‘ಮೆಜೆಸ್ಟಿಕ್’ ಚಿತ್ರದ ಮೂಲಕ ದರ್ಶನ್‌ರನ್ನು ಇಂಡಸ್ಟ್ರಿಗೆ ಪರಿಚಯಿಸಿದ ನಿರ್ದೇಶಕ ಪಿಎನ್ ಸತ್ಯ. ಚೊಚ್ಚಲ ಚಿತ್ರದಲ್ಲಿ ಇಡೀ ಇಂಡಸ್ಟ್ರಿ ತನ್ನತ್ತ ನೋಡುವಂತೆ ಮಾಡಿದ ಜಾದೂಗಾರ. ಆಮೇಲೆ ಡಾನ್, ದಾಸ, ಶಾಸ್ತ್ರಿ, ತಂಗಿಗಾಗಿ, ಗೂಳಿ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದರು. ಕೆಲವು ಸೋತಿರುವ ಸಿನಿಮಾಗಳು ಸತ್ಯ ಪಟ್ಟಿಯಲ್ಲಿದೆ.
ನಿರ್ದೇಶಕನಾಗಿ ಮಾತ್ರವಲ್ಲದೇ ನಟನೆಯಲ್ಲೂ ಸತ್ಯ ಗುರುತಿಸಿಕೊಂಡಿದ್ದರು. ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ನಟಿಸುತ್ತಿದ್ದ ಸತ್ಯ ಅಭಿನಯದಲ್ಲೂ ಖರಾಮತ್ತು ತೋರಿಸುತ್ತಿದ್ದರು. ಎಲ್ಲವೂ ಆರಾಮಗಿ ನಡೆಯುತ್ತಿದ್ದಾಗ ‘ನಾನು ಹೀರೋ ಆಗ್ತೀನಿ’ ಅಂತ ನಿರ್ಧರಿಸಿಬಿಟ್ಟರು. ಬಹುಶಃ ಸತ್ಯ ಪಾಲಿಗೆ ಈ ನಿರ್ಧಾರ ಸರಿ ಎನಿಸಿದ್ದರೂ ಮಾನಸಿಕವಾಗಿ ಬಹಳ ನೋವು ಕೊಟ್ಟಿತ್ತು. ಮುಂದೆ ಓದಿ…
ಇಂಡಸ್ಟ್ರಿಯಲ್ಲಿ ಒಳ್ಳೊಳ್ಳೆ ಹಿಟ್ ಚಿತ್ರಗಳನ್ನು ನೀಡಿದ ಸತ್ಯ ಹೀರೋ ಆಗ್ತೀನಿ ಅಂತ ನಿರ್ಧರಿಸಿಬಿಟ್ಟಿದ್ದರು. ಸಣ್ಣಪುಟ್ಟ ಪೋಷಕ ಪಾತ್ರ, ಜೊತೆಗೆ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಸತ್ಯಗೆ ಹೀರೋ ಆಗೋದಕ್ಕೆ ಸ್ಕ್ರಿಪ್ಟ್ ಮಾಡ್ಕೊಂಡು ತಾವೇ ನಿರ್ದೇಶನ ಮಾಡೋಕು ಸಜ್ಜಾದರು. ಆಗಲೇ ಸೆಟ್ಟೇರಿದ್ದ ‘ನಸೀಬು’ ಎನ್ನುವ ಸಿನಿಮಾ. ಸತ್ಯ ಹೀರೋ ಆಗಿ ಲಾಂಚ್ ಆದರು. ಆರಂಭದಲ್ಲಿ ‘ನಸೀಬು’ ಅಂತ ನಿಗಧಿಯಾಗಿದ್ದ ಶೀರ್ಷಿಕೆ ನಂತರ ‘ಪಾಗಲ್’ ಅಂತ ನಿಕ್ಕಿಯಾಯಿತು. ಆಪ್ತ ಸ್ನೇಹಿತರಿಬ್ಬರ ಹಣ ಸಹಾಯದೊಂದಿಗೆ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿಸಿಕೊಂಡು ಶೂಟಿಂಗ್ ಶುರು ಮಾಡಿ ಅತ್ಯಂತ ಕಡಿಮೆ ಅವಧಿಯಲ್ಲಿ ಅಷ್ಟೇ ಕಡಿಮೆ ಬಜೆಟ್ಟಿನಲ್ಲಿ ಸಿನಿಮಾ ಮುಗಿಸಿದರು. ಕತೆ ಚಿತ್ರಕತೆ ಸಂಭಾಷಣೆ ನಿರ್ದೇಶನದ ಜೊತೆ ನಾಯಕನಾಗಿ ಸತ್ಯ ಕಾಣಿಸಿಕೊಂಡಿದ್ದರು. ಪೂಜಾ ಗಾಂಧಿ ಈ ಚಿತ್ರದ ನಾಯಕಿ. 2011ರಲ್ಲಿ ತೆರೆಕಂಡಿತ್ತು.
ಆ ಸಿನಿಮಾದಲ್ಲಿ ನಾಯಕ ರೌಡಿ ಯಾರೇ ವಿರುದ್ದವಾಗಿ ಮಾತಾಡಿದ್ರು ಅವರ ಮುಖವನ್ನು ಬ್ಲೇಡಿನಿಂದ ಅಮಾನುಷವಾಗಿ ಕುಯ್ತಿರ್ತಾರೆ. ಆಗ ನಾಯಕಿ ಒಂದು ಮಾತು ಹೇಳ್ತಾಳೆ, ‘ಸತ್ಯ ನೀನು ಕೈಯಲ್ಲಿಡಿದಿರೋ ಬ್ಲೇಡ್ ಮುಖ ಸರಿಯಾಗಿ ನೋಡಿದೀಯಾ? ಅದಕ್ಕೆ ಎರಡು ಮುಖ ಇರುತ್ತೆ, ಒಂದಲ್ಲ ಒಂದು ದಿನ ಅದು ನಿನ್ನ ಕುಯ್ಯುತ್ತೆ ಅಂತ ಒಂದು ಸಾಲು ಇತ್ತು. ಸಂಭಾಷಣೆಕಾರ ಮಾಸ್ತಿ ಈ ಚಿತ್ರದಲ್ಲಿ ಸತ್ಯ ಜೊತೆ ಕೆಲಸ ಮಾಡಿದ್ದರು. ಈ ಡೈಲಾಗ್ ಬರೆದಿದ್ದು ಸಹ ಮಾಸ್ತಿ ಅವರೇ. ಈ ಡೈಲಾಗ್ ಸತ್ಯಾರಿಗೆ ತುಂಬಾ ಇಷ್ಟ ಆಗಿ ಅದನ್ನ ಸಿನಿಮಾದಲ್ಲಿ ಬಳಸಿದ್ರು.
‘ಪಾಗಲ್’ ಚಿತ್ರಕ್ಕೆ ಬಂದಿದ್ದ ವಿಮರ್ಶೆಯಿಂದ ಸತ್ಯ ಬಹಳ ಬೇಸರ ಮಾಡಿಕೊಂಡಿದ್ದರು. ಖ್ಯಾತ ವಿಮರ್ಶಕರೊಬ್ಬರು ವೈಯಕ್ತಿಕವಾಗಿ ಸತ್ಯರನ್ನು ಕಟುವಾಗಿ ಟೀಕಿಸಿದ್ದರು. ‘ಈ ಚಿತ್ರದಲ್ಲಿ ನಾಯಕಿ ನಾಯಕನಿಗೆ ಹೇಳುವ ಒಂದು ಸಂಭಾಷಣೆಯ ತುಣುಕಿದೆ. ಬ್ಲೇಡಿಗೆ ಎರಡು ಮುಖ ಇರುತ್ತದೆ ಒಂದಲ್ಲ ಒಂದು ದಿನ ಅದು ನಿನ್ನ ಕುಯ್ಯದೇ ಬಿಡಲ್ಲ ಅಂತ. ಅಲ್ಲ ಇದನ್ನು ಬರೆದ ಸತ್ಯ ಅವರಿಗೇ ತಾನು ಹೀರೋ ಅಲ್ಲ ಅನ್ನೋ ಸತ್ಯ ಗೊತ್ತಿಲ್ವಾ’ ಅಂತ ಸೂಚಕವಾಗಿ ಬರೆದಿದ್ರು. ಇದು ಸತ್ಯರಿಗೆ ತೀವ್ರವಾಗಿ ನೋವು ಉಂಟು ಮಾಡಿತ್ತು.