ಗಂಗೂಲಿ ಮೊದಲ ಪಂದ್ಯ ಆಡಿದ್ದು 1992 ಜನವರಿ 11 ರಂದು. ಬ್ರಿಸ್ಬೇನ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಎಂಟ್ರಿ ಕೊಟ್ಟರು. ಆ ಪಂದ್ಯದಲ್ಲಿ ಸಚಿನ್ 4 ನೇ ಕ್ರಮಾಂಕದಲ್ಲಿ ಹಾಗೂ ಗಂಗೂಲಿ 6 ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿದಿದ್ದರು. ಗಂಗೂಲಿ 13 ಬಾಲ್ ಗಳನ್ನು ಎದುರಿಸಿ ಕೇವಲ 3 ರನ್ ಮಾತ್ರ ಗಳಿಸಿ ಔಟಾಗಿದ್ದರು. ಗಂಗೂಲಿ ಕ್ರೀಸಿಗಿಳಿಯುವಾಗ ಸಚಿನ್ ನಾನ್ ಸ್ಟ್ರೈಕರ್ ಆಗಿದ್ದರು. ಅವರು 127 ಬಾಲ್ ಗಳಲ್ಲಿ 77 ರನ್ ಬಾರಿಸಿದ್ದರು. ಭಾರತ 191 ರನ್ ಗಳಿಗೆ ಆಲೌಟ್ ಆಗಿತ್ತು. ವಿಂಡೀಸ್ 6 ವಿಕೆಟ್ ಗಳ ಗೆಲುವು ದಾಖಲಿಸಿತ್ತು.
