ಹನುಮಾನ್ ಹಾಡು ಹಾಕಿದ್ದಕ್ಕೆ ಯುವಕನಿಗೆ ಕಿಡಿಗೇಡಿಗಳಿಂದ ಭಾರೀ ಹಲ್ಲೆ

0
38

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ನಗತರಪೇಟೆಯಲ್ಲಿ ಭಕ್ತಿಗೀತೆ ಹಾಡುಗಳನ್ನ ಹಾಕಿದಕ್ಕೆ ಐದಾರು ಮಂದಿಯ ಗುಂಪು ಮೊಬೈಲ್ ಶಾಪ್ ನಡೆಸುತ್ತಿದ್ದ ಯುವಕನ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿ ನಡೆಸುತ್ತಿದ್ದ ಮುಕೇಶ್ ಎಂಬುವವರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದು, ದುಷ್ಕರ್ಮಿಗಳ ದಾಂಧಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬಂದ ಮುಕೇಶ್, ಹಲಸೂರು ಪೊಲೀಸ್‌ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ.
ಮುಕೇಶ್ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ ಬೆನ್ನಲ್ಲೇ ಹಲಸೂರು ಗೇಟ್ ಪೊಲೀಸ್ ಠಾಣೆ ಮುಂದೆ ವರ್ತಕರು ಜಮಾಯಿಸಿದ್ದು, ಹಲ್ಲೆ ಮಾಡಿದ‌ ಪುಂಡರನ್ನ ಬಂಧಿಸುವಂತೆ ಒತ್ತಾಯ ಮಾಡಿದ್ದಾರೆ. ಕಳೆದ 15 ದಿನಗಳಿಂದಲೂ ಅಂಗಡಿ ಮುಂದೆ ಬಂದು ಕಿರುಕುಳ ನೀಡುತ್ತಿದ್ದ ಆರೋಪ ಪುಂಡರ ಮೇಲೆ ಕೇಳಿ ಬಂದಿದ್ದು, ನಿನ್ನೆ ಸಂಜೆ ಏಕಾಏಕಿ ಕಿರಿಕ್ ತೆಗೆದು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರನ್ನು ನಾಳೆ ಸಂಜೆಯೊಳಗೆ ಬಂಧಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ವ್ಯಾಪಾರಿಗಳು ಎಚ್ಚರಿಕೆ ನೀಡಿದ್ದಾರೆ. ಸದ್ಯ ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ ಬಂದೋಬಸ್ತ್ ಹೆಚ್ಚಳ ಮಾಡಲಾಗಿದೆ