ಬಿ.ಎಸ್ ಯಡಿಯೂರಪ್ಪ 4ನೇ ಬಾರಿ ಮುಖ್ಯಮಂತ್ರಿ ಆಗಿಯೇ ಬಿಟ್ಟಿದ್ದಾರೆ. ಮಂಡ್ಯದ ಕೆ.ಆರ್ ಪೇಟೆಯ ಬೂಕನಕೆರೆಯಲ್ಲಿ ಹುಟ್ಟಿ ಬೆಳೆದ ಯಡಿಯೂರಪ್ಪ ರಾಜಕೀಯ ಬದುಕು ಕಟ್ಟಿಕೊಂಡಿದ್ದು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ. ಶಿಕಾರಿಪುರ ಬಿಎಸ್ವೈ ರಾಜಕೀಯ ಕರ್ಮಭೂಮಿಯಾಯ್ತು.
ಹುಟ್ಟು ಹೋರಾಟಗಾರರಾಗಿರುವ ಯಡಿಯೂರಪ್ಪರವರು ಶಿಕಾರಿ ಪುರ ಪುರಸಭೆ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದರು. ಅಲ್ಲಿಂದ ಅವರೆಂದು ಹಿಂತಿರುಗಿ ನೋಡಲಿಲ್ಲ. ಎಡವಿದರೂ ಕುಗ್ಗಲಿಲ್ಲ. ಹೋರಾಟದಿಂದ ಗೆದ್ದರು..! 2007ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಗಳಾದರು. ಆಗ ಕೇವಲ 8 ದಿನಗಳ ಕಾಲ ಅಧಿಕಾದಲ್ಲಿದ್ದರು. ಪುನಃ 2008ರಲ್ಲಿ ಅಧಿಕಾರದ ಚುಕ್ಕಾಣಿ ಪಡೆದ ಬಿಎಸ್ವೈ 3 ವರ್ಷ 2 ತಿಂಗಳು ಆಡಳಿತ ನಡೆಸಿದ್ದರು. 2018ರಲ್ಲಿ 3ನೇ ಬಾರಿ ಮುಖ್ಯಮಂತ್ರಿಯಾದ ಅವರು ಮೂರೇ ಮೂರು ದಿನ ಅಧಿಕಾರದಲ್ಲಿದ್ದರು. ಇಂದು 4ನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ಹಿಡಿದಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ 14 ತಿಂಗಳ ಆಡಳಿತ ನಡೆಸಿತ್ತು. 14 ತಿಂಗಳಗಳ ಕಾಲ ಸರ್ಕಾರದ ಮೇಲೆ ತೂಗುಗತ್ತಿ ತೂಗುತ್ತಲೇ ಇತ್ತು. 2019ರ ಲೋಕಸಭಾ ಚುನಾವಣೆಯ ಬಳಿಕ ಮೈತ್ರಿ ಆಂತರಿಕ ಕಲಹ ಕೂಡ ಜಾಸ್ತಿಯಾಯ್ತು. ಅತೃಪ್ತರ ರಾಜೀಮೆ ಫಲಶ್ರುತಿಯಾಗಿ ಮೈತ್ರಿಯೂ ಮುರಿದು ಬಿತ್ತು. ಈಗ ಬಿಎಸ್ ವೈ ನೇತೃತ್ವದ ಸರ್ಕಾರ ಬಂದಿದೆ.