ರಾಹುಲ್ ದ್ರಾವಿಡ್ ಒಳ್ಳೆಯ ಕ್ರಿಕೆಟಿಗ ಮಾತ್ರವಲ್ಲ. ಅವರೊಬ್ಬ ಆದರ್ಶ ವ್ಯಕ್ತಿ. ಸಹನೆಯ ಪ್ರತೀಕವಾಗಿರೋ ರಾಹುಲ್ ದ್ರಾವಿಡ್ರನ್ನು ಎಲ್ಲರೂ ಇಷ್ಟಪಡುತ್ತಾರೆ..! ಅವರನ್ನು ಇಷ್ಟ ಪಡೋಕೆ ಕಾರಣ ಅವರೊಬ್ಬ ವಿಶ್ವ ಶ್ರೇಷ್ಠ ಕ್ರಿಕೆಟಿಗನೆಂಬ ಒಂದೇ ಒಂದು ಕಾರಣವಲ್ಲ..! ಕ್ರಿಕೆಟ್ ಅಂಗಳದಿಂದ ಆಚೆಗೂ ರಾಹುಲ್ ದ್ರಾವಿಡ್ ಸಭ್ಯ ವ್ಯಕ್ತಿ. ನಡೆ-ನುಡಿ, ಗುಣ-ಸ್ವಭಾವ ಎಲ್ಲದರಲ್ಲೂ ದ್ರಾವಿಡ್ ನಂಬರ್ ಒನ್, ಅವರು ನಿಜಕ್ಕೂ ಸಂಭಾವಿತರು, ರಿಯಲ್ಲೀ ಹಿ ಈಸ್ ಜಂಟಲ್ ಮ್ಯಾನ್..! ದ್ರಾವಿಡ್ ಎಂದರೆ ಕೇವಲ ವ್ಯಕ್ತಿಯಲ್ಲ ಶಕ್ತಿ.
ಇಂಥಾ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ರ ವ್ಯಕ್ತಿತ್ವ ಎಂಥಾದ್ದು ಅಂತ ಈ ಮುಂದಿನ 11 ಸಂಗತಿಗಳು ಹೇಳುತ್ತವೆ..! ಕ್ರಿಕೆಟಿನಿಂದ ಹೊರತಾಗಿಯೂ ರಾಹುಲ್ ದ್ರಾವಿಡ್ ರಿಯಲ್ ಹೀರೋ ಅನ್ನೋದಕ್ಕೆ ಇವೇ ಸಾಕ್ಷಿ..!
ಅನಾಥ ಮಕ್ಕಳೊಂದಿಗೆ ಸಮಯ ಕಳೆದರು..! : ಒಮ್ಮೆ ರಾಹುಲ್ ದ್ರಾವಿಡ್ ಅನಾಥ ಮಕ್ಕಳಿಗಾಗಿ ಕ್ರಿಕೆಟ್ ಬ್ಯಾಟಿಗೆ ತನ್ನ ಹಸ್ತಾಕ್ಷರವ ಬರೆದು ಕೊಡಬೇಕೆಂದು ಮಾತಾಗಿತ್ತು..! ಆದರೆ ರಾಹುಲ್ ದ್ರಾವಿಡ್ ಬ್ಯಾಟಿಗೆ ಸಹಿ ಮಾಡಿಕೊಡುವುದಿಲ್ಲ..! ಬದಲಾಗಿ, ಬಿಡುವಿಲ್ಲದ ಸಮಯದ ನಡುವೆ ಅನಾಥ ಮಕ್ಕಳಿಗಾಗಿ ಅವರೇ ಬಂದರು..! ಅನಾಥ ಮಕ್ಕಳೊಂದಿಗೆ ಸಮಯ ಕಳೆದರು..! “ಆಟವನ್ನು ಎಂಜಾಯ್ ಮಾಡಲು ಕ್ರಿಕೆಟ್ ಆಡಿ..! ಶಾಲೆಯಲ್ಲಿರುವಾಗ ಒಳ್ಳೆಯ ರೀತಿಯಲ್ಲಿ ಓದಿ, ಮೋಜು ಬೇಕೆಂದಾಗ ಕ್ರಿಕೆಟ್ ಆಡಿ” ಅಂತ ಅನಾಥಮಕ್ಕಳಿಗೆ ಹೇಳಿದರು.
ಎ ಕಂಪ್ಲೀಟ್ ಫ್ಯಾಮಿಲಿ ಮ್ಯಾನ್ : ದ್ರಾವಿಡ್ ಸಾಕಷ್ಟು ಸಮಯವನ್ನು ತಮ್ಮ ತನ್ನ ಕುಟುಂಬಕ್ಕೆ ಮೀಸಲಿಡುತ್ತಾರೆ. ಸಮಯ ಸಿಕ್ಕಾಗೆಲ್ಲಾ ಮಕ್ಕಳ ಜೊತೆಯೇ ಇರುತ್ತಾರೆ..! ಇದರಲ್ಲೇನಿದೆ ಮಹಾ ಅಂತ ಕೆಲವರು ಕೇಳ ಬಹುದು..?! ಆದರೆ ದ್ರಾವಿಡ್ ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿಯ ನಡುವೆಯೂ.. ದಿನ ನಿತ್ಯದ ತನ್ನ ಅಭ್ಯಾಸದ ನಡುವೆಯೂ ಮಕ್ಕಳೊಂದಿಗೆ ಇರ್ತಾ ಇದ್ರು..!
ಸ್ಪೂರ್ತಿಯ ಚಿಲುಮೆ ಮತ್ತು ಒಳ್ಳೆಯ ಮಾರ್ಗದರ್ಶಕರು : ರಾಹುಲ್ ದ್ರಾವಿಡ್ ಅತ್ಯುತ್ತಮ ‘ಗುರು’ ಅನ್ನೋದಕ್ಕೆ ಐಪಿಎಲ್ ನಲ್ಲಿ ರಾಜಸ್ತಾನ್ ತಂಡದ ಪ್ರದರ್ಶನ ಮತ್ತು ಇವತ್ತಿನ ಭಾರತ ಕ್ರಿಕೆಟ್ ನ `ಎ’ ಮತ್ತು ಕಿರಿಯ ತಂಡದ ಪ್ರದರ್ಶನವೇ ಸಾಕ್ಷಿ. ಕ್ರಿಕೆಟ್ ಆಟಗಾರರಲ್ಲದೆ ಇತರರ ಸಾಧನೆಗೂ ದ್ರಾವಿಡ್ ಸ್ಪೂರ್ತಿಯ ಚಿಲುಮೆ..! ಶರತ್ ಗಾಯಕ್ವಾಡ್ ಕಾರಣಾಂತರದಿಂದ `ಈಜು’ ವಿನಿಂದ ನಿವೃತ್ತರಾಗಲು ಬಯಸಿದ್ದರು..! ಆಗ ರಾಹುಲ್ ದ್ರಾವಿಡ್ ಈ ಈಜುಗಾರರನ್ನು ಕರೆದು ತನ್ನ ಜೀವನದ ಉದಾಹರಣೆಯನ್ನೇ ಕೊಟ್ಟು ಅವರ ಮನ ಪರಿವರ್ತನೆ ಮಾಡ್ತಾರೆ..! ದ್ರಾವಿಡ್ರಿಂದ ಪ್ರೇರಿತರಾದ, ಸ್ಪೂರ್ತಿ ಪಡೆದ ಗಾಯಕ್ವಾಡ್ ಅವರು 2014ರ ಏಷ್ಯನ್ ಗೇಮ್ಸ್ ನಲ್ಲಿ 1ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು (ಒಟ್ಟು 6) ಗೆದ್ದರು..!
ಅಭಿಮಾನಿಗೆ ಕ್ಷಮೆ ಕೇಳಿದ್ದರು ದ್ರಾವಿಡ್ : ದ್ರಾವಿಡ್ರ ಯುವ ಅಭಿಮಾನಿಯೊಬ್ಬರು ಕ್ಯಾನ್ಸರ್ ನಿಂದ ಬಳಲುತಿದ್ದರು. ಅವರು ರಾಹುಲ್ ದ್ರಾವಿಡ್ರನ್ನು ಭೇಟಿ ಆಗೋ ಬಯಕೆಯನ್ನು ವ್ಯಕ್ತಪಡಿಸಿದ್ದರು..! ಆಗ ಆ ಅಭಿಮಾನಿಯೊಂದಿಗೆ `ಸ್ಕೈಪ್’ನಲ್ಲಿ ಒಂದುಗಂಟೆಗೂ ಹೆಚ್ಚು ಕಾಲ ಚಾಟ್ ಮಾಡಿದರಲ್ಲದೇ ತಾನೇ ನೇರವಾಗಿ ಭೇಟಿ ಆಗದೇ ಇರುವುದಕ್ಕೆ ಅಭಿಮಾನಿಯ ಬಳಿ ಕ್ಷಮೆಯನ್ನೂ ಕೇಳಿದರು..!
ರಾಷ್ಟ್ರೀಯ ತಂಡದ ಕೋಚ್ ಆಗಿ ಎಂದಾಗ, ನಯವಾಗಿ ತಿರಸ್ಕರಿಸಿದರು : ಅವತ್ತು ಹ್ಞೂಂ ಅಂತ ಹೇಳಿದ್ರೆ ಸಾಕಿತ್ತು, ಇವತ್ತು ದ್ರಾವಿಡ್ ಭಾರತ ಕ್ರಿಕೆಟ್ತಂಡದ ಕೋಚ್ ಆಗಿರುತ್ತಿದ್ದರು..! ಕುಟುಂಬದ ಬದ್ಧತೆಯ ಕಾರಣಗಳಿಂದ ರಾಷ್ಟ್ರೀಯ ತಂಡದ ಕೋಚ್ ಆಗುವ ಅವಾಕಾಶ ಸಿಕ್ಕಾಗ ಅದನ್ನು ನಯವಾಗಿ ಬೇಡ ಅಂದರು..!
ಕಿರಿಯರಿಗೆ ಗುರು ಆದರು..! : ದ್ರಾವಿಡ್ರನ್ನು ಭಾರತ ಕಿರಿಯರ ತಂಡದ (19 ವರ್ಷ ವಯಸ್ಸಿನೊಳಗಿನ) ಮತ್ತು `ಎ’ ತಂಡದ ಕೋಚ್ ಆಗಿ ಎಂದಾಗ ತಕ್ಷಣವೇ ಒಪ್ಪಿಕೊಂಡರು..! ಕುಟುಂಬಕ್ಕಿಂತಲೂ ಅವರಿಗೆ ಕಿರಿಯ ಆಟಗಾರರು ಮುಖ್ಯ ಅನಿಸಿ ಬಿಟ್ಟರು..! ಸೀನಿಯರ್ ಟೀಂ ಬಗ್ಗೆ ಯಾರು ಬೇಕಾದರೂ ಕೇರ್ ತೆಗೆದುಕೊಳ್ಳುತ್ತಾರೆ..! ಆದರೆ ಕಿರಿಯರ ಕಡೆ ಹೆಚ್ಚು ಗಮನವನ್ನು ಕೊಡಬೇಕೆಂದು ಕಿರಿಯರಿಗೆ ಗುರು ಆದರು..!
ಸುಧಾರಣೆಗೆ ಕೊನೆಯಿಲ್ಲ ಅನ್ನೋದು ದ್ರಾವಿಡ್ರಿಗೆ ಗೊತ್ತು..! ” ನೀವು ಅವರನ್ನು ದೂರದೇ ಇರಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದಾರೆ..! ಏಕೆಂದರೆ ಟೀಕೆಗೆ ಕೊನೆಯೇ ಇಲ್ಲ..! ಅಂತೆಯೇ ಸುಧಾರಣೆಗೂ ಕೊನೆಯಿಲ್ಲ ಅಂತ ಅವರಿಗೆ ಗೊತ್ತಿದೆ” ಎಂದು ದ್ರಾವಿಡ್ ಅವರ ಪತ್ನಿ `ವಿಜೇತ ದ್ರಾವಿಡ್‘ ಒಮ್ಮೆ ದ್ರಾವಿಡ್ ಅವರ ಬಗ್ಗೆ ಹೇಳಿದ್ದರು..!
ಸ್ಪಿನ್ ಗೆ ಆಡೋದು ಹೆಂಗೆ ಅಂತ ಪೀಟರ್ಸನ್ಗೆ ಪತ್ರ ಬರೆದಿದ್ದರು..! ಇಂಗ್ಲೇಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್ಗೆ ಸ್ಪಿನ್ ಬೌಲಿಂಗ್ ಅನ್ನು ಎದುರಿಸುವುದು ಹೇಗೆಂದು ದ್ರಾವಿಡ್ ಪತ್ರ ಬರೆದಿದ್ದರು..! ಆ ಪತ್ರ ಈ ಕೆಳಗಿದೆ..! ಇಂಥಾ ಗುಣದಿಂದಲೇ ದ್ರಾವಿಡ್ ಎಲ್ಲರಿಗೂ ಇಷ್ಟವಾಗ್ತಾರೆ.
ವಿಶ್ವವೇ ‘ಐಸ್ ಬಕೆಟ್ ಚಾಲೆಂಜ್ ನಲ್ಲಿ ಬ್ಯುಸಿ ಇದ್ದಾಗ.. ದ್ರಾವಿಡ್ ಮಾತ್ರ ` ಬ್ಲಡ್ ಡೊನೇಟಿಂಗ್ ಚಾಲೆಂಜಿನಲ್ಲಿ‘ ಬ್ಯುಸಿ ಇದ್ದರು..! ಇಡೀ ವಿಶ್ವದ ಜನತೆಯೇ ಐಸ್ ಬಕೆಟ್ ಚಾಲೆಂಜಿನಲ್ಲಿ ಬ್ಯುಸಿ ಆಗಿದ್ದಾಗ. ದ್ರಾವಿಡ್, ಹೆಸರು, ಕೀರ್ತಿ, ಹಣ, ಪ್ರಚಾರದ ಕಡೆ ಯೋಚನೆ ಮಾಡದೇ ಮಾಧ್ಯಮದವರ ಮುಂದೆ ಫೋಸ್ ಕೊಡದೆ ಯಾವುದೇ ಪ್ರತಿಫಲ ಅಪೇಕ್ಷಿಸದೇ ಬೆಂಗಳೂರಿನಲ್ಲಿ ರಕ್ತದ ಅವಶ್ಯಕತೆ ಇರೋ ರೋಗಿಗಳಿಗೆ ರಕ್ತ ಕೊಡುವುದನ್ನೇ ಕಾಯಕ ಮಾಡಿಕೊಂಡಿದ್ದರು..!
ಸಾರ್ವಜನಿಕ ಸಾರಿಗೆಯಲ್ಲೂ ಪ್ರಯಾಣ ಮಾಡ್ತಾರೆ : ಎಲ್ಲಾ ಆಟಗಾರರಿಗಿಂತ, ಪ್ರಸಿದ್ಧ ವ್ಯಕ್ತಿಗಳಿಗಿಂತ ರಾಹುಲ್ ದ್ರಾವಿಡ್ ತುಂಬಾನೇ ಸಿಂಪಲ್..! ಅಹಂ ಇಲ್ಲವೇ ಇಲ್ಲ..! ಎಷ್ಟೋ ಸಲ ಆಟೋ ಮೊದಲಾದ ಸಾರ್ವಜನಿಕ ಸಾರಿಗೆಗಳಲ್ಲೇ ಪ್ರಯಾಣ ಮಾಡಿದ್ದಾರೆ..! ಇವರ ಜೀವನ ಶೈಲಿ ಸಾಮಾನ್ಯರಂತೆ..! ಇವರನ್ನು ನೋಡಿ ಎಲ್ಲರೂ ಕಲಿಬೇಕು..!
ನಿವೃತ್ತಿ ನಂತರವೂ ತನ್ನ ಬಾಲ್ಯದ ಕ್ಲಬ್ ಅನ್ನು ಗೆಲ್ಲಿಸಿ ಕೊಟ್ಟರು..!
ದ್ರಾವಿಡ್ ಬಾಲ್ಯದಲ್ಲಿ ಆಡಿದ್ದ ಕ್ಲಬ್ ನಿರಂತರ ಸೋಲಿನಿಂದ ಅಸ್ಥಿತ್ವನ್ನೇ ಕಳೆದುಕೊಳ್ಳಬೇಕಾದ ಸ್ಥಿತಿ ನಿಮರ್ಾಣವಾಗಿತ್ತು. ಆಗ ಆ ಕ್ಲಬ್ನ ಕೋಚ್ ದ್ರಾವಿಡ್ರನ್ನು ಕ್ಲಬ್ ಪರ ಆಡುವಂತೆ ಕೇಳಿಕೊಂಡರು..! ದ್ರಾವಿಡ್ ಆಡಿದರು..! ಶತಕವನ್ನೂ ಬಾರಿಸಿದರು..! ಆ ತಂಡ ಗೆದ್ದೇ ಬಿಟ್ಟಿತು..! ಆಗೆಲುವಿನೊಂದಿಗೆ ಅದರ ಅಸ್ಥಿತ್ವ ಉಳಿಯಿತು..! ದ್ರಾವಿಡ್ ಆ ಕ್ಲಬ್ ಬಾಲ್ಯದ ಕ್ಲಬ್ ಪರ ಆಡಿ ಗೆಲ್ಲಿಸಿದ್ದು ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಆದಮೇಲೆ..! ಅಂತರಾಷ್ಟ್ರೀಯ ಮಟ್ಟದ ಶ್ರೇಷ್ಠ ಆಟಗಾರರಾಗಿ, ನಿವೃತ್ತರಾದ ಬಳಿಕವೂ ಕ್ಲಬ್ವೊಂದರ ಅಸ್ಥಿತ್ವಕ್ಕಾಗಿ ಆಡಿದ ದ್ರಾವಿಡ್ ಹೃದಯವಂತರು. ಡೌನ್ ಟು ಅರ್ತ್ ಪರ್ಸನಾಲಿಟಿ ದ್ರಾವಿಡ್ರದ್ದು..!
ದ್ರಾವಿಡ್ ವ್ಯಕ್ತಿತ್ವ ಎಂಥಾದ್ದು ಅನ್ನೋದಕ್ಕೆ ಈ ಎಲ್ಲಾ ಅಂಶಗಳೇ ಸಾಕ್ಷಿ..
ಸಚಿನ್ ಕ್ರಿಕೆಟ್ ದೇವರು..
ಸೌರವ್ ಆಫ್ ಸೈಡ್ನ ದೇವರು..!
ರಾಹುಲ್ ದ್ರಾವಿಡ್ ಒಳ್ಳೆಯ ಕ್ರಿಕೆಟಿಗ ಮಾತ್ರವಲ್ಲ. ಅವರೊಬ್ಬ ಆದರ್ಶ ವ್ಯಕ್ತಿ..!
“ರಾಹುಲ್ ದ್ರಾವಿಡ್” ಎಂಬ ಹೆಸರು ಕೇಳುತ್ತಿದ್ದಂತೆ ಇಡೀ ಭಾರತೀಯರಿಗೆ ಹೆಮ್ಮೆ ಅನಿಸುತ್ತದೆ..! ಜಗಮೆಚ್ಚಿದ ಇವರು, ಕನ್ನಡಿಗರೆಂಬುದೇ ನಮಗೆ ಹೆಮ್ಮೆ..! ವಿಶ್ವದ ಶ್ರೇಷ್ಠ ಬೌಲರ್ ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ ಮಹಾನ್ ಆಟಗಾರರಿವರು..! ಕ್ರಿಕೆಟ್ ಮೈದಾನದಲ್ಲಿಯೂ, ಮೈದಾನದ ಆಚೆಯೂ ಸಭ್ಯತೆಯ ಇನ್ನೊಂದು ಹೆಸರಾಗಿರುವವರು ನಮ್ಮ ರಾಹುಲ್ ದ್ರಾವಿಡ್..! ಭಾರತೀಯ ಕ್ರಿಕೆಟ್ ತನ್ನಿಂದ ಬಯಸಿದ್ದೆಲ್ಲವನ್ನೂ ದಾರಾಳವಾಗಿ ನೀಡಿದವರು…! ದ್ರಾವಿಡ್ ಕ್ರೀಸ್ ನಲ್ಲಿದ್ದಾರೆಂದರೆ ಎದುರಾಳಿಗಳಲ್ಲಿ ಆತಂಕ..! ಭಾರತದ ಅಭಿಮಾನಿಗಳಲ್ಲಿ ಸೋಲುವ ಪಂದ್ಯವನ್ನೂ ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆ ಇರ್ತಾ ಇತ್ತು..! ದ್ರಾವಿಡ್ ತಮ್ಮ ಅಭಿಮಾನಿಗಳ ನಂಬಿಕೆಯನ್ನು ಹುಸಿಗೊಳಿಸಿದವರಲ್ಲ..! ಸೋಲುವ ಅದೆಷ್ಟೋ ಪಂದ್ಯಗಳನ್ನು ಏಕಾಂಗಿಯಾಗಿ ಹೋರಾಡಿ ಗೆಲ್ಲಿಸಿಕೊಟ್ಟಿದ್ದಾರೆ..! ಬ್ಯಾಟಿಂಗ್ ಬೆನ್ನೆಲುಬಾಗಿ, ಉತ್ತಮ ಕ್ಷೇತ್ರರಕ್ಷಕರಾಗಿ, ವಿಕೆಟ್ ಕೀಪರ್ ಆಗಿ, ತಂಡದ ನಾಯಕರಾಗಿಯೂ ದೇಶದ ಕ್ರಿಕೆಟ್ ಗೆ ಆಪತ್ಪಾಂಧವರಾಗಿದ್ದರು..! ಈಗ ಕಿರಿಯರ ಗುರುವಾಗಿಯೂ ಭಾರತ ಕ್ರಿಕೆಟಿಗೆ ಕೊಡುಗೆಯನ್ನು ನೀಡ್ತಾ ಇದ್ದಾರೆ..! ದ್ರಾವಿಡ್ ಕೇವಲ ಒಬ್ಬ ಉತ್ತಮ ಕ್ರಿಕೆಟರ್ ಮಾತ್ರವಲ್ಲ.. ಅವರೊಬ್ಬ ಉತ್ತಮ ಗುರು ಎಂಬುದೂ ಸಾಭೀತಾಗಿದೆ..! ಇವರು ಭಾರತ ಕ್ರಿಕೇಟ್ ನ ಕಿರಿಯರ ತಂಡದ ಗುರುವಾದಮೇಲೆ ಇವರ ಶಿಷ್ಯಂದಿರು ಸಾಲು ಸಾಲು ಸರಣಿಗಳನ್ನು ಗೆದ್ದಿದ್ದಾರೆ..!
ದ್ರಾವಿಡ್ ವಿಶ್ವ ಕಂಡ ಅತ್ಯುತ್ತಮ ಕ್ರಿಕೆಟಿಗರು..! ಇವರ ಬಗ್ಗೆ ಎಲ್ಲರಿಗೂ ಗೊತ್ತು..! ಆದರೂ ಅದೆಷ್ಟೋ ವಿಷಯಗಳು ಕೆಲವರಿಗೆ ಗೊತ್ತೇ ಇಲ್ಲ..! ನಮ್ಮ ರಾಹುಲ್ ದ್ರಾವಿಡ್ ಬಗೆಗಿನ ಕುತೂಹಲಕಾರಿ ಹಾಗು ಸಾಮಾನ್ಯವಾಗಿ ಯಾರಿಗೂ ತಿಳಿಯದ ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ..!
ದ್ರಾವಿಡ್ ರನ್ನು “ಜ್ಯಾಮಿ” ಅಂತಾರೆ..! :
ದ್ರಾವಿಡ್ಗೆ “ಜ್ಯಾಮಿ” ಅಂತ ಕರೀತಾರೆ ಅನ್ನೋದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇದೆ..! ಆದ್ರೆ ಇವರನ್ನು “ಜ್ಯಾಮಿ” ಅಂತ ಯಾಕೆ ಕರೀತಾರೆ ಗೊತ್ತೇ..? ರಾಹುಲ್ ದ್ರಾವಿಡ್ ರ ತಂದೆ ಕಿಸಾನ್ ಜಾಮ್ನ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಾ ಇದ್ರು ಅದಕ್ಕಾಗಿಯೇ ರಾಹುಲ್ ದ್ರಾವಿಡ್ರಿಗೆ “ಜ್ಯಾಮಿ” ಎಂಬ ನಿಕ್ ನೇಮ್ ಇದೆ..! ಅಷ್ಟೇ ಅಲ್ಲದೆ ದ್ರಾವಿಡ್ ಕೂಡ ಕಿಸಾನ್ ಜಾಹಿರಾತುವಿನಲ್ಲಿ ನಟಿಸಿದ್ದರು..! ಜ್ಯಾಮಿ ಅಂದ್ರೆ “ಮಧುರವಾದ” ಎಂಬ ಅರ್ಥ ಬರುತ್ತೆ..ಆ ಹೆಸರಿಗೆ ತಕ್ಕಂತೆಯೇ ದ್ರಾವಿಡ್ ಇದ್ದಾರೆ..!
ಸತತ ನಾಲ್ಕು ಟೆಸ್ಟ್ ಶತಕ:
ಸತತ ನಾಲ್ಕೂ ಟೆಸ್ಟ್ ಪಂದ್ಯದಲ್ಲಿ ಶತಕಗಳಿಸಿದ ಏಕೈಕ ಭಾರತೀಯ ಆಟಗಾರರೆಂದರೆ ರಾಹುಲ್ ದ್ರಾವಿಡ್ ಮಾತ್ರ..! 2002ರಲ್ಲಿ ಇಂಗ್ಲೇಂಡ್ ಪ್ರವಾಸದಲ್ಲಿ ಸತತವಾಗಿ ಮೂರು ಟೆಸ್ಟ್ ಪಂದ್ಯದಲ್ಲಿ ಕ್ರಮವಾಗಿ 115, 148, 217ಗಳನ್ನು ಗಳಿಸುವ ಮೂಲಕ ಸತತ 3 ಟೆಸ್ಟ್ ಶತಕಗಳನ್ನು ಬಾರಿಸಿದ್ದರು..! ಆ ಟೂರ್ನಿಯ ನಂತರ ವೆಸ್ಟ್ ಇಂಡೀಸ್ ವಿರುದ್ಧ ಮುಂಬೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿಯೂ 100ರನ್ ಗಳಿಸುವ ಮೂಲಕ ಸತತ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಶತಕಬಾರಿಸಿದ ಏಕೈಕ ಭಾರತೀಯ ಆಟಗಾರರಾಗಿ ಹೊರಹೊಮ್ಮಿದರು..!
ಐಸಿಸಿ ಪ್ರಶಸ್ತಿ ಪಡೆದ ವಿಶ್ವದ ಮೊದಲ ಆಟಗಾರ :
ರಾಹುಲ್ ದ್ರಾವಿಡ್ ಐಸಿಸಿ ನೀಡುವ ವರ್ಷದ ಆಟಗಾರ ಮತ್ತು ವರ್ಷದ ಟೆಸ್ಟ್ ಆಟಗಾರ, ಈ ಎರಡೂ ಪ್ರಶಸ್ತಿಯನ್ನು 2004ರಲ್ಲಿ ಪಡೆದಿದ್ದರು..! ಐಸಿಸಿ ಈ ಪ್ರಶಸ್ತಿಯನ್ನು ಕೊಡಲಾರಂಭಿಸಿದ್ದೇ 2004ರಲ್ಲಿ..! ಆ ವರ್ಷವೇ ದ್ರಾವಿಡ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು..!
ಎಲ್ಲಾ ದೇಶದ ವಿರುದ್ಧವೂ ಶತಕಗಳಿಸಿದ ಆಟಗಾರ:
ಟೆಸ್ಟ್ ಕ್ರಿಕೆಟ್ ಆಡುವ ವಿಶ್ವದ ಎಲ್ಲಾ ತಂಡದ ವಿರುದ್ಧವೂ ಶತಕಗಳಿಸಿದ ವಿಶ್ವದ ಏಕೈಕ ಆಟಗಾರರೆಂದರೆ ನಮ್ಮ ದ್ರಾವಿಡ್ ಮಾತ್ರ..!
“ಬ್ರಾಡ್ಮನ್ ಉಪನ್ಯಾಸ”ದಲ್ಲಿ ಉಪನ್ಯಾಸ ಮಾಡಿದ ಏಕೈಕ ಆಸ್ಟ್ರೇಲಿಯೇತರರು:
ಆಸ್ಟ್ರೇಲಿಯಾದ ಕ್ರಿಕೆಟ್ ದಂತೆಕತೆ ಬ್ರಾಡ್ಮನ್ ನೆನಪಿಗಾಗಿ ಆಸ್ಟ್ರೇಲಿಯಾದಲ್ಲಿ ಪ್ರತಿವರ್ಷ ನಡೆಸುವ “ಬ್ರಾಡ್ಮನ್ ಉಪನ್ಯಾಸ ಅಥವಾ ಬ್ರಾಡ್ಮನ್ ಓರಿಯಂಟೇಷನ್” ಕಾರ್ಯಕ್ರಮದಲ್ಲಿ ಉಪನ್ಯಾಸ ಮಾಡಿದ ಏಕೈಕ ಆಸ್ಟ್ರೇಲಿಯೇತರರೆಂದರೆ ಕನ್ನಡಿಗ ದ್ರಾವಿಡ್ ಮಾತ್ರ..! ಅವರು ಡಿಸೆಂಬರ್ 14, 2012ರಲ್ಲಿ ಉಪನ್ಯಾಸ ನೀಡಿದ್ದರು..!

1999ರಲ್ಲಿ ಇಂಗ್ಲೇಂಡಿನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 461 ರನ್ ಗಳಿಸುವ ಮೂಲಕ ಟೂನರ್ಿಯಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಆಟಗಾರಾಗಿ ಹೊರಹೊಮ್ಮಿದ್ದರು..! ಆ ಮೂಲಕ ಅವರೊಬ್ಬ ಕೇವಲ ಟೆಸ್ಟ್ ಆಟಗಾರರೆಂದು ಹೇಳುತ್ತಿದ್ದವರಿಗೆ ತಕ್ಕ ಉತ್ತರ ನೀಡಿದ್ದರು..!
ತುಂಬಾ ಸೆಕ್ಸಿ ಕ್ರೀಡಾಪಟು :
ನಿಮಗಿದು ಗೊತ್ತಿತ್ತೇ..? 2004-5ರ ಆನ್ ಲೈನ್ ಸರ್ವೆಯಲ್ಲಿ ಭಾರತದ ಅತೀ ಸೆಕ್ಸಿ ಕ್ರೀಡಾಪಟುವಾಗಿ ದ್ರಾವಿಡ್ ಹೊರಹೊಮ್ಮಿದ್ದರು..! ಯುವರಾಜ್ ಸಿಂಗ್, ಸಾನಿಯಾ ಮಿರ್ಜಾರನ್ನೂ ಹಿಂದಿಕ್ಕಿ ದ್ರಾವಿಡ್ ಬಹುಮತ ಪಡೆದಿದ್ದರು..!
ಪಾದಾರ್ಪಣಾ ಪಂದ್ಯದಲ್ಲಿಯೇ ನಿವೃತ್ತರಾದ ಏಕೈಕ ಆಟಗಾರ :
ದ್ರಾವಿಡ್ ದಶಕಕ್ಕೂ ಹೆಚ್ಚುಕಾಲ ಭಾರತ ಕ್ರಿಕೇಟ್ ನ ಆಪತ್ಪಾಂಧವರಾಗಿದ್ರು..! ಆದ್ರೆ ಇವರ್ಯಾಕೆ ಪಾದಾರ್ಪಣಾ ಪಂದ್ಯದಲ್ಲಿಯೇ ನಿವೃತ್ತರಾದ ಆಟಗಾರರೆಂದು ಹೇಳ್ತಾ ಇದ್ದಾರೆಂದು ಅಚ್ಚರಿ ಪಡ್ಬೇಡಿ..! ದ್ರಾವಿಡ್ ಟೆಸ್ಟ್ ಆಗು ಏಕದಿನ ಪ್ರಕಾರಗಳಲ್ಲಿ ಅನೇಕ ವರ್ಷಗಳ ಕ್ರಿಕೇಟ್ ಲೋಕವನ್ನು ಆಳಿದ್ದರು…! ಆದರೆ ಅವರು ಟಿ20 ಆಡಿದ್ದು ಒಂದೇ ಒಂದು ಪಂದ್ಯಮಾತ್ರ..! ಅವರು 2011ರ ಆಗಸ್ಟ್ 31ರಂದು ಇಂಗ್ಲೆಂಡ್ ವಿರುದ್ಧ ಟಿ20 ಅಂತರಾಷ್ಟ್ರೀಯ ಕ್ರಿಕೇಟ್ ಗೆ ಪಾದಾರ್ಪಣೆ ಮಾಡಿದ್ದರು..! ಅದೇ ಪಂದ್ಯದಲ್ಲಿ ನಿವೃತ್ತಿಯೂ ಆದರು…!
ಹಾಕಿ ಆಟಗಾರ ದ್ರಾವಿಡ್ :
ರಾಹುಲ್ ದ್ರಾವಿಡ್ ಕ್ರಿಕೆಟ್ ಗೆ ಬರದೇ ಇದ್ದಿದ್ದರೆ ಅವರನ್ನು ಹಾಕಿ ಆಟಗಾರನ್ನಾಗಿ ನಾವು ನೋಡ್ತಾ ಇದ್ದೆವು..! ಬಾಲ್ಯದಲ್ಲಿ ಹಾಕಿ ಆಟಗಾರರಾಗಿದ್ದ ಅವರು ಕರ್ನಾಟಕದ ಜೂನಿಯರ್ ಹಾಕಿ ತಂಡಕ್ಕೂ ಆಯ್ಕೆಯಾಗಿದ್ದರು..!
ದ್ರಾವಿಡ್ ಹೆಸರಲ್ಲೇ ಕ್ರಿಕೆಟ್ ಟೂರ್ನಿ ನಡೆಸಲಾಗುತ್ತೆ :
ದ್ರಾವಿಡ್ ಗೆ ಜ್ಯಾಮಿ ಅಂತ ಕರೆಯುವ ಬಗ್ಗೆ ಮೊದಲೇ ಹೇಳಿದ್ದೇನೆ..! ಅದೇ ಜ್ಯಾಮಿ ಹೆಸರಲ್ಲಿ ಕ್ರಿಕೇಟ್ ಟೂರ್ನಿ ನಡೆಯುತ್ತೆ..! ಬೆಂಗಳೂರಿನಲ್ಲಿ ಶಾಲಾಮಟ್ಟದ ಕ್ರಿಕೆಟ್ ಟೂರ್ನಿಯೊಂದನ್ನು “ಜ್ಯಾಮಿ ಕಪ್” ಎಂಬ ಹೆಸರಲ್ಲಿಯೇ ನಡೆಸಲಾಗುತ್ತಿದೆ..!
ಮದ್ವೆ ಆಗ್ತೀನಿ ಅಂದವಳನ್ನು ಓದು ಎಂದಿದ್ದರು :
ಅವತ್ತೊಂದು ದಿನ ದ್ರಾವಿಡ್ ತಿಂಡಿ ತಿನ್ತಾ ಇರ್ತಾರೆ..! ಯಾರೋ ಒಬ್ಬರು ಪತ್ರಕರ್ತ ಅವರ ಕೊಠಡಿಗೆ ಬಂದು..ಮದ್ವೆ ಆಗುವಂತೆ ಒತ್ತಾಯಿಸ್ತಾರೆ..! ಗಲಿಬಿಲಿಯಾದ ದ್ರಾವಿಡ್..! ಹೊರ ಹೋಗಲು ಯತ್ನಿಸ್ತಾರೆ..! ಆಗ ಆಕೆ ಅವರ ತಂದೆಯನ್ನು ಕರೆಯುತ್ತಾರೆ..! ಅವರನ್ನು ಕೂರಿಸಿಕೊಂಡು ಮಾತನಾಡಿದ ದ್ರಾವಿಡ್ ಆ ಹುಡುಗಿಯ ಬಳಿ “ನಿನಗೆ ಎಷ್ಟು ವರ್ಷ”..? ಎಂದು ಪ್ರಶ್ನಿಸುತ್ತಾರೆ..! ಆಗ ಆಕೆ ಇಪ್ಪತ್ತು ವರ್ಷವೆಂದು ಹೇಳ್ತಾರೆ..! ಹ್ಞಾಂ.. ನಿನಗಿನ್ನೂ ಇಪ್ಪತ್ತು ವರ್ಷ ಮೊದಲು ಚೆನ್ನಾಗಿ ಓದೆಂದು ಬುದ್ಧಿ ಹೇಳ್ತಾರೆ..!
ಅಂದಹಾಗೆ ಅದು ರಿಯಲ್ ಆಗಿರಲ್ಲ.. ದ್ರಾವಿಡ್ ಎಂಟಿವಿ ಬಕ್ರ ಆಗಿದ್ರು..!
ದ್ರಾವಿಡ್ ಬಗ್ಗೆ ಈ ವಿಷಯಗಳು ಎಷ್ಟೋ ಜನರಿಗೆ ಗೊತ್ತೇ ಇಲ್ಲ..! ದ್ರಾವಿಡ್ ಬಗ್ಗೆ ತುಂಬಾ ಜನರಿಗೆ ತಿಳಿಯದ ಇನ್ನೂ ಅದೆಷ್ಟೋ ವಿಷಯಗಳಿವೆ ಸಧ್ಯಕ್ಕೆ ಇಷ್ಟು ಸಾಕು..! ಅಂದಹಾಗೆ ಇಂದು ಈ ಮಹಾನ್ ವ್ಯಕ್ತಿಯ ಹುಟ್ಟುಹಬ್ಬ. ಕನ್ನಡದ ಮನೆಮಗ ರಾಹುಲ್ ದ್ರಾವಿಡ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
-ಶಶಿಧರ್ ಎಸ್ ದೋಣಿಹಕ್ಲು