ಉತ್ತರಾಖಂಡದ ಶಾಯಿರಾ ಬಾನುಗೆ 2002ರಲ್ಲಿ ರಿಜ್ವಾನ್ ಅಹ್ಮದ್ ಎಂಬಾತನ ಜತೆ ಮದುವೆಯಾಗಿತ್ತು. ಮದುವೆಯಾದ ನಂತರ ಗಂಡನ ಜತೆಗೆ ಅಲಹಾಬಾದ್ಗೆ ಬಂದರು. ಹೊಸ ನಗರ, ಹೊಸ ಜನರಿಗೆ ಹೊಂದಿಕೊಳ್ಳುವುದರ ಜತೆಗೆ ಶಾಯಿರಾ ಕಿರುಕುಳಕ್ಕೂ ಒಗ್ಗಿಕೊಳ್ಳಬೇಕಾಯಿತು. ಸುಮಾರು ಒಂದು ದಶಕಗಳ ಕಾಲ ಗಂಡ ಮತ್ತು ಮನೆಯವರು ವರದಕ್ಷಿಣೆ ಬೇಡಿಕೆಯಿಟ್ಟು ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟರು. 2015ರಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಶಾಯಿರಾ ಅವರನ್ನು ತವರು ಮನೆಯವರು ಕರೆದುಕೊಂಡು ಹೋದರು. ಕೆಲವು ತಿಂಗಳ ನಂತರ ಗಂಡ ರಿಜ್ವಾನ್ ಶಾಯಿರಾಗೆ ತಲಾಕ್ ಕೊಟ್ಟ.
ಗಂಡನ ದೌರ್ಜನ್ಯವನ್ನು ಸಹಿಸಿಕೊಂಡಿದ್ದ ಶಾಯಿರಾಗೆ ತ್ರಿವಳಿ ತಲಾಖ್ ಎಂಬ ದೌರ್ಜನ್ಯವನ್ನು ಸಹಿಸಿಕೊಳ್ಳುವುದು ಕಷ್ಟವಾಗಿತ್ತು. ಹೀಗಾಗಿ ಕುಟುಂಬದ ಬೆಂಬಲದೊಂದಿಗೆ ಸುಪ್ರೀಂ ಕೋರ್ಟ್ಗೆ ಹೋದರು. ಪ್ರಕರಣ ದೇಶದಾದ್ಯಂತ ಚರ್ಚೆಯಾಗಿ ಅಂತಿಮಘಟ್ಟವನ್ನು ತಲುಪಿತ್ತು. ಶಾಯಿರಾ, ತಲಾಖ್, ನಿಕಾಹ್ ಹಲಾಲ್, ಬಹುಪತ್ನಿತ್ವ, ಧರ್ಮ, ಜಾತಿ, ಲಿಂಗದ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ನಿಷೇಧಿಸಿ ಎಂದು ಕೋರ್ಟ್ನಲ್ಲಿ ಮನವಿ ಮಾಡಿದರು. ಗಂಡನ ದೌರ್ಜನ್ಯವನ್ನೂ ಸಹಿಸಿಯೂ ಜೀವನ ನಡೆಸುತ್ತಿದ್ದ ನನಗೆ, ತ್ರಿವಳಿ ತಲಾಕ್ಎಂಬ ಸುಲಭ ಮಾರ್ಗದಲ್ಲಿ ನನ್ನನ್ನು ಕೆಡವಿದ್ದಾನೆ. ನನಗೆ ಮಾತ್ರವಲ್ಲ ಇಸ್ಲಾಂನ ಹೆಣ್ಣುಮಕ್ಕಳ್ಯಾರು ಇಂತಹ ಸಂಕಷ್ಟಕ್ಕೆ ಒಳಗಾಗಬಾರದು ಎಂದು ಬೇಡಿಕೊಂಡರು. ಶಾಯಿರಾಗೆ ಹಿಂದೂ ಸಂಘಟನೆಗಳು ಸೇರಿದಂತೆ, ಹಲವು ಮುಸಲ್ಮಾನ ಪ್ರಗತಿಪರರು ಬೆಂಬಲ ಸೂಚಿಸಿದ್ದರು.
ತಲಾಕ್ ಜತೆಗೆ ಏಕರೂಪ ನಾಗರಿಕ ಸಂಹಿತೆಯೂ ಚರ್ಚೆಗೀಡಾಯಿತು. ರಾಷ್ಟ್ರೀಯ ಕಾನೂನು ಆಯೋಗವು ಏಕರೂಪದ ನಾಗರಿಕ ಸಂಹಿತೆ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಲು ಆರಂಭಿಸಿತ್ತು. ತಲಾಖ್ನ ಮೌಲ್ಯ, ಸುಪ್ರೀಂ ಕೋರ್ಟ್ ನೀಡಬಹುದಾದ ತೀರ್ಪು ಮತ್ತು ಏಕರೂಪ ನಾಗರಿಕ ಸಂಹಿತೆ ಎರಡೂ ಧರ್ಮದ ಮೇಲೆ ಸರ್ಕಾರದ ಅತಿಕ್ರಮಣ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿತ್ತು. ಮಣಿಪುರದ ರಾಜ್ಯಪಾಲರಾದ ನಜ್ಮಾ ಹೆಫ್ತುಲ್ಲಾ ಸೇರಿದಂತೆ ಹಲವು ಗಣ್ಯರು ತ್ರಿವಳಿ ತಲಾಕ್ ನಿಷೇಧಿಸಬೇಕು ಎಂದಿದ್ದರು. ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಎಂಬ ಸಂಘಟನೆ ಶಾಯಿರಾ ಅವರ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿರುವ ಪ್ರಕರಣದಲ್ಲಿ ವಾದಿಯಾಗಿ ಸೇರಿಕೊಂಡಿತ್ತು. ಮುಸ್ಲಿಂ ಮಹಿಳೆಯರ ತಾರತಮ್ಯದ ಬಗೆಗಿನ ಚರ್ಚೆ ಮೂರು ದಶಕಗಳ ಅವಧಿಯಲ್ಲಿ ಅಂತಿಮ ಘಟ್ಟವನ್ನು ತಲುಪಿತ್ತು. ತ್ರಿವಳಿ ತಲಾಕ್ ನಿಷೇಧವಾಗಿದೆ.
1985ರಲ್ಲಿ….
ಮಧ್ಯಪ್ರದೇಶದ ಇಂದೋರ್ನ 68 ವರ್ಷದ ಮಹಿಳೆ ಶಾಬೋನೋ ಬೇಗಂಗೆ ಗಂಡ ಮೊಹಮ್ಮದ್ ಅಹಮ್ಮದ್ ಖಾನ್ 1978ರಲ್ಲಿ ತಲಾಕ್ ನೀಡುತ್ತಾರೆ. ಜೀವನಾಂಶಕ್ಕಾಗಿ ಶಾಬಾನೋ ಬೇಗಂ ಸ್ಥಳೀಯ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತಾರೆ. ಭಾರತೀಯ ಅಪರಾಧ ಪ್ರಕ್ರಿಯೆ ಸಂಹಿತೆ 1973ರ ಸೆಕ್ಷನ್ 125ರ ಅಡಿಯಲ್ಲಿ ಸ್ಥಳೀಯ ನ್ಯಾಯಾಲಯ ಮತ್ತು ಹೈಕೋರ್ಟ್ ಕೂಡ ಶಾಬೋನೋ ಬೇಗಂಗೆ ಅಹಮ್ಮದ್ ಖಾನ್ ಜೀವನಾಂಶ ನೀಡಬೇಕು ಎಂದು ಆದೇಶಿಸುತ್ತವೆ. ಹೈಕೋರ್ಟ್ ತೀರ್ಪನ್ನು ಖಾನ್ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುತ್ತಾರೆ. ಸುಪ್ರೀಂ ಕೋರ್ಟ್ ಕೂಡ ಶಾಬಾನೋ ಬೇಗಂ ಪರವಾಗಿ 1985ರಲ್ಲಿ ತೀರ್ಪು ನೀಡುತ್ತದೆ.
ಅಪರಾಧ ದಂಡ ಸಂಹಿತೆ 1973ರ ಸೆಕ್ಷನ್ 125ರ ಪ್ರಕಾರ, ಯಾವುದೇ ವ್ಯಕ್ತಿಯು ಹೆಂಡತಿಯನ್ನು ನಿರ್ಲಕ್ಷಿಸಿದ್ದು, ಜೀವನಾಂಶ ನೀಡುತ್ತಿಲ್ಲ ಎಂದಾದರೆ, ಅಥವಾ ಹೆಂಡತಿಗೆ ವಿಚ್ಛೇದನ ನೀಡಿದ್ದರೆ ಮತ್ತು ಮರು ಮದುವೆ ಆಗುವವರೆಗೂ ಆಕೆಗೆ ತನ್ನ ಖರ್ಚು ನೋಡಿಕೊಳ್ಳುವ ಶಕ್ತಿ ಇಲ್ಲದಿದ್ದರೆ- ಅಂಥವರಿಗೆ ಪ್ರತಿ ತಿಂಗಳು ಜೀವನಾಂಶ ನೀಡುವಂತೆ ಮೊದಲ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಆದೇಶಿಸಬಹುದು. ಇದು ಎಲ್ಲ ಧರ್ಮಕ್ಕೆ ಸೇರಿದವರಿಗೂ ಅನ್ವಯ ಆಗುತ್ತದೆ. ನಿರ್ಲಕ್ಷಿತ ಹೆಂಡತಿಯರು ಅಥವಾ ವಿಚ್ಛೇದಿತ ಹೆಂಡತಿಯರ ಆರ್ಥಿಕ ಸ್ಥಿತಿ ಸುಧಾರಣೆಗಾಗಿಯೇ ಈ ಕಾನೂನು ಇದೆ.
ಆದರೆ ಇಲ್ಲಿಯವರೆಗೆ ಈ ವಿಚಾರದಲ್ಲಿ ಮುಸ್ಲೀಮರಿಗೆ ವೈಯುಕ್ತಿಕ ಕಾನೂನು ಮಾತ್ರ ಅನ್ವಯವಾಗುತ್ತಿತ್ತು. `ಇದ್ದತ್’ ಅವಧಿ ಅಂದರೇ ವಿಚ್ಛೇದನ ಕೊಟ್ಟ ಮೂರು ತಿಂಗಳ ನಂತರ ವಿಚ್ಛೇದಿತ ಹೆಂಡತಿಗೆ ಜೀವನಾಂಶ ನೀಡುವ ನಿಯಮ ಮುಸ್ಲಿಂ ಕಾನೂನಿನಲ್ಲಿ ಇಲ್ಲ. ಮದುವೆ ಸಂದರ್ಭದಲ್ಲಿ ನೀಡಲಾದ ಮೆಹರ್ ಎಂದು ಕರೆಯಲಾಗುವ ದಕ್ಷಿಣೆಯನ್ನು ಹೆಂಡತಿಗೆ ಬಿಡಲಾಗಿದೆ. ಹಾಗಾಗಿ ತಮಗೆ ಮಾಜಿ ಹೆಂಡತಿಯನ್ನು ಸಲಹುವ ಜವಾಬ್ದಾರಿ ಇಲ್ಲ ಎಂದು ತಪ್ಪಿಸಿಕೊಳ್ಳುತ್ತಿದ್ದರು. ಮುಸ್ಲಿಂ ವೈಯಕ್ತಿಕ ಕಾನೂನು ದಂಡ ಸಂಹಿತೆಯ ಸೆಕ್ಷನ್ 125ರ ವ್ಯಾಪ್ತಿಯಲ್ಲಿ ಇರಲಿಲ್ಲ. ಆದರೆ ಈಗ ಸುಪ್ರಿಂ ಕೋರ್ಟ್ ಮುಸ್ಲಿಂ ವೈಯುಕ್ತಿಕ ಕಾನೂನನ್ನು ನಿಷೇಧಿಸಿದ್ದು, ಇನ್ನು ಮುಂದೆ ಸಂವಿಧಾನದ ಅಪರಾಧ ದಂಡ ಸಂಹಿತೆ 1973, ಸೆಕ್ಷನ್ 125ರ ಪ್ರಕಾರವೇ ಇರಲಿದೆ.
ಇನ್ನು ಮುಂದೇ ಮಸೀದಿ, ಮೌಲ್ವಿಗಳ ಮುಂದೆ ವಿವಾಹ ವಿಚ್ಛೇದನ ಚರ್ಚೆಗೀಡಾಗುವಂತಿಲ್ಲ. ತೀರ್ಮಾನವಾಗುವಂತಿಲ್ಲ. ನ್ಯಾಯಾಲಯಕ್ಕೆ ಹೋಗಲೇಬೇಕು. ಇಬ್ಬರ ನಡುವೆ ಹೊಂದಾಣಿಕೆಯಿದ್ದರೇ ಪರ್ವಾಗಿಲ್ಲ. ಇಲ್ಲವೆಂದರೇ ನಮ್ಮ ಕಾನೂನಡಿಯಲ್ಲಿ ವಿಚ್ಛೇದನ ಸಮಸ್ಯೆ ಬಗೆಹರಿಯಬೇಕು. ಒಂದೇ ಉಸಿರಿಗೆ ಹೇಳುವ ತಲಾಖ್ ಅಷ್ಟೇ ನಿಷೇಧವಾಗಿರುವುದು. ಬದಲಾವಣೆ ಆಗಿರುವುದಿಷ್ಟೇ..! ತಲೆ ಹೋಗುವ ವಿಚಾರವೇನಲ್ಲ..!!
ಇಸ್ಲಾಂ..
ಇಸ್ಲಾಂನ ಮೂಲ ಉದ್ದೇಶ ಯಾವತ್ತೂ ಪ್ರಶ್ನಿಸುವಂತದ್ದಲ್ಲ. ಅದನ್ನು ಸರಿಯಾಗಿ ಅಭ್ಯಾಸ ಮಾಡಿದವರಿಗೆ ಮಾತ್ರ ನೈಜತೆ ತಿಳಿಯುತ್ತದೆ. ಆದರೆ ಈಗಿರುವ ಕೆಲವು ಮುಸ್ಲಿಂ ವೈಯುಕ್ತಿಕ ಕಾನೂನು ತಿರುಚಿಲ್ಪಟ್ಟ ಅಭಾಸಗಳಾಗಿವೆ. ಆ ಕಾರಣಕ್ಕೆ ಇಸ್ಲಾಂ ತತ್ವ, ಸಿದ್ಧಾಂತಗಳು ಪ್ರಶ್ನೇಗೀಡಾಗಿವೆ. ಇಸ್ಲಾಂ ತಪ್ಪು ಹೇಳಿಲ್ಲ. ಆದರೆ ಇಸ್ಲಾಂ ಕಾನೂನನ್ನು ದುರುಪಯೋಗಪಡಿಸಿಕೊಂಡಿದ್ದೇ ಷರಿಯತ್ ಕಾನೂನು ಚರ್ಚೆಗೀಡಾಗಿದೆ. ತ್ರಿವಳಿ ತಲಾಖ್ ನಿಷೇಧಕ್ಕೆ ಒಳಗಾಗಿದೆ. ಇಸ್ಲಾಂನಲ್ಲಿ ತಲಾಕ್ ಎಂದರೇ ಗಂಡ ವಿಚ್ಛೇದನ ನೀಡುವ ಕ್ರಮ. ಖುಲಾ ಎಂದರೇ ಹೆಂಡತಿ ವಿಚ್ಛೇದನ ನೀಡುವ ಕ್ರಮ. ಫಸ್ಖ್ ಎ ನಿಕಾಹ್ ಎಂದರೇ ಗಂಡನಿಗೆ ವಿಚ್ಛೇದನ ಬೇಡ, ಹೆಂಡತಿಗೆ ಬೇಕು ಎಂಬ ವಿಚ್ಛೇದನ ಕ್ರಮ. ತಫ್ವೀದ್ ಎ ತಲಾಖ್ ಎಂದರೇ ವಿಚ್ಛೇದನ ನೀಡುವ ಹಕ್ಕನ್ನು ಹೆಂಡತಿಗೆ ನೀಡುವ ಕ್ರಮ. ಇದು ಇಸ್ಲಾಂನ ವೈಯುಕ್ತಿಕ ಕಾನೂನಿನಲ್ಲಿರುವ ಕ್ರಮಗಳಾಗಿವೆ.
ಆದರೆ ಇಸ್ಲಾಂ ವೈಯುಕ್ತಿಕ ಕಾನೂನಿನಂತೆ ಈಗಿನ ಮುಸಲ್ಮಾನರಲ್ಲಿ ಅನೇಕರು ನಡೆದುಕೊಂಡಿಲ್ಲ. ಮೊಬೈಲ್ನಲ್ಲಿ, ಇಮೇಲ್ನಲ್ಲಿ, ಪತ್ರದಲ್ಲಿ ಮೂರು ಬಾರಿ ನಿಮಿಷಾರ್ಧದಲ್ಲಿ ತಲಾಖ್ ಹೇಳಿ ಸಂಬಂಧವನ್ನು ಮುಗಿಸಿಕೊಳ್ಳುವ ಪರಿಪಾಠ ಮಿತಿಮೀರಿತ್ತು. ಅದೊಂದು ಹವ್ಯಾಸವೇ ಆಗಿಹೋಗಿತ್ತು. ಹೀಗಾಗಿ ಭಾರತದಲ್ಲಿ ಮುಸಲ್ಮಾನರ ಅತೀಹೆಚ್ಚು ವಿವಾಹ ವಿಚ್ಛೇಧನ ಪ್ರಕ್ರಿಯೆಗಳು, ದೊಡ್ಡದೊಂದು ಕಾರಣವೂ ಇಲ್ಲದೇ, ಸಣ್ಣದೊಂದು ಚರ್ಚೆಯೂ ಇಲ್ಲದೇ ಮುಗಿದುಹೋಗುತ್ತಿತ್ತು.
ಸೌದಿ ಅರೇಬಿಯಾದಲ್ಲಿ ಅರಬ್ಬರು ಬೇಕಾಬಿಟ್ಟಿ ಮದುವೆಯಾಗಿ ಹೆಂಡತಿಯರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದರು. ಅವರನ್ನು ಯಕಃಶ್ಚಿತ್ ಬಂಧಮುಕ್ತರನ್ನಾಗಿ ಮಾಡದೇ ಹಿಂಸಿಸುವುದನ್ನು ಕಂಡ ಪ್ರವಾದಿ ಮುಹಮ್ಮದ್ ಪೈಗಂಬರ್, ತ್ರಿವಳಿ ತಲಾಖ್ ಎಂಬ ನಿಯಮವನ್ನು ರೂಪಿಸಿದರು. ಮುಸಲ್ಮಾನ ಪುರುಷರು ನಾಲ್ಕು ಮದುವೆಯಾಗಬಹುದಷ್ಟೆ. ಆದರೆ ನಾಲ್ಕು ಮಂದಿಯನ್ನು ಸಮಾನತೆಯಿಂದ ನೋಡಿಕೊಳ್ಳಲು ಅರ್ಹನಾದವನಿಗೆ ಮಾತ್ರ ಇದು ಅನ್ವಯಿಸುತ್ತದೆ ಎಂದರು. ಅವರ ಕಾಲಘಟ್ಟದಲ್ಲಿ ವಿಧವೆಯರು, ವಿಚ್ಛೇದಿತರು, ವಿದುರರ ಸಂಕಷ್ಟ ನೋಡಿ ಅವರಿಗೆ ಬದುಕು ಕಲ್ಪಿಸುವ ಉದ್ದೇಶದಿಂದ ಈ ನಿಯಮ ತಂದರು. ಜೊತೆಗೆ ಇಲ್ಲಿ ಅನೈತಿಕ ಸಂಬಂಧಕ್ಕೆ ಕಡಿವಾಣ ಹಾಕುವ ಉದ್ದೇಶವೂ ಅಡಗಿದೆ. ಆದರೆ ಇವತ್ತು ತೆವಲು, ತೀಟೆಗೆ ಇಸ್ಲಾಂನ ಬಹುಪತ್ನಿತ್ವ ನೆಪವಾಗಿದೆ.
ಹಾಗೆಯೇ ಪುರುಷ ಅಥವಾ ಮಹಿಳೆಗೆ ಸಂಬಂಧದಿಂದ ಮುಕ್ತಿ ಬೇಕಾದರೇ ವಿಚ್ಛೇದನ ಪಡೆದುಕೊಳ್ಳಬೇಕು. ಅದು ಮೂರು ಅವಧಿಯಲ್ಲಿ ನಿರ್ಣಯವಾಗಬೇಕು. ಒಂದೊಂದು ಅವಧಿಗೆ ಮೂವತ್ತು ದಿನಗಳ ಕಾಲವಕಾಶವಿರುತ್ತದೆ. ಒಟ್ಟು ತೊಂಭತ್ತು ದಿನಗಳ ಅವಧಿಯಲ್ಲಿ ಕಡೆಯ ಮೂವತ್ತು ದಿನ ಗಂಡ-ಹೆಂಡತಿ ಜೊತೆಯಾಗಿ ವಾಸಿಸಬೇಕು. ಆಗಲು ಸಾಮರಸ್ಯ ಬಾರದೇ ಇದ್ದಾಗ ಮುಕ್ತಿ ಪಡೆಯಬಹುದು. ತಲಾ ಮೂವತ್ತು ದಿನಗಳಿಗೆ ಒಟ್ಟು ತೊಂಭತ್ತು ದಿನಗಳ ಅವಧಿಯಲ್ಲಿ ಮೂರು ಬಾರಿ ನಿರಾಕರಣೆ ಹೇಳುವ ಪ್ರಕ್ರಿಯೆ ತಲಾಖ್ ಆಗಿದೆ. ಹಾಗೆಯೇ ಮೂರನೇ ತಲಾಖ್ ಹೇಳಿದ ನಂತರದ ತೊಂಭತ್ತು ದಿನಗಳ ಒಳಗೆ ವಿಚ್ಛೇಧಿತ ಪತ್ನಿಗೆ ( ಇದ್ದತ್ ) ಜೀವನಾಂಶವನ್ನು ಕೊಡಬೇಕೆಂದು ಪ್ರವಾದಿ ಮುಹಮ್ಮದ್ ಹೇಳಿದ್ದರು. ಆ ಕಾಲದಲ್ಲಿ ವಿಚ್ಛೇದಿತ ಮಹಿಳೆಯರು ಮರು ಮದುವೆಯಾಗುತ್ತಿದ್ದರು. ಈಗಲೂ ಇಲ್ಲವೆಂದಲ್ಲ. ಆ ಕಾಲಘಟ್ಟಕ್ಕೆ ಹೋಲಿಸಿದರೇ ಕಡಿಮೆಯೆನ್ನಬಹುದು. ಇಲ್ಲಿ ಮಹಿಳೆಯರ ಮೇಲಾಗುತ್ತಿದ್ದ ಪುರುಷರ ದೌರ್ಜನ್ಯದ ವಿರುದ್ಧ ನಿಂತ ಮುಹಮ್ಮದ್ ಪೈಗಂಬರ್ ಮಹಿಳೆಯ ಸಮಾನತೆ, ಹಕ್ಕನ್ನು ಪ್ರತಿಪಾದಿಸಿದ್ದರು.
ಪುರುಷರ ದಬ್ಬಾಳಿಕೆಯಿಂದ ಮಹಿಳೆಯರಿಗೆ ದಾಂಪತ್ಯ ಜೀವನವೂ ಸಿಗುತ್ತಿರಲಿಲ್ಲ, ವಿಚ್ಛೇದನದ ಬಿಡುಗಡೆಯೂ ದೊರಕುತ್ತಿರಲಿಲ್ಲ. ಈ ಪದ್ಧತಿಯನ್ನು ಪ್ರವಾದಿ ಮೊಹಮ್ಮದ್ರವರು ಬದಲಾವಣೆ ಮಾಡಿ, ಒಬ್ಬ ಪತಿ ತನ್ನ ಪತ್ನಿಗೆ ನೀಡುವ ತಲಾಖ್ ಅನ್ನು ಮೂರು ತಲಾಖ್ನ ಅವಧಿ ಎಂದು ತಿಳಿಸಿ, ಆ ಕ್ರಮವನ್ನು ಅನುಷ್ಠಾನಕ್ಕೆ ತಂದರು. ಈ ಬಗ್ಗೆ ಕುರ್ಆನ್ನ ಸೂರಾ ಅಲ್ ಬಕರಾದಲ್ಲಿ `ನೀವು ಸ್ತ್ರೀಯರಿಗೆ ತಲಾಖ್ ಕೊಟ್ಟು ಅವರ ಇದ್ದತ್ ಪೂರ್ಣಗೊಳ್ಳಲು ಸಮೀಪಿಸಿದಾಗ ಅವರನ್ನು ನ್ಯಾಯೋಚಿತ ರೀತಿಯಲ್ಲಿ ಇರಿಸಿಕೊಳ್ಳಿರಿ, ಇಲ್ಲವೇ ನ್ಯಾಯೋಚಿತ ರೀತಿಯಿಂದ ಬಿಡುಗಡೆಗೊಳಿಸಿರಿ. ಕೇವಲ ಸತಾಯಿಸಲಿಕ್ಕಾಗಿ ಅವರನ್ನು ತಡೆದಿರಿಸಿಕೊಂಡರೆ ಅದು ಅತಿಕ್ರಮವಾಗುವುದು’ ಎಂದು ಸ್ಪಷ್ಟವಾಗಿ ಹೇಳಿದೆ.
`ನಾನು ಹೆಣ್ಣಿನಿಂದ ಗಂಡನ್ನೂ ಗಂಡಿನಿಂದ ಹೆಣ್ಣನ್ನೂ ಸೃಷ್ಟಿಸಿದೆ’ ಎಂಬ ವಾಕ್ಯ ಕುರ್ಆನ್ನಲ್ಲಿದೆ. ಹೀಗೆ ಹೇಳುವ ಕುರಾನ್ ಸ್ತ್ರೀಯರಿಗೆ ಯಾವುದೇ ಹಕ್ಕಿಲ್ಲ ಎನ್ನುವುದು ಸಾಧ್ಯವಿಲ್ಲ. ಮನುಷ್ಯ ವ್ಯಾಪಾರವೇ ಹೇಗೆ ಧರ್ಮ ಸಮ್ಮತವಾಗುತ್ತದೆ ?’
1937ರಲ್ಲಿ ಬ್ರಿಟೀಷರ ಉಪಸ್ಥಿತಿಯಲ್ಲಿ ರೂಪುಗೊಂಡ ಇಸ್ಲಾಂನ ಷರಿಯತ್ ಕಾನೂನಿನ ಕೆಲವು ಅಂಶ, ಮಹಮ್ಮದ್ ಪೈಗಂಬರ್ ತಂದ ನಿಯಮದಿಂದ ಹೊರತಾಗಿದೆ. ಪೈಗಂಬರ್ ಕಾಲವಾದ ಐವತ್ತು ವರ್ಷಗಳ ನಂತರ ಹುಟ್ಟಿಕೊಂಡ ಷರಿಯತ್ ಕಾನೂನು ಪ್ರವಾದಿಯವರ ಮೂಲ ಉದ್ದೇಶಗಳಿಗೆ ಕಾಠಿಣ್ಯ ರೂಪವನ್ನು ಕೊಟ್ಟಿದ್ದವು. ಆದರೆ ಕಾಲಕಾಲಕ್ಕೆ ಮುಸ್ಲೀಂ ಪುರುಷರು ತಮ್ಮ ಸ್ವಾರ್ಥಕ್ಕನುಗುಣವಾಗಿ ಷರಿಯತ್ ಹೆಸರಿನಲ್ಲಿ ತಮ್ಮದೇ ವಿಚಿತ್ರವಾದ ಕಾನೂನನ್ನು ಮಹಿಳೆಯರ ಮೇಲೆ ಹೇರತೊಡಗಿದರು. ವಿಧವೆಯರ ಬದುಕಿಗಾಗಿ, ವಿದುರರ ಅಗತ್ಯಕ್ಕಾಗಿ, ಅನೈತಿಕ ಸಂಬಂಧಕ್ಕೆ ಕಡಿವಾಣ ಹಾಕುವ ಉದ್ದೇಶಕ್ಕಾಗಿ ಶುರುವಾದ ಬಹುಪತ್ನಿತ್ವ ಫ್ಯಾಶನ್ ಆಗಿ ಮಾರ್ಪಟ್ಟಿದೆ. ಕಾಲಾಂತರದಲ್ಲಿ ತಲಾಖ್ ಅನ್ನೋದು ಮೊಬೈಲ್ ಬಟನ್ ಮೇಲೆ ಕಿರುಬೆರಳಿನಲ್ಲಿ ನಿರ್ಧಾರವಾಗತೊಡಗಿತ್ತು.
ಕಾಲಕಾಲಕ್ಕೆ ಮುಸಲ್ಮಾನ ಮಹಿಳೆಯರು ವಿದ್ಯಾವಂತರಾದರು. ಬುದ್ದಿವಂತರಾದರು. ಅವರು ಇಸ್ಲಾಂ ಅನ್ನು ಪ್ರೀತಿಸುವಷ್ಟು ಮತ್ಯಾರು ಪ್ರೀತಿಸಲಾರರು. ಹಾದಿ ತಪ್ಪಿದ ಗಂಡನನ್ನು ಧರ್ಮದ ನೆರಳಿಗೆ ತರುತ್ತಿರುವ ಅದೆಷ್ಟೋ ಮುಸ್ಲಿಂ ಹೆಣ್ಣುಮಕ್ಕಳ ನಿದರ್ಶನಗಳಿವೆ. ಆದರೆ ಇಸ್ಲಾಂ ಹೆಸರಿನಲ್ಲಿ ತಿರುಚಲಾದ ಕಾನೂನನ್ನು ಅವರು ತಾನೇ ಎಷ್ಟು ದಿನ ಅಂತ ಸಹಿಸಿಕೊಂಡಾರು..? ಪ್ರವಾದಿ ಹೇಳಿದ ನುಡಿಮುತ್ತುಗಳೇ ಬೇರೇ..? ಷರಿಯತ್ನಲ್ಲಾದ ತಿದ್ದುಪಡಿಗಳೇ ಬೇರೆ..? ಹೀಗಿರುವಾಗ ಈಗಿನ ಹೆಣ್ಣುಮಕ್ಕಳು ಕಾನೂನಿನ ಮೊರೆ ಹೋಗದಿರುತ್ತಾರಾ..? ಅದರ ಪರಿಣಾಮವಾಗಿ ಮುಸ್ಲಿಂ ಬಾಹುಳ್ಯವುಳ್ಳ ಇಪ್ಪತ್ತೈದು ರಾಷ್ಟ್ರಗಳಲ್ಲಿ ತ್ರಿವಳಿ ತಲಾಖ್ ಸೇರಿದಂತೆ. ಕೆಲವು ಷರಿಯತ್ ಅಭಾಸಗಳು ನಿಷೇಧವಾಗಿವೆ.
ಬಹುಪತ್ನಿತ್ವದ ಕುರಿತು ಪ್ರವಾದಿಗಳ ಬೋಧನೆ ಬೇರೆಯೇ ಇದೆ. ಆಗ ಬಹಳಷ್ಟು ಪುರುಷರು ಮರಣ ಹೊಂದಿ, ಬಹಳ ಮಂದಿ ಅನಾಥ ಮಕ್ಕಳೂ, ವಿಧವೆಯರೂ ನಿರ್ಗತಿಕರಾಗುತ್ತಿದ್ದರು. ಆಗ ಪ್ರವಾದಿಗಳು ಅನಾಥ ಮಕ್ಕಳ ರಕ್ಷಣೆಗಾಗಿ, ಆ ಮಕ್ಕಳ ತಾಯಂದಿರನ್ನು ಮದುವೆಯಾಗಿ ಎಂದು ಗಂಡಸರೊಡನೆ ಹೇಳಿದ್ದರೇ ಹೊರತು, ಐವತ್ತು ವರ್ಷದ ಮುದುಕರು ಹದಿನೆಂಟರ ಹುಡುಗಿಯನ್ನು ಮದುವೆಯಾಗಿ ಎಂದು ಹೇಳಿಲ್ಲ. ಹೆಂಡತಿಯರನ್ನು ನಾಲ್ಕಕ್ಕೆ ಸೀಮಿತಗೊಳಿಸಿ ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳಲು ಹೇಳಿದ್ದರು. ಹಾಗೆ ಸಮಾನವಾಗಿ ನೋಡಿಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ ಒಬ್ಬಳು ಪತ್ನಿಯೊಡನೆಯೇ ಇರಬೇಕು ಎಂದೂ ಹೇಳಿದ್ದರು.
ವಿಚಿತ್ರ ನೋಡಿ. ಮಹಮ್ಮದ್ ಪೈಗಂಬರ್ ಅಥವಾ ಕುರಾನ್ ಹೇಳಿರುವುದೇ ಬೇರೆ!, ಈ ಸಂಗತಿಯಲ್ಲಿ ಷರಿಯತ್ ಕಾನೂನಿನಲ್ಲಿ ಇರುವುದೇ ಬೇರೆ. ಮುಸ್ಲಿಂ ಪುರುಷರು ಇಸ್ಲಾಂ ನಿಯಮದಂತೆ ನಾಲ್ಕು ಜನ ಪತ್ನಿಯರನ್ನು ಮಾತ್ರವಲ್ಲದೆ ಐದನೆಯವಳನ್ನೂ ಕಟ್ಟಿಕೊಳ್ಳಬಹುದು. ಆಗ ನಾಲ್ಕು ಜನರಲ್ಲಿ ಯಾರಾದರೂ ಒಬ್ಬಳಿಗೆ ತಲಾಖ್ ಕೊಡಬೇಕು. ಆತ ತಾನಾಗಿಯೇ ತಲಾಖ್ ನೀಡದೇ ಇದ್ದರೆ ಪ್ರಥಮ ಪತ್ನಿ ವಿಚ್ಛೇದಿತಳಾಗಿ ತಾನಾಗಿಯೇ ಹೊರಗೆ ಹೋಗಬೇಕಾಗುತ್ತದೆ ಎನ್ನುತ್ತದೆ ಷರಿಯತ್. ಇದು ಪ್ರವಾದಿಗಳು ರೂಪಿಸಿದ ನಿಯಮವಲ್ಲ. 1937ರಲ್ಲಿ ಬ್ರಿಟಿಷರು ರೂಪಿಸಿದ ಮುಸ್ಲಿಂ ವ್ಯಕ್ತಿ ನಿಯಮದಲ್ಲಿ ರೂಪಿಸಲ್ಪಟ್ಟಿರಬಹುದು. ಇಂತಹ ನಿಯಮಗಳನ್ನು ಮುಸ್ಲಿಂ ಧರ್ಮ ಗುರುಗಳ ಸಲಹೆಯಿಂದಲೇ ರೂಪಿಸಿರಬಹುದು. ಮುಸ್ಲಿಂ ವ್ಯಕ್ತಿ ನಿಯಮ, ಮುಸ್ಲಿಮರ ಶೈಕ್ಷಣಿಕ ಪರಿಸ್ಥಿತಿ ಮುಂತಾದ ವಿಷಯಗಳ ಕುರಿತು ಯುವ ಜನರು ಚೆನ್ನಾಗಿ ತಿಳಿದುಕೊಳ್ಳಬೇಕು.
ಧಾರ್ಮಿಕತೆ ಬೇಕು. ಆದರೆ ಮತಾಂಧರಾಗಿರಬಾರದು. ಕೆಲವು ನಿಯಮಗಳನ್ನು ಯಾವ ಸಂದರ್ಭದಲ್ಲಿ, ಏಕೆ ರೂಪಿಸಲಾಯಿತು ಎಂಬದನ್ನು ಕುರಿತು ಚರ್ಚಿಸುವಂತಾಗಬೇಕು. ಇಲ್ಲವೆಂದರೇ ಒಟ್ಟಾರೆ ಇಸ್ಲಾಂ ಅಸ್ತಿತ್ವವೇ ಪ್ರಶ್ನೇಗೀಡಾಗುತ್ತದೆ. ಅದು ಅಪಾಯವೆಂದರಿಯಬೇಕು.
ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಮಹಿಳೆಗೆ ರಕ್ಷಣೆ ಇಲ್ಲ ಎಂದು ವಾದಿಸುವವರಿಗೆ ಪುರುಷರ ತಲಾಖ್ನಂತೆ ಮಹಿಳೆಯರ ಖುಲಾ ಸ್ವಾತಂತ್ರ್ಯವೇಕೆ ಕಾಣುತ್ತಿಲ್ಲ..? ತ್ರಿವಳಿ ತಲಾಖ್ ಅನ್ನು ರದ್ದುಗೊಳಿಸಿದ ತಕ್ಷಣ ಮಹಿಳೆಗೆ ಎಲ್ಲಾ ರೀತಿಯ ರಕ್ಷಣೆ ಲಭಿಸಿಬಿಡುತ್ತದೆಯೇ..? ಮುಸ್ಲಿಂ ಪುರುಷರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವಂತಹ ಸಂದರ್ಭದಲ್ಲಿ ಮುಸ್ಲಿಂ ಮಹಿಳೆ ಹೇಗೆ ತಾನೇ ಸುರಕ್ಷಿತವಾಗಿ ಇರಬಲ್ಲಳು..? ಇಂಥ ಸ್ಥಿತಿಯಲ್ಲಿ ಮಹಿಳೆಗಾಗಿ ಅನುಷ್ಠಾನಗೊಂಡಿರುವ `ಖುಲಾ’ ಸ್ವಾತಂತ್ರ್ಯವನ್ನು ಕಾರ್ಯರೂಪಕ್ಕೆ ತರಲು ಹೋರಾಡಬೇಕೇ ವಿನಾ ಪುರುಷರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದಲ್ಲ. ಮೊದಲೇ ಹೇಳಿದಂತೆ ಮೂಲ ಉದ್ದೇಶ ತಿರುಚಿಲ್ಪಟ್ಟಿರುವುದರಿಂದ ದೇಶದ ಕಾನೂನನ್ನು ಒಪ್ಪಿಕೊಳ್ಳದೇ ವಿಧಿಯಿಲ್ಲ. ದೇಶವನ್ನು, ದೇಶದ ಕಾನೂನನ್ನು ಗೌರವಿಸಬೇಕೆಂದು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರೇ ಹೇಳಿದ್ದಾರೆ. ಮೂಲ ಧರ್ಮವೇ ಬೇರೇ..? ಮೂಢ ಧರ್ಮವೇ ಬೇರೇ..?
ಅಂತಿಮ ತೀರ್ಪು…
ಈಗ ಅಂತಿಮವಾಗಿ ಸುಮಾರು ಮೂವತ್ತು ವರ್ಷಗಳಿಂದ ಚರ್ಚೆಗೀಡಾಗಿದ್ದ ಮುಸ್ಲೀಮರ ವೈಯುಕ್ತಿಕ ಕಾನೂನಿನಡಿಯಲ್ಲಿದ್ದ ತ್ರಿವಳಿ ತಲಾಕ್ಅನ್ನು ನಿಷೇಧಿಸಿ ಸುಪ್ರಿಂ ಕೋರ್ಟ್ ಆದೇಶ ಹೊರಡಿಸಿತ್ತು. ವಿವಿಧ ಧರ್ಮಗಳಿಗೆ ಸೇರಿದ ಐದು ನ್ಯಾಯಾಧೀಶರ ಪೀಠ ವಿವಿಧ ಆಯಾಮಗಳಲ್ಲಿ ಚರ್ಚಿಸಿ, ಆ ಪೈಕಿ ಮೂವರು ನ್ಯಾಯಾಧೀಶರು ತಲಾಖ್ ವಿರುದ್ಧವಾಗಿ ತೀರ್ಪನಿತ್ತಿದ್ದು, ಲೋಕಸಭೆಯಲ್ಲೂ ಬಿಲ್ ಪಾಸ್ ಆಗಿದ್ದು -ಇನ್ನು ಮುಂದೆ ತ್ರಿವಳಿ ತಲಾಖ್ಗೆ ಈ ದೇಶದಲ್ಲಿ ಮಾನ್ಯತೆ ಇಲ್ಲ.
ತ್ರಿವಳಿ ತಲಾಕ್ ಮುಸ್ಲಿಮರಲ್ಲಿ ವಿವಾಹ ಅಂತ್ಯಗೊಳ್ಳುವ ಅತ್ಯಂತ ಹೀನಾಯ ಮತ್ತು ಅನಪೇಕ್ಷಿತ ಸ್ವರೂಪವಾಗಿದೆ ಎಂದು ಸುಪ್ರೀಂಕೋರ್ಟ್ ವಿಷಾದ ವ್ಯಕ್ತಪಡಿಸಿತ್ತು. ಮುಸ್ಲೀಮರಲ್ಲಿ ಆಚರಣೆಯಲ್ಲಿರುವ ತ್ರಿವಳಿ ತಲಾಕ್ ಇಸ್ಲಾಂ ಧರ್ಮದ ಮೂಲಭೂತ ತತ್ತ್ವವೇ ಎಂಬ ಬಗ್ಗೆ ತಾನು ಕೂಲಂಕಷ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದ ನ್ಯಾಯಾಲಯ, ಇಸ್ಲಾಮ್ ಧರ್ಮದ ಕೆಲವು ಸಂಸ್ಥೆಗಳು ತ್ರಿವಳಿ ತಲಾಕ್ ನ್ಯಾಯಸಮ್ಮತ ಎಂದು ಹೇಳುತ್ತಿವೆ, ತ್ರಿವಳಿ ತಲಾಕ್ ಒಂದು ಅನಿಷ್ಟ ಪದ್ದತಿ, ಇದು ವಿವಾಹ ವಿಚ್ಛೇದನ ವಿಷಯದಲ್ಲಿ ಮಹಿಳೆಯರಿಗೂ ಸಮಾನ ಹಕ್ಕು ನೀಡುವಲ್ಲಿ ವಿಫಲವಾಗಿದೆ ಎಂದಿದೆ.
ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ಆರ್.ಎಫ್. ನಾರಿಮನ್, ಉದಯ್ ಲಲಿತ್ ಮತ್ತು ಅಬ್ದುಲ್ ನಜೀರ್, ಜೆ ಎಸ್ ಖೇಹರ್ ಅವರನ್ನೊಳಗೊಂಡ ಪೀಠ ಈ ಅರ್ಜಿಗಳ ಕುರಿತು ಆರು ದಿನಗಳ ಕಾಲ ವಿಚಾರಣೆ ನಡೆಸಿತ್ತು. ಏಳು ಅರ್ಜಿಗಳ ವಿಚಾರಣೆ ನಡೆಸಲು ಹಿಂದು, ಮುಸ್ಲಿಂ, ಕ್ರೈಸ್ತ, ಸಿಖ್ ಮತ್ತು ಪಾರ್ಸಿ- ಈ ಸಮುದಾಯಗಳ ನ್ಯಾಯಾಧೀಶರನ್ನು ಈ ನ್ಯಾಯಪೀಠ ಒಳಗೊಂಡಿತ್ತು. ತ್ರಿವಳಿ ತಲಾಕ್ ಅಸಂವಿಧಾನಿಕ ಎಂದು ಆರೋಪಿಸಿ ಮುಸ್ಲಿಂ ಮಹಿಳೆಯರು ಸಲ್ಲಿಸಿರುವ ಐದು ಅರ್ಜಿಗಳ ಬಗ್ಗೆಯೂ ವಿಚಾರಣೆ ನಡೆಸಲಾಗಿತ್ತು. ಅಂತಿಮವಾಗಿ ಐದು ನ್ಯಾಯಾಧೀಶರ ಪೈಕಿ ಜೆ ಎಸ್ ಖೇಹರ್ ಹಾಗೂ ಅಬ್ದುಲ್ ನಜೀರ್, ಮುಸ್ಲಿಂ ವೈಯುಕ್ತಿಕ ಕಾನೂನಿನ ಬಗ್ಗೆ ಸರ್ಕಾರವೇ ಅಂತಿಮ ತೀರ್ಮಾನ ಕೈಗೊಳ್ಳಲಿ. ಸುಪ್ರಿಂ ಕೋರ್ಟ್ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಆರು ತಿಂಗಳ ಗಡುವು ನೀಡಿತ್ತು. ಆದರೆ ಕುರಿಯನ್ ಜೋಸೇಫ್, ಆರ್ ಎಫ್ ನಾರಿಮನ್, ಉದಯ್ ಲಲಿತ್, ತ್ರಿವಳಿ ತಲಾಖ್ ಅಸಂವಿಧಾನಿಕ ಪ್ರಕ್ರಿಯೆಯಾಗಿದೆ ಎಂದು ತೀರ್ಪು ಕೊಟ್ಟಿದ್ದಾರೆ. ಮೂವರು ನ್ಯಾಯಾಧೀಶರು ತ್ರಿವಳಿ ತಲಾಖ್ ವಿರುದ್ಧವಾಗಿದ್ದರಿಂದ ಅಂತಿಮವಾಗಿ ತ್ರಿವಳಿ ತಲಾಖ್ ಪದ್ದತಿಗೆ ನಿಷೇಧ ಹೇರಿ ಆದೇಶ ಹೊರಡಿಸಲಾಗಿತ್ತು. ಈಗ ಲೋಕಸಭೆಯಲ್ಲೂ ಬಿಲ್ ಪಾಸ್ ಆಗಿದೆ. ಮುಗಿಯಿತು ಅಷ್ಟೆ.