ಕರ್ನಾಟಕದಲ್ಲಿ ಈಗ ಎಲ್ಲಿ ನೋಡಿದರೂ ನವರಾತ್ರಿ ರಂಗೇ ಕಾಣಿಸುತ್ತಿದೆ. ಇದನ್ನು ನಮ್ಮಲ್ಲಿ ದಸರಾ ಎಂಬ ವಿಶೇಷ ಹೆಸರಿನಿಂದ ಕರೆಯುತ್ತೇವೆ. ಈ ಹಬ್ಬದ ವೇಳೆಯಲ್ಲಿ ಒಂಬತ್ತು ದಿನಗಳಂದು ಒಂಬತ್ತು ವಿಧದ ರೂಪಗಳನ್ನು ಹೊಂದಿರುವ ದೇವಿಯರನ್ನು ಪೂಜಿಸಲಾಗುತ್ತದೆ. ನಂತರ 10ನೇ ದಿನದಂದು ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಅದನ್ನು ವಿನಿಯೋಗ ಮಾಡುವುದು ನಮ್ಮ ಸಂಪ್ರದಾಯ. ಅದಕ್ಕೆ ನಮ್ಮಲ್ಲಿ ವಿಜಯ ದಶಮಿ ಎಂಬ ಹೆಸರೂ ಇದೆ. ಅಂದೇ ಮೈಸೂರಿನಲ್ಲಿ ವಿಶ್ವಪ್ರಸಿದ್ದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೆರವಣಿಗೆ ಜರುಗುತ್ತದೆ.
ಇಷ್ಟಕ್ಕೂ ನವರಾತ್ರಿಯ ಆ ಒಂಬತ್ತು ದಿನಗಳ ಕಾಲ ಆದಿ ಶಕ್ತಿಯನ್ನು ಈ ಕೆಳಗಿನಂತೆ ಪೂಜಿಸಲಾಗುತ್ತದೆ
1. ಮೊದಲ ದಿನ ಅಥವಾ ಪಾಡ್ಯದ ದಿನ ಯೋಗನಿದ್ರಾ ದುರ್ಗಾ ಪೂಜೆ.
2. ಎರಡನೇ ದಿನ ಅಂದರೆ ಬಿದಿಗೆ ದಿನ ದೇವಜಾತ ದುರ್ಗಾಪೂಜೆ
3. ಮೂರನೇ ದಿನ ಅಥವಾ ತದಿಗೆಯಂದು, ಮಹಿಷಾಸುರ ಮರ್ದನಿ ದುರ್ಗಾಪೂಜೆ
4. ನಾಲ್ಕನೇ ದಿನ ಅಥವಾ ಚತುರ್ಧಶಿಯಂದು ಶೈಲ ಜಾತಾ ದುರ್ಗಾಪೂಜೆ
5. ಐದನೇ ಅಥವಾ ಪಂಚಮಿ ದಿನದಂದು, ದೂಮೃಹಾ ದುರ್ಗಾಪೂಜೆ
6. ಆರನೇ ದಿನ ಅಂದರೆ ಶಷ್ಟಿಯಂದು, ಚಂಡ-ಮುಂಡ ದುರ್ಗಾಪೂಜೆ
7. ಏಳನೇದಿನ ಅಥವಾ ಸಪ್ತಮಿಯಂದು – ರಕ್ತಬೀಜ ದುರ್ಗಾಪೂಜೆ
8. ಎಂಟನೇ ಅಥವಾ ಅಷ್ಟಮಿ ದಿನದಂದು – ನಿಶುಂಣ ದುರ್ಗಾಪೂಜೆ
9. ಒಂಬತ್ತನೇ ಅಥವಾ ಮಹಾನವಮಿಯಂದು – ಶುಂಭ ದುರ್ಗಾಪೂಜೆ
ವಿಶೇಷವೇನೆಂದರೆ ಏಳನೇ ದಿನದಂದು ತ್ರಿದಿನ ದುರ್ಗಾಪೂಜೆ ಮಾಡುತ್ತಾರೆ. ಅಂದು ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿಯರನ್ನು ಪೂಜಿಸಲಾಗುತ್ತದೆ. ಆದ್ದರಿಂದ ನವರಾತ್ರಿಯಲ್ಲಿ ಸಪ್ತಮಿಗೆ ವಿಶೇಷ ಸ್ಥಾನವಿದೆ.
ನವರಾತ್ರಿ ಹೇಗೆ ಆರಂಭವಾಯಿತು ಗೊತ್ತಾ..?
* ಶ್ರೀರಾಮನು ರಾವಣನ ಮೇಲೆ ಯುದ್ಧಕ್ಕೆ ತೆರಳುವ ಮುನ್ನ ದುರ್ಗಾ ಮಾತೆಯನ್ನು ಪೂಜಿಸಿ ವರ ಪಡೆದಿದ್ದನೆಂಬ ಕಥೆ ಇದೆ. ಅದರ ಫಲವೆಂಬಂತೆ ರಾವಣನ ಮೇಲೆ ಶ್ರೀ ರಾಮನು ಯುದ್ಧದಲ್ಲಿ ಅಂತಿಮ ಜಯವನ್ನು ತನ್ನದಾಗಿಸಿಕೊಳ್ಳುತ್ತಾನೆ. ಹೀಗಾಗಿ ದುರ್ಗಾಮಾತೆಯ ಕೃಪೆಯಿಂದಲೇ ಶ್ರೀರಾಮನು ಜಯ ಸಾಧಿಸಿದ್ದಾನೆ ಎಂಬುದರ ಸಂಕೇತವಾಗಿ ಉತ್ತರ ಭಾರತದಲ್ಲಿ ನವರಾತ್ರಿಯನ್ನು ಆಚರಿಸಲಾಗುತ್ತದೆ. ಮೈಸೂರಿನಲ್ಲೂ ಒಂಬತ್ತು ದಿನಗಳ ಕಾಲ ನವರಾತ್ರಿಯನ್ನು ಆಚರಿಸಿ ಕೊನೆಯ ದಿನ ವಿಜಯದ ಹಬ್ಬವನ್ನು ಆಚರಿಸಿ ಸಂಭ್ರಮಿಸಲಾಗುತ್ತದೆ.
* ವಿಜಯನಗರ ಸಂಸ್ಥಾನದಲ್ಲೂ ಕೂಡಾ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ನಂತರ ಮೈಸೂರು ಸಂಸ್ಥಾನದ ಒಡೆಯರ ಕಾಲದಲ್ಲಿ ಈ ದಸರಾ ಉತ್ಸವ ಮನೆ ಮನೆಗಳಲ್ಲೂ ಆಚರಿಸುವಂತಾಯಿತು. ದಸರಾ ಹಬ್ಬದ ಸಮಯದಲ್ಲಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಇನ್ನು ಮೈಸೂರು ದಸರಾ ಸಮಯದಲ್ಲಿ ಅರಮನೆಯಲ್ಲಿ ಆಳೆತ್ತರದ ಗೊಂಬೆಗಳನ್ನೂ, ಅರಸರ ವಿವಿಧ ಬಗೆಯ ಸಂಗ್ರಹಗಳನ್ನು ಒಂದು ದೊಡ್ಡ ಬುಟ್ಟಿಯಲ್ಲಿ ಇರಿಸುತ್ತಿದ್ದರಂತೆ. ಹಳೆಯ ಮೈಸೂರು ಪ್ರಾಂತ್ಯದ ಮನೆಗಳಲ್ಲಿ ಗೊಂಬೆ ಕೂರಿಸುವುದು, ಹಂತ ಹಂತವಾಗಿ ಮೆಟ್ಟಿಲುಗಳನ್ನು ನಿರ್ಮಿಸಿ, ಪಟ್ಟದ ಗೊಂಬೆ ಮತ್ತು ಇತರ ಗೊಂಬೆಗಳನ್ನು ಕೂರಿಸುತ್ತಾರೆ. ಇದಕ್ಕೆಂದೇ ಮದುವೆಗಳಲ್ಲಿ ನೂತನ ದಂಪತಿಗಳಿಗೆ ತೇಗ ಅಥವಾ ಚಂದನದ ಮರದಿಂದ ಮಾಡಿದ ಪಟ್ಟದ ಗೊಂಬೆಗಳನ್ನು ನೀಡುತ್ತಾರೆ.
ಏನೇ ಹೇಳಿ ನಮ್ಮ ಮೈಸೂರು ದಸರಾ ಸೊಬಗಿನ ಮುಂದೆ ಯಾವುದೇ ಹಬ್ಬವೂ ಇಲ್ಲ. ಅಂಥ ಸೊಬಗಿನ ಹಬ್ಬ ಇದೀಗ ಬಂದಿದೆ. ಆದ್ದರಿಂದ ಈಗಲೇ ದಸರೆ ಆಚರಿಸಿ, ಇಲ್ಲದಿದ್ದರೆ ಮತ್ತೇ ಒಂದು ವರ್ಷ ಕಳೆಯುವವರೆಗೂ ಅದು ಮರುಕಳಿಸುವುದಿಲ್ಲ.
Like us on Facebook The New India Times