ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಶುಲ್ಕ ಪಡೆಯುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಹಣದಾಸೆಗೆ ಮರೆಯಾದ ಮಾನವೀಯತೆಗೆ ವಿದ್ಯಾರ್ಥಿನಿಯೊಬ್ಬಳ ಶೈಕ್ಷಣಿಕ ಭವಿಷ್ಯವೇ ಮಂಕಾಗಿರುವುದು ಬೆಳಕಿಗೆ ಬಂದಿದೆ. ಮೂಡುಬಿದರೆ ಆಳ್ವಾಸ್ ರೆಸಿಡೆನ್ಸಿಯಲ್ ಶಾಲೆ ವಿದ್ಯಾರ್ಥಿನಿ ಕೇವಲ 22 ರೂಪಾಯಿ ಪರೀಕ್ಷಾ ಶುಲ್ಕ ಭರಿಸಿಲ್ಲ. ಹೀಗಾಗಿ ಆಕೆಗೆ ಇದೇ ಜುಲೈ 19 ಹಾಗೂ 22 ರಂದು ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವುದನ್ನೆ ನಿರಾಕರಿಸಲಾಗಿದೆ.
ರಾಜ್ಯದ ಪ್ರಭಾವಿ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿರುವ ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಾಲೆಯ ವಿದ್ಯಾರ್ಥಿನಿಯೊಬ್ಬಳಿಗೆ ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆಯಲು ಅವಕಾಶ ತಪ್ಪಿದೆ. ಮೂಲತಃ ತುಮಕೂರು ಜಿಲ್ಲೆಯ ಕೊರಟಗೆರೆಯ ಗ್ರೀಷ್ಮ ನಾಯಕ್ ಎನ್. ಎಂಬುವರೆ ಪರೀಕ್ಷೆ ಬರೆಯುವುದರಿಂದ ವಂಚಿತಳಾಗಿರುವ ವಿದ್ಯಾರ್ಥಿನಿ. ಈ ಬಗ್ಗೆ ಸ್ವತಃ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಆ ವಿದ್ಯಾರ್ಥಿನಿ ಎರಡು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ.
ಕಳೆದ ಡಿಸೆಂಬರ್ 2020ರಲ್ಲಿಯೇ ಈ ವಿದ್ಯಾರ್ಥಿನಿ ಇ-ಮೇಲ್ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿರುದ್ಧ ದೂರು ಕೊಟ್ಟಿದ್ದರು. ಜೊತೆಗೆ ನಿನ್ನೆ(ಜು.15)ಯೂ ಕೂಡ ತನ್ನ ಸಮಸ್ಯೆಯನ್ನು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಗಮನಕ್ಕೆ ತಂದಿದ್ದಾರೆ. ಆ ವಿದ್ಯಾರ್ಥಿನಿ ಅತ್ಯಂತ ಪ್ರತಿಭಾವಂತೆ ಎಂಬುದೂ ಕೂಡ ಗಮನಿಸಬೇಕಾದ ಅಂಶ.