ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆ ಹಾಗೂ ಫ್ರಿಜ್ ತಾಪಮಾನ ಅಸ್ಥಿರತೆಯಿಂದಾಗಿ ಇಡ್ಲಿ–ದೋಸೆ ಹಿಟ್ಟು ಬೇಗನೆ ಹುಳಿಯಾಗುತ್ತಿರುವುದಾಗಿ ಹಲವೆಡೆ ಮನೆಮಂದಿ ದೂರು ಹೇಳುತ್ತಿದ್ದಾರೆ. ದಕ್ಷಿಣ ಭಾರತೀಯರ ದಿನಚರಿಯಲ್ಲಿ ಅವಿಭಾಜ್ಯವಾದ ಈ ಉಪಹಾರಕ್ಕೆ ಸಂಬಂಧಿಸಿದ ಸಮಸ್ಯೆಗೆ ಸರಳ ಪರಿಹಾರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆಯುತ್ತಿವೆ.
ಗೃಹಿಣಿಯರು ಮತ್ತು ಫುಡ್ ಬ್ಲಾಗರ್‌ಗಳು ಹಿಟ್ಟಿನ ಹುಳಿ ರುಚಿಯನ್ನು ಕಡಿಮೆ ಮಾಡಲು ಕೆಲವು ಪರಿಣಾಮಕಾರಿ ವಿಧಾನಗಳನ್ನು ಹಂಚಿಕೊಂಡಿದ್ದಾರೆ.
🔹 ಶುಂಠಿ–ಹಸಿ ಮೆಣಸಿನಕಾಯಿ ಪೇಸ್ಟ್
ಹುಳಿಯಾದ ಹಿಟ್ಟಿಗೆ ಸ್ವಲ್ಪ ಶುಂಠಿ ಹಾಗೂ ಹಸಿ ಮೆಣಸಿನಕಾಯಿ ಪೇಸ್ಟ್ ಸೇರಿಸುವುದರಿಂದ ಹುಳಿ ರುಚಿ ಕಡಿಮೆಯಾಗುವುದರ ಜೊತೆಗೆ ಹೊಸ ಸುವಾಸನೆ ದೊರೆಯುತ್ತದೆ ಎಂದು ತಿಳಿಸಲಾಗಿದೆ.
🔹 ಸಕ್ಕರೆ ಅಥವಾ ಬೆಲ್ಲ
ಒಂದು ಚಿಟಿಕೆ ಸಕ್ಕರೆ ಅಥವಾ ಸ್ವಲ್ಪ ಬೆಲ್ಲ ಸೇರಿಸಿ 10 ನಿಮಿಷ ಬಿಡಿಸಿದರೆ ಹುಳಿ ತಗ್ಗಿ ಹಿಟ್ಟು ಮತ್ತೆ ತಾಜಾ ರುಚಿ ಪಡೆಯುತ್ತದೆ.
🔹 ಅಕ್ಕಿ ಹಿಟ್ಟು
ಸ್ವಲ್ಪ ಅಕ್ಕಿ ಹಿಟ್ಟು ಸೇರಿಸುವ ಮೂಲಕ ಹುಳಿ ರುಚಿಯನ್ನು ಬ್ಯಾಲೆನ್ಸ್ ಮಾಡಬಹುದು. ಇದರಿಂದ ದೋಸೆ ಕೂಡಾ ಇನ್ನಷ್ಟು ಕ್ರಿಸ್ಪಿಯಾಗುತ್ತದೆ ಎನ್ನಲಾಗಿದೆ.
🔹 ರವೆ
ಹುಳಿಯಾದ ಹಿಟ್ಟಿಗೆ ಕಡಿಮೆ ಪ್ರಮಾಣದ ರವೆ ಸೇರಿಸಿದರೆ ಹಿಟ್ಟು ಗಟ್ಟಿಯಾಗುವುದರ ಜೊತೆಗೆ ದೋಸೆ ಗರಿಗರಿಯಾಗಿ ತಯಾರಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.






