ಸಂಕ್ರಮಣದ ಮುಂಜಾವು ಇಷ್ಟು ಕಹಿಯಾಗಬಹುದೆಂದು ನಾವು ಊಹಿಸಿರಲಿಲ್ಲ.ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಸ್ಥಾನ ಗಳಿಸಿದ್ದ ಇಬ್ಬರು ಪತ್ರಕರ್ತರನ್ನ ನಾವು ಕಳೆದುಕೊಂಡಿದ್ದೇವೆ. ಹಿರಿಯ ಪತ್ರಕರ್ತರಾದ ವೀರೇಶ್ ಹಿರೇಮಠ್ ಹಾಗೂ ಸುದ್ದಿ ಟಿವಿಯ ವರದಿಗಾರರಾಗಿದ್ದ ಮೌನೇಶ್ ಪೋತರಾಜ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ.
ಸಂಕ್ರಾಂತಿಯಂದು ಇಬ್ಬರೂ ಪತ್ರಕರ್ತರು ಪ್ರತ್ಯೇಕ ಅಪಘಾತಗಳಲ್ಲಿ ಮೃತಪಟ್ಟಿರುವುದು ತೀವ್ರ ದುಃಖ ತಂದಿದೆ. ಸಂಕ್ರಮಣದ ಪ್ರಯುಕ್ತ ಕುಟುಂಬ ಸಮೇತರಾಗಿ ಗೋವಾಕ್ಕೆ ಪ್ರವಾಸ ಹೋಗಿದ್ದ ವೀರೇಶ್ ಅಲ್ಲಿಂದ ಹಿಂತಿರುಗುವಾಗ ಮಧ್ಯರಾತ್ರಿ 2.30ರಲ್ಲಿ ಕಾರು ಅಪಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಇತ್ತ ಮೌನೇಶ್ ಪೋತರಾಜ ಸಂಕ್ರಾಂತಿ ಹಬ್ಬಕ್ಕಾಗಿ ಊರಿಗೆ ತೆರಳುವ ವೇಳೆ ಬೈಕ್ ಅಪಘಾತದಲ್ಲಿ ಅಸುನೀಗಿದ್ದಾರೆ.
ವೀರೇಶ್ ಹಿರೇಮಠ್ ಅವರ ಹಿನ್ನೆಲೆ:
ಸಂಕ್ರಮಣ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಸಂಭ್ರಮ. ಈ ದಿನ ಕುಟುಂಬ ಸಮೇತರಾಗಿ ಎಲ್ಲಾದರೂ ಪ್ರವಾಸ ಹೋಗುವುದು ಮಾಮೂಲು. ಅಂತೆಯೇ ವೀರೇಶ್ ಹಿರೇಮಠ್ ಕೂಡ ನಿನ್ನೆ ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಗೋವಾಗೆ ಹೋಗಿದ್ದರು. ಎಲ್ಲರೂ ಸಂಭ್ರಮಿಸಿ ರಾತ್ರಿ ಹಿಂತಿರುಗುವ ವೇಳೆ ನಂದಗಡ ಸಮೀಪ ಅವರ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಅಲ್ಲಿದ್ದವರಿಗೆ ಏನಾಯ್ತು ಎಂದು ತಿಳಿಯುವುದಕ್ಕೂ ಮುಂಚೆಯೇ ವೀರೇಶ್ ಇನ್ನಿಲ್ಲವಾಗಿದ್ದರು. ಅವರ ಕಾರು ಚಾಲಕ ಸುನೀಲ್ ಕುಮಾರ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಿಂಬದಿಯಲ್ಲಿ ಕುಳಿತಿದ್ದ ಅವರ ಪತ್ನಿ ಗೌರಿ ಹಾಗೂ ಇಬ್ಬರು ಗಂಡು ಮಕ್ಕಳಿಗೂ ಗಾಯಗಳಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಲತಃ ಬಾದಾಮಿ ತಾಲೂಕಿನ ಹೊಸೂರು ಎಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದ ವೀರೇಶ್ ಅವರು ಎಂ.ಎ. ಹಾಗೂ ಪಿಜಿ ಡಿಪ್ಲೋಮಾ ನಂತರ ಪಿ.ಹೆಚ್.ಡಿ ಪದವಿ ಗಳಿಸಿದ್ದರು. ವೀರೇಶ್ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳೆರೆಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿದರು. ಸುವರ್ಣ ನ್ಯೂಸ್, ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಹಾಗೂ ಟಿವಿ9 ನಂತರ ವಿಜಯವಾಣಿ ಸುದ್ದಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ನಂತರ ಉಪನ್ಯಾಸಕರಾಗಿ ಬೆಂಗಳೂರಿನ ಬಿಎಂಎಸ್ ಕಾಲೇಜು ಹಾಗೂ ರಾಜಾಜಿನಗರದ ಎಸ್. ನಿಜಲಿಂಗಪ್ಪ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿ ಅಪಾರ ವಿಧ್ಯಾರ್ಥಿ ಬಳಗವನ್ನು ಸಂಪಾದಿಸಿದ್ದರು. ಅವರ ಪ್ರತಿ ಹೆಜ್ಜೆಗೂ ಅವರ ಪತ್ನಿ ಗೌರಿ ಜೊತೆಯಾಗಿದ್ದರು. ಇಬ್ಬರು ಮಕ್ಕಳೊಂದಿಗೆ ಈ ಸಂಸಾರ ಆನಂದವಾಗಿತ್ತು. ಇದೀಗ ಅವರು ಅಪಾರ ಶಿಷ್ಯ ಬಳಗವನ್ನು ಅಗಲಿದ್ದಾರೆ.
ಮೌನೇಶ್ ಪೋತರಾಜ ಅವರ ಹಿನ್ನೆಲೆ:
ಮೂಲತಃ ಶಿರಹಟ್ಟಿ ತಾಲೂಕಿನವರಾದ ಮೌನೇಶ್ ಪೋತರಾಜ ಅವರು ಭಾವಜೀವಿಯಾಗಿದ್ದರು. ಅವರ ತಂದೆ ತಾಯಿಯ ಮೂರು ಮಕ್ಕಳಲ್ಲಿ ಇವರು ಎರಡನೆಯವರು. ಚಿಕ್ಕಂದಿನಿಂದಲೇ ಬರವಣಿಗೆಯಲ್ಲಿ ಎಲ್ಲಿಲ್ಲದ ಆಸಕ್ತಿಯಿತ್ತು. ಧಾರವಾಡ ವಿವಿ ಯಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಎಂಎ ಪದವಿ ಪಡೆದ ಇವರು ನಂತರ ವರದಿಗಾರರಾಗಿ ವೃತ್ತಿ ಜೀವನ ಆರಂಭಿಸಿದ್ದರು.
ಮೌನೇಶ್ ಬರವಣಿಗೆಗಳ ಮೂಲಕ ತಮ್ಮೆಲ್ಲಾ ಕನಸು ಹಾಗೂ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸುದ್ದಿ ಟಿವಿ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ನಿನ್ನೆ ಸಂಕ್ರಾಂತಿಗೆ ಊರಿಗೆ ಹೊರಟಿದ್ದರು. ಶಿರಸಿಯಿಂದ ಅವರ ಊರಾದ ಛಬ್ಬಿ ಗ್ರಾಮಕ್ಕೆ ಬೈಕ್ ನಲ್ಲಿ ತೆರಳುವಾಗ ಹಾವೇರಿಯ ಗುಂಡೂರು ಗ್ರಾಮದ ಬಳಿ ಅಪಘಾತಕ್ಕೀಡಾಗಿದ್ದಾರೆ. ಈ ಮೂಲಕ ಪತ್ರಕರ್ತ ಮೌನೇಶ್ ತನ್ನ 28 ವರ್ಷದ ಈ ಪ್ರಯಾಣವನ್ನು ಕೊನೆಗೊಳಿಸಿದ್ದಾರೆ.
ಇಬ್ಬರು ಪತ್ರಕರ್ತರನ್ನು ಅಕಾಲಿಕವಾಗಿ ಕಿತ್ತುಕೊಂಡ ದೇವರು ಅವರ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿ ನೀಡಲಿ
ಕೃಪೆ : ಟಿವಿ1