ಜಾಗತೀಕವಾಗಿ ಅರ್ಥಶಾಸ್ತ್ರ ಅಧಃಪತನಕ್ಕಿಳಿದಿದ್ದಾಗ ಅದರ ಭೀಕರತೆ ದೇಶಕ್ಕೆ ತಟ್ಟದಂತೆ ನೋಡಿಕೊಂಡಿದ್ದು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ. 2014ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಸಿಂಗ್ ಸರ್ಕಾರ ಹಗರಣಗಳ ಆರೋಪಗಳಿಗೆ ಸಿಲುಕಿತ್ತು. ಬಿಜೆಪಿ ಅದನ್ನು ನೀಟಾಗಿ ಎನ್‍ಕ್ಯಾಶ್ ಮಾಡಿಕೊಂಡಿತ್ತು. ಅದರಲ್ಲೂ 2ಜಿ ತರಂಗಾಂತರ ಹಗರಣ ಬಿಜೆಪಿಗೆ ದೊಡ್ಡ ಅಸ್ತ್ರವಾಗಿತ್ತು. ಅವತ್ತಿನ ಮೋದಿಯ ತರಂಗಾಂತರಕ್ಕೆ 2ಜಿ ತರಂಗ ಗುಚ್ಛವೂ ಸೇರಿ ಯುಪಿಎ ಸೋತಿತ್ತು. ಇವತ್ತಿಗೂ ಚೇತರಿಸಿಕೊಳ್ಳಲಾಗದಂತಹ ಸೋಲಾಗಿತ್ತದು. ಆದರೆ…
ಆದರೆ ಈಗ ದೆಹಲಿ ಪಟಿಯಾಲದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಓ ಪಿ ಸೈನಿ ಆರು ವರ್ಷಗಳ 2ಜಿ ಹಗರಣದ ವಿಚಾರಣೆಗೆ ಕೊಟ್ಟಿರುವ ಮುಕ್ತಾಯ ಅರ್ಥಾತ್ ತೀರ್ಪು, ವಿನಾಕಾರಣ ಆಡಳಿತವನ್ನು ಕಿತ್ತುಕೊಂಡ ಬಿಜೆಪಿಯನ್ನು ಕಾಂಗ್ರೆಸ್ ಹಳಿದುಕೊಳ್ಳುವಂತಾಗಿದೆ. ಕಾಲ ಮಿಂಚಿದೆ. ಅದನ್ನು ಮುಂದಿನ ದಿನಗಳಲ್ಲಿ ಸದುಪಯೋಗಪಡಿಸಿಕೊಳ್ಳುವಷ್ಟು ಶಕ್ತಿ ಈಗ ಕಾಂಗ್ರೆಸ್‍ನಲ್ಲಿ ಉಳಿದಿಲ್ಲ. ಎಷ್ಟು ಪರಿಣಾಮಕಾರಿಯಾಗಿ ಈ ತೀರ್ಪನ್ನು ಸದುಪಯೋಗಪಡಿಸಿಕೊಳ್ಳುತ್ತದೆ ಎನ್ನುವುದರ ಮೇಲೆ ಅದರ ಭವಿಷ್ಯ ಅಡಗಿದೆ. ಬಿಜೆಪಿಯ ಧ್ವನಿ ಉಡುಗಿದರೂ ಬೇರೇನೋ ಗೇಮ್‍ಪ್ಲಾನ್‍ನ ಚರ್ಚೆಯಾಗುತ್ತಿದೆ.
ಇಷ್ಟೆಲ್ಲಾ ಚರ್ಚೆ ಏಕೆಂದರೇ, ಡಾ. ಮನಮೋಹನ ಸಿಂಗ್ ಅವರ ಸರಕಾರವಿದ್ದಾಗ, ಡಿಎಂಕೆ ಪಕ್ಷದ ನಾಯಕ, ಮಾಜಿ ಟೆಲಿಕಾಂ ಸಚಿವ ಎ ರಾಜಾ ಮತ್ತಿತರರ ಮೇಲೆ ವಿನೋದ್ ರೈ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು. ಡಿಎಂಕೆ ಪಕ್ಷದ ಕನ್ನಿಮೋಳಿ ಫಲಾನುಭವಿಯಾಗಿ 213 ಕೋಟಿ ರುಪಾಯಿ ನುಂಗಿದ್ದಾರೆ ಎನ್ನಲಾಯಿತು. ಆಮೇಲೆ ಅದು ಒಟ್ಟು ಒಂದು ಲಕ್ಷದ ಎಪ್ಪತ್ತಾರು ಸಾವಿರ ಕೋಟಿ 2ಜಿ ಹಗರಣವೆಂದು ದೇಶದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಈ ಬಗ್ಗೆ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಒಂದು ಜಾರಿ ನಿರ್ದೇಶನಾಲಯ, ಮತ್ತೆರಡನ್ನು ಸಿಬಿಐ ತನಿಖೆ ನಡೆಸಿತ್ತು.
2007-2008ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಹೊಸ ಟೆಲಿಕಾಂ ಪರವಾನಗಿ ವಿತರಣೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಸಿತ್ತು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರದ ಮಾಜಿ ಸಚಿವ ಎ.ರಾಜಾ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಪುತ್ರಿ ಎಂ.ಕೆ. ಕನಿಮೋಳಿ, ಅಂಬಾನಿ ಗ್ರೂಪ್ ಮುಖ್ಯಸ್ಥ ಅನಿಲ್ ಧೀರೂಬಾಯ್ ಅಂಬಾನಿ, ಸ್ವಾನ್ ಟೆಲಿಕಾಂ ಸಂಸ್ಥೆ ಹಾಗೂ ತಮಿಳುನಾಡಿನ ವೈರ್ಲೆಸ್ ಸಂಸ್ಥೆಗಳ ವಿರುದ್ಧ ದೂರು ದಾಖಲಾಗಿತ್ತು. ಟೆಲಿಕಾಂ ಸಚಿವರಾಗಿದ್ದ ಎ.ರಾಜಾ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ನಿಯಮ ಮೀರಿ ತಮಗೆ ಬೇಕಾದ ಸಂಸ್ಥೆಗಳಿಗೆ 2ಜಿ ಸ್ಪೆಕ್ಟ್ರಂ ಹಂಚಿಕೆ ಮಾಡಲಾಗಿದೆ ಎಂಬ ಆರೋಪದ ತನಿಖೆ ಆರಂಭಿಸಲಾಗಿತ್ತು.
2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣದಲ್ಲಿ ಒಟ್ಟು ಮೂರು ದೂರು ದಾಖಲಾಗಿತ್ತು. ಮೊದಲನೆ ದೂರಿನಲ್ಲಿ ರಾಜಾ ಅವರು ಸ್ವಾನ್ ಟೆಲಿಕಾಂ, ರಿಲಾಯನ್ಸ್ ಹಾಗೂ ಯೂನಿಟೆಕ್ ವೈರ್ಲೆಸ್ ಸಂಸ್ಥೆಗಳಿಗೆ ಬೇಕಾಬಿಟ್ಟಿ ಸ್ಪೆಕ್ಟ್ರಂ ಹಂಚಿಕೆ ಮಾಡಿದ್ದು, ಈ ಹಗರಣದಲ್ಲಿ ಕನಿಮೋಳಿ ಟೆಲಿಕಾಂ ಸಂಸ್ಥೆ ನಿವೃತ್ತ ಕಾರ್ಯದರ್ಶಿ ಸಿದ್ಧಾರ್ಥ ಬೆಹೂರಾ, ರಾಜಾ ಅವರ ಮಾಜಿ ಆಪ್ತ ಕಾರ್ಯದರ್ಶಿ ಸೇರಿದಂತೆ ರಿಲಾಯನ್ಸ್ ಸಂಸ್ಥೆ ಮುಖ್ಯಸ್ಥ ಅನಿಲ್ ಧೀರೂಬಾಯ್ ಅಂಬಾನಿ, ಕಲೈಂಜರ್ ಟಿವಿಯ ನಿರ್ದೇಶಕರುಗಳು ಶಾಮೀಲಾಗಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ವಿಶೇಷ ನ್ಯಾಯಾಲಯದಲ್ಲಿ ಎರಡು ದಾವೆ ಹೂಡಿದ್ದರು.
2ಜಿ ಸ್ಪೆಕ್ಟ್ರಂ ಹಂಚಿಕೆಯಲ್ಲಿ 30,984 ಕೋಟಿ ರೂಪಾಯಿಗಳ ಹಗರಣ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ ಅನಿಲ್ ಅಂಬಾನಿ, ಟೀನಾ ಅಂಬಾನಿ, ಕಾರ್ಪೊರೇಟ್ ಸಂಸ್ಥೆ ಮುಖ್ಯಸ್ಥೆ ನೀರಾ ರಾಡಿಯಾ ಸೇರಿದಂತೆ 154 ಮಂದಿಯ ವಿಚಾರಣೆ ನಡೆಸಿ 4400 ಪುಟಗಳ ತೀರ್ಪು ಸಿದ್ಧಪಡಿಸಿತ್ತು. 2012ರಲ್ಲಿ ತನಿಖೆಯನ್ನು ಮುಗಿಸಿ ನಿಯಮ ಉಲ್ಲಂಘಿಸಿ ಮೂವತ್ತು ಸಾವಿರ ಕೋಟಿ ನಷ್ಟವಾಗಿದೆ ಎಂದು ಆರೋಪಿಸಿ ಇಡಿ, ಸಿಬಿಐ ಒಟ್ಟು ಹದಿನೇಳು ಜನರ ಮೇಲೆ ಚಾರ್ಜ್‍ಶೀಟ್ ಸಲ್ಲಿಸಿತ್ತು. ಆದರೆ ಈಗ ಈ ಮೂರು ಪ್ರಕರಣಗಳಲ್ಲಿ ಎ ರಾಜಾ, ಕನ್ನಿಮೋಳಿ ಸೇರಿದಂತೆ ಎಲ್ಲಾ ಆರೋಪಿಗಳು ನಿರ್ದೋಷಿಗಳು ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಓ ಪಿ ಸೈನಿ ತೀರ್ಪು ನೀಡಿದ್ದಾರೆ.
ಈ ತೀರ್ಪಿನಿಂದ 2ಜಿ ಹಗರಣವೇ ನಡೆದಿಲ್ಲವೆಂದಾಯಿತಲ್ಲವೇ..?, ನಡೆಯದೇ ಇದ್ದ ಹಗರಣವನ್ನು ನಡೆದಿದೆ ಎಂದು ಒಂದಿಡೀ ಆಡಳಿತವನ್ನೇ ಸೋಲಿಸುವ ಚಾಣಾಕ್ಷತನದ ಹಿಂದಿರುವ ರಾಜಕೀಯ ತಂತ್ರಗಾರಿಕೆಗಳಿಗೆ ಶಬ್ಬಾಸ್ ಎನ್ನುವುದಾ..?, ಇಲ್ಲದ ಆರೋಪವನ್ನು ಹೊರಿಸಿ ನಿರಪರಾಧಿಗಳನ್ನು ಮಧ್ಯಂತರ ಅವಧಿಯಲ್ಲಿ ಜೈಲಿಗೆ ಕಳುಹಿಸಿ, ಕೋರ್ಟ್ ಕಾಲಾಹರಣಕ್ಕೆ ಕಾರಣವಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸೋದಾ..?. ಈಗ ಕಾಂಗ್ರೆಸ್ ವಕ್ತಾರ, ವಕೀಲ ಕಪಿಲ್ ಸಿಬಲ್, ನಾನು ಮೊದಲಿನಿಂದಲೂ ಹೇಳುತ್ತಲೇ ಬರುತ್ತಿದ್ದೆ. ಇಲ್ಲಿ ಯಾವ ಭ್ರಷ್ಟಾಚಾರ ನಡೆದಿಲ್ಲ, ದೇಶಕ್ಕೆ ಯಾವುದೇ ನಷ್ಟವಾಗಿಲ್ಲ ಇದು ಹಗರಣ ಅಲ್ಲವೇ ಅಲ್ಲವೆಂದರೇ, ಕೇಂದ್ರದ ಮಾಜಿ ವಿತ್ತ ಸಚಿವ ಪಿ ಚಿದಂಬರಂ, ದೇಶದ ಭಾರೀ ದೊಡ್ಡ ಹಗರಣ ಎಂದು ಬಿಂಬಿಸಲಾಗುತ್ತಿದ್ದ 2ಜಿ ತರಂಗಗುಚ್ಛ ಹಗರಣದ ಆರೋಪ ಯಾವತ್ತೂ ನಿಜವಾಗಿರಲಿಲ್ಲ. ಆದರೆ, ವಿನೋದ್ ರೈ ಮತ್ತು ಬಿಜೆಪಿ ನಾಯಕರು ಸುಳ್ಳು ಹಬ್ಬಿಸುತ್ತಲೇ ಬಂದರು’ ಎಂದು ತಿರುಗೇಟು ನೀಡಿದ್ದಾರೆ. ಹಾಗಂತ ಇಲ್ಲಿಗೆ ಎಲ್ಲವೂ ಮುಗಿದಿಲ್ಲ.
ಸಿಬಿಐ ವಿಶೇಷ ಕೋರ್ಟ್ ತೀರ್ಪಿನ ವಿರುದ್ಧ ಸಿಬಿಐ, ಇಡಿ ಮೇಲ್ಮನವಿ ಸಲ್ಲಿಸಬಹುದು. ತನಿಖಾ ಸಂಸ್ಥೆ ಮೇಲ್ಮನೆ ಕೋರ್ಟ್‍ಗೆ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದರೆ, ಎಲ್ಲಾ ಆರೋಪಿಗಳು ಐದು ಲಕ್ಷ ಭದ್ರತಾ ಠೇವಣಿ ಇಡುವಂತೆಯೂ ನ್ಯಾಯಾಧೀಶರು ಆದೇಶದಲ್ಲಿ ಹೇಳಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ತಮಿಳುನಾಡು ಭೇಟಿ, ಡಿಎಂಕೆ ಜೊತೆ ಮಾತುಕತೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮೇಲ್ಮನವಿಯ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಇಲ್ಲಿ ರಾಜ್ಯ ರಾಜಕಾರಣದ ಸೂಕ್ಷ್ಮಗಳಿದ್ದರೂ, 2ಜಿ ಹಗರಣ ನಡೆದಿಲ್ಲ ಎಂದಾದರೇ ಬಿಜೆಪಿಗೆ ಮೈನಸ್ ಆಗುವುದಿಲ್ಲವೇ ಎಂಬ ಡಿಬೆಟ್ ಕೂಡ ನಡೆದಿದೆ. ಸಂಕಲನ,ವ್ಯವಕಲನದ ಲೆಕ್ಕಾಚಾರಗಳು ನಿಗೂಢವಾಗಿವೆ.
ಮೊಬೈಲ್ ಸೇವೆಗೆ 2008ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿ ಸರ್ಕಾರ ಒಂಬತ್ತು ದೂರಸಂಪರ್ಕ ಕಂಪೆನಿಗಳಿಗೆ ಬೇಕಾಬಿಟ್ಟಿ ಲೈಸೆನ್ಸ್ ನೀಡಿದ ಪ್ರಕರಣವೆಂಬುದು ಆರೋಪ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಒಂದು ಲಕ್ಷದ ಎಪ್ಪತ್ತಾರು ಸಾವಿರ ಕೋಟಿ ನಷ್ಟವಾಗಿದೆ ಎನ್ನಲಾಯಿತು. ಆಗಿನ ದೂರಸಂಪರ್ಕ ಸಚಿವರಾಗಿದ್ದ ಎ. ರಾಜಾ ಅವರ ಮೇಲೆ ಆರೋಪ ಕೇಳಿಬಂತು. ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಪ್ರತಿಪಕ್ಷಗಳು ಆಡಳಿತ ಪಕ್ಷವನ್ನು ಬೀದಿಗೆ ತರುವಲ್ಲಿ ಯಶಸ್ವಿಯಾಯಿತು. ಹಲವರ ತಲೆದಂಡವಾಯಿತು.
ದೂರ ಸಂಪರ್ಕ ಸಚಿವರಾಗಿದ್ದ ಎ. ರಾಜಾ 2007ರ ಆಗಸ್ಟ್ ನಲ್ಲಿ ಯುಎಎಸ್ ಲೈಸೆನ್ಸ್‍ನೊಂದಿಗೆ 2ಜಿ ತರಂಗಾಂತರ ಹಂಚಿಕೆ ಪ್ರಕ್ರಿಯೆ ಆರಂಭಿಸಿದರು. ಸೆಪ್ಟೆಂಬರ್ 25, 2007ರಂದು ಅಕ್ಟೋಬರ್ ಒಂದರೊಳಗೆ ಲೈಸೆನ್ಸ್‍ಗಾಗಿ ಅರ್ಜಿ ಅಲ್ಲಿಸುವಂತೆ ದೂರಸಂಪರ್ಕ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿತ್ತು. ಅಕ್ಟೋಬರ್ 1, 2007ರಂದು ದೂರಸಂಪರ್ಕ ಸಚಿವಾಲಯ 46 ಸಂಸ್ಥೆಗಳ 575 ಅರ್ಜಿ ಸ್ವೀಕರಿಸಿತ್ತು. ನವೆಂಬರ್ 2, 2007ರಂದು ಸರಿಯಾದ ರೀತಿಯಲ್ಲಿ ಲೈಸೆನ್ಸ್ ವಿತರಿಸುವಂತೆ ಮತ್ತು ಅದಕ್ಕೆ ಸೂಕ್ತ ಶುಲ್ಕ ಪಡೆವಂತೆ ಎ. ರಾಜಾ ಅವರಿಗೆ ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಪತ್ರ ಬರೆದರು. ಆದರೆ ಪ್ರಧಾನಿಯವರ ಕೆಲವು ಶಿಫಾರಸ್ಸುಗಳನ್ನು ತಿರಸ್ಕರಿಸಿ ಎ. ರಾಜ ಪ್ರತಿಕ್ರಿಯೆ ಕೊಟ್ಟಿದ್ದರು.
ಮೇ 4, 2009ರಂದು 2ಜಿ ಸ್ಪೆಕ್ಟ್ರಂ ತರಂಗಾಂತರ ಹಂಚಿಕೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಟೆಲಿಕಾಂ ವಾಚ್ ಡಾಗ್ ಎನ್‍ಜಿಒ ಕೇಂದ್ರ ಜಾಗೃತ ಸಮಿತಿಗೆ ದೂರು ನೀಡಿತ್ತು. ಸಿಬಿಐ, ಇಡಿ ತನಿಖೆ ಆರಂಭಿಸಿತ್ತು. ಇದೇ ವೇಳೆ ಬಿಜೆಪಿ ನಾಯಕರು ಒಬ್ಬೊಬ್ಬರಾಗಿಯೇ 2ಜಿ ಹಗರಣದ ಮಾತನಾಡತೊಡಗಿದರು. 2ಜಿ ಹಗರಣದಲ್ಲಿ ಒಟ್ಟು 60 ಸಾವಿರ ಕೋಟಿ ರೂಪಾಯಿಗಳಷ್ಟು ಹಣವನ್ನು ಪ್ರತಿಷ್ಠರಿಗೆ ನೀಡಲಾಗಿದ್ದು, ನಾಲ್ಕು ಪ್ರಮುಖ ಪಕ್ಷಗಳಿಗೆ ಹಂಚಿಕೆಯಾಗಿದೆ. ಮಾಜಿ ಸಚಿವ ಎ. ರಾಜಾಗೆ ಐದು ಸಾವಿರ ಕೋಟಿ, ಕೇಂದ್ರ ಗೃಹ ಸಚಿವ ಚಿದಂಬರಂ ಅವರಿಗೆ ಐದು ಸಾವಿರ ಕೋಟಿ, ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಅವರಿಗೆ 14 ಸಾವಿರ ಕೋಟಿ ಸಲ್ಲಿಕೆಯಾಗಿದೆ. 36 ಸಾವಿರ ಕೋಟಿ ರೂಪಾಯಿ ಸೋನಿಯಾ ಗಾಂಧಿಯವರಿಗೆ ಕಪ್ಪ ರೂಪದಲ್ಲಿ ನೀಡಲಾಗಿದೆ ಎಂದು ಆರೋಪಿಸಲಾಯಿತು.
ಚಿದಂಬರಂ ಲಂಚದ ಹಣವನ್ನು ವಿದೇಶಿ ಬ್ಯಾಂಕ್‍ಗಳಲ್ಲಿ ಠೇವಣಿ ಇಟ್ಟಿದ್ದಾರೆ. ಇದಕ್ಕಾಗಿ ಸೇವಾ ತೆರಿಗೆಯನ್ನು ಕೂಡಾ ಕಟ್ಟುತ್ತಿದ್ದಾರೆ. ಆದರೆ, ಪ್ರದಾನಿ ಮನಮೋಹನ್ ಸಿಂಗ್ ಅವರಿಗೆ ಒಂದು ರೂಪಾಯಿ ಕೂಡಾ ಸಿಕ್ಕಿಲ್ಲ. 2ಜಿ ಅಂದರೆ ಸೋನಿಯಾಜಿ ಮತ್ತು ರಾಹುಲ್ಜಿ ಎಂದು ವಿರೋಧಿಗಳು ಲೇವಡಿ ಮಾಡಿದರು. 2ಜಿ ಹಗರಣ ವಿಶ್ವದ ಅತ್ಯಂತ ದೊಡ್ಡ ಹಗರಣ, ಸಿಎಜಿ ವರದಿ ಪ್ರಕಾರ 1.76 ಲಕ್ಷ ಕೋಟಿ ರೂಪಾಯಿಗಳಷ್ಟು ಸರ್ಕಾರದ ಬೊಕ್ಕಸಕ್ಕೆ ಹಾನಿಯಾಗಿದೆ. ಮೂಲ ಪರವಾನಿಗಿ ಪಡೆದವರು ಇದನ್ನು ಸರಕಾರ ನಿಗದಿ ಪಡಿಸಿದ ದರಕ್ಕಿಂತ ಎಂಟರಿಂದ ಹದಿಮೂರು ಪಟ್ಟು ಹೆಚ್ಚಿನ ಹಣಕ್ಕೆ ಇತರ ಕಂಪೆನಿಗಳಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪ ಕೇಳಿಬಂತು. ಆದರೆ ಅಂತಿಮ ತೀರ್ಪಿಗೂ ಮೊದಲೇ ಸೋನಿಯಾ, ಚಿದಂಬರಂ ಅವರನ್ನು ಕೋರ್ಟ್ ಆರೋಪ ಪಟ್ಟಿಯಿಂದ ಹೊರಗಿಟ್ಟಿತ್ತು.
ಈ ಹಗರಣ ಮತ್ತಷ್ಟು ಪ್ರಖರಗೊಳ್ಳುವಂತೆ ಎ. ರಾಜಾ 2ಜಿ ಹಗರಣದ ಲಂಚದ ಹಣವನ್ನು ಸಾಗಿಸಲು ಬಳಕೆ ಮಾಡಿಕೊಂಡಿದ್ದರು ಎನ್ನಲಾದ ಬೃಹತ್ ಹವಾಲಾ ಜಾಲವನ್ನು ಜಾರಿ ನಿರ್ದೇಶನಾಲಯ ಭೇದಿಸಿದೆ ಎನ್ನಲಾಯಿತು. ಈ ಪ್ರಕರಣದಲ್ಲಿ ಖಾಸಗಿ ಬ್ಯಾಂಕೊಂದು ಶಾಮೀಲಾಗಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಯಿತು. ಜೊತೆಗೆ 2ಜಿ ಲಂಚದ ಹಣ ಸಾಗಿಸಲು ರಾಜಾ ಅವರಿಗೆ ಚೆನ್ನೈ ಮೂಲದ ಜೆಪಿ ಗ್ರೂಪ್ ಕಂಪನಿ ನೆರವಾಗಿತ್ತು. ಲಂಚದ ಹಣವನ್ನು ದುಬೈ ಮೂಲದ ಮೈಕಾನ್ ಜನರಲ್ ಟ್ರೇಡಿಂಗ್ ಕಂಪನಿಗೆ ಕಳುಹಿಸಲಾಗಿತ್ತು. ಅಲ್ಲಿಂದ ಹಾಂಕಾಂಗ್ ಹಾಗೂ ಇನ್ನಿತರೆ ತೆರಿಗೆ ಸ್ವರ್ಗಗಳಿಗೆ ರವಾನಿಸಲಾಗಿತ್ತು. 2012-13ನೇ ಸಾಲಿನಲ್ಲಿ ಭಾರತದ ವಿದೇಶಿ ಬೇಹುಗಾರಿಕಾ ಸಂಸ್ಥೆ “ರಾ’ ಈ ಕುರಿತು ನೀಡಿದ್ದ ಮಾಹಿತಿ ಆಧರಿಸಿ ತನಿಖೆ ನಡೆಸಲಾಗಿದೆ. ಅಹಮದಾಬಾದ್‍ನ ಜಾರಿ ನಿರ್ದೇಶನಾಲಯ ಘಟಕ ಸೂರತ್ ಮೂಲದ ವಜ್ರ ಕಂಪನಿಗಳ ಹವಾಲಾ ಜಾಲದ ಬಗ್ಗೆ ಮತ್ತಷ್ಟು ತನಿಖೆ ನಡೆಸುತ್ತಿದ್ದಾಗ 2ಜಿ ಹಗರಣದಲ್ಲಿ ಬೃಹತ್ ಹವಾಲಾ ಜಾಲದ ಪಾತ್ರವಿರುವುದು ಬೆಳಕಿಗೆ ಬಂದಿತ್ತು ಎನ್ನಲಾಯಿತು.
ದೂರ ಸಂಪರ್ಕ ಸಚಿವರಾದ ಎ ರಾಜಾ ಕೆಲವು ಖಾಸಗಿ ಕಂಪೆನಿಗಳಿಗೆ ಒತ್ತಾಸೆಯಾಗಿ ನಿಂತು ತನ್ನ ಅಧಿಕಾರ ದುರ್ಬಳಕೆ ನಡೆಸಿ ತರಂಗಗುಚ್ಛ ಕೊಡಿಸಿರುವುದು ಮತ್ತು ಅದಕ್ಕಾಗಿ ಅನೇಕ ಬೇನಾಮಿ ಕಂಪೆನಿಗಳ ಮೂಲಕ ಅವರಿಗೆ ಅಪಾರ ಪ್ರಮಾಣದ ಹಣ ಸಂದಾಯವಾಗಿರುವುದು ಸಿಬಿಐ ತನಿಖೆಯಲ್ಲಿ ದಾಖಲಾದ ಅಂಶ. 2ಜಿ ತರಂಗಗುಚ್ಛವನ್ನು ಮೊದಲು ಬಂದವರಿಗೆ ಆದ್ಯತೆಯಂತೆ ವಿತರಿಸಿರುವುದೇ ಮೂಲ ಹಗರಣವೆನ್ನಲಾಯಿತು. ನ್ಯಾಯವಾಗಿ ತರಂಗಗುಚ್ಛವನ್ನು ಹರಾಜು ಹಾಕಬೇಕಿತ್ತು. ಮನಮೋಹನ್ ಸಿಂಗ್ ಅವರಿಗೆ ಇವೆಲ್ಲಾ ತಿಳಿದೂ ಅದನ್ನು ತಡೆಯದೇ ಹೋಗಿದ್ದು ಟೀಕೆಗೊಳಗಾಯಿತು.
2ಜಿ ತರಂಗಗುಚ್ಛವನ್ನು ಸಬ್ಸಿಡಿ ದರಗಳಲ್ಲಿ ವಿತರಿಸಿರುವುದು ಟ್ರಿಕಲ್ ಡೌನ್ ಥಿಯರಿಯನ್ವಯ ಶ್ರೀಸಾಮಾನ್ಯನಿಗೆ ಅದರ ಲಾಭವನ್ನೊದಗಿಸುವುದಕ್ಕಾಗಿತ್ತು. ಆದರೆ ಎ ರಾಜಾ ಕೆಲವು ಖಾಸಗಿ ಕಂಪೆನಿಗಳಿಗೆ ಪಕ್ಷಪಾತಿಯಾಗಿ ತರಂಗಗುಚ್ಛವನ್ನು ವಿತರಿಸಿ ಭ್ರಷ್ಟಾಚಾರವೆಸಗಿದ್ದು ಹಗರಣವೆನ್ನಲಾಯಿತು. ಕಂಪೆನಿಗಳ ಪರವಾನಗಿ ಮತ್ತು ತರಂಗಗುಚ್ಛಗಳ ಬೇಡಿಕೆಗಳನ್ನು ರಾಜಾ ಅವರೇ ಇತ್ಯರ್ಥಗೊಳಿಸಿದ್ದಾರೆಯೇ ಹೊರತು ಅದು ತನ್ನ ಅಥವಾ ಸಂಪುಟದ ಮುಂದೆ ತರಲಾಗಿಲ್ಲವೆಂಬುದು ಆರೋಪ. ಕೊನೆಗೆ 2ಜಿ ಹಗರಣವನ್ನು ರಾಜಾ ಅವರಿಗೇ ಸೀಮಿತಗೊಳಿಸಿ ಸರ್ಕಾರದ ನೈತಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅದಕ್ಕಾಗಿ ಹಗರಣದ ವ್ಯಾಪ್ತಿ ವಿಸ್ತಾರಗಳನ್ನೇ ಸಂಕುಚಿತಗೊಳಿಸಿಬಿಡುವ ಹುನ್ನಾರವಿದು ಎನ್ನಲಾಯಿತು.
2ಜಿ ತರಂಗಾಂತರ ಗುಚ್ಛ ವಿತರಣೆಯ ಹಗರಣ ಬಯಲುಗೊಂಡ ಮೊದಲ ದಿನದಿಂದಲೂ ಡಿಎಂಕೆ, ಎ ರಾಜಾ ಶ್ರೀಸಾಮಾನ್ಯನ ಪರವಾಗಿ ಹೋರಾಡಿದ ಧೀಮಂತ ನಾಯಕ, ಕಾರ್ಪೋರೆಟ್ ಸಂಸ್ಥೆಗಳ ಕುತಂತ್ರಕ್ಕೆ ಬಲಿಯಾಗಿ ಜನರ ಪರ ಜೈಲು ಸೇರಿದ್ದಾರೆ ಎಂದಿತ್ತು. ರಾಜಾ ಹೊಸ ಕಂಪೆನಿಗಳಿಗೆ ಕಡಿಮೆ ದರದಲ್ಲಿ ತರಂಗಗುಚ್ಛವನ್ನು ವಿತರಿಸಿದ್ದರಿಂದ ಈ ಕಂಪೆನಿಗಳು ಅತಿ ಕಡಿಮೆ ದರಗಳಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿವೆ ಎಂದಿತ್ತು. ಆದರೆ 2ಜಿ ಸ್ಪೆಕ್ಟ್ರಂ ಯೋಜನೆ ಜನಸ್ನೇಹಿಯಾಗಿತ್ತು. ಅದು ಮಿಲಿಯನ್ ಗಟ್ಟಲೆ ಜನರನ್ನು ಬೆಸೆಯುವ ಒಂದು ಉತ್ತಮ ಯೋಜನೆಯಾಗಿತ್ತು. 2ಜಿ ಹಗರಣದಿಂದ 1.76 ಲಕ್ಷ ಕೋಟಿ ನಷ್ಟವಾಗಿದೆ ಎಂದು 2010ರ ನ್ಯಾಶನಲ್ ಆಡಿಟರ್ ವರದಿ ಹೇಳಿತ್ತು. ಆದರೆ ಸೆಕೆಂಡ್ ಜನರೇಶನ್ ತರಂಗಾಂತರಗಳು ಮೊಬೈಲ್ ಕಂಪೆನಿಗೆ ಮಾರುಕಟ್ಟೆ ಬೆಲೆಗಿಂತಲೂ ಕಡಿಮೆಯಲ್ಲಿ ದೊರೆತಿತ್ತು. ಪ್ರಕರಣ ಕುರಿತಂತೆ ತರಂಗಾಂತರ ಹರಾಜಿನ ಮೂಲಕ ಹಂಚಿಕೆಯಾಗಬೇಕಿತ್ತು. ಆದರೆ, ರಾಜಾ ಅವರು ಕಾನೂನು ಉಲ್ಲಂಘನೆ ಮಾಡಿ ಹಂಚಿಕೆ ಮಾಡಿದ್ದರು ಎಂದು ಸಿಎಜಿ ವರದಿ ಹೇಳಿತ್ತು.
ಆರೋಪ, ಪ್ರತ್ಯಾರೋಪ, ಸಮರ್ಥನೆಗಳ ನಡುವೆ, ನನ್ನ ರಕ್ಷಣೆಗಾಗಿ ಎಂಬ ಆತ್ಮ ಚರಿತ್ರೆಯನ್ನು ಎ ರಾಜ ಬರೆದರು. ಅದರಲ್ಲಿ, 2ಜಿ ತರಂಗಾಂತರ ಹಂಚಿಕೆಯಾಗುವ ಕೆಲವು ತಿಂಗಳ ಮುನ್ನ ನಾನು ಪ್ರಧಾನಿಯವರನ್ನು ಭೇಟಿಯಾಗಿ ನನ್ನನ್ನು ಈ ವಿಚಾರದಲ್ಲಿ ಕೊಳ್ಳಲು ಅಥವಾ ಡೀಲ್ ಕುದುರಿಸಲು ಯತ್ನಿಸುತ್ತಿರುವವರ ಕುರಿತು ಹೇಳಿದ್ದೆ. ಕಾರ್ಪೊರೇಟ್ ಕಂಪೆನಿಗಳು ಹಾಗೂ ಕೆಲವು ಕೇಂದ್ರ ಸಚಿವರ ಕುರಿತೂ ಹೇಳಿದ್ದೆ. ಪಿ. ಚಿದಂಬರಂ, ಪ್ರಣವ್ ಮುಖರ್ಜಿ ಅವರಂತಹ ಪ್ರಮುಖರ ಜೊತೆಗಿನ ಚರ್ಚೆಯ ನಂತರವೇ ಅಂತಿಮ ನಿರ್ಧಾರ ಮಾಡಲಾಗುತ್ತಿತ್ತು. ಸಿಂಗ್ ಹರಾಜನ್ನು ಹಿಡಿದಿಡಲು ಹೇಳುತ್ತಿದ್ದರು. ಯಾವುದೇ ಲಾಭಿ ಇಲ್ಲದೆ ತಾವು ಹೊಸ ಪರವಾನಗಿಗಳನ್ನು ಉತ್ತಮ ಕಂಪೆನಿಗಳಿಗೆ ನೀಡಬೇಕು ಎಂದುಕೊಂಡಿದ್ದೆ. ಏರ್‍ಟೆಲ್, ವೊಡಾಫೋನ್ ನಂತಹ ಪ್ರಮುಖ ಕಂಪೆನಿಗಳು ಮೊಬೈಲ್ ನೆಟ್‍ವರ್ಕ್ ಅನ್ನು ಜಿಎಸ್‍ಎಂ ಮೂಲಕ ಬಳಸುತ್ತಿದ್ದವು. ಆದರೆ, ಉಳಿದ ಕಂಪೆನಿಗಳು ಬಳಸುತ್ತಿದ್ದ ಸಿಡಿಎಂಎ ಟೆಕ್ನಾಲಜಿಯನ್ನು ಬ್ಲಾಕ್ ಮಾಡುವ ಇರಾದೆಗೆ ಒತ್ತಡ ಹೇರುತ್ತಿದ್ದವು ಎಂದು ರಾಜಾ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದರು.
ಈಗ ಎಲ್ಲವೂ ಮುಗಿದಂತಿದೆ. ಮೇಲ್ಮನವಿಯ ಬಗ್ಗೆ ಇಡಿ, ಸಿಬಿಐ ನಿರ್ಧಾರ ಕೈಗೊಳ್ಳಲಿದೆ. ಎ ರಾಜಾ, ಕನ್ನಿಮೊಳಿ ಸೇರಿದಂತೆ ಸಿದ್ಧಾರ್ಥ ಬೆಹುರಾ, ಆರ್ ಕೆ ಚಂದೋಳ್ಯಾ, ಗೌತಮ್ ಜೋಷಿ, ಹರಿ ನಾಯರ್, ಸುರೇಂದ್ರ ಪಿಪಾರಾ, ಶಾಹೀದ್ ಬಾಲ್ವಾ, ಸಂಜಯ್ ಚಂದ್ರ, ಶರತ್ ಕುಮಾರ್, ವಿನೋದ್ ಗೊಯಂಕಾ, ಕರೀಂ ಮೊರಾನಿ ಸೇರಿದಂತೆ ಒಟ್ಟು ಹದಿನೇಳು ಮಂದಿ ಖುಲಾಸೆಯಾಗಿದ್ದಾರೆ. ಎನ್.ಕೆ. ಸಿಂಗ್, ಅನು ಟಂಡನ್, ಪೂಂಗೋತಾಯ್ ಅಲಾಡಿ ಅರುಣಾ, ಸೋನಿಯಾ ಗಾಂಧಿ, ಅಹಮ್ಮದ್ ಪಟೇಲ್, ಗುಲಾಂ ನಬಿ ಆಜಾದ್, ಮುತ್ತುವೇಲ್ ಕರುಣಾನಿಧಿ, ರತನ್ ಟಾಟಾ, ಮುಖೇಶ್ ಅಂಬಾನಿ, ತರುಣ್ ದಾಸ್, ನೋಯಲ್ ಟಾಟಾ, ಅನಿಲ್ ಅಂಬಾನಿ, ಸುನೀಲ್ ಮಿತ್ತಲ್, ಆರ್ ಕೆ ಕೃಷ್ಣನ್‍ಕುಮಾರ್, ಕರುಣಾನಿಧಿ ಮೂರನೇ ಪತ್ನಿಯೂ ಸೇರಿದಂತೆ ಕೆಲವು ಪತ್ರಕರ್ತರು, ಕೇಳಿಬಂದ ವಿವಿಧ ವಲಯದವರ ಹೆಸರನ್ನು ತನಿಖೆ ಹಾಗೂ ವಿಚಾರಣೆಯ ಹಂತದಲ್ಲಿ ಕೈಬಿಡಲಾಗಿತ್ತು. ಒಟ್ಟಿನಲ್ಲಿ 2ಜಿ ಹಗರಣ ನಡೆದೇ ಇಲ್ಲವೆಂಬುದು ಸಾಬೀತಾಗಿದೆ. ಇದರಿಂದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಆಗುವ ಸಂಕಲನ- ವ್ಯವಕಲನದ ಬಗ್ಗೆ ಕಾಲವೇ ಉತ್ತರ ಹೇಳಲಿದೆ.
-ರಾ. ಚಿಂತನ್