ಹಾಡಿನ ಜಾಡು ಹಿಡಿದು….
||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…! ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ ಹಾಡುಗಳ ಬಗ್ಗೆ ನಾವು ಅಂದುಕೊಂಡಿರೋದೇ ಬೇರೆ, ರಚನೆಕಾರರು ಬರೆಯುವಾಗ ಕಲ್ಪಿಸಿಕೊಂಡಿರೋದೇ ಬೇರೆ ಆಗಿರುತ್ತೆ..!
ನಾವಿಲ್ಲಿ ಕೆಲವೊಂದು ಕನ್ನಡ ಹಾಡುಗಳ ಹುಟ್ಟಿನ ಮೂಲ ಮತ್ತು ರಚನೆಗಾರರು ಯಾವ ಅರ್ಥದಲ್ಲಿ ಬರೆದಿದ್ದಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ…||
ಭಾಗ-2
ಗೆಜ್ಜೆಪೂಜೆ
ಗಗನವೂ ಎಲ್ಲೋ ಭೂಮಿಯೂ ಎಲ್ಲೋ ಒಂದೂ ಅರಿಯೇ ನಾ…! ಸಾಲುಗಳು ಅದ್ಬುತ ಅಲ್ವಾ? ಹೌದು. ಈ ಸುಮಧುರ ಪ್ರೀತಿಯ ಸಾಲುಗಳನ್ನ ಕೇಳ್ತಾ ಇದ್ರೆ, ಪುಟ್ಟಣ್ಣ ಕಣಗಾಲ್ ಅವ್ರ ಗೆಜ್ಜೆಪೂಜೆ ಚಿತ್ರದ ಸನ್ನಿವೇಶ ಕಣ್ಮುಂದೆ ಬಂದು ಹೋಗುತ್ತೆ.
ವೇಶ್ಯೆಯ ಮಗಳಾಗಿದ್ದ ನಾಯಕಿಯನ್ನ ಹೀರೋ ಮನಸಾರೆ ಪ್ರೀತಿಸಿ, ನಿನ್ನೇ ಮದುವೆ ಆಗುವೆ ಎಂದಾಗ, ಅವಳ ಸಂತೋಷಕ್ಕೆ ಪಾರವೇ ಇರಲ್ಲ. ಮನಸ್ಸು ಹಕ್ಕಿಯಂತೆ ತೇಲಿ ಆಕಾಶದಲ್ಲಿ ಹಾರಾಡಬೇಕೆಂಬ ಭಾವ ಬರೋದ್ರಲ್ಲಿ ತಪ್ಪಿಲ್ಲ. ಅಂಥ ನಾಯಕಿಯ ಭಾವನೆಗಳನ್ನ ಮನದುಂಬಿ ಹಾಡಿದ್ದು, ಎಸ್ ಜಾನಕಿ.
ಚಿತ್ರದ ಶೂಟಿಂಗ್ ಆಗ್ಲೆ ಕಂಪ್ಲಿಟ್ ಆಗಿತ್ತು. ಸಿನ್ಮಾದಲ್ಲಿ ಈ ಹಾಡೇ ಇರಲಿಲ್ಲ. ಹೀಗಿದ್ದಾಗ ಒಂದು ದಿನ ರಾತ್ರಿ ಮನೆಯ ಮಹಡಿಯ ಮೆಲೆ ನಿಂತಿದ್ದ ಗೀತರಚನೆಕಾರ ಆರ್.ಎನ್ ಜಯಗೋಪಾಲ್ ಮನೆಯ ಮಹಡಿಯ ಮೇಲೆ ನಿಂತಾಗ, ಥಟ್ ಅಂಥ ಕೆಲ ಸಾಲುಗಳು ಹೊಳೆದ್ವು. ಪುಟ್ಟಣ್ಣ ಅವ್ರಿಗೆ ಕಾಲ್ ಮಾಡಿದ ಜಯಗೋಪಾಲ್, ಒಂದೊಳ್ಳೆ ಹಾಡು ಬರೆದು ಕೊಡ್ತೀನಿ ಸಿನ್ಮಾದಲ್ಲಿ ಯೂಸ್ ಮಾಡ್ಕೊಳಿ ಅಂದ್ರಂತೆ.
ಸ್ವಲ್ಪ ಯೋಚ್ನೆ ಮಾಡಿದ ಪುಟ್ಟಣ್ಣ ಮೊದ್ಲು ಹಾಡು ಬರೀರೀ ನೊಡೋಣ ಅಂದ್ರು. ಕೊನೆಗೂ, ಗಗನವೂ ಎಲ್ಲೋ ಭೂಮಿಯೂ ಎಲ್ಲೋ ಅನ್ನೋ ಮಹಡಿ ಮೇಲೆ ನಿಂತಾಗ ಹೊಳೆದ ಸಾಲುಗಳು ಹಾಡಿನ ರೂಪದಲ್ಲಿ ಇಳಿದು, ವಿಜಯ್ ಭಾಸ್ಕರ್ ಅವ್ರ ಸಂಗೀತಕ್ಕೆ ಆಸರೆಯಾಗಿ ನಿಂತವು. ನಿರ್ಮಾಪಕ ಶಿವರಾಂ ಮತ್ತೆ ಹಾಡಿನ ಶೂಟಿಂಗ್ ಮಾಡೋಕೆ ಒಪ್ಪಲಿಲ್ಲ, ಎಲ್ರೂ ಕಾಡಿ ಬೇಡಿ ಒಪ್ಪಿಸಿ ಹೊಸದಾಗಿ ಹಾಡೊಂದನ್ನ ಶೂಟ್ ಮಾಡಿಸಿದ್ರು. ಈಗ ಯೋಚ್ನೆ ಮಾಡಿದ್ರೆ, ಗಗನವೂ ಎಲ್ಲೋ ಭೂಮಿಯೂ ಎಲ್ಲೋ ಹಾಡಿಲ್ಲದ ಗೆಜ್ಜೆ ಪೂಜೆ ಸಿನ್ಮಾವನ್ನ ಕಲ್ಪನೆ ಮಾಡ್ಕೊಳ್ಳೋಕೂ ಕಷ್ಟ ಅನ್ನುಸುತ್ತೆ. ಹಾಡಿನಿಂದ ಚಿತ್ರದ ಅರ್ಥವೇ ಬದಲಾಗಿ ಹೊಸ ರೂಪ ನೀಡಿದೆ ಅಂದ್ರೆ ತಪ್ಪಾಗಲಾರದು.