ಈ ನಿರೂಪಕಿ ಬೆಂಕಿಯಲ್ಲಿ ಅರಳಿದ ಹೂವು…!

1
255

ಹುಟ್ಟಿದ್ದು ಮಲೆನಾಡಿನ ಪುಟ್ಟಹಳ್ಳಿಯಲ್ಲಿ. ಹುಟ್ಟಿನಿಂದ ಬಳುವಳಿಯಾಗಿ ಬಂದಿದ್ದು ‘ಬಡತನ’. ಆ ದಿನಗಳನ್ನು ಇವರ ಜೀವನದಲ್ಲಿ ಎಂದೂ ಮರೆಯಲಾಗಲ್ಲ…! ಆದರೆ, ಇವರನ್ನು ರೂಪಿಸಿದ್ದೇ ಆ ಕಷ್ಟಗಳು. ಇವರು ಬೆಂಕಿಯಲ್ಲಿ ಅರಳಿದ ಹೂವು.

ಹೌದು, ದಿಗ್ವಿಜಯ ಸುದ್ದಿವಾಹಿನಿಯ ನಿರೂಪಕಿ ಶ್ರೀಲಕ್ಷ್ಮಿ ಅವರ ಲೈಫ್ ಸ್ಟೋರಿ ಇದು. ಕಷ್ಟಗಳನ್ನೇ ಇಷ್ಟವಾಗಿಸಿಕೊಂಡು ಬೆಳೆದು ಬಂದ ಸಾಧಕರು. ಬಡತನದಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವವರಿಗೆ ಇವರು ಸ್ಪೂರ್ತಿ. ಮನೆಯಲ್ಲಿ ಎಷ್ಟೇ ಬಡತನ ಇದ್ರೂ ಆರಂಭದ ದಿನಗಳಲ್ಲಿ ಅದು ಅಷ್ಟೊಂದು ಕಾಡಲಿಲ್ಲ. ಅಪ್ಪ ಎಲ್ಲಾ ಕಷ್ಟಗಳಿಗೂ ಎದೆಯೊಡ್ಡುತ್ತಿದ್ದರು. ಯಾವುದಕ್ಕೂ ಕಡಿಮೆ ಮಾಡಿರ್ಲಿಲ್ಲ. ಬಡತನದ ನಡುವೆಯೂ ಇವರದ್ದು ಸುಖೀ ಸಂಸಾರವಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಬರಸಿಡಿಲು ಬಡಿಯಿತು. ತಂದೆಯ ಅಕಾಲಿಕ ಮರಣ ತಡೆದುಕೊಳ್ಳಲಾಗದ ದೊಡ್ಡ ಆಘಾತವನ್ನು ನೀಡಿತ್ತು…! ಆ ನೋವಿನಲ್ಲೇ ಬೆಳೆದು ಜೀವನ ‘ಸಾಗರ’ದಲ್ಲಿ ಈಜಿದರು.


ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊರಬೈಲು ಎಂಬಲ್ಲಿ ಹುಟ್ಟಿದವರು ಶ್ರೀಲಕ್ಷ್ಮಿ. ತಂದೆ ಮಹಾಬಲ ಗುರು ಭಟ್ಟರು, ತಾಯಿ ನಾಗರತ್ನಮ್ಮ, ಪತಿ ರಾಜಕುಮಾರ್.  ಬಡತನ ಒಂದೆಡೆಯಾದರೆ, ಇನ್ನೊಂದೆಡೆ 6ನೇ ತರಗತಿಯಲ್ಲಿರುವಾಗ ತಂದೆಯನ್ನು ಕಳೆದುಕೊಂಡ ದುಃಖ. ಪ್ರಾಥಮಿಕ ಶಿಕ್ಷಣ, ಪ್ರೌಢಶಿಕ್ಷಣ, ಪಿಯುಸಿಯನ್ನು ಕಷ್ಟದ ನಡುವೆಯೇ ತಾಲೂಕು ಕೇಂದ್ರ ಸಾಗರದಲ್ಲಿ ಪೂರೈಸಿದ್ರು. ಚಿಕ್ಕ ವಯಸ್ಸಿನಿಂದಲೇ ಮನೆಯನ್ನು ಬಿಟ್ಟು ಹಾಸ್ಟೆಲ್‍ನಲ್ಲಿ ಬೆಳೆದರು..! ಪಿಯುಸಿ ನಂತರ ಉಜಿರೆಯ ಎಸ್‍ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ, ಮನಃಶಾಸ್ತ್ರ, ಇಂಗ್ಲಿಷ್ ವಿಷಯದಲ್ಲಿ ಬಿಎ ಪದವಿಯನ್ನು ಪಡೆದರು. ಇದು ಇವರ ಜೀವನದ ಪ್ರಮುಖ ಘಟ್ಟ. ಪತ್ರಿಕೋದ್ಯಮ ವಿಭಾಗದ ಎಚ್‍ಒಡಿ ಭಾಸ್ಕರ ಹೆಗಡೆಯವರ ಪ್ರೋತ್ಸಾಹ ಸಿಕ್ತು. ಇದರಿಂದ ಪತ್ರಿಕೋದ್ಯಮದಲ್ಲಿ ಬದುಕುಕಟ್ಟಿಕೊಳ್ಳಲು ಅವಕಾಶ ಸಿಕ್ಕಂತಾಯ್ತು.
ಪದವಿ ಬಳಿಕ ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದರು. ಇದೇವೇಳೆ ಇದೇ ವಿವಿಯಿಂದ ಪತ್ರಿಕೋದ್ಯಮ ವಿಷಯದಲ್ಲಿ ಪಿಜಿ ಡಿಪ್ಲೋಮೊವನ್ನು ಸಹ ಮಾಡಿದ್ರು.


ತಂದೆಯವರಲ್ಲಿದ್ದ ಓದುವ ಆಸಕ್ತಿ, ಜ್ಞಾನದಾಹ ಇವರಲ್ಲೂ ಇತ್ತು. ಚಿಕ್ಕಂದಿನಿಂದಲೂ ಜ್ಞಾನದ ಹಸಿವು…! ಈ ಹಸಿವೇ ಬಡತನವನ್ನು ಮೀರಿ ಬೆಳೆಯಲು ಪ್ರಮುಖ ಅಸ್ತ್ರವಾಯ್ತು…! ಕಷ್ಟಗಳ ನಡುವೆಯೇ ಮುಂಬೈ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಶ್ರೀಲಕ್ಷ್ಮಿ ಅವರು ಮತ್ತೆಂದೂ ಹಿಂತಿರಿಗಿ ನೋಡಿಲ್ಲ. ಮುಂಬೈಯಿಂದ ಬೆಂಗಳೂರಿಗೆ ಬಂದರು. ಡೆಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನದ ಪ್ರಥಮ ಇನ್ನಿಂಗ್ಸ್ ಶುರುಮಾಡಿದ್ರು. ಆಗ 2009ನೇ ಇಸವಿ.


ಅಲ್ಲಿ ಬದುಕು ಚೆನ್ನಾಗೇ ಇತ್ತು. ಇಂಗ್ಲಿಷ್ ಮಾಧ್ಯಮಗಳಲ್ಲಿ ಸಾಕಷ್ಟು ಅವಕಾಶಗಳೂ ಕೂಡ ಇವರ ಪಾಲಿಗಿದ್ದವು. ಆದರೆ, ಅಲ್ಲಿ ಕೆಲಸ ಮಾಡೋದು ಯಾಕೋ ತೃಪ್ತಿತರಲಿಲ್ಲ…! ‘ನಾನು ಯಾರಿಗೋ ವಿಷಯ ತಲುಪಿಸ್ತಾ ಇದ್ದೀನಿ…! ನಮ್ಮವರಿಗೆ ನಾವು ಬರೆಯುವ ವಿಷಯ ಗೊತ್ತೇ ಆಗಲ್ಲ…! ಮನಸ್ಸಿಗೆ ಹತ್ತಿರವಾಗೋ ಕನ್ನಡ ಮಾಧ್ಯಮಗಳಲ್ಲೇಕೆ ಕೆಲಸ ಮಾಡಬಾರದು’ ಎಂದು ತಮಗೆ ತಾವೇ ಪ್ರಶ್ನೆಯನ್ನು ಹಾಕಿಕೊಂಡರು…! ಇಂಥಾ ಪ್ರಶ್ನೆ ಮೂಡಿದ್ದೇ ತಡ, ಡೆಕನ್ ಹೆರಾಲ್ಡ್ ಗೆ ರಾಜೀನಾಮೆ ಕೊಟ್ಟರು. ಕನ್ನಡದ ಸಮಯ ಸುದ್ದಿವಾಹಿನಿಯಲ್ಲಿ ಕೆಲಸ ಆರಂಭಿಸುವ ಮೂಲಕ ಕನ್ನಡ ಮಾಧ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ರು.


ಸಮಯದಲ್ಲಿ ಇವರ ಪ್ರತಿಭೆ, ಸಾಮಾಥ್ರ್ಯಕ್ಕೆ ಒಳ್ಳೆಯ ಅವಕಾಶಗಳೂ ಸಿಕ್ಕವು. ಹೊಸ ತಂಡದ ಜೊತೆ ಖುಷಿ ಖುಷಿಯಿಂದ ಕೆಲಸ ಮಾಡಿದ್ರು. ನಿರೂಪಕಿಯಾಗಿ ಸಮಯ ಪರದೆಯಲ್ಲಿ ಮಿಂಚಿದ್ರು. ಇವರು ನಡೆಸಿಕೊಡುತ್ತಿದ್ದ ‘ರೀಡಿಂಗ್ ರೂಂ’ ಒಳ್ಳೆಯ ಟಿಆರ್‍ಪಿ ತಂದುಕೊಡ್ತಿತ್ತು. ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ರು. ಡಾ. ಪರಮೇಶ್ವರ ಹೆಗಡೆ, ಆರ್ .ಕೆ ಶ್ರೀಕಂಠನ್, ನಾಗರಾಜ್ ಹವಲ್ದಾರ್ ಅವರನ್ನು ಕೂರಿಸಿಕೊಂಡು ಭೀಮಸೇನ್ ಜೋಷಿ ಅವರ ಬಗ್ಗೆ ಸತತ 3 ಗಂಟೆಗಳ ಕಾಲ ನಡೆಸಿಕೊಟ್ಟ ಕಾರ್ಯಕ್ರಮ ಸ್ಮರಣೀಯ. ಬಾಬಾ ರಾಮ್‍ದೇವ್ ಸಂದರ್ಶನ ಸೇರಿದಂತೆ ಅನೇಕರ ಸಂದರ್ಶನವನ್ನು ಮಾಡಿದ್ರು.

ಸುಮಾರು ಎರಡುವರೆ ವರ್ಷಗಳ ನಂತರ ಸಮಯ ಬಿಟ್ಟು ಜನಶ್ರೀ ಕಡೆ ಹೊರಟರು. ಅಲ್ಲಿ ಅನಂತ ಚಿನಿವಾರ ಅವರಿಂದ ಒಳ್ಳೆಯ ಪ್ರೋತ್ಸಾಹ ಸಿಕ್ತು. ನಾನೂ ಕೂಡ ಪೊಲಿಟಿಕಲ್ ಡಿಬೇಟ್ ಮಾಡಬಲ್ಲೆ ಎನ್ನುವುದು ಗೊತ್ತಾಯ್ತು. ವಿಭಿನ್ನ ಕಾರ್ಯಕ್ರಮಗಳನ್ನು ನೀಡಿದ್ರು. ‘ಒಳಸುಳಿ’, ‘ದಿಕ್ಕುದೆಸೆ’ ಕಾರ್ಯಕ್ರಮಗಳು ಸೂಪರ್ ಹಿಟ್ ಆದವು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಯು.ಆರ್ ಅನಂತಮೂರ್ತಿಯವರ ಸಂದರ್ಶನ ನಡೆಸಿಕೊಟ್ಟರು. ಹೀಗೆ ನಾನಾ ರೀತಿಯ ಚರ್ಚೆ, ಸಂದರ್ಶನ, ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡು ಸದ್ದಿಲ್ಲದೆ ಕನ್ನಡಿಗರ ಮನೆ, ಮನಸ್ಸನ್ನು ತಲುಪಿದ್ರು.


ಮತ್ತೆ ಎರಡುವರೆ ವರ್ಷದ ನಂತ್ರ ಜನಶ್ರೀಯನ್ನು ಬಿಡಬೇಕಾಯಿತು. ಮಗ ಹುಟ್ಟಿದ್ರಿಂದ 2 ವರ್ಷ ಬ್ರೇಕ್ ತಗೊಂಡ್ರು. (ಮಗ ಸನ್ಮಿತ್ರನಿಗೆ ಈಗ 2.5 ವರ್ಷ). ಮತ್ತೆ ಕೆಲಸಕ್ಕೆ ಹೋಗಬೇಕು ಅಂತ ಡಿಸೈಡ್ ಮಾಡಿದಾಗ ವಿಆರ್‍ಎಲ್‍ನ ದಿಗ್ವಿಜಯ ಕೈಬೀಸಿ ಕರೆಯಿತು…! 2016ರಲ್ಲಿ ದಿಗ್ವಿಜಯ ಲಾಂಚ್ ಆಗುವ ಮುನ್ನವೇ ವಿಆರ್‍ಎಲ್ ಕುಟುಂಬ ಸೇರಿದ್ರು. ದಿಗ್ವಿಜಯದಲ್ಲಿ ಡಿಬೇಟ್‍ನಲ್ಲಿ ನೀವು ಇವರನ್ನು ನೋಡ್ತಿರ್ತೀರಿ. ರಾತ್ರಿ ನ್ಯೂಸ್ ಔಟ್ ಲುಕ್‍ನಲ್ಲೂ ಇವರನ್ನು ಕಾಣ್ತೀವಿ.


ಇವರು ಇವತ್ತು ಜನಪ್ರಿಯ ನಿರೂಪಕಿಯರಲ್ಲಿ ಒಬ್ಬರು. ಆದ್ರೆ, ಪತ್ರಿಕೋದ್ಯಮಕ್ಕೆ ಎಂಟ್ರಿಕೊಟ್ಟ ಆರಂಭದಲ್ಲಿ ನಾನು ನಿರೂಪಕಿ ಆಗಲು ಸಾಧ್ಯವೇ ಇಲ್ಲ ಎಂಬ ಭಾವನೆ ಇವರಲ್ಲಿ ಮೂಡಿತ್ತಂತೆ…! ಕಾರಣ ಕೆಲವೊಂದು ಹಿರಿತಲೆಗಳು…! ‘ನೀನು ನಿರೂಪಕಿ ಆಗಲು ಸಾಧ್ಯವೇ ಇಲ್ಲ’ ಎಂದು ಪುಕ್ಕಟೆ ಭವಿಷ್ಯ ನುಡಿದು ಬಿಟ್ಟಿದ್ರಂತೆ ಮಾಧ್ಯಮದಲ್ಲಿ ದೊಡ್ಡವರು ಎನಿಸಿಕೊಂಡಿದ್ದ ಪುಣ್ಯಾತ್ಮರು…! ಆದರೆ, ಇವತ್ತು…? ಮನಸ್ಸಿದ್ರೆ ಖಂಡಿತಾ ಮಾರ್ಗ ಇದ್ದೇ ಇದೆ. ಅಸಾಧ್ಯವಾದುದು ಯಾವುದೂ ಇಲ್ಲ ಅನ್ನೋದಕ್ಕೆ ಶ್ರೀಲಕ್ಷ್ಮಿ ಅವರಿಗಿಂತ ಬೇರೆ ಉದಾಹರಣೆ ಬೇಕೆ…?


ಸಾಧಿಸುವ ಛಲ ಇದ್ರೆ ಏನ್ ಬೇಕಾದ್ರು ಮಾಡಬಹುದು. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡೋರಿಗೆ ಪಾಸಿಟಿವಿಟಿ ಮುಖ್ಯ. ಕೆಲಸದಲ್ಲಿ ಪಾಸಿಟಿವಿಟಿ ಇರಬೇಕು. ಸಮಾಜವನ್ನು ನಾವು ಪಾಸಿಟೀವ್ ಆಗಿ ನೋಡಿದ್ರೆ, ಸಮಾಜ ಕೂಡ ನಮ್ಮನ್ನು ಹಾಗೆಯೇ ಕಾಣುತ್ತೆ. ಛಲ. ಆತ್ಮವಿಶ್ವಾಸವೇ ಯಶಸ್ಸಿನ ಮೂಲ. ಬೇರೆ ಕ್ಷೇತ್ರದಂತೆ ಮಾಧ್ಯಮವಲ್ಲ. ಇಲ್ಲಿ ನಿತ್ಯ ಅಪ್ ಡೇಟ್ ಆಗ್ತಾನೇ ಇರಬೇಕು ಅಂತಾರೆ .

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

10 ನವೆಂಬರ್ 2017 : ಈಶ್ವರ್ ದೈತೋಟ

11 ನವೆಂಬರ್ 2017 : ಭಾವನ

12  ನವೆಂಬರ್ 2017 : ಜಯಶ್ರೀ ಶೇಖರ್

13 ನವೆಂಬರ್ 2017 : ಶೇಷಕೃಷ್ಣ

14 ನವೆಂಬರ್ 2017 : ಶ್ರೀಧರ್ ಶರ್ಮಾ

15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

16 ನವೆಂಬರ್ 2017 : ಅರವಿಂದ ಸೇತುರಾವ್

17 ನವೆಂಬರ್ 2017 : ಲಿಖಿತಶ್ರೀ

18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

19 ನವೆಂಬರ್ 2017 : ಅಪರ್ಣಾ

20 ನವೆಂಬರ್ 2017 :  ಅಮರ್ ಪ್ರಸಾದ್

21 ನವೆಂಬರ್ 2017 :   ಸೌಮ್ಯ ಮಳಲಿ

22 ನವೆಂಬರ್ 2017 :  ಅರುಣ್ ಬಡಿಗೇರ್

23ನವೆಂಬರ್ 2017 :  ರಾಘವ ಸೂರ್ಯ

24ನವೆಂಬರ್ 2017 :  ಶ್ರೀಲಕ್ಷ್ಮಿ

 

1 COMMENT

LEAVE A REPLY

Please enter your comment!
Please enter your name here