ಹಾಡಿನ ಜಾಡು ಹಿಡಿದು….
||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…! ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ ಹಾಡುಗಳ ಬಗ್ಗೆ ನಾವು ಅಂದುಕೊಂಡಿರೋದೇ ಬೇರೆ, ರಚನೆಕಾರರು ಬರೆಯುವಾಗ ಕಲ್ಪಿಸಿಕೊಂಡಿರೋದೇ ಬೇರೆ ಆಗಿರುತ್ತೆ..!
ನಾವಿಲ್ಲಿ ಕೆಲವೊಂದು ಕನ್ನಡ ಹಾಡುಗಳ ಹುಟ್ಟಿನ ಮೂಲ ಮತ್ತು ರಚನೆಗಾರರು ಯಾವ ಅರ್ಥದಲ್ಲಿ ಬರೆದಿದ್ದಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ…||
ಭಾಗ-21
ಹೊಸಬೆಳಕು
ಪಾಕಿಸ್ತಾನದ ಗಜಲ್ ಗಾಯಕ ಮೆಹದಿ ಹಸನ್ ಅಂದ್ರೆ ಕನ್ನಡ ಕಂಠೀರವ ಡಾ| ರಾಜ್‍ಕುಮಾರ್ ಅವ್ರಿಗೆ ತುಂಬಾನೆ ಇಷ್ಟ ಅದ್ರಲ್ಲೂ ಅವ್ರ ಗಜಲ್‍ಗಳು ಅಂದ್ರ ಮುಂದೆ ಬಿದ್ದು ಕೇಳ್ತಾ ಇದ್ರು. ಮೆಹದಿ ಅವ್ರ ಗಜಲ್‍ಗಳ 50 ಕ್ಕೂ ಹೆಚ್ಚು ಕ್ಯಾಸೆಟ್‍ಗಳು ರಾಜ್ ಬಳಿ ಇದ್ವು. ಇನ್ನು ಮುಂದೆ ಹೊಸಬೆಳಕು ಚಿತ್ರದ ಚರ್ಚೆ ಶುರುವಾಗಿತ್ತು. ಮಧ್ಯದ ಬಿಡುವಿನ ವೇಳೆಯಲ್ಲಿ ರಾಜ್ ಮೆಹದಿ ಅವ್ರ ಗಜಲ್‍ಗಳನ್ನ ಕೆಳ್ತಾ ಇದ್ರು. ಆಗ ಒಂದೆರಡು ಭಾವುಕತೆ ಮಾತುಗಳು ರಾಜಣ್ಣ ಅವ್ರ ಬಾಯಿಂದ ಬಂದವು. ಅದಕ್ಕೆ ಪಕ್ಕದಲ್ಲಿದ್ದ ಚಿ.ಉದಯಶಂಕರ್ ತಕ್ಷಣವೇ, ನೀವು ತುಂಬಾ ಸೆಂಟಿಮೆಂಟಲ್ ಆಗ್ಬಿಟ್ರಿ ಅಂತ ಹೇಳಿದ್ರಂತೆ.
ಆಗ ಮಾತಾಡಿದ ರಾಜ್, ಹಾಸನ್ ಸಾಹೇಬರ ಹಾಡುಗಳು ಹಾಗಿವೆ. ಕೆಳ್ತಾ ಇದ್ರೆ, ಭಾಷೆ ತಿಳಿಯದಿದ್ರು ಕಣ್ಣೀರು ಬರತ್ತೆ ಅಂದ್ರು. ಜೊತೆಗೆ ಅದೇ ತರಹದ ಹಾಡನ್ನ ನಮ್ ಸಿನ್ಮಾದಲ್ಲೂ ಬಳಸೋಣ ಅಂದ್ರಂತೆ. ಚಿತ್ರದಲ್ಲಿ ನಾಯಕ ಕುರುಡನಾದಾಗ, ಅದನ್ನ ನೋಡಿ ನಾಯಕಿ ಕಣ್ಣೀರು ಹಾಕುವಾಗ ನಾಯಕ ಸಮಾಧಾನ ಮಾಡುವಾಗ ಹಾಡನ್ನ ಬಳಸೋಣ ಅಂದ್ರಂತೆ. ಆಗ ಸರ್ವಜ್ಞನ ವಚನಗಳ ಬಗ್ಗೆಯೂ ಪ್ರಸ್ತಾಪ ಬಂತು. ಒಂದೆರಡು ಸರ್ವಜ್ಞನ ಪದಗಳನ್ನ ಭಾವಪೂರ್ಣವಾಗಿ ಹಾಡಿ ತೊರಿಸಿದರಂತೆ ರಾಜ್‍ಕುಮಾರ್. ಆಗಲೇ ಹುಟ್ಟಿದ್ದು, ಕಣ್ಣೀರಧಾರೆ ಇದೇಕೆ ಇದೇಕೆ…
ಆಮೇಲೆ ಹಾಡಿನ ರೆಕಾರ್ಡಿಂಗ್ ನಡೆಯೋವರೆಗೂ ರಾಜಣ್ಣ ಆವಾಗಾವಾಗ ಈ ಹಾಡು ಹಾಡ್ತಾ ಭಾವುಕರಾಗಿ ಕಣ್ಣಲ್ಲಿ ಹನಿ ನೀರೂ ಬರ್ತಾ ಇತ್ತಂತೆ. ಇಂತಹ ಕಾಡುವ ಹಾಡುಗಳಿಗೆ ಒಂದು ಕಲೆ ರಹಿತ ಕನ್ನಡಿ ಹಿಡಿದ್ರೆ ಅದ್ಬುತವಾದ ಕತೆ ಸಿಗೋದು ಮಾತ್ರ ಸುಳ್ಳಲ್ಲ.