`ತಪ್ಪಾಯ್ತು ಸಾರಿ..?’ ; ಕ್ಷಮೆ ಕೇಳಿದ ಅನಂತ್ ಬದಲಾಗ್ತಾರಾ..?

Date:

`ಶಾಸಕಾಂಗ ವ್ಯವಸ್ಥೆಯಲ್ಲಿ ಇವತ್ತು ಕಾಣಿಸುತ್ತಿರುವ ಅಸಹ್ಯಗಳು, ಸಂವಿಧಾನದ ಮಹತ್ವವನ್ನು ಎತ್ತಿಹಿಡಿಯುತ್ತಿದೆ. ಒಬ್ಬ ರಾಜಕಾರಣಿಗೆ ಬೇಕಾದ ಬೇಸಿಕ್ ಕಾಮನ್‍ಸೆನ್ಸ್ ಇಲ್ಲದಿದ್ದರೇ ಒಕ್ಕೂಟ ವ್ಯವಸ್ಥೆಯ ಹಡಾಲೆದ್ದು ಹೋಗುವ ವಿಕೋಪಕ್ಕೆ ನಮ್ಮ ದೇಶ ಹೋಗುತ್ತಿದೆ. ಒಬ್ಬರು ದೇಶ ಪ್ರಧಾನಿಯವರನ್ನು ಪರಮ ತುಚ್ಛವಾಗಿ ಟೀಕಿಸಿದರೇ, ಮತ್ತೊಬ್ಬರು ಅದಕ್ಕಿಂತಲೂ ಹೀನಾಯವಾಗಿ ರಾಜ್ಯದ ಮುಖ್ಯಮಂತ್ರಿಯನ್ನು ಟೀಕಿಸುತ್ತಾರೆ. ಪಾಪದ ಪಿಂಡದ ಅಸಹ್ಯದಲ್ಲಿ ಮತಹಾಕಿ ಪಾಪ ಮಾಡಿದ್ದೇವಾ ಎಂಬ ಗೊಂದಲ ಜನರನ್ನು ಕಾಡಿ ಮರೆಯುವ ಮುನ್ನವೇ, ಅದೇ ಸಂಸದ ಸಂವಿಧಾನ ಬದಲಾಗಬೇಕು, ಜಾತ್ಯಾತೀತರಿಗೆ ರಕ್ತದ ಪರಿಚಯವಿಲ್ಲ ಅರ್ಥಾತ್ ಅಕ್ರಮ ಸಂತಾನ ಎನ್ನುತ್ತಾರೆಂದರೇ ಸಹಿಸಲು ಸಾಧ್ಯವೇ..? ಕಡೆಗೂ ಶಕ್ತಿಕೇಂದ್ರದ ನಾಯಕರ ತರಾಟೆಗೆ ಲೋಕಸಭೆಯಲ್ಲಿ ಕ್ಷಮೆಯಾಚಿಸಿದ್ದಾರೆ. ಇಲ್ಲಿಗೆ ನಿಂತರೇ ಕ್ಷೇಮ..?’

ಮುಂದೆ ಓದಿ…

ರಾಹುಲ್ ಗಾಂಧಿಯನ್ನು ಪಪ್ಪು ಎಂದ ಮೋದಿ, ಮೋದಿಯನ್ನು ಸಾವಿನ ದಲ್ಲಾಳಿ ಎಂದ ಸೋನಿಯಾ, ದೇಶದ ಪ್ರಧಾನಿಯನ್ನು ವೇಶ್ಯೆ ಮಗ ಎನ್ನುವಷ್ಟು ಹದ್ದುಮೀರಿದ ರೋಷನ್ ಬೇಗ್, ಮೋದಿ ತಾಯಿಯ ಕೊರಳುಪಟ್ಟಿ ಹಿಡಿದು, ಇಂತ ಮಗನನ್ನು ಏಕೆ ಹೆತ್ತಿದ್ದೀಯಾ ಕೇಳಿ ಎಂದ ಜಿಗ್ನೇಶ್ ಮೇವಾನಿ, ಮೋದಿ ಮಹಾನ್ ನಾಟಕಕಾರ ಎಂದ ರೈ, ಸಿದ್ದರಾಮಯ್ಯನವರನ್ನು ಪಾಪದ ಪಿಂಡ ಅರ್ಥಾತ್ ವೇಶ್ಯೆಯ ಮಗ, ಸಂವಿಧಾನ ಬದಲಾಗಬೇಕು, ಜಾತ್ಯಾತೀತರಿಗೆ ರಕ್ತದ ಪರಿಚಯವಿಲ್ಲ, ಮುಸಲ್ಮಾನರ ಸರ್ವನಾಶವಾಗಬೇಕು ಎಂದ ಅನಂತಕುಮಾರ್ ಹೆಗ್ಡೆ, ಮೋದಿಯನ್ನು ನೀಚ ಎಂದ ಮಣಿಶಂಕರ್ ಅಯ್ಯರ್ ಆದಿಯಾಗಿ ಹದ್ದು ಮೀರಿ ವರ್ತಿಸುವ ರಾಜಕಾರಣಿಗಳಲ್ಲಿ ಇಲ್ಲಿ ಯಾರನ್ನು ದೂಷಿಸೋದು..? ಯಾರನ್ನು ಪ್ರಶ್ನಿಸೋದು ಎಂಬುದೇ ಅರ್ಥವಾಗುತ್ತಿಲ್ಲ.

ಒಂದಂತೂ ಸ್ಪಷ್ಟ. ಎಲ್ಲರಿಗೂ ಸಮಸ್ಯೆಯ ತಳಪಾಯದಲ್ಲಿ ರಾಜಕಾರಣದ ಮಹಲ್ ಕಟ್ಟುವ ಮರ್ಜಿಯಿದೆ. ಅದಕ್ಕಾಗಿ ಕೀಳುಮಟ್ಟದ ಟೀಕೆಗಳ ಮೂಲಕ ರಾಜಕಾರಣದ ಬೇಳೆ ಬೇಯಿಸಿಕೊಳ್ಳುವ ಪರಿಪಾಟ ಶುರುವಾಗಿದೆ. ಇವನ್ನೆಲ್ಲಾ ಖಂಡಿಸಬೇಕಾದ, ಇವರಿಗೆಲ್ಲಾ ತಕ್ಕ ಪಾಠ ಕಲಿಸಬೇಕಾದ ಜನರೇ- ಎಡ, ಬಲ, ಗಂಜಿ, ಭಕ್ತ ಎಂಬ ತಂಡಗಳನ್ನು ಕಟ್ಟಿಕೊಂಡು ಇವರಿಗಿಂತಲೂ ಅಸಹ್ಯ ಮೆರೆಯುತ್ತಿದ್ದಾರೆ. ಕೆಲ ಜನರ ಮನಃಸ್ಥಿತಿಗೆ ತಕ್ಕಂತೆ ರಾಜಕಾರಣವೂ ನಡೆಯುತ್ತಿದೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಪ್ರಜಾಪ್ರಭುತ್ವದ ಮೂಲ ಅರ್ಥವೇ ಅನರ್ಥವಾಗುತ್ತಿದೆ.

ಎಲ್ಲರ ಇತಿಹಾಸವನ್ನು ಕೆದಕುತ್ತಾ ಹೋದರೇ ಅದು ಅರ್ಧ ಗಂಟೆ, ಒಂದು ಗಂಟೆಯಲ್ಲಿ ಹೇಳಿ ಮುಗಿಸುವುದು ಕಷ್ಟ. ಆದರೆ ಗುಜರಾತ್ ಚುನಾವಣಾ ಸಂದರ್ಭದಲ್ಲಿ ದೇಶದಲ್ಲಿ ಕಿಡಿ ಹೊತ್ತಿಸಿದ್ದ ಮಣಿಶಂಕರ್ ಅಯ್ಯರ್ ಅವರ ನೀಚ ಎಂಬ ಟೀಕೆ, ಅದಕ್ಕಾಗಿ ಅವರು ದಂಡ ತೆತ್ತಿದ್ದು, ಕಾಂಗ್ರೆಸ್‍ಗೆ ಮಾರಣಾಂತಿವಾಗಿದ್ದು ಇತಿಹಾಸ. ಈ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪಾಪದ ಪಿಂಡ ಅರ್ಥಾತ್ ವೇಶ್ಯೆಯ ಮಗನೆಂದ ಅನಂತಕುಮಾರ್ ಹೆಗ್ಡೆ ದುಂಡಾವರ್ತನೆಗಳು ಚರ್ಚೆಗೀಡಾಯಿತು.

ಆದರೆ ಅನಂತ್ ಕುಮಾರ್ ಹೆಗ್ಡೆಯನ್ನು ಬಿಜೆಪಿಯ ನಾಯಕರು ಯಾರೂ ಪ್ರಶ್ನಿಸಲು ಹೋಗಲಿಲ್ಲ. ಅವರಿಂದ ಹಿಂದುತ್ವದ ಮತಬ್ಯಾಂಕ್‍ಗಳು ಕ್ರೋಢಿಕರಣವಾಗುತ್ತಿದೆ ಎಂದು ಖುಷಿಪಟ್ಟರು. ತಲೆಗೆ ಮೊಟಕಬೇಕಾದ ಹಿರಿಯರೇ ಬೆನ್ನುತಟ್ಟಿದರೇ ಕಿರಿಯರು ಸುಧಾರಿಸುವ ಮಾತೆಲ್ಲಿ..?. ಅನಂತ್ ಕುಮಾರ್ ಹೆಗ್ಡೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸಂವಿಧಾನವನ್ನೇ ಬದಲಾಯಿಸಬೇಕೆಂದು ಹೇಳಿಕೆ ಕೊಟ್ಟರು. ಇದರ ಜೊತೆಗೆ ಜಾತ್ಯಾತೀತರಿಗೆ ಅಪ್ಪ-ಅಮ್ಮನ ರಕ್ತದ ಪರಿಚಯವಿಲ್ಲವೆಂಬ ಮಾತನ್ನೂ ಸೇರಿಸಿದರು. ವಿವಾದ ಭುಗಿಲೇಳುವುದಕ್ಕೆ ಇಷ್ಟು ಸಾಕಿತ್ತು.

ಕಾಲಕ್ಕನುಗುಣವಾಗಿ ಸಂವಿಧಾನದಲ್ಲಿ ತಿದ್ದುಪಡಿಯಾಗಿದೆ. ಅದಕ್ಕೆ ನಿರ್ದಿಷ್ಠವಾದ, ಬಲವಾದ ಕಾರಣಗಳಿರುತ್ತವೆ. ಅದಕ್ಕೆ ಇಡೀ ದೇಶದ ಶಾಸಕಾಂಗ ವ್ಯವಸ್ಥೆ ಸಮ್ಮತಿಸಬೇಕು. ಮೂರನೇ ಎರಡು ಭಾಗದ ಬಹುಮತವಿರಬೇಕು. ಆದರೆ ಅನಂತ್ ಕುಮಾರ್ ಹೆಗ್ಡೆ, ನಿರ್ದಿಷ್ಟ ಸಂಗತಿಯನ್ನು ಪ್ರಸ್ಥಾಪಿಸದೇ ಸಂವಿಧಾನವನ್ನೇ ಬದಲಾಯಿಸಬೇಕು. ಅದಕ್ಕಾಗಿಯೇ ನಾವು ಬಂದಿದ್ದೇವೆ ಎಂದಿದ್ದಾರೆ. ಈ ಮಾತಿನ ಜೊತೆಗೆ ಜಾತ್ಯಾತೀತರಿಗೆ ರಕ್ತದ ಪರಿಚಯವಿಲ್ಲ ಅರ್ಥಾತ್ ಅಕ್ರಮ ಸಂತಾನವೆಂದು ಜರಿದಿದ್ದು- ಅವರ ಸಂವಿಧಾನದ ಟೀಕೆಯ ಹಿಂದೆ, ಬದಲಾವಣೆಯ ಹೇಳಿಕೆಯ ಹಿಂದೆ ದೇಶದ ಜಾತ್ಯಾತೀತತೆಯನ್ನು ನಾಶಪಡಿಸಬೇಕೆಂಬ ಉದ್ದೇಶವಿರುವುದು ಸ್ಪಷ್ಟವಾಗುತ್ತದೆ.

ಅನಂತ್ ಕುಮಾರ್ ಹೆಗ್ಡೆ ಹೇಳಿಕೆಯನ್ನು ಖಂಡಿಸಿ ದೇಶದಾದ್ಯಂತ ಜಾತ್ಯಾತೀತರು, ದಲಿತರು, ಬುದ್ದಿಜೀವಿಗಳ ಜೊತೆಗೆ ಕಾಂಗ್ರೆಸ್ ಪ್ರತಿಭಟನೆಗಿಳಿಯಿತು. ಲೋಕಸಭೆಯಲ್ಲೂ ಬಿಜೆಪಿ, ಅನಂತಕುಮಾರ್ ಹೆಗ್ಡೆಯನ್ನು ಉಚ್ಛಾಟಿಸಬೇಕು ಎಂದು ಪಟ್ಟು ಹಿಡಿಯಿತು. ರಾಹುಲ್ ಗಾಂಧಿ ನೇತೃತ್ವದಲ್ಲಿ ಹೆಗ್ಡೆ ಉಚ್ಛಾಟನೆಗೆ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಅಷ್ಟರಲ್ಲಿ ಲೋಕಸಭೆಯಲ್ಲಿ ಹೆಗ್ಡೆ ಕ್ಷಮೆ ಯಾಚಿಸಿ, ತಪ್ಪಾಯ್ತು ತಿದ್ಕೋತೀನಿ ಎಂದಿದ್ದಾರೆ. ಅವರನ್ನು ಸಮರ್ಥಿಸಿಕೊಂಡ ಸದಾನಂದಗೌಡರು ಈಗೇನು ಹೇಳುತ್ತಾರೋ..? ಒಟ್ಟಿನಲ್ಲಿ ಇಂದಿನ ಕಥೆ ಮುಗಿದಿದೆ. ನಾಳೆ ಏನೋ ಗೊತ್ತಿಲ್ಲ..!!

ಅಸಲಿಗೆ ಅನಂತ್ ಕುಮಾರ್ ಹೆಗ್ಡೆಯವರನ್ನು ಬಿಜೆಪಿಯೇ ಸಹಿಸಿಕೊಳ್ಳುವುದು ಕಷ್ಟವಾಗಿದೆ. ಅನಿರೀಕ್ಷಿತವಾಗಿ ದೆಹಲಿಗೆ ಬರಮಾಡಿಕೊಂಡು ಕೌಶಲ್ಯಾಭಿವೃದ್ಧಿ ಖಾತೆಯನ್ನು ಕೊಟ್ಟಾಗಲೇ ಜಾತಿ ಪ್ರಭಾವ ಚರ್ಚೆಗೀಡಾಯಿತು. ಕರ್ನಾಟಕದಲ್ಲಿ ಯಡಿಯೂರಪ್ಪನವರನ್ನು ತಣ್ಣಗಾಗಿಸಿ ಉತ್ತರ ಪ್ರದೇಶದ ಯೋಗಿ ಮಾದರಿಯಲ್ಲಿ ಮುಖ್ಯಮಂತ್ರಿಗಾದಿಯಲ್ಲಿ ಕೂರಿಸುವ ಪ್ರಯತ್ನವೆನ್ನಲಾಯಿತು. ಆದರೆ ಹೆಗ್ಡೆಯ ನಾಲಿಗೆಗೆ ಕಡಿವಾಣ ಇರಬೇಕಲ್ಲಾ..? ಅವರಿವರನ್ನು ಬೇಕಾದಂತೆ ಟೀಕಿಸಿ, ಕಡೆಗೆ ಕೌಶಲ್ಯಾಭಿವೃದ್ಧಿ ಖಾತೆ ನೀರಿಲ್ಲದ ಬಾವಿ ಎಂದು ಹೇಳಿಬಿಡೋದೇ..? ಕೊಂಕಣ ಸುತ್ತಿ ಮೈಲಾರಕ್ಕೆ ಬಂದ್ರೇ ಅಮಿತ್ ಶಾ ಸುಮ್ಮನೆ ಕೂರುತ್ತಾರಾ..?

`ಈಗಾಗಲೇ ಮಹದಾಯಿ ನೀರು ಅನಗತ್ಯವಾಗಿ ಕುಡಿಯಬೇಕಾದ ಪರಿಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ಅದೇನ್ರಿ ನಿಮ್ಮ ನಾಲಿಗೆ ಚಟಗಳು. ನೀವು ಮಾತಾಡಿದ್ದು ಸಾಕು ಸುಮ್ನಿರ್ರೀ’ ಎಂದು ಅಮಿತ್ ಶಾ ತರಾಟೆಗೆ ತೆಗೆದುಕೊಂಡರು. ಪ್ರಧಾನಿ ಮೋದಿ ಕೂಡ ಹೆಗ್ಡೆಯವರನ್ನು ಒಂಟಿಕಾಲಲ್ಲಿ ನಿಲ್ಲಿಸಿ ರಾಜಧರ್ಮದ ಪಾಠ ಹೇಳಿದ್ದಾರೆಂಬ ಅಸ್ಪಷ್ಟ ಮಾಹಿತಿಯಿದೆ. ಇವೆಲ್ಲದರ ಪರಿಣಾಮ ಹೆಗ್ಡೆ, ಲೋಕಸಭೆಯಲ್ಲಿ `ತಪ್ಪಾಯ್ತು, ತಿದ್ಕೋತೀನಿ ಎಂದಿದ್ದಾರೆ. ನಿಜಕ್ಕೂ ತಿದ್ಕೋತಾರಾ..? ಎನ್ನುವುದೇ ಅನುಮಾನ. ಏಕೆಂದರೇ ಇದು ಹೆಗ್ಡೆ ಜಾಯಮಾನ ತಿಳಿದವರು ನಂಬುವ ಮಾತಲ್ಲ.

ಫೈರ್ ಬ್ರ್ಯಾಂಡ್ ಅಲ್ಲ, ರೇಬಿಸ್ ಬ್ರ್ಯಾಂಡ್..!

ಉತ್ತರ ಭಾರತದ ರಾಜಕಾರಣ ಹೊರತುಪಡಿಸಿದರೇ ಅತೀಹೆಚ್ಚು ಅಸಹ್ಯ ಪದಗಳ ಜಾತ್ರೆ ನಡೆಯುತ್ತಿರುವುದು ಕರ್ನಾಟಕದ ರಾಜಕಾರಣದಲ್ಲಿ. ಸಂವಿಧಾನವನ್ನು ಪ್ರಮಾಣಿಕರಿಸಿ ಆಡಳಿತಕ್ಕೆ ಬರುವವರಿಗೆ ಸಂವಿಧಾನಾತ್ಮಕ ಪದಗಳ ಬಗ್ಗೆ ಅರಿವಿರಬೇಕು. ಅದನ್ನು ಮಾಧ್ಯಮಗಳು ಕೂಡ ಅರ್ಥ ಮಾಡಿಕೊಳ್ಳಬೇಕು. ನಾಲಿಗೆಯನ್ನು ಎಗ್ಗಿಲ್ಲದೇ ಹರಿಯಬಿಡುವವರನ್ನು ಫೈರ್‍ಬ್ರಾಂಡ್ ಎಂದು ಹೊಗಳಿ ಅವರನ್ನು ಇನ್ನಷ್ಟು ಚಿತಾವಣೆಗೆ ದೂಡುವ ಅಪ್ರಬುದ್ಧತೆಯನ್ನು ತೋರಿಸಬಾರದು. ಕಳ್ಳನಿಗೆ, ನೀನು ಸೂಪರ್ ಆಗಿ ಕದಿಯುತ್ತೀಯಾ ಎಂದು ಬೆನ್ನುತಟ್ಟಿದರೇ ಅವನಲ್ಲಿ ಭವಿಷ್ಯದ ಮಹಾತ್ಮನನ್ನು ಕಾಣಲು ಸಾಧ್ಯವೇ..? ಸಧ್ಯ ರಾಜ್ಯದಲ್ಲಾಗುತ್ತಿರುವುದು ಅದೇ..!

ಇಲ್ಲಿ ಯಾವ ಪಕ್ಷ ಬೇಧವೆಂದಿಲ್ಲ. ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ನಾಲಿಗೆಯಿಂದ ಅಸಹ್ಯ ನೆಕ್ಕಿದವರೇ..!, ಏನನ್ನೋ ಉದಾಹರಿಸುವ ಭರದಲ್ಲಿ ಪ್ರಧಾನಿಯನ್ನು ಸೂ..ಮಗ ಎಂದು ಉದಾಹರಿಸಿದ ರೋಷನ್ ಬೇಗ್ ಮೇಲೆ ಕಾಂಗ್ರೆಸ್ ಪಕ್ಷ ಯಾವುದೇ ರೀತಿಯ ಶಿಸ್ತಿನ ಕ್ರಮ ತೆಗೆದುಕೊಂಡಿಲ್ಲ. ಯಾವುದೇ ಶಿಸ್ತಿನ ಕ್ರಮ ತೆಗೆದುಕೊಳ್ಳದೇ ಅವರನ್ನು ಸುಮ್ಮನೇ ಬಿಟ್ಟಿದ್ದಕ್ಕೇನೋ, ಅವರ ಮಗ ರುಮಾನ್ ಬೇಗ್ ಮಾಧ್ಯಮದವರಿಗೆ ಜೀವ ಬೆದರಿಕೆ ಹಾಕುವಷ್ಟು ಹದ್ದುಮೀರಿದ್ದ. ಲಂಗು ಲಗಾಮು ಹಾಕದಿದ್ದಾಗ ಆಗುವಂತಹ ಪರಿಣಾಮಗಳಿವು.

ಹಾಗೆಯೇ ಬಿಜೆಪಿಯ ಈಶ್ವರಪ್ಪನವರು ಭಾಯಿ ತೆಗೆದರೇ ವಿವಾದವಾಗುತ್ತದೆ. ಅವರಿಂದ ಒಂದೊಳ್ಳೇ ಮಾತನ್ನು ನಿರೀಕ್ಷಿಸುವುದೇ ತಪ್ಪಾಗುತ್ತದೆ. ಆದರೆ ಇತ್ತೀಚೆಗೆ ಬಿಜೆಪಿಯಲ್ಲೇ ಅತಂತ್ರರಾಗಿರುವ ಅವರ ಮಾತು ಹೆಚ್ಚು ಗಾಂಭಿರ್ಯ ಪಡೆದುಕೊಳ್ಳುತ್ತಿಲ್ಲ. ಆದರೆ ಮಾಧ್ಯಮಗಳು ಪುಂಕಾನುಪುಂಖವಾಗಿ ವೈಭವಿಕರಿಸುವ, ಉಗಿಸಿಕೊಂಡರು ಫೈರ್‍ಬ್ರಾಂಡ್ ಎಂದು ಹೊಗಳಿ ಅಟ್ಟಕ್ಕೇರಿಸುವ ವ್ಯಕ್ತಿತ್ವವೆಂದರೇ ಅದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗ್ಡೆ.

ಅನಂತ್ ಕುಮಾರ್ ಹೆಗ್ಡೆಯವರು ಮುಸ್ಲೀಮರನ್ನು ಪರಿಣಾಮಕಾರಿಯಾಗಿ ದ್ವೇಷಿಸುತ್ತಾರೆ. ಅವರ ಮತಗಳೇ ನನಗೆ ಬೇಡವೆನ್ನುತ್ತಾರೆ. ಇಸ್ಲಾಂ ಇರುವವರೆಗೆ ಭಯೋತ್ಪಾಧನೆಯಿರುತ್ತೆ ಎನ್ನುತ್ತಾರೆ. ಹೇಗೋ ತೆರೆಯಲ್ಲಿ ಗರ್ಜಿಸುತ್ತಿದ್ದ ಅವರಿಗೆ ಮೋದಿ ಸಂಪುಟದಲ್ಲಿ ಸ್ಥಾನ ಸಿಕ್ಕಿದ್ದೇ ರಾಜ್ಯಾದ್ಯಂತ ಓಡಾಡತೊಡಗಿದ್ದಾರೆ. ಪರಿವರ್ತನಾ ಯಾತ್ರೆಯ ಉದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಹುಲ್ ಗಾಂಧಿಯನ್ನು ಏಕವಚನದಲ್ಲೇ ಹೀಯಾಳಿಸಿದ್ದಾರೆ. ಬೈದಿದ್ದಾರೆ. ಅವನ್ನೆಲ್ಲಾ ಸಹಿಸಿಕೊಳ್ಳಬಹುದೇನೋ, ಆದರೆ ಸಿದ್ದರಾಮಯ್ಯನವರನ್ನು ಪಾಪದ ಪಿಂಡ ಎಂದಿದ್ದನ್ನು, ಸಂವಿಧಾನವನ್ನು ಬದಲಿಸಬೇಕೆಂದಿದ್ದನ್ನು, ಜಾತ್ಯಾತೀತರನ್ನು ಅಕ್ರಮ ಸಂತಾನ ಎಂದಿದ್ದನ್ನು – ಒಪ್ಪಲು ಸಾಧ್ಯವೇ..?

ಕ್ರಮದ ವಿಚಾರ ಆಚೆಗಿಡಿ. ಅನಂತ್ ಕುಮಾರ್ ಹೆಗ್ಡೆ ವೇಶ್ಯೆಯ ಮಗ ಎಂಬರ್ಥದಲ್ಲಿ ರಾಜ್ಯದ ಮುಖ್ಯಮಂತ್ರಿಯನ್ನು ಬೈದರೂ, ಅದು ತಪ್ಪು ಎಂದು ಹೇಳುವ ಸಭ್ಯತೆ ಬಿಜೆಪಿ ನಾಯಕರಿಗಿರಲಿಲ್ಲ. ಮಣಿಶಂಕರ್ ಅಯ್ಯರ್ ನೀಚ ಎಂದ ಮೂರು ಗಂಟೆಗಳಲ್ಲೇ ಅವರನ್ನು ಪಕ್ಷದಿಂದ ಕಿತ್ತೊಗೆಯಲಾಗಿತ್ತು. ಆದರೆ ಅನಂತ್ ಹೆಗ್ಡೆ ಪಾಪದ ಪಿಂಡ ಎಂದು ನಾಲ್ಕೈದು ದಿನವಾದರೂ ಬುದ್ದಿ ಹೇಳುವ ಪ್ರಯತ್ನವಾಗಲಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಅನಂತ್‍ಕುಮಾರ್ ಹೆಗ್ಡೆ ಹಠಾವೋ ಅಭಿಯಾನ ಶುರುವಾಗಿತ್ತು. ಮಣಿಶಂಕರ್ ಅಯ್ಯರ್ ಅವರ ಎಲ್ಲಾ ವಿವಾದಗಳು ಒಟ್ಟಾರೆ ಪರಿಣಾಮವಿದು ಎಂದು ವಾದಿಸುವುದಾದರೇ, ಅನಂತ್ ಕುಮಾರ್ ಹೆಗ್ಡೆ ಬಾಯಿಂದ ಈ ಹಿಂದೆ ಉದುರಿದ್ದೆಲ್ಲಾ ಅಣಿಮುತ್ತುಗಳೇ..? ಕಡೆಗೂ ಕೇಂದ್ರದ ಬಿಜೆಪಿ ನಾಯಕರು ಪ್ರತಿಕ್ರಿಯಿಸಲು ಸಂವಿಧಾನದವರೆಗೂ ಹದ್ದುಮೀರಬೇಕಿತ್ತು. ಅದಾಗಿದೆ.

ಅನಂತ ರಗಳೆಗಳು..!

ಧರ್ಮದ ಆಧಾರದಲ್ಲಿ ಮತಯಾಚಿಸಬಾರದು ಎಂದಿದ್ದು ಸುಪ್ರಿಂ ಕೋರ್ಟ್. ಆದರೆ ಇವತ್ತು ದೇಶದಲ್ಲಿ ನಡೆಯುತ್ತಿರುವುದೇ ಧರ್ಮದ ಆಧಾರದ ರಾಜಕಾರಣ. ಹಿಂದುತ್ವ, ಇಸ್ಲಾಂ, ಅಹಿಂದ ಅಂತೆಲ್ಲಾ ವೋಟ್‍ಬ್ಯಾಂಕ್ ರಾಜಕಾರಣ ಎಗ್ಗಿಲ್ಲದೆ ನಡೆಯುತ್ತಿದೆ. ಒಂದೊಂದು ಪಕ್ಷ ಬೇರೆ ಬೇರೆ ಧರ್ಮವನ್ನು ಆಧಾರವಾಗಿಟ್ಟುಕೊಂಡು ಮತಯಾಚಿಸಿ ಗದ್ದುಗೆ ಹಿಡಿಯುತ್ತಿದ್ದಾರೆ. ಅನಂತ ಕುಮಾರ್ ಹೆಗ್ಡೆಯಂತಹವರಿಗೆ ಧರ್ಮವೇ ಅಸ್ತ್ರವಾಗಿ ಹೋಗಿದೆ. ದುರಂತವೆಂದರೇ- ಅವರ ಹೇಳಿಕೆಗಳನ್ನು ಕೆಲ ಮಾಧ್ಯಮಗಳು ಫೈರ್‍ಬ್ರ್ಯಾಂಡ್ ಎಂದು ಸುದ್ದಿ ಮಾಡುತ್ತವೆ.

ಪ್ರಧಾನಿ ನರೇಂದ್ರ ಮೋದಿ ಜನಪ್ರತಿನಿಧಿಗಳ ವರ್ತನೆ ಹೇಗಿರಬೇಕು, ಕರ್ತವ್ಯ, ಕಾರ್ಯವೈಖರಿ ಯಾವ ರೀತಿ ಇರಬೇಕು ಎನ್ನುವುದರ ಕುರಿತು ಕೆಲ ತಿಂಗಳ ಹಿಂದಷ್ಟೇ ಸಂಸದರ ಸಭೆಯಲ್ಲಿ ಪಾಠ ಹೇಳಿದ್ದರು. ಮಾದರಿ ಜನಪ್ರತಿನಿಧಿಗಳಾಗಿ ಎಂದು ಪಕ್ಷದ ಸಂಸದರಿಗೆ ತಾಕೀತು ಮಾಡಿದ್ದರು. ಇದಲ್ಲದೆ, ಚುನಾಯಿತ ಪ್ರತಿನಿಧಿಗಳ ನಡೆ-ನುಡಿ, ನಡವಳಿಕೆ ಕುರಿತು ಸಾರ್ವಜನಿಕ ಸಭೆಗಳಲ್ಲಿ ವಿವರಿಸಿ ಅಂಥವರನ್ನೇ ಚುನಾಯಿಸಿ ಎಂದು ಜನತೆಯಲ್ಲಿ ಮನವಿ ಮಾಡಿದ್ದರು. ಇಷ್ಟೆಲ್ಲಾ ಹೇಳಿದ ಮೇಲೂ ಸುಪ್ರಿಂ ಕೋರ್ಟ್ ಹಾಗೂ ನರೇಂದ್ರ ಮೋದಿಯ ಹೇಳಿಕೆಗೆ ವಿರುದ್ಧವಾದ ನಡತೆಯನ್ನೇ ರೂಢಿಸಿಕೊಂಡವರು ಸಂಸದ ಅನಂತಕುಮಾರ ಹೆಗ್ಡೆ.

ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಸಂಸದರಾಗಿರುವ ಅನಂತಕುಮಾರ್ ಹೆಗ್ಡೆ ಐದು ಭಾರಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಉತ್ತರ ಕನ್ನಡದ ಮೆಜಾರಿಟಿ ಹಿಂದು ಮತಗಳನ್ನು ಸೆಳೆಯುವ ತಂತ್ರಗಾರಿಕೆಯಲ್ಲಿ ನಿಪುಣರು. ಭಟ್ಕಳದ ಐವತ್ತು ಪರ್ಸೆಂಟ್ ಹಿಂದೂಗಳು, ಹವ್ಯಕ ಬ್ರಾಹ್ಮಣ, ಈಡಿಗ, ಕ್ಷತ್ರಿಯ, ಮರಾಠರ ಮತಗಳನ್ನು ಪಡೆದುಕೊಳ್ಳುವುದರಲ್ಲಿ ಅನಂತಕುಮಾರ ಹೆಗ್ಡೆಯ ನೈಪುಣ್ಯತೆ ಕೆಲಸ ಮಾಡುತ್ತದೆ. ಪ್ರಚೋಧನಕಾರಿ ಹೇಳಿಕೆಗಳ ಮೂಲಕ ಉತ್ತರ ಕನ್ನಡದ ಶಾಂತಿ ಕದಡುತ್ತಿರುವ ಇವರ ದುಂಡಾವರ್ತನೆಗೆ ಕಡಿವಾಣ ಬೀಳುತ್ತಿಲ್ಲ. ಆದರೆ ಶಿಸ್ತಿನ ಪಕ್ಷ ಬಿಜೆಪಿ ಯಾವತ್ತೂ ಹೆಗ್ಡೆ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಬುದ್ದಿ ಹೇಳುವ ಪ್ರಯತ್ನವನ್ನೂ ಮಾಡಲಿಲ್ಲ.

ವರ್ಷದ ಹಿಂದೆ ಶಿರಸಿಯ ಟಿಎಸ್‍ಎಸ್ ಆಸ್ಪತ್ರೆಯಲ್ಲಿ ತನ್ನ ತಾಯಿಯ ಚಿಕಿತ್ಸೆಯ ವಿಚಾರಕ್ಕೆ ಸಂಬಂಧಿಸಿದಂತೆ, ಬೇರೊಂದು ಶಸ್ತ್ರಚಿಕಿತ್ಸೆಯಲ್ಲಿದ್ದ ವೈದ್ಯರು ಕೆಲ ನಿಮಿಷಗಳು ತಡವಾಗಿ ಬಂದಿದ್ದಕ್ಕೆ, ಅವರನ್ನು ರಕ್ತ ಬರುವಂತೆ ಹೊಡೆದಿದ್ದು ಅದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆ ವಿಚಾರದಲ್ಲೂ ಬಿಜೆಪಿ ಬುದ್ದಿ ಹೇಳಲಿಲ್ಲ. ಬದಲಿಗೆ ಕೇಂದ್ರ ಸರ್ಕಾರ ಅನಿರೀಕ್ಷಿತವಾಗಿ ಕೇಂದ್ರ ಮಂತ್ರಿ ಸ್ಥಾನವನ್ನು ಕೊಟ್ಟಿತ್ತು. ಪ್ರಮುಖ ಜವಬ್ಧಾರಿಗೆ ಹೋದ ನಂತರವಾದರೂ ಬದಲಾಗುತ್ತಾರಾ..? ಎಂದರೇ ಅದೂ ಸುಳ್ಳಾಗಿತ್ತು. ಪರಿವರ್ತನಾ ಯಾತ್ರೆಯಲ್ಲಿ ಬಿಲ್ಲವರನ್ನು ಕೆಣಕಿದರು, ಕುರುಬರ ವೋಟು ಬೇಡವೆಂದರು, ಮುಸಲ್ಮಾನರನ್ನು ಕೆಣಕುತ್ತಲೇ ಹೋದರು.

ಉತ್ತರಕನ್ನಡದಂತಹ ಸೂಕ್ಷ್ಮ ಪ್ರದೇಶಗಳು ಅನಂತಕುಮಾರ ಹೆಗ್ಡೆಯಂತವರಿಗೆ ಪಥ್ಯವಾಗುತ್ತದೆ. ಬಹುಸಂಖ್ಯಾತ ಮತಗಳನ್ನು ಸೆಳೆಯಲು, ಪ್ರಚೋಧನೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾರೆ. ಹಿಂದೂ-ಮುಸ್ಲಿಮರ ಮಧ್ಯೆ ಒಗ್ಗಟ್ಟಿದ್ದರೂ ಅದನ್ನು ಮುರಿಯುವಲ್ಲಿ ಯಶಸ್ವಿಯಾಗುತ್ತಾರೆ. ಕೋಮುಬೆಂಕಿಯಲ್ಲಿ ತುಪ್ಪ ಬೇಯಿಸಿಕೊಂಡು ಚಪ್ಪರಿಸುತ್ತಾರೆ. ಇಂತಹವರ ಮಾತಿಗೆ ಮಣೆ ಹಾಕುವ ಜನರು ಮೊದಲು ಬದಲಾಗಬೇಕು. ಲೋಕಸಭೆ ಚುನಾವಣೆಗೂ ಮುನ್ನ ಮುಸ್ಲಿಂ ಮತಗಳು ತಮಗೆ ಬೇಡ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದ ಅನಂತಕುಮಾರ ಹೆಗಡೆ ಚುನಾವಣೆ ನಂತರವೂ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಹೇಳಿಕೆ ನೀಡಿದ್ದರು. ಕೆಲ ತಿಂಗಳ ಹಿಂದೆ ಶಿರಸಿಯಲ್ಲಿ ಮಾತನಾಡಿದ್ದ ಅವರು, ಎಲ್ಲಿಯವರೆಗೆ ಇಸ್ಲಾಂ ಇರುತ್ತದೋ ಅಲ್ಲಿಯವರೆಗೆ ಭಯೋತ್ಪಾದನೆ ಇರುತ್ತದೆ ಎಂದಿದ್ದರು. ಈ ಸಂಬಂಧ ಅವರ ವಿರುದ್ಧ ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು.

ಜನಪ್ರತಿನಿಧಿಯಾದವರಿಗೆ ಅವರದ್ದೇ ಆದ ಜವಬ್ಧಾರಿಗಳಿರುತ್ತವೆ. ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಎಲ್ಲಾ ಧರ್ಮದವರನ್ನು ಒಂದೇ ತಕ್ಕಡಿಯಲ್ಲಿ ತೂಗಿ ನೋಡುವ ಗುಣ ಬೆಳೆಸಿಕೊಳ್ಳಬೇಕು. ಕ್ಷೇತ್ರದ ಶಾಂತಿ, ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು. ಆದರೆ ಅನಂತಕುಮಾರ ಹೆಗ್ಡೆ ಇವೆಲ್ಲಾ ಸದ್ಗುಣಗಳಿಗೆ ವಿರುದ್ಧವಾಗಿ ನಿಲ್ಲುತ್ತಾರೆ. ಅದಕ್ಕೆ ಅವರು ಆಡುವ ಮಾತುಗಳೇ ಜ್ವಲಂತ ನಿದರ್ಶನವಾಗಿದೆ. ಕಡೆಗೂ ಬಿಜೆಪಿ ಬುದ್ದಿ ಹೇಳಿದೆ. ಬದಲಾಗಬೇಕು. ತಿದ್ದಿಕೊಳ್ಳಬೇಕು. ಇಲ್ಲವೆಂದರೇ ಎಲೆ ಅಡಿಕೆ ಜಗಿಯುತ್ತಾ ಮನೆಯಲ್ಲೇ ಕೂರಬೇಕಷ್ಟೇ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...