ಮೈಸೂರಿನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ನಾಡಿನ ಜನರಲ್ಲಿ ತೀವ್ರ ಆಕ್ರೋಶ ಕೆರಳಿಸಿದೆ. ರಾಜಕೀಯ ಮುಖಂಡರು, ಸಿನಿಮಾ ಸೆಲೆಬ್ರಿಟಿಗಳು, ಶ್ರೀಸಾಮಾನ್ಯರು ಮೈಸೂರಿನ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನಟಿ ಶ್ರುತಿ, ತಾರಾ, ಪೂಜಾ ಗಾಂಧಿ, ಅದಿತಿ ಪ್ರನುದೇವ್, ಪ್ರಣಿತಾ ಸುಭಾಷ್, ಮಾಳವಿಕಾ, ನಟಿ ರಮ್ಯಾ ಇನ್ನೂ ಹಲವು ನಟಿಯರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನಟ ಹಾಗೂ ರಾಜಕಾರಣಿಯೂ ಆಗಿರುವ ಜಗ್ಗೇಶ್ ಸಹ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು

ಇದೀಗ ಮೈಸೂರು ಪೊಲೀಸರು ಘಟನೆಗೆ ಸಂಬಂಧಿಸಿದ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ಬಹಳ ಕಡಿಮೆ ಮಾಹಿತಿ ಹೊಂದಿದ್ದರೂ ಸಹ ಕಷ್ಟಪಟ್ಟು ಮೈಸೂರು ಪೊಲೀಸರು ಶೀಘ್ರವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಅತ್ಯಾಚಾರ ಮಾಡಿದ ಕಿರಾತಕರನ್ನು ಬಂಧಿಸಿರುವ ಪೊಲೀಸರಿಗೆ ನಟ ಜಗ್ಗೇಶ್ ಬಹುಮಾನವನ್ನು ಘೋಷಿಸಿದ್ದಾರೆ

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಜಗ್ಗೇಶ್, ”ಕಾಲೇಜು ವಿಧ್ಯಾರ್ಥಿ ಅತ್ಯಾಚಾರ ಮಾಡಿದ ಕಾಮಪಿಪಾಸುಗಳ ಬಂಧಿಸಿದ ನನ್ನ ಕರುನಾಡಿನ ಹೆಮ್ಮೆಯ ಆರಕ್ಷಕರಿಗೆ ನನ್ನ ವೈಯಕ್ತಿಕ ಅಭಿನಂದನೆಗಳು. ನಮ್ಮ ರಾಜ್ಯದ ಪೊಲೀಸ್ ಬಗ್ಗೆ ಹೆಮ್ಮೆ ಇದೆ. ನನ್ನ ಕಡೆಯಿಂದ ಪ್ರಕರಣ ಬೇಧಿಸಿದ ನಲ್ಮೆಯ ನನ್ನ ಪೋಲಿಸರಿಗೆ 1ಲಕ್ಷ ಬಹುಮಾನ. ನಿಮ್ಮ ಸಾರ್ಥಕ ಸೇವೆ ಹೀಗೆ ಮುಂದುವರಿಯಲಿ. ರಾಷ್ಟ್ರಕ್ಕೆ ಮಾದರಿ ನಮ್ಮ ಪೋಲಿಸ್” ಎಂದಿದ್ದಾರೆ ನಟ ಜಗ್ಗೇಶ್






