ಹಲ್ಲುಜ್ಜುವಾಗ ಈ ತಪ್ಪುಗಳನ್ನು ಮಾಡಬೇಡಿ..! ಯಾಕೆ ಗೊತ್ತಾ..?
ದಿನಕ್ಕೆರಡು ಬಾರಿ ಹಲ್ಲುಜ್ಜುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ತಜ್ಞರು ಸಲಹೆ ನೀಡುತ್ತಾರೆ. ಹಲ್ಲುಜ್ಜುವುದರಿಂದ ವಸಡಿನ ಆರೋಗ್ಯವನ್ನು ಕಾಪಾಡಬಹುದಾಗಿದೆ. ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಸ್ವಚ್ಛವಾಗಿರಬೇಕೆಂದು ಬಯಸುತ್ತಾರೆ.
ನಾವು ಜೋರಾಗಿ ನಗುವಾಗ ನಮ್ಮ ಬಿಳಿ ಹಲ್ಲುಗಳು ಕಾಣುತ್ತವೆ. ಹಳದಿ ಅಥವಾ ಕೊಳಕು ಹಲ್ಲುಗಳು ನಮ್ಮನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತದೆ. ಆರೋಗ್ಯಕರ ಹಲ್ಲುಗಳನ್ನು ಹೊಂದಿರುವುದು ಸಹ ಬಹಳ ಮುಖ್ಯ. ಏಕೆಂದರೆ ಅವುಗಳ ಸಹಾಯದಿಂದ ಮಾತ್ರ ನಾವು ಆಹಾರವನ್ನು ಅಗಿಯಬಹುದು.
ಆದಾಗ್ಯೂ ಹಲ್ಲುಜ್ಜುವಾಗ ಅನೇಕ ಜನರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದು ನಿಮ್ಮ ಹಲ್ಲು ಮತ್ತು ಒಸಡುಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಾಮಾನ್ಯ ತಪ್ಪುಗಳು ಯಾವುದು ಮತ್ತು ಅದನ್ನು ಸರಿಪಡಿಸಿಕೊಳ್ಳುವ ಕ್ರಮ ಹೇಗೆ ಎಂದು ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ.
1. ವೇಗವಾಗಿ ಹಲ್ಲುಜ್ಜುವುದು ತುಂಬಾ ವೇಗವಾಗಿ ಹಲ್ಲುಜ್ಜುವುದು ದಂತ ಕವಚವನ್ನು ಹಾನಿಗೊಳಿಸುತ್ತದೆ. ಕಾಲಾನಂತರದಲ್ಲಿ ಒಸಡುಗಳಲ್ಲಿ ನೋವು ಕಾಣಿಸಿಕೊಳ್ಳುವುದು, ರಕ್ತಸ್ರಾವ ಸಂಭವಿಸುವುದು, ಊರಿಯೂತದಂತಹ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಅದಕ್ಕಾಗಿಯೇ ಮೃದುವಾದ ಬ್ರಷ್ ಅನ್ನು ಬಳಸುವುದು ಮತ್ತು ನಿಧಾನವಾಗಿ ಹಲ್ಲುಜ್ಜುವುದು ಉತ್ತಮ.
2. ಹಲ್ಲುಜ್ಜುವ ಬ್ರಷ್ನ ಬದಲಾವಣೆ ಹಲ್ಲುಜ್ಜುವ ಬ್ರಷ್ ಅನ್ನು ಮೂರು ತಿಂಗಳಿಗೊಮ್ಮೆ ಬದಲಾಯಿಸುವುದು ಸೂಕ್ತ. ದಂತ ವೈದ್ಯರು ಕೂಡ ಇದನ್ನೇ ಸೂಚಿಸುತ್ತಾರೆ. ಹೆಚ್ಚು ಕಾಲ ಒಂದೇ ಬ್ರಷ್ ಬಳಸಿದರೆ ಒಸಡಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಗಡುಸಾದ ಬ್ರಷ್ನಿಂದ ಹಲ್ಲುಜ್ಜುವ ಬದಲು ಮೃದುವಾದ ಬ್ರಷ್ ಬಳಸಿ.
3. ದೀರ್ಘಕಾಲದವರೆಗೆ ಹಲ್ಲುಜ್ಜುವುದು 2 ರಿಂದ 3 ನಿಮಿಷಗಳ ಕಾಲ ಬ್ರಷ್ ಮಾಡುವುದು ಉತ್ತಮ. ದೀರ್ಘಕಾಲದವರೆಗೆ ಹಲ್ಲುಜ್ಜುವುದು ಹಲ್ಲುಗಳನ್ನು ಹಾನಿಗೊಳಿಸುತ್ತದೆ ಎಂದು ದಂತ ವೈದ್ಯರು ತಿಳಿಸಿದ್ದಾರೆ
4. ಆಗಾಗ್ಗೆ ಹಲ್ಲುಜ್ಜುವುದು ದಿನಕ್ಕೆ ಎರಡು ಬಾರಿ ಬ್ರಷ್ ಮಾಡಿದರೆ ಸಾಕು. ರಾತ್ರಿ ಮಲಗುವ ಮೊದಲು ಮತ್ತು ಬೆಳಿಗ್ಗೆ ಎದ್ದ ಕೂಡಲೇ ಬ್ರಷ್ ಮಾಡಬೇಕು. ಇದು ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ ಎಂದು ದಂತ ವೈದ್ಯರು ತಿಳಿಸಿದ್ದಾರೆ. ಹಲವು ಬಾರಿ ಹಲ್ಲುಜ್ಜುವುದು ಹಲ್ಲು ಮತ್ತು ಒಸಡುಗಳನ್ನು ದುರ್ಬಲಗೊಳಿಸುತ್ತದೆ ಎಂಬುವುದನ್ನು ಮರೆಯದಿರಿ.
5. ಬಾಯಿಯ ಎಲ್ಲಾ ಭಾಗಕ್ಕೂ ತಾಗುವಂತೆ ಹಲ್ಲುಜ್ಜಿ ಸಾಮಾನ್ಯವಾಗಿ ಹಲವರು ಹಲ್ಲುಗಳನ್ನು ಮೇಲಿಂದ ಮೇಲೆ ಉಜ್ಜುತ್ತಾರೆ. ಆದರೆ ಹಲ್ಲುಗಳ ಒಳಭಾಗವನ್ನು ಕೂಡ ಸ್ವಚ್ಛವಾಗಿಟ್ಟುಕೊಳ್ಳಬೇಕು. ಏಕೆಂದರೆ ರೋಗಾಣುಗಳು ಹಲ್ಲುಗಳಲ್ಲಿ ಅಡಗಿರುತ್ತದೆ. ಬಾಯಿಯ ಎಲ್ಲಾ ಕಡೆಯೂ ತಾಗುವಂತೆ ಹಲ್ಲುಜ್ಜುವ ಅಭ್ಯಾಸ ಮಾಡಿಕೊಳ್ಳಿ.