ಇವರು ಮೊದಲ ಬಾರಿ ಆನ್ ಸ್ಕ್ರೀನ್ ಬಂದಾಗ ಇವರ ಊರಿನವರಿಗೆ ನಂಬೋಕೆ ಆಗಿರ್ಲಿಲ್ಲ. ಯಾಕಂದ್ರೆ ಇವರು ತುಂಬಾ ಸಾಫ್ಟ್. ಮಾತು ಕಡಿಮೆ…! ಮನೆಬಿಟ್ಟು ಯಾವತ್ತೂ ಹೊರಗಡೆ ಹೋದವರಲ್ಲ…! ನೆಂಟರಿಷ್ಟರ ಮನೆಗೆ ಹೋಗುವುದು ಪೋಷಕರ ಜೊತೆ ಮಾತ್ರ. ಹೀಗಿದ್ದ ಹುಡುಗಿ ಇದ್ದಕ್ಕಿದ್ದಂತೆ ಟಿವಿ ಪರದೆಯಲ್ಲಿ ಬಂದು ಪಟಪಟ ಮಾತಾಡಿದ್ರೆ ಹೇಗಿರುತ್ತೆ…? ನಿರೂಪಕಿ ಶ್ವೇತಾ ಆಚಾರ್ಯ ಅವರ ಊರವರಿಗೆ, ಸಂಬಧಿಕರಿಗೆ, ಕುಟುಂಬದವರಿಗೆ ಇಂಥಾ ಅನುಭವವಾಗಿದೆ…!
ಶ್ವೇತಾ ಆಚಾರ್ಯ, ಸದ್ಯ ಸುವರ್ಣ 24*7ನಲ್ಲಿ ನ್ಯೂಸ್ ಪ್ರೆಸೆಂಟರ್ ಆಗಿರೋ ಇವರನ್ನು ನೀವೆಲ್ಲಾ ಟಿವಿ ಪರದೆಯಲ್ಲಿ ಎಷ್ಟೋ ಸಲ ನೋಡಿದ್ದೀರಿ, ನೋಡ್ತಿರ್ತೀರಿ. ಇವರ ಮಾತು, ಸುದ್ದಿ ಓದುವ ಶೈಲಿ ಸೂಪರ್…! ಆದ್ರೆ, ನಿಮಗೆ ಗೊತ್ತಾ..? ಇವರು ಕ್ಯಾಮೆರಾ ಮುಂದೆ ಮಾತ್ರ ಸಿಕ್ಕಾಪಟ್ಟೆ ಮಾತಾಡೋದು, ಇವರು ಗಂಟೆಗಟ್ಟಲೆ ಮಾತಾಡಬೇಕು ಅಂತಾದ್ರೆ ಕ್ಯಾಮೆರ ಆನ್ ಇರಬೇಕು…! ಅಂದ್ರೆ, ಇವರು ಹೊರಗಡೆ ಮಾತಾಡೋದು ತುಂಬಾ ಕಮ್ಮಿ. ಎಷ್ಟು ಬೇಕೋ ಅಷ್ಟು ಮಾತಾಡ್ತಾರೆ. ಎಲ್ಲರೊಂದಿಗೂ ಖುಷಿ ಖುಷಿಯಿಂದ ಕಾಲಕಳೆಯೋದು ಇವರಿಗಿಷ್ಟ. ಇವರಂತೂ ಯಾರ ಮನಸ್ಸನ್ನು ನೋಯಿಸೋಕೆ ಚಾನ್ಸೇ ಇಲ್ಲ…! ಇವರಿಗೆ ಯಾರಾದ್ರು ನೋವುಂಟು ಮಾಡಿದರೂ ಅವರನ್ನು ದ್ವೇಷಿಸುವ ಗುಣ ಇವರದ್ದಲ್ಲ…! ತುಂಬಾ ಸಾಫ್ಟ್, ಮಿತಭಾಷಿ, ಸಹೃದಯಿ.
ಶ್ವೇತಾ ಆಚಾರ್ಯ ಹುಟ್ಟಿ ಬೆಳೆದಿದ್ದು ಶಿರಸಿಯಲ್ಲಿ. ನಂತರ ಕುಟುಂಬದೊಡನೆ ಬಟ್ಕಳದಲ್ಲಿ ವಾಸ. ಶಿರಸಿಯಲ್ಲೇ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಿಕ್ಷಣವನ್ನು ಪಡೆದಿದ್ದಾರೆ. ಇವರ ತಂದೆ ಗೋವಿಂದರಾಯ್, ತಾಯಿ ಪ್ರೇಮ, ಪತಿ ದಿಲೀಪ್. ಇವರು ಕೂಡ ಪತ್ರಕರ್ತ. ಸುವರ್ಣ ವಾಹಿನಿಯಲ್ಲಿ ಔಟ್ ಪುಟ್ ಹೆಡ್ ಆಗಿ ಕೆಲಸ ಮಾಡ್ತಿದ್ದಾರೆ.
ಶ್ವೇತಾ ಅವರಿಗೆ ಪಿಯುಸಿ ಮುಗಿದ ಬಳಿಕ ಮೀಡಿಯಾದಲ್ಲಿ ಕೆಲಸ ಮಾಡುವ ಅವಕಾಶ ಒದಗಿಬಂತು. ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವ ಉದ್ದೇಶದಿಂದ ಮುಂದಿನ ವಿದ್ಯಾಭ್ಯಾಸವನ್ನು ಬಿಟ್ಟು, ಮಾಧ್ಯಮ ಪ್ರಪಂಚದ ಪ್ರಜೆಯಾದ್ರು. ನಂತರದಲ್ಲಿ ಮುಕ್ತವಿವಿಯಿಂದ ಬಿಎ ಪದವಿಯನ್ನು ಪಡೆದರು.
ಇವರು ನಾಲ್ಕು ಜನ ಅಕ್ಕ-ತಂಗಿಯರು. ಮನೆಯಲ್ಲಿ ಇವರೇ ಹಿರಿಯರು ಆಗುದ್ದರಿಂದ ಹೆಚ್ಚಿನ ಜವಬ್ದಾರಿ ಇವರ ಮೇಲಿತ್ತು. ಪಿಯುಸಿ ಮುಗಿದ ಮೇಲೆ ಬಟ್ಕಳದಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ರು. ಹೀಗಿರುವಾಗ ಯು2 ಚಾನಲ್‍ಗೆ ಹೊಸಮುಖಗಳು ಬೇಕಾಗಿದೆ ಎಂಬ ವಿಷ್ಯ ತಿಳಿತು. ಕೂಡಲೇ ಶ್ವೇತಾ ಅಪ್ಲಿಕೇಶನ್ ಹಾಕಿದ್ರು, ಇಂಟರ್ ವ್ಯೂ ಆಯ್ತು, ಸೆಲೆಕ್ಟ್ ಕೂಡ ಆದ್ರು. ಆದರೆ, ಯು2ಗೆ ಸೇರೋದು ತಡವಾಗಿದ್ದರಿಂದ ಉದಯ ಎಂಟರ್‍ಟೈನ್ಮೆಂಟ್‍ನಲ್ಲಿ ಕೆಲಸ ಮಾಡಿದ್ರು. ಮೊದಲೇ ಹೇಳಿದಂತೆ ಇವರು ಫಸ್ಟ್ ಟೈಮ್ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಾಗ ಈ ಮೊದಲೇ ಹೇಳಿದಂತೆ ಊರವರಿಗೆ ನಂಬೋಕೆ ಆಗಿರ್ಲಿಲ್ಲ.
ಅದೇನೇ ಇರಲಿ, ಹೀಗೆ 2006ರಲ್ಲಿ ಉದಯ ಟಿವಿ ಮೂಲಕ ಮಾಧ್ಯಮ ರಂಗ ಪ್ರವೇಶಿಸಿದ ಶ್ವೇತಾ ಅವರಿಗೆ, ಉದಯ ಟಿವಿಯಲ್ಲಿ ಅಂದು ಪ್ರೋಗ್ರಾಂ ಹೆಡ್ ಆಗಿದ್ದ ಶಿವಕುಮಾರ್ ಸರ್ ತುಂಬಾನೇ ಪ್ರೋತ್ಸಾಹ ನೀಡಿದ್ರು. ನಿರೂಪಣೆಯ ಬಗ್ಗೆ ಪರಿಚಯವೇ ಇರದ ಶ್ವೇತಾ ಕೆಲವೇ ದಿನಗಳಲ್ಲಿ ಪರಿಪಕ್ವ ನಿರೂಪಕಿಯಾಗಿ ಬೆಳೆದರು. ಉದಯ ಟಿವಿಯಲ್ಲಿ ಇವರು ನಡೆಸಿಕೊಡುತ್ತಿದ್ದ ‘ವಂಡರ್ ಲಾ- ನಿಮ್ಮಿಂದ ನಿಮಗಾಗಿ’, ‘ಹೃದಯದಿಂದ’ ಎಂಬ ಕಾರ್ಯಕ್ರಮಗಳನ್ನು ಮರೆಯಲಾದೀತೆ..?”
ಎರಡು ವರ್ಷಗಳ ಕಾಲ ಉದಯದಲ್ಲಿ ಕೆಲಸ ಮಾಡಿ ನಂತರ 2008ರಲ್ಲಿ ಈ ಟಿವಿ ಕಡೆ ಬಂದ್ರು. ಇಲ್ಲಿ ಜ್ಯೋತಿಷ್ಯ, ಸಿನಿಮಾಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಇಲ್ಲೊಂದೆರಡು ವರ್ಷ ಕೆಲಸ ಮಾಡಿ, 2010ರಲ್ಲಿ ಸುವರ್ಣ ಕುಟುಂಬ ಸೇರಿದ್ರು. ಸುವರ್ಣದಲ್ಲಿ ‘ಸುವರ್ಣ ಗರ್ಲ್ಸ್’ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಶ್ವೇತಾ ಆಚಾರ್ಯ ತಂಡದ ಭಾಗವಾಗಿದ್ದರು. ಸುವರ್ಣ ಮೂಲಕ ನ್ಯೂಸ್ ರೀಡರ್ ಆಗಿ ಹೊಸ ಸವಾಲು ಸ್ವೀಕರಿಸಿದ್ರು.
ಸುವರ್ಣ ನಂತರ ಜನಶ್ರೀಯಲ್ಲಿ ಕೆಲಸ ಮಾಡಿ, ಬಳಿಕ ಮತ್ತೊಂದು ಎರಡು ವರ್ಷ ಸಮಯ ಟಿವಿಯಲ್ಲಿ ಕಾರ್ಯ ನಿರ್ವಹಿಸಿದ್ರು. ‘ಉದಯ ಮಾಧ್ಯಮಕ್ಕೆ ಬರಲು ವೇದಿಕೆ ಕಲ್ಪಿಸಿತು. ಸುವರ್ಣ ಮೂಲಕ ನ್ಯೂಸ್ ಪ್ರೆಸೆಂಟರ್ ಆಗಿ ರೂಪುಗೊಂಡೆ, ಸಮಯದಲ್ಲಿ ನನ್ನ ಸಾಮರ್ಥ್ಯ, ತನ್ನೊಳಗಿನ ಶಕ್ತಿಯನ್ನು ಸಾಭೀತುಪಡಿಸಲು ಸಾಧ್ಯವಾಯಿತು. ಸುವರ್ಣದಲ್ಲಿ ರವಿಹೆಗ್ಡೆ ಸರ್ ತುಂಬಾ ಪ್ರೋತ್ಸಾಹ ನೀಡಿದ್ರು, ಸಮಯದಲ್ಲಿ ಜಯಪ್ರಕಾಶ್ ಶೆಟ್ಟಿ ಸರ್, ಭೂಷಣ್ ಸರ್ ಅವರಿಂದ ಉತ್ತಮ ಮಾರ್ಗದರ್ಶನ ಪಡೆದೆ. ಅಲ್ಲಿ ಒಳ್ಳೆಯ ಅವಕಾಶಗಳು ಸಿಕ್ತು ಎಂದು ಸ್ಮರಿಸಿಕೊಳ್ತಾರೆ ಶ್ವೇತಾ ಆಚಾರ್ಯ.
ಈಗ ಮತ್ತೆ ಇದೇ ನವೆಂಬರ್ ನಿಂದ ಸುವರ್ಣ ಬಳಗಕ್ಕೆ ವಾಪಾಸ್ಸಾಗಿದ್ದಾರೆ. ನಿರೂಪಕಿ, ನ್ಯೂಸ್ ರೀಡರ್ ಆಗಿರುವುದರ ಜೊತೆಗೆ ಇವರು ಕಿರುತೆರೆಯ ನಟಿ ಕೂಡ ಹೌದು. ‘ಶುಭಮಂಗಳ’, ‘ಕದನ’ ಮೊದಲಾದ ಧಾರವಾಹಿಗಳಲ್ಲಿ ನಟಿಸಿದ್ದಾರೆ. ನಂತರ ಯಾವುದಾದರು ಒಂದರಲ್ಲೇ ಮುಂದುವರೆಯೋಣ ಎಂದು ಸೀರಿಯಲ್ ಲೋಕದಿಂದ ಸ್ವಲ್ಪ ದೂರ ಉಳಿದು ಮೀಡಿಯಾದಲ್ಲಿ ತನ್ನನ್ನು ತಾನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ನಾನಾ ಸಂಘ ಸಂಸ್ಥೆಗಳಿಂದ ಬೆಸ್ಟ್ ಆ್ಯಂಕರ್ ಅವಾರ್ಡ್, ವಿಶ್ವಕರ್ಮ ಕಲಾರತ್ನ ಪ್ರಶಸ್ತಿ ಸೇರಿದಂತೆ ನಾನಾ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಪತ್ರಕರ್ತರ ಸಂಘ ಸೇರಿದಂತೆ ಹತ್ತಾರು ಸಂಘಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿದ್ದಾರೆ.
ಜಾನಪದ ನೃತ್ಯ ಅಂದ್ರೆ ಇವರಿಗೆ ತುಂಬಾ ಇಷ್ಟ. ಶಿರಸಿಯ ಸುಪ್ರಸಿದ್ಧ ಮಾರಿಕಾಂಬ ಜಾತ್ರೆ ಕಾರ್ಯಕ್ರಮ ಸೇರಿದಂತೆ ಅನೇಕ ಕಡೆಗಳಲ್ಲಿ ಜಾನಪದ ನೃತ್ಯಕ್ಕೆ ಬಹುಮಾನ ಪಡೆದಿದ್ದಾರೆ. ಎಲ್ಲಾ ಕಡೆ ತುಳಿಯುವವರು ಇದ್ದೇ ಇರುತ್ತಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳದೆ ನಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ರೆ ಯಶಸ್ಸು ನಮ್ಮದಾಗುತ್ತೆ. ಈಗ ಮೀಡಿಯಾಕ್ಕೆ ಬರುತ್ತಿರುವ ಹೊಸಮುಖಗಳನ್ನು ಕಂಡ್ರೆ ತುಂಬಾ ಖುಷಿ ಆಗುತ್ತೆ. ಅವರಿಗೆ ಕಲಿಕೆ ಆಸಕ್ತಿಯಿದೆ ಎನ್ನುತ್ತಾರೆ ಶ್ವೇತಾ ಆಚಾರ್ಯ.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
10 ನವೆಂಬರ್ 2017 : ಈಶ್ವರ್ ದೈತೋಟ
11 ನವೆಂಬರ್ 2017 : ಭಾವನ
12 ನವೆಂಬರ್ 2017 : ಜಯಶ್ರೀ ಶೇಖರ್
13 ನವೆಂಬರ್ 2017 : ಶೇಷಕೃಷ್ಣ
14 ನವೆಂಬರ್ 2017 : ಶ್ರೀಧರ್ ಶರ್ಮಾ
15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
16 ನವೆಂಬರ್ 2017 : ಅರವಿಂದ ಸೇತುರಾವ್
17 ನವೆಂಬರ್ 2017 : ಲಿಖಿತಶ್ರೀ
18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
19 ನವೆಂಬರ್ 2017 : ಅಪರ್ಣಾ
20 ನವೆಂಬರ್ 2017 : ಅಮರ್ ಪ್ರಸಾದ್
21 ನವೆಂಬರ್ 2017 : ಸೌಮ್ಯ ಮಳಲಿ
22 ನವೆಂಬರ್ 2017 : ಅರುಣ್ ಬಡಿಗೇರ್
23ನವೆಂಬರ್ 2017 : ರಾಘವ ಸೂರ್ಯ
24ನವೆಂಬರ್ 2017 : ಶ್ರೀಲಕ್ಷ್ಮಿ
25ನವೆಂಬರ್ 2017 : ಶಿಲ್ಪ ಕಿರಣ್
26ನವೆಂಬರ್ 2017 : ಸಮೀವುಲ್ಲಾ
27ನವೆಂಬರ್ 2017 : ರಮಾಕಾಂತ್ ಆರ್ಯನ್
28ನವೆಂಬರ್ 2017 : ಮಾಲ್ತೇಶ್
29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]