ಕನ್ನಡದ ನಟ-ನಟಿಯರು ಹಿಂದಿ ಭಾಷೆಯ ಸಿನಿಮಾಗಳಲ್ಲಿ ಸದ್ದು ಮಾಡುತ್ತಿರುವುದು ಹೊಸ ವಿಷಯವೇನಲ್ಲ. ಕನ್ನಡದ ಅದೆಷ್ಟೋ ಕಲಾವಿದರು ಹಿಂದಿಯಲ್ಲಿ ನಟಿಸುತ್ತಿದ್ದಾರೆ. ಇನ್ನೂ ಹೇಳುವುದಾದರೆ ಬಾಲಿವುಡ್ ನಲ್ಲಿ ನೆಲೆನಿಂತಿರುವ ಪ್ರಮುಖರಾದ ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ ಸಹ ನಮ್ಮ ಕನ್ನಡದ ಮೂಲದವರೇ. ಈಗ ಬಿಗ್ ಬಾಸ್ ಖ್ಯಾತಿಯ ನಟಿಯೊಬ್ಬರು ಹಿಂದಿಯಲ್ಲಿ ನಟಿಸಲು ಮನಸ್ಸು ಮಾಡಿದ್ದಾರೆ. ಅತ್ತ ಪಯಣ ಬೆಳೆಸಿದ್ದಾರೆ.
ಅಕ್ಕ ಧಾರವಾಹಿ ಮೂಲಕ ಮನೆಮಾತಾದ ನಟಿ ಅನುಪಮಾ ಗೌಡ ಯಾರಿಗೆ ತಾನೆ ಗೊತ್ತಿಲ್ಲ. ಬಿಗ್ಬಾಸ್ ಸೀಸನ್ 5ರ ಸ್ಪರ್ಧಿಯಾಗಿ ಮತ್ತಷ್ಟು ಜನಪ್ರಿಯರಾದವರು ಅನುಪಮಾ. ಕಿರುತೆರೆ ಶೋಗಳ ನಿರೂಪಕಿಯಾಗಿ, ಕೆಲವು ಸಿನಿಮಾಗಳ ನಟೆನೆಯಲ್ಲೂ ಬ್ಯುಸಿ ಆಗಿರೋ ಅನುಪಮಾ ಗೌಡ ಈಗ ಹಿಂದಿಯಲ್ಲಿ ನಟಿಸಲು ರೆಡಿಯಾಗಿದ್ದಾರೆ.
ಹಿಂದಿಯ ‘ದಿ ಫಾಲನ್’ ಎನ್ನುವ ಕಿರುಚಿತ್ರದಲ್ಲಿ ನಟಿಸಲಿದ್ದಾರೆ ಅನುಪಮಾಗೌಡ. ಕನ್ನಡದ ಊರ್ವಿ ಖ್ಯಾತಿಯ ಡೈರೆಕ್ಟರ್ ಪ್ರದೀಪ್ ವರ್ಮಾ ಈ ಕಿರುಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ದಿ ಫಾಲನ್ ಬರೋಬ್ಬರಿ 4 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಕಥೆ ಎಂದು ಹೇಳಲಾಗುತ್ತಿದೆ. ಕಿರುಚಿತ್ರ ಅದ್ಧೂರಿಯಾಗಿ ನಿರ್ಮಾಣವಾಗಲಿದೆ ಎಂದು ತಿಳಿದುಬಂದಿದ್ದು, ಅದಕ್ಕೆ ಫೋಟೋ ಶೂಟ್ ನಡೆಸುವ ಪ್ಲಾನ್ ಕೂಡ ನಡೆದಿದೆ. ಲೇಹ್, ಲದಾಕ್, ಮನಾಲಿ ಮೊದಲಾದ ಕಡೆಗಳಲ್ಲಿ ದಿ ಫಾಲ್ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ.