ರಜನಿ ಓದಿಲ್ಲ ಎಂದ ಸುಬ್ರಮಣ್ಯ ಸ್ವಾಮಿ ಮರೆತಿರುವ ಹಿಸ್ಟರಿ ಏನು..?

Date:

ಅದು ತಮಿಳು ನಾಡು. ಪಕ್ಕದ ಕರ್ನಾಟಕದಂತಿಲ್ಲ ಅಲ್ಲಿನ ಜನರ ಮನಃಸ್ಥಿತಿ. ಅವರ ಅಭಿಮಾನಕ್ಕೆ ಅವರೇ ಸಾಟಿ. ಸಿನಿಮಾ ನಟರು, ರಾಜಕಾರಣಿಗಳನ್ನು ಅವರು ಸಾಯುವಷ್ಟು ಅಭಿಮಾನಿಸುತ್ತಾರೆ. ಹುಚ್ಚರಂತೆ ಪ್ರೀತಿಸುತ್ತಾರೆ. ಅಲ್ಲಿ ಯಾರು ಬೇಕಾದ್ರೂ ಹೀರೋ ಆಗಿ ಮೆರೆಯುತ್ತಾರೆ, ಅದ್ಯಾರೆ ಆದ್ರೂ ರಾಜಕಾರಣದಲ್ಲಿ ಮಿಂಚಿಬಿಡ್ತಾರೆ. ಅದರಲ್ಲೂ ಸಿನಿಮಾಕ್ಕೂ ರಾಜಕಾರಣಕ್ಕೂ ಸೋದರ ಸಂಬಂಧ. ಈ ಜಗತ್ತಿನವರು ಆ ಜಗತ್ತನ್ನು ಈಸಿಯಾಗಿ ಗೆದ್ದುಬಿಡುತ್ತಾರೆ. ಹೀಗಾಗಿ ರಜನಿ ರಾಜಕಾರಣದ ಪ್ರವೇಶ- ಆಲ್‍ರೆಡಿ ರಾಜಕಾರಣಿಗಳಿಗೆ ನಡುಕ ಹುಟ್ಟಿಸಿದೆ.

ಸಿನಿಮಾ ತಾರೆಯರನ್ನು ತಮಿಳುನಾಡಿನ ಜನರು ಪ್ರೀತಿಸುವಷ್ಟು ಯಾರೂ ಪ್ರೀತಿಸಲು ಸಾಧ್ಯವಿಲ್ಲ. ತಮಿಳುನಾಡಿನ ಆ ಕಾಲದ ಸೂಪರ್ ಸ್ಟಾರ್ ಎಂಜಿ ರಾಮಚಂದ್ರನ್ ಕಟ್ಟಿದ ಎಐಎಡಿಎಂಕೆ ಪಕ್ಷವನ್ನು ಒಂದೇ ಏಟಿಗೆ ಗೆಲ್ಲಿಸಿ, ಅವರನ್ನು ಸಿಎಂ ಮಾಡಿದ್ದು ತಮಿಳುನಾಡಿನ ಜನ್ರು. ಅವರು ಸತ್ತನಂತರ ಅವರ ಪತ್ನಿ ಜಾನಕಿ ರಾಮಚಂದ್ರನ್ ಸಿ ಎಂ ಆದರು. ಆದರೆ ಅಧಿಕಾರದ ಚುಕ್ಕಾಣಿ ಹಿಡಿದು ಇಪ್ಪತ್ಮೂರು ದಿನವಾಗುವಷ್ಟರಲ್ಲಿ ಎಐಎಡಿಎಂಕೆಯಲ್ಲಿಯೇ ಬಿರುಕು ಮೂಡಿತ್ತು. ಜನವರಿ 30, 1988ರಿಂದ ಜನವರಿ 27 1989ರವರೆಗೆ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು. ಆಮೇಲೆ ಸ್ಟೇಟ್ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಡಿಎಂಕೆ ಅಧಿಕಾರಕ್ಕೆ ಬಂತು. ಕರುಣಾನಿಧಿ ಮುಖ್ಯಮಂತ್ರಿಯಾದರು. ಆದರೆ ಎರಡೇ ವರ್ಷದಲ್ಲಿ ಮತ್ತೆ ಚುನಾವಣೆ ಘೋಷಣೆಯಾಯಿತು. ಈ ಬಾರಿ ಕರುಣಾನಿಧಿಯನ್ನು ಹಣಿಯಲು ಎಂಜಿಆರ್ ಅವರ ಎಐಎಡಿಎಂಕೆಯಿಂದ ನಟಿ ಜಯಲಲಿತಾ ಇಳಿದರು. ಮೊದಲ ಪ್ರಯತ್ನದಲ್ಲಿಯೇ ಗೆದ್ದು ಮುಖ್ಯಮಂತ್ರಿಯಾದರು.

ಸ್ವಾತಂತ್ರಪೂರ್ವ 1921ರಿಂದ ಹಿಡಿದು ಸ್ವಾತಂತ್ರ ನಂತರ 1967ರವರೆಗೆ ಮದ್ರಾಸ್ ಲೆಜೆಸ್ಲೆಟಿವ್ ಎಲೆಕ್ಷನ್‍ನಲ್ಲಿ ಗೆದ್ದು ಅಧಿಕಾರಕ್ಕೇರುತ್ತಿದ್ದದ್ದು ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಾರ್ಟಿ. 1967ರಿಂದ ತಮಿಳುನಾಡು ಅಸ್ತಿತ್ವಕ್ಕೆ ಬಂದ ನಂತರ ಅಣ್ಣಾದೊರೈ ನೇತೃತ್ವದ ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂತು. ಜನರು ಕಾಂಗ್ರೆಸ್ ಅನ್ನು ಬದಿಗಿಟ್ಟು ಹೊಸ ಪಕ್ಷವೊಂದನ್ನು ಅಧಿಕಾರಕ್ಕೆ ತಂದಿದ್ದರು. ಅಲ್ಲಿನ ಜನರು ಸಿನಿಮಾ ಪ್ರಪಂಚ ಮತ್ತು ಕಲಾವಿದರನ್ನು ಆ ಕಾಲಘಟ್ಟದಲ್ಲೂ ಆರಾಧಿಸುತ್ತಿದ್ದರು ಎನ್ನುವುದಕ್ಕೆ ಅಣ್ಣಾ ದೊರೈ ತಾಜಾ ನಿದರ್ಶನ. ಏಕೆಂದರೇ ಅಣ್ಣಾ ದೊರೈ ಕೂಡ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಸಿನಿಮಾ ಸ್ಕ್ರಿಪ್ಟ್ ಬರೆಯುತ್ತಿದ್ದರು.

ಇದೇ ಡಿಎಂಕೆಯಿಂದ ಚುನಾವಣೆಗೆ ಸ್ಪರ್ಧಿಸಿ ಐದು ಬಾರಿ ಸಿಎಂ ಆಗಿ, ಇಪ್ಪತ್ತೆರಡು ವರ್ಷಗಳ ಕಾಲ ರಾಜ್ಯವಾಳಿದ ಕರುಣಾನಿಧಿ, ಸಿನಿಮಾಗಳಿಗೆ ಸ್ಕ್ರಿಪ್ಟ್ ಬರೆಯುತ್ತಿದ್ದರು. ಸಾಮಾಜಿಕ ಕಳಕಳಿಯ ಸ್ಕ್ರಿಪ್ಟ್ ಬರೆಯುವುದರಲ್ಲಿ ನಿಷ್ಣಾತರಾಗಿದ್ದರು ಕರುಣಾನಿಧಿ. ಅವರು ಗೆದ್ದರು, ಗೆಲ್ಲುತ್ತಾ ಹೋದರು. ತಮಿಳುನಾಡಿನ ಜನರು ಸಿನಿಮಾ ಮಂದಿಗೆ ಈ ಪರಿಯಾಗಿ ಅಭಿಮಾನಿಸುತ್ತಿರುವ ಹೊತ್ತಿಗೆ, ಅದನ್ನೇ ದಾಳ ಮಾಡಿಕೊಂಡು ಡಿಎಂಕೆಗೆ ಟಾಂಗು ಕೊಡಲು ಅಸ್ತಿತ್ವಕ್ಕೆ ಬಂದಿದ್ದು ಎಐಎಡಿಎಂಕೆ. ಅದರ ಸಾರಥಿಯಾಗಿದ್ದವರು ಇವರೆಲ್ಲರನ್ನೂ ಮೀರಿಸುವಂಥ ನಟ, ತಮಿಳು ಚಿತ್ರರಂಗದ ಸೂಪರ್‍ಸ್ಟಾರ್ ಎಂ ಜಿ ರಾಮಚಂದ್ರನ್, ಅರ್ಥಾತ್ ಎಂಜಿಆರ್.

1980ರ ಸ್ಟೇಟ್ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಡಿಎಂಕೆ ವಿರುದ್ಧ ಸ್ಪರ್ಧಿಸಿದ ಎಂಜಿಆರ್ ನೇತೃತ್ವದ ಎಐಎಡಿಎಂಕೆ ಮೊದಲ ಪ್ರಯತ್ನದಲ್ಲೇ ಗೆದ್ದಿತ್ತು. ಎಂಜಿಆರ್ ತಮಿಳುನಾಡಿನ ಮುಖ್ಯಮಂತ್ರಿಯಾದರು. ಮೂರೇ ವರ್ಷದಲ್ಲಿ ರಾಜಕೀಯ ಅಸ್ಥಿರತೆ ಶುರುವಾಗಿ ರಾಷ್ಟ್ರಪತಿ ಆಡಳಿತ ಹೇರಲಾಯಿತು. ಮತ್ತೆ ಎಲೆಕ್ಷನ್ ನಡೆದು ಎಂಜಿಆರ್ ಪುನರಾಯ್ಕೆಯಾದರು. ಇದಾದ ನಂತರವೂ ಎಂಜಿಆರ್ ಮುಖ್ಯಮಂತ್ರಿಯಾದರು. ಸತತ ಮೂರು ಬಾರಿ ಮುಖ್ಯಮಂತ್ರಿಯಾದ ಎಂಜಿಆರ್ ತೀರಿಕೊಂಡ ನಂತರ ವಿ ಆರ್ ನೆಡುಚೇಜಿಯಾನ್ ಒಂದು ವರ್ಷಗಳ ಕಾಲ ಸಿಎಂ ಆದರು. ಅಷ್ಟರಲ್ಲಿ ಪಕ್ಷದಲ್ಲಿ ಒಡಕು ಮೂಡಿ, ಎಂಜಿಆರ್ ಪತ್ನಿ ಜಾನಕಿ ರಾಮಚಂದ್ರನ್ ಸಿಎಂ ಆದರು. ಕೇವಲ ಇಪ್ಪತ್ಮೂರನೇ ದಿನಕ್ಕೆ ಬಾರಿ ಒಡಕು ಮೂಡಿ ಎಐಡಿಎಂಕೆ ಹೋಳಾಯಿತು. ಆಲ್‍ಮೋಸ್ಟ್ ಸದಸ್ಯರು ಜಯಲಲಿತಾ ಬೆಂಬಲಕ್ಕೆ ನಿಂತರು. ಅಲ್ಲಿ ಮತ್ತೇ ರಾಷ್ಟ್ರಪತಿ ಆಳ್ವಿಕೆ ಜಾರಿಯಾಯಿತು.

1991ರಲ್ಲಿ ಎಐಎಡಿಎಂಕೆಯಿಂದ ಅಖಾಢಕ್ಕಿಳಿದ ಜಯಲಲಿತಾ ಮೊದಲ ಪ್ರಯತ್ನದಲ್ಲೇ ಮುಖ್ಯಮಂತ್ರಿಯಾದರು. ಆನಂತರ ಎಐಎಡಿಎಂಕೆ ಹಾಗೂ ಡಿಎಂಕೆ ಮಧ್ಯೆ ಅಕ್ಷರಶಃ ಕಾಳಗ ಶುರುವಾಗಿತ್ತು. ಕಳೆದ ಇಪ್ಪತ್ತೈದು ವರ್ಷಗಳಿಂದ ತಮಿಳುನಾಡು ಕಂಡಿರೋದು ಇಬ್ಬರೇ ಪರಿಪೂರ್ಣ ಸಿಎಂಗಳನ್ನ. ಒಬ್ಬರು ಕರುಣಾನಿಧಿ, ಇನ್ನೊಬ್ಬರು ಜಯಲಲಿತಾ. ಮದ್ಯೆದಲ್ಲಿ ಅವಾಂತರಗಳಾದಾಗ ಎಐಎಡಿಎಂಕೆ ಪನ್ನೀರ್‍ಸೆಲ್ವಂರನ್ನು ಉತ್ಸವ ಮೂರ್ತಿ ಮಾಡಿದೆಯಷ್ಟೇ..! ತಮಿಳುನಾಡು ರಾಜ್ಯವೆಂದು ಘೋಷಣೆಯಾದ ನಂತರ ಅಂದರೇ, ಕಳೆದ ನಲವತ್ತಾರು ವರ್ಷಗಳಿಂದ ತಮಿಳುನಾಡನ್ನು ಡಿಎಂಕೆ ಹಾಗೂ ಎಐಎಡಿಎಂಕೆ ಮಾತ್ರ ಆಳಿದೆ. ಕಾಂಗ್ರೆಸ್, ಬಿಜೆಪಿ ಇನ್ನಿತರೆ ಪಕ್ಷಗಳು ಇಲ್ಲಿ ಲೆಕ್ಕಕ್ಕೇ ಇಲ್ಲ. ಇಲ್ಲಿವರೆಗಿನ ಒಟ್ಟು ಇತಿಹಾಸವನ್ನು ನೋಡಿದ್ರೇ ತಮಿಳುನಾಡಿನ ಜನರು ತೆರೆ ಮೇಲಿನ ಸ್ಟಾರ್‍ಗಳಲ್ಲಿ ನಿಜವಾದ ಸ್ಟಾರ್‍ಗಳನ್ನು ಕಂಡಿದ್ದಾರೆ. ಅವರನ್ನು ರಾಜಕೀಯದಲ್ಲಿ ಅನಾಯಾಸವಾಗಿ ಗೆಲ್ಲಿಸಿದ್ದಾರೆ. ಇವೆಲ್ಲವನ್ನು ಎನ್‍ಕ್ಯಾಶ್ ಮಾಡಿಕೊಳ್ಳಲು ಹೊರಟಿತ್ತು ಬಿಜೆಪಿ.

ತಮಿಳುನಾಡಿನಲ್ಲಿ ಅನಭಿಷಿಕ್ತ ದೊರೆಯಾಗಿ ಮೆರೆಯುತ್ತಿರುವ ರಜನಿಕಾಂತ್ ಅವರನ್ನು ಬಿಜೆಪಿ ಸೆಳೆಯುವ ಪ್ರಯತ್ನ ಮಾಡಿತ್ತು. ಅದಕ್ಕೆ ಕಾರಣ, ತಮಿಳುನಾಡಿನಲ್ಲಿ ಅಕೌಂಟ್ ಓಪನ್ ಮಾಡುವ ಹಪಾಹಪಿ. ಅಲ್ಲಿನ ಜನರ ಮಟ್ಟಿಗೆ ರಜನಿ ಸೂಪರ್ ಸ್ಟಾರ್. ಬಿಜೆಪಿ ತಮಿಳುನಾಡಿನಲ್ಲಿ ಇತಿಹಾಸ ನಿರ್ಮಿಸಲು ತಯಾರಿ ನಡೆಸಿತ್ತು. ರಜನಿಕಾಂತ್‍ರನ್ನು ತಮ್ಮ ಪಕ್ಷಕ್ಕೆ ಸೆಳೆದು ಆ ಮೂಲಕ.. ಡಿಎಂಕೆ, ಎಐಎಡಿಎಂಕೆ ಭದ್ರಕೋಟೆಯನ್ನು ಚಿಂದಿ ಮಾಡೋ ಹುನ್ನಾರದಲ್ಲಿತ್ತು. ಅವೆಲ್ಲ ಸಾಧ್ಯವಾಗಬೇಕಂದ್ರೆ ರಜನಿಕಾಂತ್ ರಾಜಕೀಯಕ್ಕೆ ಬರಬೇಕು. ತಮಿಳುನಾಡಿನ ಜನರಿಗೆ ಅಣ್ಣನೇ ಆಗಿರೋ ರಜನಿ ಫೀಲ್ಡ್‍ಗೆ ಇಳಿದರೇ ಅವರೇ ನೆಕ್ಸ್ಟ್ ಸಿಎಂ ಎಂಬ ಲೆಕ್ಕಾಚಾರವಿತ್ತು. ಆದ್ರೆ ಆ ಪ್ರಕ್ರಿಯೆ ಸದ್ದಾದಷ್ಟೇ ವೇಗವಾಗಿ ತಣ್ಣಗಾಗಿದೆ. ಬಿಜೆಪಿ ಸ್ಟಾಲಿನ್ ಮನೆ ಕಡೆ ನಡೆದಿದ್ದರೇ, ರಜನಿ ಹೊಸಪಕ್ಷ ಕಟ್ಟಿದ್ದಾರೆ.

ನಾನು ಕರ್ನಾಟಕದವನು, ಈಗ ತಮಿಳಿಗ..!

ರಾಜಕೀಯಕ್ಕೆ ಸದ್ಯಕ್ಕೆ ಬರೋಲ್ಲ ಎನ್ನುತ್ತಲೇ ದೈವೇಚ್ಛೆ ಇದ್ದಾಗ ಆ ಬಗ್ಗೆ ಯೋಚನೆ ಮಾಡುವೆ ಎಂದು ಹೇಳಿದ್ದ ರಜನೀಕಾಂತ್, ಇದ್ದಕ್ಕಿದ್ದಂತೆ ತಮ್ಮ ರಾಜಕೀಯ ಪ್ರವೇಶವನ್ನು ಖಾತ್ರಿಗೊಳಿಸಿದ್ದು ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಯುದ್ಧ ಬಂದಾಗ ರಾಜಕೀಯ ಆರಂಭಿಸೋಣ. ರಾಜಕೀಯ ಹೋರಾಟಕ್ಕೆ ಎಲ್ಲರೂ ಸಿದ್ಧರಾಗಿ ಎಂದು ಅವರು ತಮ್ಮ ಅಭಿಮಾನಿಗಳಿಗೆ ಕಿವಿಮಾತು ಹೇಳುತ್ತಿದ್ದ ಅವರು ಈಗ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಅತ್ತ ನಿರಂತರ ಟೀಕಾಕಾರ ಸುಬ್ರಮಣ್ಯಂ ಸ್ವಾಮಿ, ರಜನಿ ರಾಜಕೀಯದಲ್ಲಿ ಫ್ಲಾಪ್ ನಟ ಆಗುತ್ತಾರೆ, ಅವರು ಶಿಕ್ಷಿತರಲ್ಲ ಎಂದಿದ್ದಾರೆ. ಶರತ್ ಕುಮಾರ್, ಎಲ್ಲಿಂದಲೋ ಬಂದವರನ್ನು ನಾವು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಬಿಡುವುದಿಲ್ಲ. ನಮ್ಮನ್ನು ಆಳುವ ವ್ಯಕ್ತಿ ಕೇವಲ ಈ ತಮಿಳು ನೆಲದಲ್ಲೇ ಹುಟ್ಟಿದವನಾಗಿರಬೇಕು ಎಂದಿದ್ದಾರೆ. ಇವಕ್ಕೆಲ್ಲ ಪ್ರತಿಕ್ರಿಯಿಸಿರುವ ರಜನಿ, ವ್ಯವಸ್ಥೆ ಹದಗೆಟ್ಟಿದೆ. ರಾಜಕಾರಣದಲ್ಲಿ ಸಾಕಷ್ಟು ದಕ್ಷರಿದ್ದಾರೆ. ಅದರಲ್ಲೊಬ್ಬರು ಎಂ.ಕೆ. ಸ್ಟಾಲಿನ್. ಅವರಂತೆಯೇ ಮತ್ತೊಬ್ಬ ದಕ್ಷ ರಾಜಕಾರಣಿ ಅನ್ಬುಮಣಿ ರಾಮ್ ದಾಸ್. ದೇಶ ವಿದೇಶಗಳಲ್ಲಿ ತಿರುಗಾಡಿರುವ ಅವರು, ಈಗಾಗಲೇ ಸಾಕಷ್ಟು ಅನುಭವಗಳನ್ನು ಪಡೆದಿದ್ದಾರೆ. ತಿರುಮಾವಲನ್ ಮತ್ತೊಬ್ಬ ಪ್ರಬುದ್ಧ ಹಾಗೂ ಉತ್ತಮ ಆಡಳಿತಾತ್ಮಕ ದೃಷ್ಟಿಕೋನ ಹೊಂದಿರುವ ರಾಜಕಾರಣಿ. ಆದರೆ, ಅವರಿಗೆ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಉತ್ತಮ ಆಡಳಿತ ನೀಡಲು ಸಾಧ್ಯವಾಗಿಲ್ಲ. ವಿರೋಧವಿದ್ದರೇನೇ ಬೆಳೆಯಲು ಸಾಧ್ಯ. ಬೆಂಬಲ ಹಾಗೂ ವಿರೋಧಗಳು ಯಾವಾಗಲೂ ಜತೆಜತೆಯಲ್ಲೇ ಇರುತ್ತವೆ. ವಿರೋಧಗಳಿಲ್ಲದೆ ನಾವು ಎಂದಿಗೂ ಬೆಳೆಯಲಾರೆವು ಎಂದಿದ್ದಾರೆ.

ನನಗೀಗ ಅರವತ್ತೇಳು ವರ್ಷ. ಕರ್ನಾಟಕದಲ್ಲಿ ನಾನು ಇಪ್ಪತ್ಮೂರು ವರ್ಷ ಇದ್ದೆ. ತಮಿಳುನಾಡಿಗೆ ಬಂದು ನಲವತ್ತೆರಡು ವರ್ಷಗಳೇ ಕಳೆದಿವೆ. ನಾನು ನಿಮ್ಮೊಂದಿಗೇ ಬೆಳೆದಿದ್ದೇನೆ. ನೀವು ನನ್ನನ್ನು ಸಾಕಿ, ಸಲಹಿ ಒಬ್ಬ ತಮಿಳಿಗನನ್ನಾಗಿಯೇ ಮಾಡಿದ್ದೀರಿ. ನನಗೆ ಈ ಪ್ರಪಂಚದಲ್ಲಿ ಜೀವಿಸಲು ಇಷ್ಟವಾಗುವ ಸ್ಥಳವೆಂದರೆ ಅದು ತಮಿಳುನಾಡು ಮಾತ್ರ. ಹಣದಾಸೆಯಿಂದ ರಾಜಕೀಯಕ್ಕೆ ಬರೋದು ತಪ್ಪು ನನ್ನ ಕೆಲವಾರು ಸ್ನೇಹಿತರು ನನಗೆ ರಾಜಕೀಯಕ್ಕೆ ಬರುವಂತೆ ಸಲಹೆ ನೀಡಿದ್ದಾರೆ. ರಾಜಕೀಯಕ್ಕೆ ಬರುವುದು ತಪ್ಪಲ್ಲ. ಆದರೆ, ಹಣ ಮಾಡುವ ಉದ್ದೇಶದಿಂದಲೇ ರಾಜಕೀಯಕ್ಕೆ ಬರುವುದು ಸರಿಯಲ್ಲ. ನಾನು ರಾಜಕೀಯಕ್ಕೆ ಬಂದರೆ ನನ್ನ ಸಿದ್ಧಾಂತಗಳು ಉಳಿದವರಿಗಿಂತ ಬೇರೆಯದ್ದೇ ಆಗಿರುತ್ತವೆ ಎಂದಿದ್ದಾರೆ ರಜನಿ.

ಅದೇನು ಸುಳ್ಳು ಲೆಕ್ಕಾಚಾರವಲ್ಲ. ತಮಿಳುನಾಡಿನ ಜನರು ಸಿನಿಮಾ ಮಂದಿಯನ್ನು ಅಖಾಢಕ್ಕಿಳಿದ ಆರಂಭದಲ್ಲಿ ಗೆಲ್ಲಿಸಿ ಮುಖ್ಯಮಂತ್ರಿ ಮಾಡಿದ್ದಾರೆ. ಅದು ರಜನೀಕಾಂತ್ ವಿಚಾರದಲ್ಲಿ ನಿಜವೂ ಆಗಬಹುದು..? ಆಗದೇ ಇರಬಹುದು. ಏಕೆಂದರೇ ಇವತ್ತಿಗೆ ತಮಿಳುನಾಡಿನ ಜನರ ಮನಃಸ್ಥಿತಿಯನ್ನು ನಿಕರವಾಗಿ ಗುರುತಿಸುವುದು ಕಷ್ಟ. ಅಷ್ಟಕ್ಕೂ ಈಗ ತಮಿಳುನಾಡಿನಲ್ಲಿ ರಾಜಕೀಯ ವಿಷಮ ಹಂತದಲ್ಲಿದೆ. ಅಮ್ಮ ತೀರಿಕೊಂಡಿದ್ದಾರೆ. ಚಿನ್ನಮ್ಮ ಜೈಲಿನಲ್ಲಿದ್ದಾರೆ. ದೂರವಾಗಿದ್ದ ಪನ್ನೀರು, ಪಳನಿ ಒಂದಾಗಿದ್ದಾರೆ. ಅಲ್ಲಿ ಯಾವ ಕ್ಷಣದಲ್ಲಿ ಏನಾದರೂ ಸಂಭವಿಸಬಹುದು. ಹಾಗಾಗಿ ಒಳಗೊಳಗೆ ರಾಜಕೀಯ ಲೆಕ್ಕಾಚಾರಗಳು ಶುರುವಾಗಿದೆ. ಸ್ಟಾಲಿನ್ ತಂತ್ರಗಳು ನಡೆಯುತ್ತಲೇ ಇದೆ. ಬಿಜೆಪಿ ಮಂತ್ರ ಕೇಳಿ ಬರುತ್ತಿದೆ.

ಈ ಬಾರಿ ದೇಶವನ್ನು ಗೆದ್ದಿದ್ದು ಬಿಜೆಪಿ. ದೇಶವೇ ತನ್ನ ತೆಕ್ಕೆಯಲ್ಲಿರುವಾಗ ಇನ್ನು ರಾಜ್ಯಗಳ ಮೇಲೆ ಬಲೆ ಬೀಸೋದು ಬಿಜೆಪಿಗೆ ದೊಡ್ಡ ವಿಷಯವಲ್ಲ. ಆದರೆ ಅದಕ್ಕೆ ಸರಿಯಾದ ಆಯುಧ ಬೇಕಷ್ಟೆ. ತಮಿಳುನಾಡಿನಲ್ಲಿ ಬಿಜೆಪಿ ಹವಾ ದೊಡ್ಡ ಶೂನ್ಯ. ಬಿಜೆಪಿ ಹವಾ ಹೆಚ್ಚಿಸಿಕೊಳ್ಳಲು ಈಗ ಅಮಿತ್ ಶಾ, ಮೋದಿ ಗಾಳ ಹೂಡಲು ರಣತಂತ್ರಗಳನ್ನು ಹೆಣೆದಿದ್ದರು. ತಮಿಳರು ರಾಜಕೀಯವನ್ನು ಎಷ್ಟು ಇಷ್ಟಪಡುತ್ತಾರೋ, ಸಿನಿಮಾರಂಗವನ್ನು ಕೂಡ ಅಷ್ಟೆ ಇಷ್ಟಪಡುತ್ತಾರೆ. ಅವರನ್ನು ದೇವರಂತೆ ಪೂಜಿಸುತ್ತಾರೆ. ತಮಿಳುನಾಡಿನ ಸೂಪರ್‍ಸ್ಟಾರ್ ರಜನೀಕಾಂತ್ ಅಂದ್ರೆ ಅಲ್ಲಿನ ಜನರಿಗೆ ಎಲ್ಲಿಲ್ಲದ ಅಭಿಮಾನ. ಹಾಗಾಗಿ ಬಿಜೆಪಿ ಅವರ ಮೇಲೆ ದಾಳ ಉರುಳಿಸೋ ಪ್ರಯತ್ನ ಮಾಡುತ್ತಿತ್ತು. ಆದರೆ ತಲೈವಾ ಅತ್ತ ವಾಲಿಲ್ಲ. ಬದಲಾದ ರಾಜಕಾರಣದಲ್ಲಿ ಅವರ ಇತಿಹಾಸ ಮುಂದುವರಿಸುತ್ತಾರಾ..? ಕಾದುನೋಡಬೇಕು.

ತಮಿಳು ಚಿತ್ರರಂಗದ ಸೂಪರ್‍ಸ್ಟಾರ್

ಶಿವಾಜಿ ರಾವ್ ಗಾಯಕ್ವಾಡ್ ಅಲಿಯಾಸ್ ರಜನಿಕಾಂತ್. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಮಹತ್ವಾಕಾಂಕ್ಷಿ. ಬಿಟಿಎಸ್ ಕಂಡಕ್ಟರ್ ಆಗಿದ್ದ ಶಿವಾಜಿರಾವ್ ಒಳಗಿದ್ದ ಕಲಾವಿದ ಸುಮ್ಮನೆ ಕೂರಲಿಲ್ಲ. ಮದ್ರಾಸ್‍ಗೆ ಹೊರಟು ಅವಕಾಶ ಬೇಡಿದ. ಆಗ ಭಾರತೀಯ ಚಿತ್ರರಂಗವೆಂದರೇ ಮದ್ರಾಸ್ ಎಂದೇ ಹೇಳಲಾಗುತ್ತಿತ್ತು. ಆಲ್ ಮೋಸ್ಟ್ ದಕ್ಷಿಣ ಭಾರತದ ಸಿನಿಮಾಗಳು ತಯಾರಾಗುತ್ತಿದ್ದದ್ದು ಅಲ್ಲೇ. ಅಲ್ಲಿಗೆ ಹೋಗಿ ಅವಕಾಶ ಕೇಳಿದ ಶಿವಾಜಿರಾವ್‍ನಲ್ಲಿ ಕಲಾವಿದನನ್ನು ಗುರುತಿಸಿದ್ದು ತಮಿಳು ಚಿತ್ರರಂಗ.

ಮುಂದೇ ನಡೆದ್ದದ್ದೆಲ್ಲಾ ಮ್ಯಾಜಿಕ್. ಬಿಟಿಎಸ್ ಕಂಡಕ್ಟರ್ ಆಗಿದ್ದ ಕರ್ನಾಟಕದ ಹೆಮ್ಮೆಯ ಪುತ್ರ ತಮಿಳುನಾಡಿನಲ್ಲಿ ಅನಭಿಷಿಕ್ತ ದೊರೆಯಾಗಿ ಮೆರೆದಿದ್ದರು. ಕೇವಲ ಭಾರತೀಯ ಚಿತ್ರರಂಗ ಮಾತ್ರವಲ್ಲ. ಇಡೀ ಜಗತ್ತಿಗೆ ರಜನಿಕಾಂತ್ ಫೇಮಸ್ ಆಗಿಬಿಟ್ಟರು. ಚಿತ್ರರಂಗ ಅವರನ್ನು ಅರ್ಹವಾಗಿಯೇ ಸೂಪರ್‍ಸ್ಟಾರ್ ಎಂದು ಕರೆದಿತ್ತು. ಇವತ್ತಿಗೆ ರಜನಿಕಾಂತ್ ಸಿನಿಮಾವೊಂದಕ್ಕೆ ತೆಗೆದುಕೊಳ್ಳೋ ಸಂಭಾವನೆ, ಒಂದು ಅಭೂತಪೂರ್ವ ಬಾಲಿವುಡ್ ಸಿನಿಮಾದ ಬಾಬತ್ತಿಗೆ ಸಮ. ಆ ಹಣದಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಅದ್ದೂರಿಯಾಗಿ.. ಹತ್ತಾರು ಸಿನಿಮಾ ನಿರ್ಮಾಣ ಮಾಡಬಹುದು. ಅಂದಹಾಗೆ ಅವರ ಸಂಭಾವನೆ ಬರೋಬ್ಬರಿ ನೂರು ಕೋಟಿ ಎನ್ನಲಾಗುತ್ತಿದೆ.

ಸಿನಿಮಾವನ್ನು ಹೊರತುಪಡಿಸಿದರೇ, ರಜನಿ ಒಳ್ಳೆ ಮನುಷ್ಯ, ಸರಳ ಜೀವಿ, ಕೊಡುಗೈ ದಾನಿ. ಅವರು ಮಾಡಿದ ದಾನ ಧರ್ಮಗಳನ್ನು ಲೆಕ್ಕವಿಟ್ಟರೇ ಅದು ನೂರಾರು ಕೋಟಿಯನ್ನು ಮೀರುತ್ತದೆ. ಭಾರತೀಯ ಚಿತ್ರರಂಗದಲ್ಲಿ ಯಾವೊಬ್ಬ ನಟನೂ ಬೆಳೆಯದಷ್ಟು ಎತ್ತರಕ್ಕೆ ರಜನಿಕಾಂತ್ ಬೆಳೆದುಬಿಟ್ಟಿದ್ದಾರೆ. ಎಲ್ಲೂ ವಿವಾದ ಮಾಡಿಕೊಂಡಿಲ್ಲ. ಯಾರ ಬಗ್ಗೆಯೂ ಹಗುರವಾಗಿ ಮಾತನಾಡಿಲ್ಲ. ಇಲ್ಲಿಯವರೆಗೆ ರಾಜಕೀಯಕ್ಕೆ ಬರಲೂ ಇಲ್ಲ. ಯಾರ ವಿಚಾರದಲ್ಲೂ ರಾಜಕೀಯ ಮಾಡಲೂ ಇಲ್ಲ. ಹೆಂಡತಿ, ಇಬ್ಬರು ಹೆಣ್ಣು ಮಕ್ಕಳ ಪುಟ್ಟ ಸಂಸಾರದೊಂದಿಗೆ, ವರ್ಷಕ್ಕೋ ಎರಡು ವರ್ಷಕ್ಕೋ, ಅಥವಾ ಐದು ವರ್ಷಕ್ಕೋ ಒಂದು ಸಿನಿಮಾ ಮಾಡಿ ತನ್ನ ಪಾಡಿಗೆ ತಾವಿದ್ದಾರೆ.

ಸಾಧಿಸಿದ್ದು ಬೇಕಾದಷ್ಟು, ಈಗೇನಿದ್ದರೂ ಮೆಲುಕು ಹಾಕೋ ಕಾಲ. ಅಂದರೇ ನಿವೃತ್ತಿಯ ಸಮಯ, ವಿಶ್ರಾಂತಿಯ ಘಳಿಗೆ. ಈ ಹಂತದಲ್ಲೇ ಅವರನ್ನು ಎನ್‍ಕ್ಯಾಶ್ ಮಾಡಿಕೊಳ್ಳೋದಕ್ಕೆ ಬಿಜೆಪಿ ಪ್ರಯತ್ನಿಸಿದೆ. ಕಳೆದ ಲೋಕಸಭೆ ಚುನಾವಣೆಗೂ ಮುನ್ನವೇ ಆ ಪ್ರಯತ್ನ ನಡೆದಿತ್ತು. ಖುದ್ದು ನರೇಂದ್ರ ಮೋದಿ ರಜನಿಕಾಂತ್ ಮನೆಗೆ ಹೋಗಿ ಗುಪ್ತ ಮಾತುಕತೆಯಾಡಿ ಎದ್ದು ಬಂದಿದ್ದರು. ಮಿಕ್ಕ ಪಕ್ಷಗಳು ರಜನಿಯನ್ನು ಸೆಳೆಯಲು ಯತ್ನಿಸಿವೆ. ಈಗ ಖುದ್ದು ರಜನಿಗೇ ಆಸಕ್ತಿ ಬಂದಿದೆ. ಲೋಕಲ್ ನಟರು ಅವರನ್ನು ಪರಕೀಯರು ಎಂದು ಕೆಣಕಿದ್ದು, ಸುಬ್ರಮಣ್ಯಸ್ವಾಮಿ ಫ್ಲಾಪ್ ಎಂದು ಟೀಕಿಸಿದ್ದು ಸೂಪರ್ ಸ್ಟಾರ್ ಅನ್ನು ಕೆಣಕಿರಬಹುದು. ರಜನಿ ರಾಜಕಾರಣದ ವಿರುದ್ಧ ಸ್ಥಳೀಯ ಕಲಾವಿದರ ಪೈಕಿ ಕೆಲವರು ಕತ್ತಿಮಸೆಯಬಹುದು. ಶರತ್ ಕುಮಾರ್, ವಿಜಯಕಾಂತ್ ಹೊಟ್ಟೆ ಉರಿಸಿಕೊಳ್ಳಬಹುದು. ಕಮಲ್ ಹಾಸನ್, ಪ್ರಕಾಶ್ ರೈಯಂತಹ ಪ್ರಬುದ್ಧ ನಟರು ಸ್ವಾಗತಿಸಿದ್ದಾರೆ.

ಒಂದು ವೇಳೆ ರಜನಿಕಾಂತ್ ರಾಜಕೀಯಕ್ಕೆ ಬಂದ್ರೇ.. ತಮಿಳುನಾಡಿನಲ್ಲಿ ಈ ಹಿಂದೆ ನಡೆದಂತೆ ಮ್ಯಾಜಿಕ್ ನಡೆಯಬಹುದಾ..? ಮೊದಲ ಎಸೆತಕ್ಕೆ ಅಲ್ಲಿ ಎಲ್ಲರೂ ಸಿಕ್ಸರ್ ಬಾರಿಸಿದ್ದಾರೆ. ರಜನಿಕಾಂತ್ ಕೂಡ ಮೊದಲ ಪ್ರಯತ್ನದಲ್ಲಿ ಗೆದ್ದು ಸಿಎಂ ಆಗ್ತಾರಾ..? ಅ ಮೂಲಕ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದು ಹಳೇ ಇತಿಹಾಸ ಮುಂದುವರಿಸುತ್ತಾರಾ..? ಕಾದುನೋಡಬೇಕು. ತಮಿಳುನಾಡಿನಲ್ಲಿ ಸಧ್ಯ.. ರಾಜಕೀಯ ವಿಷಮ ಸ್ಥಿತಿಯಲ್ಲಿದೆ. ನಿಜಕ್ಕೂ ಬಿಜೆಪಿ ತಂತ್ರ ಅಥವಾ ರಜನಿಕಾಂತ್ ಮಂತ್ರ ಯಶಸ್ವಿಯಾದರೇ ಅಚ್ಚರಿಯಿಲ್ಲ.

ಇಲ್ಲೊಂದು ಅನುಮಾನವೂ ಇದೆ. ಏನೆಂದರೇ.. ಪಕ್ಕದ ಆಂಧ್ರದಲ್ಲೂ ಕೆಲ ವರ್ಷಗಳ ಹಿಂದೆ ಚಿರಂಜೀವಿ ಪ್ರಜಾರಾಜ್ಯಂ ಎಂಬ ಪಕ್ಷ ಕಟ್ಟಿದ್ದರು. ಆ ಚುನಾವಣೆಯಲ್ಲಿ ಚಿರಂಜೀವಿಯ ಪಕ್ಷ ಬಹುಮತಗಳಿಸಿ ಅಧಿಕಾರಕ್ಕೆ ಬರುತ್ತೆ. ಚಿರಂಜೀವಿ ಸಿಎಂ ಆಗುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ರಿಸಲ್ಟ್ ಬಂದಾಗ ಆ ಪಕ್ಷದಲ್ಲಿ ಚಿರಂಜೀವಿ ಬಿಟ್ರೇ ಒಂದಿಬ್ಬರು ಮಾತ್ರ ಗೆದ್ದಿದ್ದರು. ಒಂದು ವೇಳೆ ರಜನಿ ಬಿಜೆಪಿ ಸೇರಿದರೇ, ಪ್ರಜಾರಾಜ್ಯಂಗೂ, ಬಿಜೆಪಿಗೂ ಹೋಲಿಕೆ ಮಾಡುವಂತಿಲ್ಲ. ಬಿಜೆಪಿ ದೇಶದಲ್ಲೇ ಬಲಿಷ್ಠ ಪಕ್ಷ. ಕೇಂದ್ರದಲ್ಲೂ ಆಡಳಿತದಲ್ಲಿದೆ. ಮೋದಿ ಅಲೆಯಿನ್ನೂ ತಣಿದಿಲ್ಲ. ಇಲ್ಲಿ ತಮಿಳುನಾಡು ಹಾಗೂ ಆಂಧ್ರದ ಜನರ ಮನಃಸ್ಥಿತಿಯ ಚರ್ಚೆ ಮುಖ್ಯವೆನಿಸುತ್ತದೆ.

ಏಕೆಂದರೇ ತಮಿಳುನಾಡಿನಂತೆ ಆಂಧ್ರದ ಜನರು ಕೂಡ, ಸಿನಿಮಾ ನಟರನ್ನು ಆರಾಧಿಸುತ್ತಾರೆ. ನೆಚ್ಚಿನ ನಟ ಎನ್ ಟಿ ರಾಮರಾವ್ ಅವರನ್ನು ಸಿ ಎಂ ಮಾಡಿದ್ದು ಅಲ್ಲಿನ ಜನರು. ಅದೇ ವೈಭವ ಚಿರಂಜೀವಿ.. ಯುಗದಲ್ಲೂ ಮರುಕಳಿಸುತ್ತೇ ಎಂದೇ ಭಾವಿಸಲಾಗಿತ್ತು. ಆದರೆ ಚಿರಂಜೀವಿ ಇನ್ನಿಲ್ಲದಂತೆ ನೆಲಕಚ್ಚಿದ್ದರು. ಅದೇ ತಮಿಳುನಾಡಿನಲ್ಲಿ ರಜನಿಕಾಂತ್ ವಿಚಾರದಲ್ಲೂ ರಿಪೀಟ್ ಆಗುತ್ತಾ..?. ಜಯಲಲಿತಾ ತೀರಿಕೊಂಡಿರುವುದರಿಂದ ಇದು ರಜನಿ ರಾಜಕೀಯ ಪ್ರವೇಶಕ್ಕೆ ಸೂಕ್ತ ಸಮಯವೆನಿಸಿರೋದು ಕೂಡ ಸುಳ್ಳಲ್ಲ. ಬಹುಶಃ ಇವೆಲ್ಲವನ್ನು ರಜನಿ ಯೋಚಿಸಿರುತ್ತಾರೆ. ತಮಿಳುನಾಡು ಮಿಕ್ಕ ರಾಜ್ಯದಂತಿಲ್ಲ. ಅಲ್ಲಿ ಏನೂ ಬೇಕಾದ್ರೂ ಸಾಧ್ಯತೆಯಿದೆ. ರಜನಿಕಾಂತ್ ಸಿಎಂ ಆದರೂ ಪವಾಡವೇನಿಸೋದಿಲ್ಲ. ಯಾಕಂದ್ರೇ ಅದು ತಮಿಳುನಾಡು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...