ನಶ್ವರ
ಸರದಿಯಲಿ ಬಂದವನು
ಬಲುಬೇಗ ನಿಂತವನು
ಕಾಲುಸೋತವರ ಕಾಲೆಳೆದವನು
ಕರುಣೆ ಇಲ್ಲದ ಎದೆಯೊಳಗೆ
ಕರುಣಾನಟನಾದವನು
ಬೆತ್ತಲೆಯಲೂ ಹಸಿಸುಳ್ಳ ನುಡಿದವನು
ಹುಸಿ ನುಡಿಯ ಮಸಿ ಹಿಡಿದು
ತಿಳಿದಂತೆ ಬರೆದವನು
ಸರಸದಲೂ ವಿಷತಲೆಯ
ವಿಷಯವ ಬಿತ್ತುವನು
ಕಾರ್ಕೋಟಕವ ಮುದ್ದಾಡಿ ಎದೆಗಪ್ಪಿಸಿಕೊಂಡವನು
ಕಣ್ಣೀರ ಕಡಲಲ್ಲೂ ಹಗೆಯ
ಹೊಗೆಯಲಿ ಕೈಯ ಹಿಸುಕಿದವನ
ಕಂಡ ಕಾವ್ಯದತ್ತನ
ಮನವಿಂದು ನಗುತಿಹುದು
ಕಾಲ ಚಕ್ರದ ಸುಳಿಗೆ ಸಿಕ್ಕ
ಮೂಳೆಮಾಂಸವೇ ಮಣ್ಣಾಗಿಹುದೆಂದು
ನುಡಿದಿಹನು.
?ದತ್ತರಾಜ್ ಪಡುಕೋಣೆ?