ಹೊಸವರ್ಷದಂದೇ ಪಾಕಿಸ್ತಾನಕ್ಕೆ ಬ್ಯಾಡ್ ನ್ಯೂಸ್; ಇದು ಅಮೆರಿಕಾ `ಪಾಕ್’ ರಹಸ್ಯ..!!

Date:


`ಇಲ್ಲಿ ಪಾಕಿಸ್ತಾನ ಉಗ್ರರನ್ನು ಪೋಷಿಸುತ್ತಿದೆ. ಹೀಗಾಗಿ ಟ್ರಂಪ್ ಸಿಡಿದು ಬಿದ್ದಿದ್ದಾರೆ ಎನ್ನುವುದಕ್ಕಿಂತ ಟ್ರಂಪ್ ಮನಃಸ್ಥಿತಿ ಚರ್ಚೆಗೀಡಾಗಬೇಕು. ಏಕೆಂದರೆ ಪಾಕಿಸ್ತಾನದ ರಕ್ತವನ್ನು ಹಂಚಿಕೊಂಡು ಉಗ್ರರು ಹುಟ್ಟಿದ್ದಾರೆ ಎನ್ನುವುದು ಗುಟ್ಟಿನ ಸಂಗತಿಯೇನಲ್ಲ. ಹೊಸವರ್ಷದಂದು ಸಿಡಿಗುಂಡಿನಂತೆ ಟ್ವೀಟ್ ಮಾಡಿದ ಇದೇ ಟ್ರಂಪ್, ಪಾಕಿಸ್ತಾನವನ್ನು ಕೆಲವೇ ತಿಂಗಳ ಹಿಂದೆ ಹೊಗಳಿ ಅಟ್ಟಕ್ಕೇರಿಸಿದ್ದರು. ಮಾನಸಿಕ ಚಿಕಿತ್ಸೆ ಪಡೆಯುತ್ತಿರುವಂತೆ ಆಡುತ್ತಿರುವ ಟ್ರಂಪ್, ಹೊಸವರ್ಷದ ನಂತರವಾದರೂ ಸ್ಥೀಮಿತವಾಗಿದ್ದರೇ ಸ್ವಾಗತಾರ್ಹ. ಅತ್ತ ಪಾಕಿಸ್ತಾನ ಯಥಾಪ್ರಕಾರ ಜಗತ್ತಿನ ಕಣ್ಣಿಗೆ ಮಣ್ಣೆರಚಲು ಹಫೀಜ್ ಸಯ್ಯದ್ ಆಸ್ತಿ ಮುಟ್ಟುಗೋಲಿನ ನಾಟಕ ಶುರುಮಾಡಿದೆ’

ಮುಂದೇ ಓದಿ….

ಅಮೆರಿಕಾದಲ್ಲಿ ಹಿಲರಿ ಕ್ಲಿಂಟನ್, ಟ್ರಂಪ್ ನಡುವೆ ಅಧ್ಯಕ್ಷಗಾದಿಗೆ ಪೈಪೋಟಿ ನಡೆದಾಗ, ಟ್ರಂಪ್ ಸೋಲಲಿ ಎಂದು ಪ್ರಾರ್ಥಿಸಿದ್ದ ರಾಷ್ಟ್ರಗಳಲ್ಲಿ ಬಹುಪಾಲು ಮುಸ್ಲಿಂ ರಾಷ್ಟ್ರಗಳಿದ್ದವು. ಏಕೆಂದರೇ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಅಮೆರಿಕಾದಲ್ಲಿರುವ ಮುಸ್ಲೀಮರನ್ನು ಓಡಿಸುತ್ತೇನೆ, ಹೊರಗಿನ ಮುಸಲ್ಮಾನರನ್ನು ಒಳಕ್ಕೆ ಬಿಟ್ಟುಕೊಳ್ಳುವುದಿಲ್ಲ ಎಂದು ಟ್ರಂಪ್ ಹೇಳಿಕೆ ಕೊಟ್ಟಿದ್ದರು. ಅಗ್ರೆಸ್ಸಿವ್ ನಡಾವಳಿಯಿಂದ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿದ್ದ ಟ್ರಂಪ್ ಕಡೆಗೂ ಅಧಿಕಾರಕ್ಕೇರಿದ್ದರು.

ಅಧಿಕಾರಕ್ಕೇರಿದ ನಂತರ ಟ್ರಂಪ್ ಉಗ್ರರ ಮೇಲೆ ವ್ಯಾಪಕವಾಗಿ ಸಮರಕ್ಕಿಳಿಯುತ್ತಾರೆ ಎನ್ನಲಾಯಿತು. ಆದರೆ ಟ್ರಂಪ್ ಅಪ್ಪಿತಪ್ಪಿಯೂ ಪಾಕಿಸ್ತಾನ, ಸಿರಿಯಾದ ಆಚೀಚೆ ನೋಡಲೇ ಇಲ್ಲ. ಬದಲಿಗೆ ಸೌದಿ ಅರೇಬಿಯಾಕ್ಕೆ ಹೋದರು. ಅವರಿಗೂ ಇರಾನ್‍ಗೂ ಇರುವ ದ್ವೇಷವನ್ನು ಇಮ್ಮಡಿಗೊಳಿಸಿದರು. ಸೌದಿಗೂ ಕತಾರ್‍ಗೂ ಮಧ್ಯೆ ತಂದಿಟ್ಟರು. ಸೌದಿ ಕತಾರ್ ಸಂಬಂಧ ಹದಗೆಟ್ಟ ದಿನ, `ಜೀವನದ ಅತ್ಯಮೂಲ್ಯ ಕ್ಷಣವಿದು’ ಎಂದ ಟ್ರಂಪ್ ಮಾನೋವೈಕಲ್ಯ ಚರ್ಚೆಗೀಡಾಯಿತು.

ಹಾಗಂತ ಟ್ರಂಪ್ ಮಹಾನ್ ದಡ್ಡರಲ್ಲ. ಅವರಿಗೆ ಇಸ್ಲಾಂ ರಾಷ್ಷ್ರಗಳ ಮೇಲೆ ಕಣ್ಣಿರುವುದೂ ಸುಳ್ಳಲ್ಲ. ಸೌದಿಯನ್ನು ಪ್ರತ್ಯೇಕಿಸಿ, ಅದರ ವಿರುದ್ಧ ಉಳಿದ ಇಸ್ಲಾಂ ರಾಷ್ಟ್ರಗಳನ್ನು ಎತ್ತಿಕಟ್ಟುವ ಹುನ್ನಾರವಿರುವುದು ಇರಾನ್ ಸೇರಿದಂತೆ ಮುಸ್ಲಿಂಬಾಹುಳ್ಳ ರಾಷ್ಟ್ರಗಳಿಗೂ ಸ್ಪಷ್ಟವಾಗಿ ಗೊತ್ತಿದೆ. ಸುನ್ನಿ, ಶಿಯಾ ಕದನದ ಲಾಭಕ್ಕೆ ಹೊಂಚು ಹಾಕಿದ್ದ ಟ್ರಂಪ್, ತನ್ನ ಬಳಿಯಿರುವ ಸೂಪರ್ ಪವರ್ ಅಧಿಕಾರವನ್ನು ಬಳಸಿ ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿಯೆಂದು ಘೋಷಿಸಿದರು. ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ ನಡುವೆ ಇರುವ ದಶಕಗಳ ಸಮರ ಗೊತ್ತಿದ್ದೂ, ಜೆರುಸಲೇಂ ಮುಸಲ್ಮಾನರ ಭಾವನಾತ್ಮಕ ಸ್ಥಳವೆಂಬ ಅರಿವಿದ್ದು ಉರಿಯುತ್ತಿರುವ ಬೆಂಕಿಗೆ ಪೆಟ್ರೋಲ್ ಸುರಿದಿದ್ದಾರೆ. ಇದನ್ನು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ವಿರೋಧಿಸಿದರೂ, ವಿಟೋ ಅಧಿಕಾರ ಬಳಸಿಕೊಳ್ಳುವಷ್ಟು ದರ್ಪ ತೋರಿದ್ದರು ಟ್ರಂಪ್.

ಅನಾನುಭವಿಯ ಕೈಗೆ ಅಮೆರಿಕಾ ಸಿಕ್ಕಿದ್ದು ಖಾತ್ರಿಯಾಗಿದೆ. ಇರುವುದರಲ್ಲೇ ಟ್ರಂಪ್‍ಗೆ ಚಳ್ಳೆಹಣ್ಣು ತಿನ್ನಿಸುತ್ತಿರುವುದು ಉತ್ತರ ಕೊರಿಯಾ. ಅಲ್ಲಿನ ಅಧ್ಯಕ್ಷ ಕಿಮ್ ಜಾಂಗ್ ಉನ್, ಪರಮಾಣು ಬಾಂಬ್ ಬಟನ್ ನನ್ನ ಕೈಲೇ ಇದೆ ಎಂದು ಇದೀಗ ಮತ್ತೆ ಅಮೆರಿಕಾವನ್ನು ಕೆಣಕ್ಕಿದ್ದಾನೆ. ನಾನು ಸುಮ್ನಿರಲ್ಲ ಅಂತ ಟ್ರಂಪ್, ನೀನು ಸುಮ್ನಿರಬೇಡ, ದೈರ್ಯವಿದ್ದರೇ ಬಾ ಎಂದು ಕಿಮ್ ಜಾಂಗ್ ಉನ್- ಇದು ಜಾಗತೀಕ ಪ್ರಹಸನದಂತಾಗಿದೆ. `ನಾನು ಕಿಮ್ ಜಾಂಗ್ ಉನ್, ಉತ್ತರಕೊರಿಯಾವನ್ನು ಇರಾನ್, ಅಫ್ಘಾನಿಸ್ತಾನವೆಂದು ಭಾವಿಸಬೇಡ’ ಎಂದು ಟ್ರಂಪ್‍ಗೆ ತಪರಾಕಿ ಕೊಡುತ್ತಲೇ ಇದ್ದಾನೆ.

ಅಮೆರಿಕಾ ವಿಶ್ವದ ಬಲಿಷ್ಠ ಮಿಲಿಟರಿ ಶಕ್ತಿ ಎನ್ನುವುದಕ್ಕೆ ಯಾವುದೇ ಅನುಮಾನಗಳಿಲ್ಲ. ಆದರೆ ಉತ್ತರಕೊರಿಯಾದ ಸರಣಿ ಪರಮಾಣು ಪರೀಕ್ಷೆಗಳಿಂದ ಅಪಾಯ ಗ್ರಹಿಸಿ ಸುಮ್ಮನಾಗಿದೆ. ಇಲ್ಲಿ ಸೋಲು ಗೆಲುವಿನ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಸಾವು ನೋವಿನ ಲೆಕ್ಕಾಚಾರಗಳು ಹೆಚ್ಚು ಆತಂಕ ತರಿಸಿವೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೇ ಕಿಮ್ ಜಾಂಗ್ ಉನ್, ಒಬಾಮ ಇದ್ದಾಗ ಕೆಮ್ಮುತ್ತಿದ್ದದ್ದು ಕಡಿಮೆ, ಈಗ ದಿನಾ ಬೆಳಿಗ್ಗೆ ಟ್ರಂಪ್ ಅನ್ನು ತಮಾಷೆ ಮಾಡುತ್ತಾ ಕೂತಿದ್ದಾನೆ. ಆದರೆ ಟ್ರಂಪ್, ಮಧ್ಯಪ್ರಾಚ್ಯ ರಾಷ್ಟ್ರಗಳ ಸಮಸ್ಯೆಯನ್ನು ಆಸ್ವಾಧಿಸುತ್ತ ಕುಳಿತಿದ್ದಾರೆ. ಈ ಮಧ್ಯೆ ಹೊಸ ವರ್ಷದಂದು, ಪಾಕಿಸ್ತಾನಕ್ಕೆ ಉಗ್ರರ ದಮನಕ್ಕಾಗಿ ಇಲ್ಲಿಯವರೆಗೂ 2.1 ಲಕ್ಷ ಕೋಟಿ ಹಣ ಕೊಟ್ಟಿದ್ದೇವೆ. ಅದನ್ನು ಪಾಕಿಸ್ತಾನ ಆರಾಮಾಗಿ ಖರ್ಚು ಮಾಡುತ್ತಾ ಕುಳಿತುಬಿಟ್ಟಿದೆ. ಅಲ್ಲಿ ಉಗ್ರರು ಹೆಚ್ಚುತ್ತಲೇ ಇದ್ದಾರೆ. ಈಗ ಕೊಡಬೇಕಿರುವ ಹದಿನಾರು ಸಾವಿರ ಕೋಟಿ ಅನುದಾನವನ್ನು ಕಡಿತಗೊಳಿಸುತ್ತೇವೆ ಎಂದಿದ್ದಾರೆ. ದಿನಕ್ಕೊಂದು ವರಸೆ, ನಂಬುವುದು ಹೇಗೆ..?

ಭುಟ್ಟೋ ಹಂತಕನೇ ಸಾಕ್ಷಿ..!?

ಪಾಕಿಸ್ತಾನ. ಅದರ ರಕ್ತದಲ್ಲೇ ವಿಷವಿದೆ. ಆ ದೇಶದ ಮುಂದೆ ಒಗ್ಗಟ್ಟು ಎಂಬ ಪದವೇ ಅರ್ಥಹೀನ. ಭಾರತದ ಮೇಲೆ ಹಿಂಬಾಗಿಲಿನಿಂದ ದಾಳಿಗಿಳಿಯುವ ಆ ದೇಶಕ್ಕೆ ನಮ್ಮ ದೇಶವನ್ನು ನೇರಾ ನೇರಾ ಎದುರಿಸುವ ಸಾಮಥ್ರ್ಯವಿಲ್ಲ. ಮೂರು ಮೂರು ಯುದ್ಧಗಳಲ್ಲಿ ಅದನ್ನು ಬಗ್ಗುಬಡಿದಿರುವ ಭಾರತ ಇವತ್ತು ಅಭಿವೃದ್ಧಿಯ ಕಡೆ ಚಿತ್ತ ನೆಟ್ಟಿದೆ. ಆದರೆ ಪಾಕಿಸ್ತಾನ ಮಾತ್ರ ಭಾರತದ ಮೇಲೆ ದ್ವೇಷವನ್ನು ಮುಂದುವರಿಸುತ್ತಿದೆ. ಆ ದೇಶಕ್ಕೆ ಆರ್ಥಿಕವಾಗಿ ಉದ್ಧಾರವಾಗುವ ಉಮ್ಮೇದಿಗಿಂತ, ಭಾರತವನ್ನು ಕೆಣಕುವ, ಕೆರಳಿಸುವ ಆಸಕ್ತಿಯೇ ಹೆಚ್ಚಿದೆ.

ಪಾಕಿಸ್ತಾನ ಆರ್ಥಿಕವಾಗಿ ಅಷ್ಟು ಬಲಿಷ್ಟವಾಗಿಲ್ಲ. ಅಲ್ಲಿ ಉಗ್ರರಿಗೆ ಸಿಕ್ಕಷ್ಟು ಪ್ರೋತ್ಸಾಹ ಅಭಿವೃದ್ಧಿಗೆ ಸಿಕ್ಕಿದ್ದರೇ ಆ ದೇಶ ವಿಶ್ವಮಟ್ಟದಲ್ಲಿ ಅರ್ಥಿಕವಾಗಿ ಬಲಿಷ್ಠವಾಗಿರುತ್ತಿತ್ತು. ಆದರೆ ಉಗ್ರಶಾಸ್ತ್ರವನ್ನು ಉಸಿರಾಗಿಸಿಕೊಂಡಿರುವ ಆ ರಾಷ್ಟ್ರಕ್ಕೆ, ಸದಾ ಭಾರತವನ್ನು ಹಿಂಸಿಸುವುದೇ ಸುಖವೆಂದುಕೊಂಡಿದೆ. ಹೀಗಾಗಿ ತನ್ನ ನೆಲದಲ್ಲಿ ಉಗ್ರರಿಗೆ ತರಬೇತಿ ಕೊಡುವ ಜವಬ್ದಾರಿಯನ್ನು ಅಲ್ಲಿನ ಗೂಢಚರ ಸಂಸ್ಥೆ ಐಎಸ್‍ಐಗೆ ಒಪ್ಪಿಸಿದೆ. ಪಕ್ಕದ ಅಫ್ಘಾನಿಸ್ತಾನ ಹಾಗೂ ಸ್ಥಳೀಯ ಉಗ್ರರಿಗೆ ತರಬೇತಿ ಕೊಡುತ್ತಾ ಜಿಹಾದ್ ನಡೆಸಲು ಐಎಸ್‍ಐ ಪ್ರೇರೇಪಿಸುತ್ತಿದೆ.

ಇನ್ನೊಂದು ಕಡೆ ಪಾಕಿಸ್ತಾನದಲ್ಲಿ ಉಗ್ರ ಸಯ್ಯದ್ ಹಫೀಜ್ ಪರಿಣಾಮಕಾರಿಯಾಗಿ ಬೆಳೆಯಲು ಪಾಕ್ ಬೆಂಬಲಿಸಿರುವುದು ಗುಟ್ಟಿನ ಸಂಗತಿಯಲ್ಲ. ನೀವು ನಂಬಲ್ಲ, ಇಡಿ ಪಾಕಿಸ್ತಾನದಲ್ಲಿ ಹಫೀಜ್ ಸಯ್ಯದ್ ಸುಮಾರು ಮುನ್ನೂರು ಶಾಲೆಗಳನ್ನು ನಡೆಸುತ್ತಾನೆ. ನೂರಾರು ಆಸ್ಪತ್ರೆ, ಸಾವಿರಾರು ಅಂಬ್ಯುಲೆನ್ಸ್, ಪ್ರಿಂಟಿಂಗ್ ಪ್ರೆಸ್‍ಗಳನ್ನು ಹೊಂದಿರುವ ಹಫೀಜ್ ಸಾವಿರಾರು ಕೋಟಿಯ ಒಡೆಯ. ಆತನ ಜಮಾತ್ ಉದ್ ದಾವ ಅರ್ಥಾತ್ ಜೆಯುಡಿ ಹಾಗೂ ಫಲಾಹ್ ಎ ಇನ್ಸಾನಿಯತ್ ಅರ್ಥಾತ್ ಎಫ್‍ಐಎಫ್ ಬಸಂಘಟನೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸ್ವಯಂ ಸೇವಕರಿದ್ದಾರೆ. ಲಷ್ಕರ್ ಇ ತೈಬಾ ಎಂಬ ಉಗ್ರ ಸಂಘಟನೆಯನ್ನು ನಡೆಸುತ್ತಿರುವ ಈತ ಭಾರತದ ಮೇಲೆ ಅಸಂಖ್ಯಾ ದಾಳಿಗಳಿಗೆ ನೇತೃತ್ವ ವಹಿಸಿದ್ದಾನೆ. ಅದರಲ್ಲಿ ಕೆಲ ವರ್ಷಗಳ ಹಿಂದೆ ನಡೆದ ಮುಂಬೈ ತಾಜ್ ಸ್ಫೋಟವೂ ಒಂದು.

ಮುಂಬೈ ಸ್ಫೋಟ ಸೇರಿದಂತೆ, ಅನೇಕ ಕೃತ್ಯಗಳಲ್ಲಿ ಭಾರತಕ್ಕೆ ಹಫೀಜ್ ಬೇಕಾಗಿದ್ದಾನೆ. ಜಾಗತೀಕವಾಗಿ ಆತನನ್ನು ಉಗ್ರ ಎಂದು ಘೋಷಿಸುವಂತೆ, ಭಾರತಕ್ಕೆ ಅವನನ್ನು ಒಪ್ಪಿಸುವಂತೆ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುತ್ತಿದ್ದರೂ, ಚೀನಾದಂತಹ ಪಾಕಂಡಿ ರಾಷ್ಟ್ರಗಳು ಅಡ್ಡಗಾಲು ಹಾಕುತ್ತಿದೆ. ಇತೀಚೆಗೆ ಆತನ ಜೆಡಿಯು ಸಂಘಟನೆ ರಾಜಕಾರಣಕ್ಕೆ ಇಳಿಯಲು ಸಿದ್ದತೆ ಕೂಡ ನಡೆಸಿದೆ. ಮುಸ್ಲಿಂ ಲೀಗ್ ಎಂಬ ಪಕ್ಷ ಅಕಾಢಕ್ಕಿಳಿಯಲು ರೆಡಿಯಾಗಿದೆ. ಪಾಕಿಸ್ತಾನದ ಪ್ರಧಾನಿಯಾಗುವ ಗುರಿಯನ್ನಿಟ್ಟುಕೊಂಡಿದ್ದಾನೆ ಹಫೀಜ್ ಸಯ್ಯದ್.

ಇವೆಲ್ಲವೂ ಪಾಕ್ ಆಡಳಿತದ ಕೃಪೆಯಿಲ್ಲದೇ ನಡೆಯಲು ಸಾಧ್ಯಾನಾ..? ಬೆನಜಿರ್ ಭುಟ್ಟೋರನ್ನು ಕೊಲ್ಲಿಸಲು ಸಂಚು ಹೂಡಿ, ದೇಶ ಬಿಟ್ಟು ಲಂಡನ್‍ನಲ್ಲಿ ನೆಲೆಸಿರುವ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಶರ್ರಫ್ ಇತ್ತೀಚೆಗಷ್ಟೇ- ಹಫೀಜ್ ಸಯ್ಯದ್ ಕಂಡರೇ ನಂಗಿಷ್ಟ. ನನ್ನ ಆಡಳಿತದ ಅವಧಿಯಲ್ಲಿ ಅವನನ್ನು ಬೆಂಬಲಿಸಿದ್ದೆ ಎಂದು ಹೇಳಿಕೆ ಕೊಟ್ಟಿದ್ದ. ಅಲ್ಲಿಗೆ ಪಾಕ್ ಆಡಳಿತಕ್ಕೂ, ಉಗ್ರರಿಗೂ ಇರುವ ನಂಟು ಇನ್ನಷ್ಟು ಪ್ರಬಲವಾಗಿ ಬಹಿರಂಗವಾಗಿತ್ತು. ಅದೇನು ಬೆಚ್ಚಿಬೀಳುವ ವಿಚಾರವಲ್ಲ ಬಿಡಿ.

ಅತ್ತ ಅಮೆರಿಕಾ ಕಳೆದ ಹದಿನೈದು ವರ್ಷಗಳಿಂದ ಪಾಕಿಸ್ತಾನಕ್ಕೆ ಉಗ್ರರ ಹಾವಳಿ ನಿಲ್ಲಿಸಿ ಎಂದು ಅನುದಾನ ಕೊಡುತ್ತಿತ್ತು. ಕಷ್ಟ ಅಂಥ ಕೈ ಚಾಚಿದಾಗೆಲ್ಲಾ ಆರ್ಥಿಕ ಸಹಾಯ ಮಾಡುತ್ತಿತ್ತು. ಆದರೆ ಮೈಯೆಲ್ಲಾ ವಿಷ ತುಂಬಿಕೊಂಡಿರುವ ಪಾಕ್, ಅನ್ನ ತಿನ್ನುವ ಕೆಲಸ ಮಾಡುತ್ತಾ..? ಅದೇ ಹಣದಲ್ಲಿ ಉಗ್ರರಿಗೆ ತರಬೇತಿ ನೀಡತೊಡಗಿತ್ತು. ಇದೀಗ ಟ್ರಂಪ್, ಅಫ್ಘಾನಿಸ್ತಾನದಲ್ಲಿ ನಾವು ಹುಡುಕುತ್ತಿರುವ ಉಗ್ರರಿಗೆ ಪಾಕಿಸ್ತಾನ ಸ್ವರ್ಗವಾಗಿದೆ ಎಂದು ಟ್ವೀಟ್ ಮಾಡಿದ್ದೇ, ಪಾಕಿಸ್ತಾನ ಹಫೀಜ್ ಸಯ್ಯದ್ ಆಸ್ತಿ ಮುಟುಗೋಲು ಹಾಕುತ್ತೇವೆ ಎಂದು ಡ್ರಾಮಾ ಶುರುಮಾಡಿದೆ. ಅದು ಡ್ರಾಮವಲ್ಲ ಎಂದು ಸಾಬೀತಾಗಲು ಹಫೀಜ್ ಆಸ್ತಿ ವಶವಾಗಬೇಕು, ಆತ ಚುನಾವಣೆಗೆ ನಿಲ್ಲಬಾರದು ಅಷ್ಟೇ..! ಇಲ್ಲವೆಂದರೇ ದೊಡ್ಡಣ್ಣ, ಉಗ್ರಣ್ಣ ಇಬ್ಬರೂ ನಾಟಕವಾಡುತ್ತಿದ್ದಾರೆ ಎನ್ನುವುದು ಸಾಬೀತಾಗುತ್ತದೆ.

ಟ್ರಂಪ್ ಸಿಡಿದಿರುವುದೇಕೆ..?

ಎಲ್ಲರಿಗೂ ಗೊತ್ತಿರುವಂತೆ ಈಗ್ಗೆ ಎರಡು ವರ್ಷದ ಹಿಂದೆ ಜಾಗತೀಕ ತಾಪಮಾನದ ವಿರುದ್ಧ ಜಗತ್ತಿನ ನೂರ ತೊಂಭತ್ಮೂರು ರಾಷ್ಟ್ರಗಳು ಸಮರಕ್ಕಿಳಿದಿದ್ದವು. ಪ್ಯಾರೀಸ್‍ನಲ್ಲಿ ನಡೆದ ಸಭೆಯಲ್ಲಿ ಅಮೆರಿಕಾ ನೇತೃತ್ವದಲ್ಲಿ ಒಪ್ಪಂದಕ್ಕೆ ಬರಲಾಗಿತ್ತು. ಅವತ್ತು ಅಮೆರಿಕಾದ ಅಧ್ಯಕ್ಷರಾಗಿದ್ದವರು- ಬರಾಕ್ ಒಬಾಮ. ಆದರೆ ಟ್ರಂಪ್ ಅಧಿಕಾರಕ್ಕೇರುತ್ತಿದ್ದಂತೆ ಪ್ಯಾರೀಸ್ ಒಪ್ಪಂದದಿಂದ ಹಿಂದೆ ಸರಿದರು. ಅದಕ್ಕೆ ಟ್ರಂಪ್ ಕೊಟ್ಟ ಕಾರಣ, ಭಾರತ ಸೇರಿದಂತೆ ಕೆಲವು ರಾಷ್ಟ್ರಗಳಿಗೆ ವಿನಾಕಾರಣ ಅನುದಾನ ಕೊಡಬೇಕಿದೆ. ಇದಕ್ಕೆ ನಾನು ಒಪ್ಪುವುದಿಲ್ಲ ಎಂದಾಗಿತ್ತು. ಹಣ ಕೊಡುವ ವಿಚಾರದಲ್ಲಿ ಅಮೆರಿಕಾ ಹಿಂದೆ ಸರಿಯವುದಕ್ಕೆ ಕಾರಣ ಅಮೆರಿಕಾದ ಆರ್ಥಿಕ ಕುಸಿತವೆನ್ನಲಾಯಿತು. ಈಗ ಪಾಕ್ ವಿಚಾರದಲ್ಲೂ ಟ್ರಂಪ್ ಹಣ ಕೊಡುವ ವಿಚಾರದಲ್ಲಿ ಇದೇ ಕಾರಣಕ್ಕೆ ಹಿಂದೇಟು ಹಾಕುತ್ತಿರಬಹುದು. ಹೀಗಾಗಿ ಎಲ್ಲರಿಗೂ ಗೊತ್ತಿರುವ ಪಾಕ್‍ನ ಉಗ್ರವಾದವನ್ನು ನೆಪ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇನ್ನೊಂದು ಕಾರಣ; ಜಾಗತೀಕ ಉಗ್ರನೆಂದು ಜಗತ್ತಿನ ಮುಂದೆ ಚರ್ಚೆಯಾಗುತ್ತಿರುವ ವ್ಯಕ್ತಿ, ಪಾಕಿಸ್ತಾನದಲ್ಲಿ ಚುನಾವಣೆಗೆ ನಿಲ್ಲುತ್ತಾನೆಂದರೇ ಸಹಿಸಿಕೊಳ್ಳುವ ಮಾತಲ್ಲ. ಇದರ ಜೊತೆಗೆ ಪಾಕ್‍ನಲ್ಲಿ ಅವಿರತ ಉಗ್ರ ಚಟುವಟಿಕೆ ನಡೆಯುತ್ತಿರುವುದು ರಹಸ್ಯ ಸಂಗತಿಯಲ್ಲ. ಹೀಗಾಗಿ ಪ್ರಾಮಾಣಿಕವಾಗಿಯೇ ಪಾಕ್ ಮುಖವಾಡವನ್ನು ಟೀಕಿಸಿದ್ದಾರೆ. ಅನುದಾನಕ್ಕೆ ಬ್ರೇಕ್ ಹಾಕುವ ಮಾತನಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಟ್ರಂಪ್ ದಿನಕ್ಕೊಂದು ವರಸೆ ಬದಲಿಸುವ ಬದಲು, ಹೊಸವರ್ಷದಂದು ನುಡಿದಂತೆ ನಡೆದರೇ ಪಾಕಿಸ್ತಾನಕ್ಕೆ ಸಂಕಷ್ಟ ತಪ್ಪಿದ್ದಲ್ಲ. ಇತ್ತ ಭಾರತದಲ್ಲಿ ಟ್ರಂಪ್ ನಿರ್ಧಾರದ ಹಿಂದೆ ಮೋದಿಯ ಪರಿಶ್ರಮವಿದೆ ಎಂಬ ರಾಜಕೀಯ ಶುರುವಾಗಿದೆ. ಇವೆಲ್ಲವೂ ಊಹಪೋಹವೇ ಹೊರತು ನಿಕರ ಮಾಹಿತಿಯಲ್ಲ. ಪಾಕ್ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಮಾತ್ರವಲ್ಲ, ಹಿಂದಿನ ಎಲ್ಲಾ ಸರ್ಕಾರಗಳು ಒತ್ತಡ ಹಾಕಿವೆ. ಮೊದಲೇ ಹೇಳಿದಂತೆ ಚೀನಾದ ಮತ್ಸರ ಅಡ್ಡಗಾಲಾಗುತ್ತಿದೆ.

ಒಟ್ಟಿನಲ್ಲಿ ಪಾಕಿಸ್ತಾನದ ಮೇಲೆ ಅಮೆರಿಕಾದ ನಡೆಯನ್ನು ವಿಶ್ವ ತದೇಕಚಿತ್ತದಿಂದ ವೀಕ್ಷಿಸುತ್ತಿದೆ. ನುಡಿದಂತೆ ನಡೆಯುತ್ತಾರಾ..? ಇಲ್ಲವೇ ಉತ್ತರ ಕೊರಿಯಾದಂತಹ ಪ್ರಹಸನವಿದಾಗುತ್ತಾ..?. ಟ್ರಂಪ್ ನಿಲುವು ನಿಕರವಲ್ಲದ ಕಾರಣ ಯಾವ ನಂಬಿಕೆಯೂ ಉಳಿದಿಲ್ಲ. ಅತ್ತ ರಷ್ಯಾದಲ್ಲಿ ಚುನಾವಣಾ ಸಮಯವಾಗಿದ್ದರಿಂದ ಪುಟಿನ್ ಗೆಲುವು ಕೂಡ ಅಮೆರಿಕಾಕ್ಕೆ ಹಿನ್ನಡೆಯಾಗಲಿದೆ. ಪುಟಿನ್ ಗೆದ್ದರೇ, ಚೀನಾದ ಜಿನ್‍ಪಿಂಗ್‍ಗೆ ಸೂಪರ್ ಪವರ್ ಕಿರೀಟ ದಕ್ಕಬಹುದೆಂಬ ಸೀಕ್ರೆಟ್ ಲೆಕ್ಕಾಚಾರಗಳಿವೆ. ಮಧ್ಯಪ್ರಾಚ್ಯ ರಾಷ್ಟ್ರಗಳು, ಉತ್ತರ ಕೊರಿಯಾ, ಚೀನಾ, ರಷ್ಯಾ, ಇಸ್ರೇಲ್-ಪ್ಯಾಲೆಸ್ಟೀನ್ ಎಂಬೆಲ್ಲಾ ಆಯೋಮಯಗಳಿಂದ ಟ್ರಂಪ್ ತತ್ತರಿಸಿರುವುದು ಸುಳ್ಳಲ್ಲ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...